ವೆಂಕಟಗಿರಿ ವ್ಯಾಪ್ತಿಯ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರ ಪಟ್ಟ ಹಂಚಿಕೆ: ಶಾಸಕ ಗಾಲಿ ಜನಾರ್ದನ ರೆಡ್ಡಿ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ವೆಂಕಟಗಿರಿ ಹೋಬಳಿಯ ಹಲವು ಗ್ರಾಮಗಳಲ್ಲಿ ಹಲವು ದಶಕಗಳಿಂದ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆ ಅಡಿ ಶೀಘ್ರದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಹೇಳಿದರು.
ಅವರು ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿ, ಅಕ್ರಮ ಸಕ್ರಮ ಕಮಿಟಿಯ ಸಭೆಯಲ್ಲಿ ಪಾಲ್ಗೊಂಡು ವೆಂಕಟಗಿರಿ ಭಾಗದ ರೈತರ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ನಿಯಮಾನುಸಾರ ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಕಾನೂನಿನ ಅನ್ವಯ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುವವರಿಗೆ ಸಾಗುವಳಿ ಚೀಟಿ ವಿತರಣೆಗೆ ಕಾನೂನು ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ರೈತರು ತಾವು ಇದುವರೆಗೂ ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಅಧಿಕಾರಿಗಳಿಂದ ಬಂದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಾಗುವಳಿ ಚೀಟಿ ಪಡೆಯಲು ಸಿದ್ದರಾಗುವಂತೆ ತಿಳಿಸಿದರು.
ಕುಡಿಯುವ ನೀರಿನ ವ್ಯವಸ್ಥೆಗೆ ಸೂಚನೆ:ಬೇಸಿಗೆ ಬಿಸಿಲು ಹೆಚ್ಚಾಗುತ್ತಿದ್ದು ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸಬೇಕು. ಹಣದ ಕೊರತೆ ಇದ್ದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಬೋರ್ವೆಲ್ ಕೊರೆಸುವ ಮತ್ತು ರೈತರಿಂದ ಬೋರ್ವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅನುಕೂಲ ಕಲ್ಪಿಸಬೇಕೆಂದರು.
ಸಭೆಯಲ್ಲಿ ಗಂಗಾವತಿ ತಹಸೀಲ್ದಾರ್ ವಿಶ್ವನಾಥ್ ವಿಶ್ವನಾಥ್ ಮುರುಡಿ, ಕೊಪ್ಪಳ ತಹಸೀಲ್ದಾರ್ ಬಸವರಾಜ್, ಉಪತಹಶೀಲ್ದಾರ ಮಹಾಂತಗೌಡ ಪಾಟೀಲ್, ಶಿರಸ್ತೇದಾರ್ ಪ್ರಕಾಶ ನಾಯಕ,ಎಇಇ ಹೊನ್ನಪ್ಪ, ಇ.ಓ ರಾಮ್ ರೆಡ್ಡಿ, ಎ ಡಿ ಎಲ್ ಆರ್ ರಾಜಶೇಖರ್ ಹಾಗೂ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

