ಕಿಷ್ಕಿಂಧಾಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಎ.ಎಂ.ಆರ್ ಸಂಸ್ಥೆಯಿಂದ ₹2.5 ಕೋಟಿ ಮೌಲ್ಯದ ಚಿನ್ನದ ಆಭರಣ ಸಮರ್ಪಣೆ.

ಶೀಘ್ರದಲ್ಲೇ 240 ಕೋಟಿ ರೂ.ವೆಚ್ಚದಲ್ಲಿ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾರ್ಯ ಆರಂಭ.
*ಕಿಷ್ಕಿಂಧವಾಣಿ ಸುದ್ದಿ
ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ ಶುಕ್ರವಾರ ಮುಂಜಾನೆ ಶುಭ ಮುಹೂರ್ತದಲ್ಲಿ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಎ.ಎಂ.ಆರ್ ಗ್ರೂಪ್ನ ಅಧ್ಯಕ್ಷ ಡಾ. ಎ. ಮಹೇಶ್ ರೆಡ್ಡಿ ಅವರ ಕುಟುಂಬದವರು ಭಕ್ತಿಭಾವದಿಂದ ವಿಶೇಷ ಸೇವೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸುಮಾರು ₹2.5 ಕೋಟಿ ಮೌಲ್ಯದ ಭವ್ಯ ಬಂಗಾರದ ಆಭರಣಗಳನ್ನು ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ಅರುಣಾ ಅವರ ಉಪಸ್ಥಿತಿಯಲ್ಲಿ ದೇವಸ್ಥಾನಕ್ಕೆ ಸಮರ್ಪಿಸಿದರು.

ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಛತ್ರಿ, ಕಿರೀಟ ಹಾಗೂ ಗಧೆಯನ್ನು ಶ್ರೀ ಆಂಜನೇಯ ಸ್ವಾಮಿಗೆ ಅರ್ಪಿಸುವ ಮೂಲಕ ತಮ್ಮ ಅಪಾರ ಭಕ್ತಿ ಮತ್ತು ಶ್ರದ್ಧೆಯನ್ನು ವ್ಯಕ್ತಪಡಿಸಿದರು. ಈ ವೇಳೆ ದೇವಾಲಯದ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಮರ್ಪಿತ ಆಭರಣಗಳಿಗೆ ಪೂಜೆ ಸಲ್ಲಿಸಿದರು.

240 ಕೋಟಿ ರೂ ವೆಚ್ಚದಲ್ಲಿ ಶೀಘ್ರ ಅಭಿವೃದ್ಧಿ ಕಾರ್ಯ ಆರಂಭ: ರಾಜ್ಯ ಮತ್ತು ಕೇಂದ್ರ ಸರ್ಕಾರದ 240 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಈಗಾಗಲೇ ಕೊಪ್ಪಳ ಜಿಲ್ಲಾಧಿಕಾರಿಗಳು ಅಂಜನಾದ್ರಿ ಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ದಾಖಲೆ ಸಮೇತ ಅರಣ್ಯ ಇಲಾಖೆಗೆ ವರದಿ ನೀಡಿದ್ದು ಅಧಿಕೃತವಾಗಿ ಅರಣ್ಯ ಇಲಾಖೆ ಘೋಷಣೆ ಮಾಡಬೇಕಿದೆ ನಂತರ ದೇವಸ್ಥಾನ ಹೊಸ ವಿನ್ಯಾಸದಲ್ಲಿ ನಿರ್ಮಾಣವಾಗಲಿದೆ. ಮೂಲಭೂತ ಸೌಕರ್ಯ ಮಾಡಲು ರಾಜ್ಯ ಸರ್ಕಾರ ವನ್ನು ಮಂಜೂರು ಮಾಡಿದ್ದು ಈ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದು, ಅಭಿವೃದ್ಧಿ ಕಾರ್ಯ ಕುರಿತಂತೆ ನೀಲನಕ್ಷೆ ರೆಡಿಯಾಗಿದ್ದು ಅಭಿವೃದ್ಧಿ ಕಾರ್ಯಗಳು ಜರುಗಲಿವೆ ವಿಶ್ವವೇ ನೋಡುವಂತೆ ಕಿಷ್ಕಿಂಧಾ ಅಂಜನಾದ್ರಿಯನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರ ಯು. ವಸಂತ ಕುಮಾರಿ, ಕನಕಗಿರಿ ತಹಸಿಲ್ದಾರ ವಿಶ್ವನಾಥ ಮುರಡಿ, ಗ್ರೇಡ್ 2 ತಹಶೀಲ್ದಾರ ಮಹಾಂತಗೌಡ ಪಾಟೀಲ್, ಮಾಜಿ ಸಂಸದರಾದ ಶಿವರಾಮೇಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹಿರೂರು,ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ಸಿಂಗನಾಳ ವಿರೂಪಾಕ್ಷಪ್ಪ, ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲ್ಕುಂದಿ, ಮಲ್ಲಿಕಾರ್ಜುನ ಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ ಬಾದವಾಡಿಗಿ, ವೆಂಕಟೇಶ ಜಬ್ಬಲಗುಡ್ಡ, ರಮೇಶ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ ಹನುಮನಹಳ್ಳಿ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

