Breaking News
ಸರಕಾರಿ ಶಾಲೆಗೆ ದಾನಕೊಟ್ಟ ಭೂಮಿಯನ್ನು ಮರಳಿ ಪಡೆಯುವ ಕಲ್ಮಠ ಸ್ವಾಮಿಯ ಯತ್ನ ಖಂಡಿಸಿ ಬೃಹತ್ ಪ್ರತಿಭಟನೆ.

*1980 ರಲ್ಲಿ ಶಾಲೆಗೆ ಕೊಟ್ಟೂರುಸ್ವಾಮಿಗಳಿಂದ 5 ಎಕರೆ ಭೂಮಿ‌ ದಾನ.

*ಇದರಲ್ಲಿ 3 ಎಕರೆ ಭೂಮಿ ಮರಳಿ ಪಡೆಯಲು ಈಗಿನ ಕಲ್ಮಠ ಶ್ರೀಗಳಿಂದ ಯತ್ನ.

*ಎಸ್ ಎಫ್ ಐ ನೇತೃತ್ವದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗ್ರಾಮೀಣ ಪ್ರದೇಶದ ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು 1980 ರಲ್ಲಿ ತಾಲೂಕಿನ ಹೊಸಳ್ಳಿ ಗ್ರಾಮದ ಪಕ್ಕದಲ್ಲಿರುವ ಕಲ್ಮಠದ 5 ಎಕರೆ ಭೂಮಿಯನ್ನು ಅಂದಿನ ಪೀಠಾಧಿಪತಿ ಕೊಟ್ಟೂರು ಮಹಾಸ್ವಾಮಿಗಳು ದಾನವಾಗಿ ಕೊಟ್ಟಿದ್ದರು. ಪ್ರಸ್ತುತ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು 3 ಎಕರೆ ಭೂಮಿಯನ್ನು ಮರಳಿ ಪಡೆಯಲು ದಾಖಲಾತಿ ತಿದ್ದುಪಡಿ ಮಾಡುವ ಯತ್ನ ನಡೆಸಿದ್ದು ಇದರಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಎಸ್ಎಫ್ ಐ ನೇತೃತ್ವದಲ್ಲಿ ಹೊಸಳ್ಳಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹೊಸಳ್ಳಿಯಿಂದ ಪಾದಯಾತ್ರೆ ನಡೆಸಿ ಗಂಗಾವತಿಯ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ

ಬೃಹತ್ ಪ್ರತಿಭಟನೆ ನಡೆಸಿ ಬಿ ಇ ಓ ಅವರ ಮೂಲಕ ರಾಜ್ಯದ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಹೊಸಳ್ಳಿ ಗ್ರಾಮದ (ವಿರುಪಾಪುರ ಸೀಮೆ) ಸರ್ವೆ ನಂ:16/2/4 ವಿಸ್ತೀರ್ಣ 05-00 ಎ-ಗುಂ ಪೈಕಿ 03-00 ಎ-ಗುಂ ಸರಕಾರಿ ಶಾಲೆಯ ಭೂಮಿಯನ್ನು ಗಂಗಾವತಿ ಕಲ್ಮಠದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳುತ್ತಿರುವುದನ್ನು ತಡೆದು ಸದರಿ ಭೂಮಿಯನ್ನು ಶಾಲೆಗಾಗಿಯೇ ಮೀಸಲಿರಿಸಬೇಕು.

ಸದರಿ ಭೂಮಿಯ ಪಹಣಿಯಲ್ಲಿ ಪ್ರಸ್ತುತ ಅಧ್ಯಕ್ಷ ಶಾಲಾ ಸುಧಾರಕರ ಸಮಿತಿ ಎಂದು ಇರುತ್ತದೆ. ಸದರಿ ಭೂಮಿಯ ವಾರಸುದಾರರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಗಾವತಿ ಅವರದಾಗಿರುತ್ತದೆ.

ಈ ಭೂಮಿಯನ್ನು ಶಾಲೆಗೆ ದಾನರೂಪವಾಗಿ ನೀಡಿ ಸುಮಾರು 45 ವರ್ಷ ಮೇಲ್ಪಟ್ಟರೂ ಸಂಪೂರ್ಣವಾಗಿ ಕರ್ನಾಟಕ ಸರ್ಕಾರ ರಾಜ್ಯಪಾಲರ ಹೆಸರಿಗೆ ಆಗಿರುವುದಿಲ್ಲ. ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈಗ ಭೂಮಿಯನ್ನು ವಾಪಸ್ಸು ಕಬಳಿಸುವ ಉದ್ದೇಶ ಹೊಂದಿದ ಕಲ್ಮಠ ಶ್ರೀಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಭೂಮಿಯನ್ನು ಸಂಪೂರ್ಣ ಕರ್ನಾಟಕ ಸರ್ಕಾರದ ಸುಪರ್ದಿಗೆ ಹೋಗಲು ಬಿಡುತ್ತಿಲ್ಲ.ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕಲ್ಮಠ ಶ್ರೀಗಳೊಂದಿಗೆ ಶಾಮೀಲಾಗಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದಿರುವುದಿಲ್ಲ.

03-00 ಎಕರೆ ಭೂಮಿಯನ್ನು ಸದರಿ ಸರಕಾರಿ ಶಾಲೆಯ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಆಮೀಷ ತೋರಿಸಿ ತಮ್ಮಗಳ ಹೆಸರಿಗೆ ವರ್ಗಾಯಿಸಿಕೊಳ್ಳಲು ಭೂಮಿಯನ್ನು ಪೋಡಿ ಮಾಡಲು ಅರ್ಜಿ ಸಲ್ಲಿಸಿದ್ದು

ಕರ್ನಾಟಕ ಸರ್ಕಾರ ಸರಕಾರಿ ಶಾಲೆಗಳಿಗೆ ಸಂಬಂಧಪಟ್ಟ ಆಸ್ತಿ ಭದ್ರವಾಗಿಸಲು ರಾಜ್ಯ ಶಾಲಾ ಆಸ್ತಿಗಳನ್ನು ಸಂರಕ್ಷಿಸಲು 2022-23ನೇ ಸಾಲಿನಿಂದಲೇ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದೆ. ಅದರಂತೆ ವಿವಾದಿತ ಶಾಲಾ ಆಸ್ತಿಗಳಿಗೆ ಸಂಬಂಧಿಸಿದಂತೆ ಕಾಲಮಿತಿ ಗುರಿ ನಿಗದಿಪಡಿಸಿ ಆಸ್ತಿಯನ್ನು ಶಾಲಾ ಹೆಸರಿಗೆ ವರ್ಗಾವಣೆಗೊಳಿಸಲು ಹಾಗೂ ಶಾಲಾ ಆಸ್ತಿಯನ್ನು ಅತಿಕ್ರಮಣ ಮಾಡಿರುವುದನ್ನು ಗುರುತಿಸಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಹೊಸಳ್ಳಿ ಗ್ರಾಮದ ಸರಕಾರಿ ಶಾಲೆಯ ಆಸ್ತಿಯ ಕುರಿತಾಗಿ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಶಾಲೆಯ ಆಸ್ತಿಯನ್ನು ಸಂರಕ್ಷಿಸಬೇಕಾಗಿದೆ. ದಾನದ ರೂಪದಲ್ಲಿ ಶಾಲೆಗಳಿಗೆ ನೀಡಲಾದ ಆಸ್ತಿಯನ್ನು ಮರು ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಕಲ್ಮಠದ ಶ್ರೀಗಳು ಶಾಲಾ ಆಸ್ತಿಯನ್ನು ಕಬಳಿಸುವ ಉದ್ದೇಶವನ್ನಿಟ್ಟುಕೊಂಡು ಸದರಿ ಶಾಲಾ ಆಸ್ತಿಯನ್ನು ಪೋಡಿ ಮಾಡಲು ಅರ್ಜಿ ಸಲ್ಲಿಸಿ, ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ದುರುದ್ದೇಶವನ್ನು ಹೊಂದಿರುತ್ತಾರೆ.

ಕೂಡಲೇ ಜಿಲ್ಲಾಧಿಕಾರಿಗಳು,ಡಿಡಿಪಿಐ ಅವರು

ಗಂಭೀರವಾಗಿ ಪರಿಗಣಿಸಿ ಶಾಲಾ ಆಸ್ತಿಯು ಯಾವುದೇ ರೀತಿಯಲ್ಲಿ ಒತ್ತುವರಿ/ವರ್ಗಾವಣೆ ಆಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಆಸ್ತಿಯನ್ನು ಸಂರಕ್ಷಿಸಿ ಶಾಲೆಯ ಹೆಸರಿನಲ್ಲಿ ನೋಂದಣಿ ಮಾಡಬೇಕು.

ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಹೊಸಳ್ಳಿ ಸರಕಾರಿ ಶಾಲೆ ಉತ್ತಮ ಮಕ್ಕಳ ಸಂಖ್ಯೆಯನ್ನು ಹೊಂದುವುದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಶಾಲೆಗೆ ಸುಸಜ್ಜಿತವಾದ ಆಟದ ಮೈದಾನ ರಚಿಸಿ, ಸುತ್ತಲೂ ಕಂಪೌಂಡ್ ನಿರ್ಮಿಸಿ, ಶಾಲೆಯನ್ನು ಅಭಿವೃದ್ಧಪಡಿಸುವ ಮೂಲಕ ಇಲ್ಲಿನ ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು. ಶಾಲಾ ಆಸ್ತಿಯು ಯಾವುದೇ ರೀತಿಯಲ್ಲಿ ಒತ್ತುವರಿಯಾಗಲಿ, ವರ್ಗಾವಣೆಯಾಗಲಿ ಆಗದಂತೆ ಶಿಸ್ತುಬದ್ಧವಾಗಿ ಕ್ರಮ ಜರುಗಿಸಬೇಕೆಂದು ಹೊಸಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ವಿನೋದ,ಮಲ್ಲಪ್ಪ, ಶಿವರಾಜ,

ವಿರೇಶ, ಸಿದ್ದು,ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ್ ಕಡಗದ,ಶಿವು,ಮೌನೇಶ,ದರ್ಶನ,ದುರುಗೇಶ, ರಗಡಪ್ಪ,ಶ್ರೀ ನಿವಾಸ,ಮುತ್ತಣ್ಣ ಇತರರು ಇದ್ದರು.