ಕಿಷ್ಕಿಂಧಾ ಅಂಜನಾದ್ರಿಗೆ ಪ್ರಾಮಾಣಿಕವಾಗಿ ಚಿನ್ನಾಭರಣಗಳ ದೇಣಿಗೆ ನೀಡಲಾಗಿದೆ. ಕೆಲವರ ಷಡ್ಯಂತ್ರದಿಂದ ಅಪಪ್ರಚಾರ ನಡೆದಿದೆ:ಗಾಲಿ ಜನಾರ್ದನ ರೆಡ್ಡಿ

*ವಿಶ್ವಖ್ಯಾತಿಯ ಡಾ.ಮಹೇಶ ರೆಡ್ಡಿ ದೇವರ ಸೇವೆ ಮಾಡುವಲ್ಲಿ ಎತ್ತಿದ ಕೈ, ಅಪಪ್ರಚಾರ ಕೂಡಲೇ ನಿಲ್ಲಿಸಿ!
*ಒಟ್ಟು1440 ಗ್ರಾಂ ಚಿನ್ನದಲ್ಲಿ ಸಾಮಾನು ತಯಾರಿಕೆ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಹೈದ್ರಾಬಾದ್ ಮೂಲದ ವಿಶ್ವವಿಖ್ಯಾತ ಕಂಷ್ಟ್ರಕ್ಷನ್ ಕಂಪನಿಯ ಮಾಲೀಕರು ಹಾಗೂ ದೈವಭಕ್ತರಾದ
ಡಾ. ಮಹೇಶ್ ರೆಡ್ಡಿ ಕುಟುಂಬದವರು 1440 ಗ್ರಾಂ ಚಿನ್ನ ಸುಮಾರು ಎರಡುವರೆ ಕೋಟಿ ಬೆಲೆಬಾಳುವ ಬಂಗಾರದ ಸಾಮಾನುಗಳನ್ನು ನೀಡಿದ್ದು ಬಂಗಾರ ಖರೀದಿ ಮಾಡಿದ ರಶೀದಿ ಸಮೇತ ದಾಖಲೆಗಳನ್ನು ಗಂಗಾವತಿಯ ತಹಸಿಲ್ದಾರರಿಗೆ ನೀಡಲಾಗಿದ್ದು ನನಗೂ ದಾಖಲೆಯನ್ನು ಕೊಟ್ಟಿದ್ದು. ಕೆಲವರು ಉದ್ದೇಶಪೂರ್ವಕವಾಗಿ ಅಂಜನಾದ್ರಿಗೆ ನೀಡಲಾಗಿರುವ ಚಿನ್ನದ ಆಭರಣಗಳು ಕಳಪೆಯಾಗಿವೆ ಮತ್ತು ತಾಮ್ರದ ಲೇಪನವಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಅವರನ್ನು ಕಿಷ್ಕಿಂಧವಾಣಿ ಪತ್ರಿಕೆ ಸಂಪರ್ಕಿದಾಗ ಮಾಹಿತಿ ನೀಡಿದ್ದಾರೆ.

ಕಾಣಿಕೆ ಅಥವಾ ದೇಣಿಗೆ ನೀಡಿದ ಭಕ್ತರು ರಸೀದಿ ದಾಖಲೆ ಸಲ್ಲಿಸುವ ತನಕ ಕಾಯದೇ ಎಸಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಅವಸರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ತಾಮ್ರದ ಸಾಮಾನುಗಳಿಗೆ ಚಿನ್ನಲೇಪನ ಮಾಡಲಾಗಿದೆ ಎಂದಿರುವುದು ಸರಿಯಲ್ಲ, ಯಾವುದೇ ದೇವಸ್ಥಾನ ಮತ್ತು ಗುಡಿ ಗುಂಡಾರಗಳಿಗೆ ನೀಡುವ ಚಿನ್ನದ ಕಾಣಿಕೆಗಳು ಬರೀ ಚಿನ್ನದಿಂದ ಕೂಡಿರುವುದಿಲ್ಲ ಇತರ ಲೋಹವನ್ನು ಸಹ ಬಳಕೆ ಮಾಡಿ ಸಾಮಾನುಗಳನ್ನು ತಯಾರು ಮಾಡಿರುತ್ತಾರೆ. ಜನರನ್ನು ದಾರಿ ತಪ್ಪಿಸಲು ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲು ಕೆಲವರು ಷಡ್ಯಂತ್ರ ಮಾಡಿದ್ದು ಶೀಘ್ರದಲ್ಲೇ ಮತ್ತೊಮ್ಮೆ ನಾನು ಸಹ ದಾಖಲೆಗಳನ್ನು ತಂದು ಬಹಿರಂಗಪಡಿಸುತ್ತೇನೆ.
ಈಗಾಗಲೇ ಡಾ. ಮಹೇಶ್ ರೆಡ್ಡಿ ಕಡೆಯವರು ತಹಸಿಲ್ದಾರ್ ಯು.ವಸಂತಕುಮಾರಿ ಅವರನ್ನು ಭೇಟಿಯಾಗಿ ಶ್ರೀ ಅಂಜನಾದ್ರಿ ಕ್ಷೇತ್ರಕ್ಕೆ ನೀಡಿದ ಕಾಣಿಕೆಯ ರಸೀದಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದಾರೆ.

ಶ್ರೀ ಆಂಜನೇಯನ ಭಕ್ತರು ಈ ಷಡ್ಯಂತ್ರ ಮತ್ತು ಅಪಪ್ರಚಾರವನ್ನು ನಂಬಬಾರದು, ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಯಾಗುತ್ತಿದ್ದು ನಿತ್ಯವೂ ಸಾವಿರಾರು ಜನರು ಬರುತ್ತಾರೆ.ಡಾ. ಮಹೇಶ್ ರೆಡ್ಡಿ ಅವರು ಅತ್ಯಮೂಲ್ಯವಾದ ಕಾಣಿಕೆಯನ್ನು ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ದೇಣಿಗೆ ನೀಡುವವರಿಗೆ ಮಾದರಿಯಾಗಿದೆ. ಅಪಪ್ರಚಾರ ನಡೆಸುವ ಮೂಲಕ ದಾನಿಗಳು ಬರದಂತ ತಡೆಯುವ ಉದ್ದೇಶ ಕೆಲವರಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

