Breaking News
ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಕ್ರಸ್ಟಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಎಂಎಲ್ಸಿ

ಟಿ.ಎ. ಶರವಣ ಅವರು ಟಿಬಿ ಅಣೆಕಟ್ಟು ಕ್ರೇಸ್ಟ್ ಗೇಟ್ ಅಳವಡಿಕೆ ವಿಚಾರ ಪ್ರಸ್ತಾಪಿಸಿದಾಗ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.

ತುಂಗಭದ್ರಾ ಕ್ರಸ್ಟಗೇಟ್ ಅಳವಡಿಕೆ ವಿಚಾರವನ್ನು ಪ್ರಸ್ತಾಪಿಸಿ, ಬೆಂಗಳೂರಿನಲ್ಲಿ ಮನೆ ಹಂಚಿಕೆ, ಕೇರಳದಲ್ಲಿ ಮನೆ ನಿರ್ಮಾಣ ಸೇರಿದಂತೆ ಅನೇಕ ಬೇರೆ ಬೇರೆ ವಿಚಾರಗಳನ್ನು ಎಳೆದು ತಂದಿದ್ದಾರೆ. ಟಿಬಿ ಅಣೆಕಟ್ಟಿನ ಕ್ರಸ್ಟಗೇಟ್ ಅಳವಡಿಕೆ ವಿಚಾರ ಬಹಳ ಗಂಭೀರವಾದದು. ಶರವಣ ಹಾಗೂ ಇತರ ಸದಸ್ಯರನ್ನು ನಾನು ತುಂಗಭದ್ರಾ ಅಣೆಕಟ್ಟೆಗೆ ಕಳುಹಿಸಿ ಕೊಡುತ್ತೇನೆ, ಹೋಗಿ ನೋಡಲಿ. ಅಲ್ಲಿ ಕ್ರಸ್ಟ ಗೇಟ್ ತುಂಡರಿಸಿದಾಗ, ಅಣೆಕಟ್ಟು ಸಂಪೂರ್ಣ ಅಲ್ಲಾಡಿದಂತೆ ಭಾಸವಾಗಿತ್ತು. ನಾವು ಕೇವಲ 7 ದಿನಗಳಲ್ಲಿ ದುರಸ್ತಿ ಮಾಡಿದೆವು. ಆಗ ಜನಾರ್ದನ ರೆಡ್ಡಿ ಏನು ಹೇಳಿಕೆ ಕೊಟ್ಟಿದ್ದರು ಎಂಬುದು ಗೊತ್ತಿದೆ. ಆಗ ನಾನು ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂದು ಹೇಳಿದ್ದೆ. ನಂತರ ನಾವು ರಾಜ್ಯದ ಎಲ್ಲಾ ಅಣೆಕಟ್ಟುಗಳ ಅಧ್ಯಯನ ನಡೆಸಿ ಹಳೇ ಗೇಟ್ ಗಳ ಬದಲಾವಣೆಗೆ ತೀರ್ಮಾನ ಮಾಡಿದೆವು. ಮೊದಲ ಹಂತದಲ್ಲಿ ತುಂಗಭದ್ರಾ ಡ್ಯಾಂ ಕ್ರಸ್ಟಗೇಟ್ ಬದಲಿಸುತ್ತಿದ್ದೇವೆ. ಪತ್ರಿಕೆಯಲ್ಲಿ ಮಾರ್ಚ್ 10ರ ವೆರೆಗೆ 14 ಗೇಟ್ ಬದಲಿಸಲಾಗಿದ್ದು, ತಜ್ಞರ ಪ್ರಕಾರ ಒಂದು ಕ್ರೆಸ್ಟ್ ಗೇಟ್ ಅಳವಡಿಕೆಗೆ 7 ದಿನಗಳ ಕಾಲಾವಕಾಶ ಬೇಕು. ಹಲವು ಗೇಟ್ ಗಳ ಅಳವಡಿಕೆ ಕಾರ್ಯ ನಡೆದರೆ ಈ ಪ್ರಕ್ರಿಯೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ” ಎಂದು ತಿಳಿಸಿದರು.

ಎಲ್ಲಾ ಕ್ರಸ್ಟಗೇಟ್ ಬದಲಿಸುವ ತೀರ್ಮಾನ ಮಾಡಿದ್ದು, 19ನೇ ಸ್ಟಾಪ್ ಲಾಗ್ ಗೇಟ್ ತೆರವುಗೊಳಿಸಿ ಸ್ಪಿಲ್ ಗೇಟ್ ಅಳವಡಿಕೆಗೆ 2025 ಏಪ್ರಿಲ್ 24ರಂದು ಅಹಮದಾಬಾದಿನ ಹಾರ್ಡ್ ವೇರ್ ಟೂಲ್ ಅಂಡ್ ಮಷಿನರಿ ಪ್ರಾಜೆಕ್ಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 34.48 ಕೋಟಿ ರೂ. ವೆಚ್ಚದಲ್ಲಿ ಉಳಿದ 32 ಸ್ಪಿಲ್ ವೇ ಗೇಟ್ ಅಳವಡಿಕೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಸಲು ಇದೇ ಸಂಸ್ಥೆಯೊಂದಿಗೆ ಜೂನ್ 10, 2025ರಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. 25 ಗೇಟ್ ಗಳ ಫ್ಯಾಬ್ರಿಕೇಶನ್ ಕೆಲಸ ಮುಗಿದಿದ್ದು, 2 ಗೇಟ್ ಗಳ ಕೆಲಸ ನಡೆಯುತ್ತಿದೆ. 26 ಗೇಟ್ ಗಳನ್ನು ತೆಗೆಯಲಾಗಿದ್ದು, 2 ಗೇಟ್ ಗಳ ತೆರವು ಕಾರ್ಯ ನಡೆಯುತ್ತಿದೆ. ಇದರಲ್ಲಿ 14 ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 3 ಗೇಟ್ ಗಳ ಕಾರ್ಯ ಪ್ರಕ್ರಿಯೆಯಲ್ಲಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಗೇಟ್ ಬದಲಾವಣೆ ಮುಗಿಸಲು ವ್ಯವಸ್ಥೆ ಮಾಡಲಾಗಿದೆ” ಎಂದು ವಿವರಿಸಿದರು.

ನವಲಿ ಸಮನಾಂತರ ಡ್ಯಾಂ: ಆಂಧ್ರ ಚರ್ಚೆಗೆ ಬರುತ್ತಿಲ್ಲ:ಇನ್ನು ನವಲಿ ಸಮತೋಲಿತ ಜಲಾಶಯ ನಿರ್ಮಾಣ ವಿಚಾರದಲ್ಲಿ ಆಂಧ್ರ ಪ್ರದೇಶದವರು ಮಾತುಕತೆಗೆ ಬರುತ್ತಿಲ್ಲ. ಕೆಲವರು ಪರ್ಯಾಯ ಮಾರ್ಗಗಳ ಸಲಹೆ ನೀಡಿದ್ದು, ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ಸಮಯ ನೀಡುತ್ತಿಲ್ಲ. ಈ ಅಣೆಕಟ್ಟು ನಮ್ಮ ಆಸ್ತಿ. ಈ ವಿಚಾರದಲ್ಲಿ ಕೇವಲ ಕರ್ನಾಟಕ ಏಕಾಂಗಿಯಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮೂರು ರಾಜ್ಯದವರು ಸೇರಿ ತೀರ್ಮಾನ ಮಾಡಬೇಕು. ನೀರು ಹರಿದು ಸಮುದ್ರಕ್ಕೆ ಹೋಗುತ್ತಿದೆ. ಇದನ್ನು ಉಳಿಸಿ ಜನರಿಗೆ ನೀಡಲು ನಿಮ್ಮೆಲ್ಲರ ರಾಜಕೀಯ ಬದ್ಧತೆ, ಶಕ್ತಿ ನೀಡಿದರೆ ನಾವು ವ್ಯವಸ್ಥೆ ಮಾಡಬಹುದು. ಕ್ರಸ್ಟಗೇಟ್ ಬದಲಾವಣೆ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಸರಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ

ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಕೆ. ನೈಜತೆ ಪರಿಶೀಲನೆಗೆ ಆರು ಜನ ನೋಡಲ್ ಅಧಿಕಾರಿಗಳ ನೇಮಕ.
*ನಕಲಿ ದಾಖಲೆ ಸಲ್ಲಿಸಿದ ಅತಿಥಿ ಉಪನ್ಯಾಸಕರಲ್ಲಿ ಡವ..ಡವ..

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳಲು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರ ದಾಖಲಾತಿಗಳ ನೈಜತೆ ಪರಿಶೀಲನೆಗಾಗಿ ಪ್ರಾದೇಶಿಕವಾರು
ಆರು ಪ್ರಾಧ್ಯಾಪಕರನನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಆದೇಶ ಮಾಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಖಾಲಿ ಇದ್ದ ಪ್ರಾಧ್ಯಾಪಕರ ಹುದ್ದೆಗಳ ಹಿನ್ನೆಲೆಯಲ್ಲಿ ಆಯಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಯುಜಿ ಮತ್ತು ನಾನ್ ಯುಜಿ ಅರ್ಹತೆಯಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿ ಪ್ರಕ್ರಿಯೆ ಜರುಗಿ ಅತಿಥಿ ಉಪನ್ಯಾಸಕರು ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಈಗಾಗಲೇ ತಮ್ಮ ಕರ್ತವನ್ನು ನಿರ್ವಹಿಸುತ್ತಿದ್ದಾರೆ.
ಈ ಮಧ್ಯೆ ಅತಿಥಿ ಉಪನ್ಯಾಸಕರ ಹುದ್ದೆ ಸಿಗದವರು ಮತ್ತು ಸಾಮಾಜಿಕ ಹೋರಾಟಗಾರರು ನಕಲಿ ಪಿಎಚ್ಡಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ನೇಮಕಗೊಂಡಿರುವವರನ್ನು ಕುರಿತು ಆಕ್ಷೇಪಣೆ ಸಲ್ಲಿಸಿದ್ದರಿಂದ ಉನ್ನತ ಶಿಕ್ಷಣ ಇಲಾಖೆ ದಾಖಲೆಗಳ ನೈಜತೆಯನ್ನು ಪಡೆದುಕೊಳ್ಳಲು ಹಲವು ಸೂಚನೆ ನೀಡಿದ್ದರೂ ಸಹ ಬಹುತೇಕ ಅಧಿಕ ಅತಿಥಿ ಉಪನ್ಯಾಸಕರು ತಮ್ಮ ದಾಖಲೆಗಳ ನೈಜತೆ
ಸಲ್ಲಿಸಿಲ್ಲ. ಈ ಮಧ್ಯೆ ಸುಮಾರು 1200 ಜನ ಅತಿಥಿ ಉಪನ್ಯಾಸಕರು ವಿವಿಧ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹೊರಗೆ ಹೋಗಿದ್ದಾರೆ. ಜೊತೆಗೆ ಉನ್ನತ ಶಿಕ್ಷಣ ಇಲಾಖೆಯವರು ಆಯಾ ಕಾಲೇಜಿನ ಪ್ರಾಚಾರ್ಯರು ನೈಜತೆ ಪ್ರಮಾಣ ಪತ್ರ ಪರಿಶೀಲನೆ ಮಾಡುವ ಆದೇಶ ಹೊರಡಿಸಿದ್ದು ಇದು ಅವೈಜ್ಞಾನಿಕ ವಾಗಿದೆ ಆದ್ದರಿಂದ ಉನ್ನತ ಶಿಕ್ಷಣ ಇಲಾಖೆ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡುವಂತೆ ಅತಿಥಿ ಉಪನ್ಯಾಸಕರ ಸಂಘದವರು ಇಲಾಖೆ
ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರಿಂದ ಇದೀಗ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಪ್ರಾದೇಶಿಕವಾರು ಆರು ಜನ ಪ್ರಾಧ್ಯಾಪಕರನ್ನು ಅತಿಥಿ ಉಪನ್ಯಾಸಕರ ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರಗಳ ನೈಜತೆಯನ್ನು
ಪರಿಶೀಲನೆ ಮಾಡಿ ಇಲಾಖೆಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಪ್ರಸ್ತುತ ಕರ್ತವ್ಯ ನಿರ್ವಹಿಸುವವರು ಮತ್ತು ರಾಜೀನಾಮೆ ನೀಡಿದವರ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.
ಬಹುತೇಕ ಅತಿಥಿ ಉಪನ್ಯಾಸಕರು ನಕಲಿ ಪಿಎಚ್ಡಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿ ಉಪನ್ಯಾಸಕರಾಗಿ ನೇಮಕಗೊಂಡಿದ್ದು ಇದನ್ನು ಪ್ರಶ್ನಿಸಿ ನಿಜವಾದ ಪಿ ಎಚ್ ಡಿ ಮಾಡಿದವರು ಮತ್ತು ಅಂಗವಿಕಲತೆಯನ್ನು ಹೊಂದಿದವರು ನಕಲಿ ಪಿಎಚ್ಡಿ ಮತ್ತು ಅಂಗವಿಕಲತೆಯ ಪ್ರಮಾಣ ಪತ್ರ ಹೊಂದಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂಯೆ ಉನ್ನತ ಇಲಾಖೆಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಇದೀಗ ರಾಜೀನಾಮೆ ನೀಡಿ ಹೊರಗೆ ಹೋಗಿರುವ 12 ನೂರು ಜನ ಅತಿಥಿ ಉಪನ್ಯಾಸಕರು ಸೇರಿದಂತೆ ಪ್ರಸ್ತುತ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ದಾಖಲಾತಿ ನಕಲಿಯೋ ಅಸಲಿಯೋ ಎಂಬ ಜಿಜ್ಞಾಸೆಯಲ್ಲಿ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರ ಎದಿಯಲ್ಲಿ ಡವ..ಡವ.. ಶುರುವಾಗಿದ್ದು ಇಲಾಖೆ ಶೀಘ್ರದಲ್ಲೇ ನೈಜತೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನ್ಯಾಯಾಧೀಶರ ಭೇಟಿ!

*ಅನ್ನದಲ್ಲಿ ಕಲ್ಲು,,ಗಾಜು,ಹುಳು,ಉಪ್ಪಡಿ

ವಿದ್ಯಾರ್ಥಿನಿಯರ ಹೇಳಿಕೆ.

*ಊಟ ಬಡಿಸಲು ಎರಡನೇ ಚಮಚ,ನೂರಾರು ವಿದ್ಯಾರ್ಥಿನಿಯರಿಗೆ ಮೂರೇ ದಿನಪತ್ರಿಕೆ.

*ಅಡುಗೆದಾರರ ಬದಲಿಸುವಂತೆ ಎಜೆನ್ಸಿಗೆ ನ್ಯಾಯಾಧೀಶರ ಸೂಚನೆ.

*ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ಆಗಮಿಸುವಂತೆ ಸೂಚನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಗೆ ಒಂದನೆಯ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಂದ ಸಮಸ್ಯೆಗಳನ್ನು ಆಲಿಸಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸಮಸ್ಯೆಗಳ ಸುರಿಮಳೆಯನ್ನೇ ನ್ಯಾಯಾಧೀಶರ ಮುಂದೆ ಹೇಳಿ ತಮ್ಮ ಅಳಲನ್ನು ತೋಡಿಕೊಂಡರು.

ಗ್ರಾಮೀಣ ಭಾಗದ ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಉನ್ನತ ವಿದ್ಯಾಭ್ಯಾಸ ಮಾಡಲು ನಗರ ಪ್ರದೇಶಕ್ಕೆ ಆಗಮಿಸಿ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್ ನಲ್ಲಿ ವಸತಿ ಇದ್ದು ಸರ್ಕಾರ ಕಲ್ಪಿಸುವ ಸೌಲಭ್ಯದ ಊಟ, ಮೂಲಸೌಕರ್ಯದ ಓದಿ ಬದುಕು ಕಟ್ಟಿಕೊಳ್ಳುವ ಉದ್ದೇಶವನ್ನು ನಿರಾಸೆಗೊಳಿಸುವಂತೆ ಹಾಸ್ಟೆಲ್ ವಾರ್ಡನ್, ಅಡುಗೆದಾರರು ಕಾರ್ಯನಿರ್ವಹಿಸುತ್ತಿರುವ ಕುರಿತು ನ್ಯಾಯಾಧೀಶರುಗಳ ಮುಂದೆ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಂಡರು.

ಅನ್ನದಲ್ಲಿ ಕಲ್ಲು,ಗಾಜು,ಹುಳು, ಉಪ್ಪಡಿಗಳು ಬರುತ್ತಿವೆ,ಅನ್ನ ಸಾಂಬಾರ ಬಡಿಸಲು ಎರಡು ಚಮಚಗಳಿವೆ, ೧೮೦ ವಿದ್ಯಾರ್ಥಿನಿಯರಿದ್ದು ಕೇವಲ ಮೂರು ದಿನಪತ್ರಿಕೆಗಳನ್ನು ತೋರಿಸಲಾಗುತ್ತದೆ ಇದರಿಂದ ಎಲ್ಲರೂ ಪೇಪರ್ ಓದಲು ಆಗುತ್ತಿಲ್ಲ ಎಂದು ಹಾಸ್ಟೆಲ್ ನಲ್ಲಿದ್ದ ಮೂಲಸೌಕರ್ಯಗಳ ಕೊರತೆಗಳ ಕುರಿತು ಹೇಳಿಕೊಂಡರು.

ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಸರಿಯಾದ ಊಟ ಪೂರೈಸಬೇಕು.ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ರಾಜ್ಯ,ಜಿಲ್ಲಾ ಮಟ್ಟದ ದಿನಪತ್ರಿಕೆಗಳನ್ನು ತರಿಸಬೇಕು.ಅಡುಗೆದಾರರನ್ನು ಬದಲಿಸಬೇಕು,ಸಮಸ್ಯೆಗಳನ್ನು ಚರ್ಚಿಸಲು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ನ್ಯಾಯಾಲಯಕ್ಕೆ ಆಗಮಿಸಿ ವಿವರಣೆ ನೀಡುವಂತೆ ನ್ಯಾಯಾಧೀಶರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ

ಒಂದನೇಯ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಸೇರಿ ಹಾಸ್ಟೆಲ್ ವಾರ್ಡನ್ ಸಿಬ್ಬಂದಿಯವರಿದ್ದರು.

ಕನಕಗಿರಿ ಕನಕಾಚಲಪತಿ ಮಹಾರಥೋತ್ಸವಕ್ಕೆ ಸಾಕ್ಷಿಯಾಯ್ತು ಲಕ್ಷಾಂತರ ಭಕ್ತ ಸಮೂಹ!

*ಐತಿಹಾಸಿಕ ಹಿನ್ನೆಲೆಯ ಕನಕಗಿರಿ ಜಾತ್ರೆ

ಕಿಷ್ಕಿಂಧವಾಣಿ

ಕನಕಗಿರಿ: ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪ್ರಸಿದ್ಧ ಕನಕಗಿರಿಯ ಸುಕ್ಷೇತ್ರದ

ಕನಕಾಚಲಪತಿ ಲಕ್ಷ್ಮೀ ನರಸಿಂಹಸ್ವಾಮಿಯ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ

ಶ್ರದ್ಧೆ, ಭಕ್ತಿಯಿಂದ ಬುಧವಾರ ಸಂಜೆ ಜರುಗಿತು.

ರಥೋತ್ಸವದ ನಿಮಿತ್ತ ಬೆಳಗ್ಗೆ ಕನಕಾಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾಹುತಿ, ಅನ್ನಬಲಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ರಥಕ್ಕೆ ಹಸಿರು ತರಿಳು ತೋರಣ, ಗೊಂಬೆ, ಹೂ, ಬಾವುಟ, ಐದು ಪ್ರಕಾರದ ಚಟ್ಟುಗಳನ್ನು ಕಟ್ಟಿದ ರಥಕ್ಕೆ ಶೃಂಗರಿಸಲಾಗಿತ್ತು. ರಾಜಬೀದಿಯಲ್ಲಿ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತ ಸಮೂಹ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು. ಭಕ್ತಗಣ ರಥದ ಗಾಲಿಗೆ ತೆಂಗಿನಕಾಯಿ ಹೋಡೆದು ಹರಕೆ ತಿರಿಸಿದರು.

ರಥ ಸಂಜೆ 4.20ಕ್ಕೆ ಆರಂಭಗೊಂಡಿತು. ಕೆಲ ನಿಮಿಷಗಳಲ್ಲಿ ಮೊದಲು ತನ್ನ ದಾರಿ ಬದಲಿಸಿದ ರಥ ಮುಂದೆ ಹೋಗದಿದ್ದಾಗ ಮತ್ತೆ ಹಿಂದಕ್ಕೆ ಎಳೆದು ನಂತರ ರಥವನ್ನು ಎಳೆಯಲಾಗಿತು. ಕೆಲ ನಿಮಿಷಗಳಲ್ಲಿ ಮತ್ತೆ ರಥ ಅಡ್ಡ ನಿಂತಾಗ ಮತ್ತೆ ಹಿಂದಕ್ಕೆ ಎಳೆದು ಮುಂದಕ್ಕೆ ಎಳೆಯಲಾಯಿತು. ನಂತರ ಎದಿರು ಹನುಮಪ್ಪನ ದೇವಸ್ಥಾನಕ್ಕೆ ತೆರಳಿ ನಂತರ 1.20 ನಿಮಿಷದಲ್ಲಿ ರಾಜಗಾಂಭಿರ್ಯದಂತೆ ತನ್ನ ಮೂಲಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಲಕ್ಷಾಂತರ ಭಕ್ತರು ಕೆಕೆ ಹಾಕಿ ಸಂಭ್ರಮಿಸಿದರು. ಕೆಲ ಭಕ್ತರು ತಂಗಿದ್ದ ಸ್ಥಳದಿಂದ ದೇವಸ್ಥಾನದ ವರಗೆ ದೀಡ್ ಸ್ಕಾರ ಹಾಕಿ ಬೇಡಿಕೊಂಡ ಹರಕೆಗಳನ್ನು ತೀರಿಸಿದರು.ಸಿಹಿ ತಿನಿಸು ಸಮರ್ಪಣೆ ಮಾಡಿದರು. ಭಾಜಾ ತಾಷಾ, ವಾಧ್ಯಮೇಳ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದವು. ಭಕ್ತರು ಮನೆಯ ಮಾಳಿಗೆ, ರಾಜಬೀದಿಯಲ್ಲಿ ನಿಂತು ರಥೋತ್ಸವವನ್ನು ವೀಕ್ಷಿಸಿದರು. ಜಿಲ್ಲೆ, ರಾಜ್ಯ ಸೇರಿದಂತೆ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ಭಾಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.

ಜಾತ್ರಾಮಹೋತ್ಸವದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವನಾಥ ಮುರಡಿ, ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷೆ ತನುಶ್ರೀ, ಉಪಾಧ್ಯಕ್ಷ ಕಂಠಿರಂಗ ನಾಯಕ, ಶಾಸಕ ರಮೇಶ ಜಾರಕಿಹೋಳಿ ಪುತ್ರ ಅಮರನಾಥ ಜಾರಕಿಹೋಳಿ ಸೇರಿದಂತೆ ಹಲವು ಗಣ್ಯರು ಇದ್ದರು

ಬುಡಕಟ್ಟು ಲಕ್ಷಣಗಳ ಕುರುಬ ಜನಾಂಗಕ್ಕೆ ಎಸ್.ಟಿ.ಮೀಸಲಾತಿ ಶೀಘ್ರ ಘೋಷಣೆಗೆ ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ ಮನವಿ ಸಲ್ಲಿಕೆ.

*ಪೂಜ್ಯ ಶ್ರೀನಿರಂಜನನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಮನವಿ ಸಲ್ಲಿಕೆ.

ಕಿಷ್ಕಿಂಧವಾಣಿ ಸುದ್ದಿ
ನವದೆಹಲಿ: ಸಾವಿರಾರು ವರ್ಷಗಳಿಂದ ಬುಡಕಟ್ಟು ಮತ್ತು ದೇಶದ ಮೂಲ ಸಂಸ್ಕೃತಿಯ ಲಕ್ಷಣಗಳನ್ನು ಹೊಂದಿರುವ ಕುರುಬ ಸಮಾಜಕ್ಕೆ ಕರ್ನಾಟಕದಲ್ಲಿ
ಎಸ್.ಟಿ.ಮೀಸಲಾತಿಯವನ್ನು ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯ ಘೋಷಣೆ ಮಾಡುವಂತೆ
ಶ್ರೀ ರೇವಣಸಿದ್ದೇಶ್ವರ ಕನಕ ಗುರು ಪೀಠ ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೇಂದ್ರದ ಬುಡಕಟ್ಟು ಸಚಿವಾಲಯದ ಆಯುಕ್ತರಿಗೆ ಕುರುಬ ಸಮುದಾಯದ ಮುಖಂಡರು ಸಂಘಟನೆಗಳ ಹಿರಿಯರು ಮನವಿ ಪತ್ರವನ್ನು ಸಲ್ಲಿಸಿದರು.
ಈಗಾಗಲೇ ಕರ್ನಾಟಕದಲ್ಲಿ 1980ರ ದಶಕದ ಹಿಂದೆ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಕೆಲ ಕಾರಣಗಳಿಂದ ಮಧ್ಯದಲ್ಲಿ ಎಸ್‌ಟಿ ಮೀಸಲಾತಿ ಸರ್ಕಾರ ತೆಗೆದುಹಾಕಿದ್ದು ಪುನಃ ಸಮುದಾಯದ ಬೇಡಿಕೆಯಂತೆ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ಸೇರಿದಂತೆ ಅಗತ್ಯ ತಾಂತ್ರಿಕ ಮಾಹಿತಿಯನ್ನು ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದು ಕೇಂದ್ರ ಸರ್ಕಾರದ ಬುಡಕಟ್ಟು ಅಧ್ಯಯನ ಮತ್ತು ಸಚಿವಾಲಯ ಎಸ್ ಟಿ ಮೀಸಲಾತಿ ಕಲ್ಪಿಸುವ ಕಡತವನ್ನು ಪರಿಶೀಲನೆ ಮಾಡಿದ್ದು ಶೀಘ್ರದಲ್ಲೇ ಕೇಂದ್ರ ಸರ್ಕಾರದ ಸಚಿವ ಸಂಪುಟದ ಮುಂದೆ ಕಡತವನ್ನು ಮಂಡನೆ ಮಾಡಿ ಎಸ್ ಟಿ ಮೀಸಲಾತಿಯನ್ನು ಘೋಷಣೆ ಮಾಡುವಂತೆ ಆಯುಕ್ತರಲ್ಲಿ ಮನವಿ ಮಾಡಲಾಯಿತು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ,ವಿಧಾನಪರಿಷತ್ ಮಾಜಿ ಸಭಾಧ್ಯಕ್ಷ ರಘುನಾಥ್ ಮಲ್ಕಾಪೂರೆ,ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ,ಹಾಲುಮತ ಮಹಾಸಭಾ ಅಧ್ಯಕ್ಷ ರುದೃಣ್ಣ ಗುಳಗುಳಿ ಸೇರಿದಂತೆ ಕುರುಬ ಸಮಾಜದ ಹಿರಿಯ ಮುಖಂಡರು ಇದ್ದರು.

ಮನೆಯ ಮುಂದೆ ಮೂತ್ರವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನ್ಯಾಯವಾದಿ ಹಾಗೂ ಅವರ ಪತ್ನಿ ಮೇಲೆ ಹಲ್ಲೆ!

*ಜಮೀರ್ ಇತರರನ್ನು ಬಂಧಿಸುವಂತೆ ಮಾಜಿ ಶಾಸಕ ಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮನೆಯ ಮುಂದೆ ಮೂತ್ರ ಮಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಜಮೀರ್ ಹಾಗೂ ಐವತ್ತು ಹೆಚ್ಚು ಜನರು ಸೇರಿ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ಬಸವೇಶ್ವರ ಕಾಲೋನಿ(ಬಂಬೂ ಬಜಾರ್)ಯಲ್ಲಿ ಮಂಗಳವಾರ ಸಂಜೆ ಜರುಗಿದ್ದು ಹಲ್ಲೆ ಮಾಡಿದವರು ಕೂಡಲೇ ಬಂಧಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ನ್ಯಾಯವಾದಿ ಪ್ರಭಾಕರ್ ಆಪ್ತರು ಹಾಗೂ ವಕೀಲರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗಂಗಾವತಿಯಲ್ಲಿ ಇಂಥ ಘಟನೆಗಳು ಪದೇಪದೇ ನಡೆಯುತ್ತಿದ್ದು ಪೊಲೀಸ್ ವೈಫಲ್ಯ ಕಾರಣವಾಗಿದೆ. ಕೆಲ ವ್ಯಕ್ತಿಗಳ ಕುಮ್ಮಕ್ಕಿನಿಂದ ನಗರದಲ್ಲಿ ಪದೇ ಪದೇ ಹಲ್ಲೆ, ದೌರ್ಜನ್ಯ, ಗೂಂಡಾಗಿರಿಯಂತಹ ಕೃತ್ಯಗಳು ನಡೆಯುತ್ತಿವೆ. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಬೇಕೆಂದರು.

ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಮಾತನಾಡಿ, ದೌರ್ಜನ್ಯ ಗುಂಡಾಗಿರಿ ಹಲ್ಲೆ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಯಾರನ್ನು ಬಿಡುವ ಪ್ರಶ್ನೆ ಇಲ್ಲ ಅವರನ್ನು ಕೂಡಲೇ ಬಂಧಿಸಿ ಶಿಕ್ಷಿಸಲಾಗುತ್ತದೆ. ಎಲ್ಲರೂ ಸಹಕಾರ ನೀಡುವ ಮೂಲಕ ಗಂಗಾವತಿಯಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗಾಗಲೇ ಗಂಗಾವತಿ ನಗರದಾದ್ಯಂತ ಸಿಸಿ ಕ್ಯಾಮರಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ ಅವರ ಹಿಂದೆ ಇರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷರು,ಕಾರ್ಯದರ್ಶಿ,ಪದಾಧಿಕಾರಿಗಳು ಬಿಜೆಪಿ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು.

ಚಿಕಿತ್ಸೆ: ಮೂತ್ರ ವಿಸರ್ಜನೆ ಘಟನೆಯಲ್ಲಿ ಅಸ್ವಸ್ಥಗೊಂಡ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿ ಅನಸೂಯಾ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

**

“ಮೂತ್ರ ವಿಸರ್ಜನೆ ಮಾಡಿ ರದ್ದಾಂತಕ್ಕೆ ಕಾರಣನಾದ ಜಮೀರ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ 6ವರ್ಷ ಪೂರೈಸಿದ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಶುಭಾಶಯ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು:

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ

ಅಭಿನಂದಿಸಿದ್ದಾರೆ.

ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು.

ವಿರೋಧ ಪಕ್ಷವಾದ ಬಿಜೆಪಿ ಸುಳ್ಳು ಕೇಸ್ ಗಳನ್ನು ಹಾಕಿ ಬಗೆಬಗೆಯ ಕಿರುಕಳ ನೀಡಿದರೂ ಶಿವಕುಮಾರ್ ಅವರು ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿಯಿಲ್ಲದ ನಿಷ್ಠೆಗೆ ಸಾಕ್ಷಿಯಾಗಿದೆ.. ಇದು ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಸ್ಪೂರ್ತಿದಾಯಕ ನಡವಳಿಕೆ ಆಗಿದೆ.

ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ.

ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ಇದಕ್ಕಾಗಿ ನಡೆಯುವ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡಾ ಜೊತೆಯಿರುತ್ತೇನೆ ಎಂದು ಶುಭ ಕೋರಿದ್ದಾರೆ.

ಅಪೂರ್ಣವಾಗಿರುವ ವಾಲ್ಮೀಕಿ ಭವನಗಳಿಗೆ ೨ಕೋಟಿ ರೂ.ಅನುದಾನ ಕ್ಕೆ ಶಾಸಕ ರೆಡ್ಡಿ ಆಗ್ರಹ.

 *ವಿಧಾನಸಭೆಯ ಅಧಿವೇಶನದಲ್ಲಿ ಸರಕಾರಕ್ಕೆ ಪ್ರಶ್ನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2021-22 ಸಾಲಿನಲ್ಲಿ ಅಂದಿನ ಬಿಜೆಪಿ ಸರಕಾರ 10 ವಾಲ್ಮೀಕಿ ಭವನ ನಿರ್ಮಿಸಲು ಶೇ. 25ರಷ್ಟು ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿತ್ತು.ಅನುದಾನದ ಕೊರತೆಯಿಂದಾಗಿ ಇಂದಿನವರೆಗೂ ವಾಲ್ಮೀಕಿ ಭವನದ ಕಾಮಗಾರಿ ಅಪೂರ್ಣವಾಗಿದೆ. ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒಂದು ರೂಪಾಯಿ ಅನುದಾನವನ್ನು ಸಹ ಬಿಡುಗಡೆ ಮಾಡಿಲ್ಲ,ಕೂಡಲೇ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಬಿಡುಗಡೆ ಮಾಡಿ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿ ಈಗಾಗಲೇ ಅಪೂರ್ಣಗೊಂಡಿರುವ ವಾಲ್ಮೀಕಿ ಭವನಗಳಿಗೆ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವ ಭರವಸೆ ನೀಡಿದರು. ವಾಲ್ಮೀಕಿ ನಿಗಮದ ಹಗರಣದ ಎಲ್ಲಾ ಹಣವನ್ನು ಸರ್ಕಾರ ವಸೂಲಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಅಧವೇಶನದಲ್ಲಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅನುದಾನದಲ್ಲೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಲ್ಲಾ ಅಪೂರ್ಣ ವಾಲ್ಮೀಕಿ ಭವನಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಕೂಡಲೇ ಹಣ ಬಿಡುಗಡೆ ಮಾಡುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ಗಮನ ಸೆಳೆದರು.

ನೂತನ ಜಡ್ಜ್ ಆಗಿ ನೇಮಕಗೊಂಡ ಸಂತೋಷ ಬೆಳಗೋಡ ಅವರಿಗೆ ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದಲ್ಲಿ ಸನ್ಮಾನ.

*ಪರಿಶ್ರಮ ಅಧ್ಯಯನದ ಮೂಲಕ ಗುರಿ ಸಾಧಿಸಿದ ಸಂತೋಷ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸತತ ಪರಿಶ್ರಮ ಹಾಗೂ ಅಧ್ಯಯನದ ಮೂಲಕ ಯಾರು ಬೇಕಾದರೂ ಗುರಿಯನ್ನು ತಲುಪಬಹುದು ಎಂದು ನೂತನವಾಗಿ ಜಡ್ಜ್ ಆಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಅವರಿಂದ ಸರ್ವರೂ ಸಾಧಿಸುವುದನ್ನು ಕಲಿಯಬೇಕು ಎಂದು ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದ ಮುಖ್ಯಸ್ಥರಾದ

ಸೈಯದ್ ತಾಹಿರ್ ಕಾದ್ರಿ ಆದಿಲ್ ಪಾಶ ಸಾಹೇಬರು ಸಜ್ಜದ ನಸಿನ್ ಕರಿ ಮುಲ್ಲಾ ಕಾದ್ರಿ ಹೇಳಿದರು.

ಅವರು ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಶ್ರೀ ಕರಿಮುಲ್ಲಾ ಖಾದ್ರಿ ಅವರ ದರ್ಗಾದ ಉರುಸು ಕಾರ್ಯಕ್ರಮದಲ್ಲಿ ನೂತನವಾಗಿ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಇವರನ್ನು ಸಮಸ್ತ ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಶಿಕ್ಷಣದ ಮೂಲಕ ಸರ್ವರೂ ಉನ್ನತ ಹುದ್ದೆಗೆ ಹೋಗಲು ಸಾಧ್ಯ, ಆದರೆ ಪರಿಶ್ರಮ ಮತ್ತು ಸತತ ವಿದ್ಯಾಭ್ಯಾಸ ಮಾಡುವುದು ಅವಶ್ಯಕ.ಗ್ರಾಮೀಣ ಭಾಗದಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆದು ಪಾಲಕರ ಕನಸನ್ನು ಮಕ್ಕಳು ನನಸು ಮಾಡಿ ಇಡೀ ಸಮುದಾಯ ಮೆಚ್ಚುವ ಕಾರ್ಯ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ

ಕಾರ್ಯಕ್ರಮದಲ್ಲಿ ಚಿಕ್ಕ ಜಂತಗಲ್ ಗ್ರಾಮದ ಹಿರಿಯರಾಗಿರುವ ಸೈಯದ್ ಅಲಿ ಸಾಹೇಬ, ನ್ಯಾಯವಾದಿಗಳಾದ ಸೈಯದ್ ಹಾಶುಮುದ್ದೀನ್, ಗೌಸ್ ಪಿರ್, ಎಜಿಪಿ ಭಾನು ಬಿ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮುಖಂಡ ಡಾ.ಶೇಖ್ ಇಲಿಯಸ್ ಬಾಬಾ, ಶರಣಯ್ಯ ಸ್ವಾಮಿ, ಬಟಾರಿ ಮಂಜುನಾಥ, ಬಿ ವೀರಪ್ಪ, ಅಂದನಯ್ಯ ಸ್ವಾಮಿ, ರಾಜಸಾಬ, ರಾಜಶೇಖರ, ಮುಕ್ಕಣ್ಣಗೌಡ, ಬಿ ಮಂಜು, ಆದಿಂ ಪಾಷಾ, ವಲಿಸಾಬ, ಇಮ್ರಾನ ಸಾಬ, ಬುಡನ ಸಾಬ, ಬಾಸು ಸಾಬ, ಬಶೀರ್, ಖಾಜಾ ಸಾಬ, ಶೇಕ್ ಮಹಮ್ಮದ

ಸೇರಿ ಅನೇಕರಿದ್ದರು.

ಗಂಗಾವತಿ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಯಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

*ಪುಡಾರಿಗಳ ಅಡ್ಡ ಆಗಿರುವ ಕೇಂದ್ರ ಬಸ್ ನಿಲ್ದಾಣ. 

*ನಿತ್ಯವೂ ಪ್ರಯಾಣಿಕರು,ವ್ಯಾಪಾರಿಗಳ ಮೇಲೆ ನಿಶಾಚರಿಗಳಿಂದ ಹಲ್ಲೆ, ದೌರ್ಜನ್ಯ.

*ಒಂದು ವರ್ಷದಿಂದ ಕೆಟ್ಟು ನಿಂತಿರುವ ಬಸ್ ನಿಲ್ದಾಣದ ಸಿಸಿ ಕ್ಯಾಮರಾಗಳು.

*ರಾತ್ರಿ ವೇಳೆ ನಗರದ ವಿವಿಧ ಸರ್ಕಲ್ ಗಳ ಪುಡಾರಿ ಯುವಕರಿಂದ ಗುಂಡು ಪಾರ್ಟಿ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ದುಷ್ಕರ್ಮಿಯೊರ್ವ ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆ ಮತ್ತು ಎಡ ಭಾಗದ ಕಣ್ಣು, ಕಿವಿಗೆ ತೀವ್ರ ಗಾಯವಾದ ಪ್ರಕರಣ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯ ರಾತ್ರಿ ಜರುಗಿದೆ.

ಗಂಗಾವತಿ ಜೆಸ್ಕಾಂ ಕಚೇರಿಯ ನಿವೃತ್ತ ಲೈನ್ ಮ್ಯಾನ್ ಶಿವಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಳಿತಿರುವ ಸಂದರ್ಭದಲ್ಲಿ ದುಷ್ಕರ್ಮಿ ಒಬ್ಬ ಆಗಮಿಸಿ ವಿನಾಕಾರಣ ಜಗಳ ತೆಗೆದು ಕಲ್ಲಿನಿಂದ ತಲೆ ಮತ್ತು ಎಡ ಭಾಗದ ಕಣ್ಣು ಕಿವಿಗೆ ಹೊಡೆದಿದ್ದರಿಂದ ದೂರ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪುಡಾರಿಗಳ ಅಟ್ಟಹಾಸ ಹೆಚ್ಚಾಗಿದ್ದು ನಿತ್ಯವೂ ಪ್ರಯಾಣಿಕರು ಮತ್ತು ಸಾರ್ವಜನಿಕರ ಮೇಲೆ ಮತ್ತು ವ್ಯಾಪಾರಿಗಳ ಮೇಲೆ ದೌರ್ಜನ್ಯ ಗುಂಡಾಗಿರಿ ವ್ಯಸಗುವ ಗುಂಪು ಕೆಲಸ ಮಾಡುತ್ತಿದೆ. ಜೊತೆಗೆ ನಗರದ ವಿವಿಧ ಸರ್ಕಲ್ ಗಳಲ್ಲಿ ಮಧ್ಯರಾತ್ರಿ ಪುಡಾರಿಗಳು ಮಧ್ಯಪಾನ ಸೇವನೆ ಮಾಡಿ ಪ್ರಯಾಣಿಕರು, ಸಾರ್ವಜನಿಕರು ಮತ್ತು ವಾಹನ ಸವಾರರ ಮೇಲೆ ಹೊಡಿಬಡಿ ಮಾಡುತ್ತಿದ್ದಾರೆ.

ಕೆಟ್ಟು ನಿಂತ ಸಿ.ಸಿ. ಕ್ಯಾಮರಾಗಳು: ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಸಾರ್ವಜನಿಕರು ಭೇಟಿ ನೀಡುತ್ತಾರೆ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆ. ಎಸ್. ಆರ್. ಟಿ.ಸಿ ಕ್ಯಾಮರಗಳನ್ನು ಅಳವಡಿಸಿದ್ದು ಕಳೆದ ಒಂದು ವರ್ಷದಿಂದ ಸಿಸಿ ಕ್ಯಾಮರಗಳು ಕೆಟ್ಟು ನಿಂತಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಿ.ಸಿ.ಕ್ಯಾಮೆರಾ ಗಳು ಇರುವ ಜಾಗದಲ್ಲಿ ವಿದ್ಯುತ್ ತೊಂದರೆ ಇದ್ದು ಕಳೆದ ಕೆಲವು ದಿನಗಳಿಂದ ಸಿ.ಸಿ. ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ.ದುರಸ್ತಿ ಮಾಡಿಸಲಾಗುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ದುಷ್ಕರ್ಮಿ‌ ಬಂಧನಕ್ಕೆ ಕ್ರಮ: ಕೇಂದ್ರ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಯ ಕುರಿತು ಪೊಲೀಸ್ ಇಲಾಖೆಯ ಶ್ರೀ ಕೃಷ್ಣದೇವರಾಯ ವೃತ್ತದ ಸಿ ಸಿ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದ್ದು ದುಷ್ಕರ್ಮಿಯನ್ನು ಶೀಘ್ರದಲ್ಲೇ ಬಂದಿಸಲಾಗುತ್ತದೆ ಎಂದು ನಗರ ಪೊಲೀಸ್ ಠಾಣೆಯ ಸಿ. ಪಿ. ಐ. ಪ್ರಕಾಶ ಮಾಳೆ ತಿಳಿಸಿದ್ದಾರೆ.