Breaking News
ಹಂಪಿ: ಅನಧಿಕೃತ ಹೋಂ ಸ್ಟೇ, ಗೆಸ್ಟ್ ಹೌಸ್ ಗಳನ್ನು ಬಂದ್ ಮಾಡಲು ಸೂಚನೆ.

 

*ಹಂಪಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಕ್ರಮ

ಕಿಷ್ಕಿಂಧವಾಣಿ ಸುದ್ದಿ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಹೋಂ ಸ್ಟೇ, ವಸತಿ ಗೃಹ, ಗೆಸ್ಟ್ ಹೌಸ್ ಮೇಲೆ ವಿಜಯನಗರ ಜಿಲ್ಲಾಡಳಿತ,ಹಂಪಿ ಅಭಿವೃದ್ಧಿ ಪ್ರಾಧಿಕಾರ

ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ, ತಕ್ಷಣವೇ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.

ಹಂಪಿ, ಕಮಲಾಪುರ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಯ ಇತರೆ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆಯಡಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರವು ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್ ಅವರ ನೇತೃತ್ವದಲ್ಲಿ ಹಂಪಿ ಮತ್ತು ಕಮಲಾಪುರ ಭಾಗದ ಹೋಂ ಸ್ಟೇ, ವಸತಿ ಗೃಹ, ಗೆಸ್ಟ್ ಹೌಸ್ಗಳ ಮೇಲೆ ದಾಳಿ ನಡೆಯಿತು.

ಹಂಪಿ ಗ್ರಾಮ ಪಂಚಾಯಿತಿ ಬಳಿಯ ಹಲವು ವಸತಿ ಗೃಹಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಯಾವುದೇ ಪರವಾನಗಿ ಇಲ್ಲದ ಅನಧಿಕೃತವಾಗಿ ನಡೆಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತು. ಪರವಾನಗಿ ಪಡೆಯದೇ ತೆರೆಯಲಾದ ಹೋಂ ಸ್ಟೇ, ವಸತಿ ಗೃಹ, ಗೆಸ್ಟ್ ಹೌಸ್ಗಳನ್ನು ತಕ್ಷಣವೇ ಬಂದ್ ಮಾಡುವಂತೆ ಅವುಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ತಪ್ಪಿದಲ್ಲಿ ತಮ್ಮ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯೂ ನೀಡಲಾಯಿತು.

ಈ ವೇಳೆ ತಹಶೀಲ್ದಾರ ಶೃತಿ ಎಂ. ಮಳ್ಳಪ್ಪಗೌಡ್ರು, ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರದ ಆಯುಕ್ತ ರಮೇಶ ವಟಗಲ್ಲು, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ (ಪ್ರಭಾರ) ತಿಪ್ಪೇಸ್ವಾಮಿ, ಹಂಪಿ ಸಿಪಿಐ ರಾಜೇಶ್, ಪಿಎಸ್ಐ ಸುಬ್ರಮಣ್ಯ, ಇತರರಿದ್ದರು.

ಎರಡು ತಿಂಗಳ ಹಿಂದೆ ಗಂಗಾವತಿಯಲ್ಲಿ ಅನಧಿಕೃತ ರೆಸಾರ್ಟ್ಗಳಿಗೆ ಬೀಗ: ಫೆಬ್ರವರಿಯಲ್ಲಿ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಅನಧಿಕೃತ ರೆಸಾರ್ಟ್ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಬೀಗ ಹಾಕಿದ್ದರು.

ಜೆಸ್ಕಾಂ, ಕಂದಾಯ, ಪಂಚಾಯತ್ ರಾಜ್, ಅಬಕಾರಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡಗಳು, ಕೊಪ್ಪಳ ತಾಲೂಕಿನ ಬಸಾಪುರ, ಗಂಗಾವತಿ ತಾಲೂಕಿನ ಆನೆಗೊಂದಿ, ಸಣಾಪುರ ಭಾಗದಲ್ಲಿನ ಅನಧಿಕೃತ ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದರು.

98 ಅನಧಿಕೃತ ರೆಸಾರ್ಟ್: ಬಸಾಪುರ ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ರೆಸಾರ್ಟ್ಗಳ ಪೈಕಿ 98ಕ್ಕೂ ಹೆಚ್ಚು ಅನಧಿಕೃತವಾಗಿದ್ದರೆ, ಗಂಗಾವತಿ ತಾಲೂಕಿನ 50ರ ಪೈಕಿ 40 ಅನಧಿಕೃತ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದರು.

40 ರೆಸಾರ್ಟ್ ಬಂದ್: ಆನೆಗೊಂದಿ ಭಾಗದಲ್ಲಿರುವ ಒಟ್ಟು 50 ರೆಸಾರ್ಟ್ಗಳ ಪೈಕಿ 40 ಅನಧಿಕೃತ. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಆನೆಗೊಂದಿ, ಸಣಾಪುರ, ಮಲ್ಲಾಪುರ, ಸಂಗಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿನ 40 ರೆಸಾರ್ಟ್ಗಳಿಗೆ ಬೀಗ ಹಾಕಲಾಗಿತ್ತು