Breaking News
ಕಿಷ್ಕಿಂಧಾ ಅಂಜನಾದ್ರಿಗೆ ಪ್ರಾಮಾಣಿಕವಾಗಿ ಚಿನ್ನಾಭರಣಗಳ ದೇಣಿಗೆ ನೀಡಲಾಗಿದೆ. ಕೆಲವರ ಷಡ್ಯಂತ್ರದಿಂದ ಅಪಪ್ರಚಾರ ನಡೆದಿದೆ:ಗಾಲಿ ಜನಾರ್ದನ ರೆಡ್ಡಿ

*ವಿಶ್ವಖ್ಯಾತಿಯ ಡಾ.ಮಹೇಶ ರೆಡ್ಡಿ ದೇವರ ಸೇವೆ ಮಾಡುವಲ್ಲಿ ಎತ್ತಿದ ಕೈ, ಅಪಪ್ರಚಾರ ಕೂಡಲೇ ನಿಲ್ಲಿಸಿ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಹೈದ್ರಾಬಾದ್ ಮೂಲದ ವಿಶ್ವವಿಖ್ಯಾತ ಕಂಷ್ಟ್ರಕ್ಷನ್ ಕಂಪನಿಯ ಮಾಲೀಕರು ಹಾಗೂ ದೈವಭಕ್ತರಾದ
ಡಾ. ಮಹೇಶ್ ರೆಡ್ಡಿ ಕುಟುಂಬದವರು ಸುಮಾರು ಎರಡುವರೆ ಕೋಟಿ ಬೆಲೆಬಾಳುವ ಬಂಗಾರದ ಸಾಮಾನುಗಳನ್ನು ನೀಡಿದ್ದು ಬಂಗಾರ ಖರೀದಿ ಮಾಡಿದ ರಶೀದಿ ಸಮೇತ ದಾಖಲೆಗಳನ್ನು ಗಂಗಾವತಿಯ ತಹಸಿಲ್ದಾರರಿಗೆ ನೀಡಲಾಗಿದೆ. ಕೆಲವರು ಉದ್ದೇಶಪೂರ್ವಕವಾಗಿ ಅಂಜನಾದ್ರಿಗೆ ನೀಡಲಾಗಿರುವ ಚಿನ್ನದ ಆಭರಣಗಳು ಕಳಪೆಯಾಗಿವೆ ಮತ್ತು ತಾಮ್ರದ ಲೇಪನವಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಅವರನ್ನು ಕಿಷ್ಕಿಂಧವಾಣಿ ಪತ್ರಿಕೆ ಸಂಪರ್ಕಿದಾಗ ಮಾಹಿತಿ ನೀಡಿದ್ದಾರೆ.
ಕಾಣಿಕೆ ಅಥವಾ ದೇಣಿಗೆ ನೀಡಿದ ಭಕ್ತರು ರಸೀದಿ ದಾಖಲೆ ಸಲ್ಲಿಸುವ ತನಕ ಕಾಯದೇ ಎಸಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಅವಸರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ತಾಮ್ರದ ಸಾಮಾನುಗಳಿಗೆ ಚಿನ್ನಲೇಪನ ಮಾಡಲಾಗಿದೆ ಎಂದಿರುವುದು ಸರಿಯಲ್ಲ, ಯಾವುದೇ ದೇವಸ್ಥಾನ ಮತ್ತು ಗುಡಿ ಗುಂಡಾರಗಳಿಗೆ ನೀಡುವ ಚಿನ್ನದ ಕಾಣಿಕೆಗಳು ಬರೀ ಚಿನ್ನದಿಂದ ಕೂಡಿರುವುದಿಲ್ಲ ಇತರ ಲೋಹವನ್ನು ಸಹ ಬಳಕೆ ಮಾಡಿ ಸಾಮಾನುಗಳನ್ನು ತಯಾರು ಮಾಡಿರುತ್ತಾರೆ. ಜನರನ್ನು ದಾರಿ ತಪ್ಪಿಸಲು ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲು ಕೆಲವರು ಷಡ್ಯಂತ್ರ ಮಾಡಿದ್ದು ಶೀಘ್ರದಲ್ಲೇ ಮತ್ತೊಮ್ಮೆ ನಾನು ಸಹ ದಾಖಲೆಗಳನ್ನು ತಂದು ಬಹಿರಂಗಪಡಿಸುತ್ತೇನೆ.
ಈಗಾಗಲೇ ಡಾಕ್ಟರ್ ಮಹೇಶ್ ರೆಡ್ಡಿ ಅವರು ತಹಸಿಲ್ದಾರ್ ಯು.ವಸಂತಕುಮಾರಿ ಅವರನ್ನು ಭೇಟಿಯಾಗಿ ಶ್ರೀ ಅಂಜನಾದ್ರಿ ಕ್ಷೇತ್ರಕ್ಕೆ ನೀಡಿದ ಕಾಣಿಕೆಯ ರಸೀದಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದಾರೆ.
ಶ್ರೀ ಆಂಜನೇಯನ ಭಕ್ತರು ಈ ಷಡ್ಯಂತ್ರ ಮತ್ತು ಅಪಪ್ರಚಾರವನ್ನು ನಂಬಬಾರದು, ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಯಾಗುತ್ತಿದ್ದು ನಿತ್ಯವೂ ಸಾವಿರಾರು ಜನರು ಬರುತ್ತಾರೆ.ಡಾ. ಮಹೇಶ್ ರೆಡ್ಡಿ ಅವರು ಅತ್ಯಮೂಲ್ಯವಾದ ಕಾಣಿಕೆಯನ್ನು ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ದೇಣಿಗೆ ನೀಡುವವರಿಗೆ ಮಾದರಿಯಾಗಿದೆ. ಅಪಪ್ರಚಾರ ನಡೆಸುವ ಮೂಲಕ ದಾನಿಗಳು ಬರದಂತ ತಡೆಯುವ ಉದ್ದೇಶ ಕೆಲವರಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿಷ್ಕಿಂಧಾ ಅಂಜನಾದ್ರಿಗೆ ಸಮರ್ಪಣೆಯಾಗಿರುವ ಪ್ರಭಾವಳಿ,ಗಧೆ‌ ಸೇರಿ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿವೆ:ಎಸಿ ಮಾಲಗಿತ್ತಿ

*ಲೋಹ ಪರಿಶೋಧಕ,ಮೌಲ್ಯಮೌಲ್ಯಮಾಪನವನ್ನು
ತಪಾಸಣೆ
*ದೇವಸ್ಥಾನಕ್ಕೆ
ಶೀಘ್ರದಲ್ಲೇ ದಾನಿಗಳಿಂದ ಬಿಲ್ ಹಾಗೂ ಇತರೆ ಮಾಹಿತಿ ನೀಡುವಂತೆ ಮನವಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿ ಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹೇಳಿರುವಂತೆ ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.
ಅವರು ಭಾನುವಾರ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಇತ್ತೀಚಿನ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೈದ್ರಾಬಾದ್ ಮೂಲಕ ಎಎಂಆರ್ ಕಂಷ್ಟ್ರಕ್ಷನ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬದವರು
ಮೇ.08 ರಂದು ಸಮರ್ಪಣೆ ಮಾಡಿದ ಪ್ರಭಾವಳಿ ಗದೆ, ಕಿರೀಟ ಇತರೆ ಪೂಜಾ ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡಯವಾಗ ಬಂಗಾರದ ಮೌಲ್ಯ ಮಾಪನ ಮಾಡುವ ಗುಂಡಾಚಾರ್ ಮತ್ತು ಪರಶುರಾಮ ವಿಶ್ವಕರ್ಮ ಇವರು ದೃಢಪಡಿಸಿದ್ದು ತಾಮ್ರದ ಸಾಮಾನುಗಳಿಗೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಆದ್ದರಿಂದ ಕೆಲವರು
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋದಲ್ಲಿ ಹೇಳಿರುವಂತೆ ಎಲ್ಲವೂ ಚಿನ್ನದ ಸಾಮಾನುಗಳು ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕ ಮಾಡಿ ಶ್ರೀಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಾನುಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯ ಕಮೀಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ದೇವಾಲಯಗಳಿಗೆ ನೀಡಿದ ಚಿನ್ನಾಭರಣೆ,ಬೆಳ್ಳಿ,ವಜ್ರಾ,ವೈಡೂರ್ಯ ಇತರೆ ಅಮೂಲ್ಯ ವಸ್ತುಗಳ ಮೌಲ್ಯ ಮಾಪನ ಮಾಡಿ ರಸೀದಿ ಸಮೇತ ದಾಖಲೆಗಳನ್ನು ಇಡಬೇಕಾಗುತ್ತದೆ.ಆದ್ದರಿಂದ ಲೋಹ ಶೋಧಕರು ಮತ್ತು ಮೌಲ್ಯಮಾಪನ ಮಾಡುವವರಿಂದ ಮೌಲ್ಯ ಮಾಡಿಸಿ ದಾಖಲೆ ಇರಿಸಲಾಗುತ್ತದೆ ಎಂದು ಮಾಲಗಿತ್ತಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿ,ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿದ್ದರು.

ಕಿಷ್ಕಿಂಧಾಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಎ.ಎಂ.ಆರ್ ಸಂಸ್ಥೆಯಿಂದ ₹2.5 ಕೋಟಿ ಮೌಲ್ಯದ ಚಿನ್ನದ ಆಭರಣ ಸಮರ್ಪಣೆ.

 

ಶೀಘ್ರದಲ್ಲೇ 240 ಕೋಟಿ ರೂ.ವೆಚ್ಚದಲ್ಲಿ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾರ್ಯ ಆರಂಭ.

*ಕಿಷ್ಕಿಂಧವಾಣಿ ಸುದ್ದಿ

ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ ಶುಕ್ರವಾರ ಮುಂಜಾನೆ ಶುಭ ಮುಹೂರ್ತದಲ್ಲಿ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಎ.ಎಂ.ಆರ್ ಗ್ರೂಪ್‌ನ ಅಧ್ಯಕ್ಷ ಡಾ. ಎ. ಮಹೇಶ್ ರೆಡ್ಡಿ ಅವರ ಕುಟುಂಬದವರು ಭಕ್ತಿಭಾವದಿಂದ ವಿಶೇಷ ಸೇವೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸುಮಾರು ₹2.5 ಕೋಟಿ ಮೌಲ್ಯದ ಭವ್ಯ ಬಂಗಾರದ ಆಭರಣಗಳನ್ನು ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ಅರುಣಾ ಅವರ ಉಪಸ್ಥಿತಿಯಲ್ಲಿ ದೇವಸ್ಥಾನಕ್ಕೆ ಸಮರ್ಪಿಸಿದರು.

ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಛತ್ರಿ, ಕಿರೀಟ ಹಾಗೂ ಗಧೆಯನ್ನು ಶ್ರೀ ಆಂಜನೇಯ ಸ್ವಾಮಿಗೆ ಅರ್ಪಿಸುವ ಮೂಲಕ ತಮ್ಮ ಅಪಾರ ಭಕ್ತಿ ಮತ್ತು ಶ್ರದ್ಧೆಯನ್ನು ವ್ಯಕ್ತಪಡಿಸಿದರು. ಈ ವೇಳೆ ದೇವಾಲಯದ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಮರ್ಪಿತ ಆಭರಣಗಳಿಗೆ ಪೂಜೆ ಸಲ್ಲಿಸಿದರು.

240 ಕೋಟಿ ರೂ ವೆಚ್ಚದಲ್ಲಿ ಶೀಘ್ರ ಅಭಿವೃದ್ಧಿ ಕಾರ್ಯ ಆರಂಭ: ರಾಜ್ಯ ಮತ್ತು ಕೇಂದ್ರ ಸರ್ಕಾರದ 240 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಈಗಾಗಲೇ ಕೊಪ್ಪಳ ಜಿಲ್ಲಾಧಿಕಾರಿಗಳು ಅಂಜನಾದ್ರಿ ಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ದಾಖಲೆ ಸಮೇತ ಅರಣ್ಯ ಇಲಾಖೆಗೆ ವರದಿ ನೀಡಿದ್ದು ಅಧಿಕೃತವಾಗಿ ಅರಣ್ಯ ಇಲಾಖೆ ಘೋಷಣೆ ಮಾಡಬೇಕಿದೆ ನಂತರ ದೇವಸ್ಥಾನ ಹೊಸ ವಿನ್ಯಾಸದಲ್ಲಿ ನಿರ್ಮಾಣವಾಗಲಿದೆ. ಮೂಲಭೂತ ಸೌಕರ್ಯ ಮಾಡಲು ರಾಜ್ಯ ಸರ್ಕಾರ ವನ್ನು ಮಂಜೂರು ಮಾಡಿದ್ದು ಈ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದು, ಅಭಿವೃದ್ಧಿ ಕಾರ್ಯ ಕುರಿತಂತೆ ನೀಲನಕ್ಷೆ ರೆಡಿಯಾಗಿದ್ದು ಅಭಿವೃದ್ಧಿ ಕಾರ್ಯಗಳು ಜರುಗಲಿವೆ ವಿಶ್ವವೇ ನೋಡುವಂತೆ ಕಿಷ್ಕಿಂಧಾ ಅಂಜನಾದ್ರಿಯನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರ ಯು. ವಸಂತ ಕುಮಾರಿ, ಕನಕಗಿರಿ ತಹಸಿಲ್ದಾರ ವಿಶ್ವನಾಥ ಮುರಡಿ, ಗ್ರೇಡ್ 2 ತಹಶೀಲ್ದಾರ ಮಹಾಂತಗೌಡ ಪಾಟೀಲ್, ಮಾಜಿ ಸಂಸದರಾದ ಶಿವರಾಮೇಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹಿರೂರು,ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ಸಿಂಗನಾಳ ವಿರೂಪಾಕ್ಷಪ್ಪ, ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲ್ಕುಂದಿ, ಮಲ್ಲಿಕಾರ್ಜುನ ಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ ಬಾದವಾಡಿಗಿ, ವೆಂಕಟೇಶ ಜಬ್ಬಲಗುಡ್ಡ, ರಮೇಶ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ ಹನುಮನಹಳ್ಳಿ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೆಂಕಟಗಿರಿ ಕೆಪಿಎಸ್ ಆದರ್ಶ ಶಾಲೆ ನಿರ್ಮಾಣಕ್ಕೆ ಗಂಜಿ ದಂಪತಿಗಳಿಂದ ಭೂಮಿದಾನ!

 

*ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಸೇವೆ ದೊರಕಲು ದಂಪತಿಗಳ ದಾನ ಸಾರ್ಥಕ.

*1.13 ಎಕರೆ ಭೂಮಿ ದಾನ,ರಾಜ್ಯಪಾಲ ಹೆಸರಿನಲ್ಲಿ ನೋಂದಾವಣೆ.

*ತಾಲೂಕು ಆಡಳಿತದಿಂದ ಗಂಜಿ ದಂಪತಿಗಳಿಗೆ ಸನ್ಮಾನ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮಕ್ಕೆ ನೂತನವಾಗಿ ಮಂಜೂರಾಗಿರುವ ಕೆಪಿಎಸ್ ಆದರ್ಶ ಸರ್ಕಾರಿ ಶಾಲೆಗೆ ವೆಂಕಟಗಿರಿ ಗ್ರಾಮದ ಗಂಜಿ ಮನೆತನದ ದಂಪತಿಗಳಾದ ಈರಮ್ಮ ಹಾಗೂ ಹನುಮಂತಪ್ಪ ಗಂಜಿ ಇವರು ತಮ್ಮ ಸ್ವಂತ ಮಾಲೀಕತ್ವದ 1.13 ಎಕರೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಶಾಲೆಯ ನಿರ್ಮಾಣಕ್ಕೆ ಧಾನವಾಗಿ ನೀಡಿದ್ದಾರೆ ಗುರುವಾರ ತಹಸೀಲ್ ಕಚೇರಿಯಲ್ಲಿ ರಾಜ್ಯಪಾಲರ ಹೆಸರಿಗೆ ಭೂಮಿಯನ್ನು ದಂಪತಿಗಳು ಆಗಮಿಸಿ, ನೋಂದಾವಣೆ ಮಾಡಿಸಿದರು. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಭೂಮಿಯನ್ನು ದಾನ ನೀಡಿದ ಗಂಜಿ ದಂಪತಿಗಳಿಗೆ ತಾಲೂಕು ಆಡಳಿತದ ವತಿಯಿಂದ ಹಾಗೂ ವೆಂಕಟಗಿರಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೆಂಕಟಗಿರಿ ಗ್ರಾಮದ ಹಿರಿಯರು ಹಾಗೂ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಅಮರೇಗೌಡ ಅವರು ಮಾತನಾಡಿ ಸರ್ಕಾರ ವೆಂಕಟಗಿರಿ ಗ್ರಾಮಕ್ಕೆ ಕೆಪಿಎಸ್ ಆದರ್ಶ ಶಾಲೆಯನ್ನು ಮಂಜೂರಿ ಮಾಡಿದ್ದು ಜಾಗದ ಕೊರತೆಯಿಂದ ದಾನಿಗಳಾದ ಗಂಜಿ ಹನುಮಂತಪ್ಪ ಹಾಗೂ ಈರಮ್ಮ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 1. 13 ಎಕರೆ ಭೂಮಿಯನ್ನು ಶಾಲೆ ನಿರ್ಮಾಣ ಮಾಡಲು ದಾನವಾಗಿ ನೀಡುವುದಾಗಿ ತಿಳಿಸಿ ಮಹಾನ್ ಕಾರ್ಯ ಮಾಡಿದ್ದಾರೆ. ಅವರ ಕುಟುಂಬ ಶಾಶ್ವತವಾಗಿ ಶೈಕ್ಷಣಿಕ ಸೇವೆ ನೀಡುವ ಕುಟುಂಬವಾಗಿ ಗ್ರಾಮದಲ್ಲಿ ಮಾದರಿಯಾಗಲಿದೆ. ಇಂತಹ ಮಾದರಿಯ ದಾನಿಗಳು ಪ್ರತಿ ಗ್ರಾಮದಲ್ಲಿ ಇದ್ದರೆ ಶೈಕ್ಷಣಿಕವಾಗಿ ಬಡ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳು ಮುಂದುವರೆಯಲು ಸಾಧ್ಯವಾಗುತ್ತದೆ. ಹನುಮಂತಪ್ಪ ಹಾಗೂ ಈರಮ್ಮನವರ ದಾನ ಶ್ರೇಷ್ಠವಾದ ದಾನವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಯು ವಸಂತಕುಮಾರಿ, ಬಿ ಇ ಓ ನಟೇಶ್,ದೈಹಿಕ ನಿರ್ದೇಶಕಿ ಸರಸ್ವತಿ ಜೂಡಿ, ಮುಖ್ಯ ಶಿಕ್ಷಕ ಲಕ್ಷ್ಮಣ ರಾಠೋಡ್ ಶಿಕ್ಷಕರಾದ ಬಸವರಾಜ್ ಬಿರಾದಾರ್,ಕಂದಾಯ ನಿರೀಕ್ಷಕ ಮಹೇಶ ದಲಾಲ್,

 

ಬಿಆರ್ ಸಿ ಮಂಜುನಾಥ ವಸ್ತ್ರದ್, ಹನುಮಂತಪ್ಪ ಗಂಜಿ,ಈರಮ್ಮ ಗಂಜಿ, ಮದ್ದಾನೆಪ್ಪ ಗಂಜಿ, ದಾನಿಗಳ ಸುಪುತ್ರರಾದ ಪಂಪಾಪತಿ, ನಿಂಗಪ್ಪ ,ರಾಘವೇಂದ್ರ ಭೋವಿ ಶಿಕ್ಷಣ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಬೆನ್ನಲ್ಲೇ ಬುಗಿಲೆದ್ದ ಭಿನ್ನಮತ!!

 

*ನಾಗರಾಜ ನಂದಾಪೂರಗೆ ಅನ್ಸಾರಿ ಸಾಹೇಬರು ಶಿಫಾರಸ್ಸು ಮಾಡಿಲ್ಲ.

*ಗಂಗಾವತಿಯಲ್ಲಿ ಪಕ್ಷ ದ್ರೋಹಿಗಳಿಗೆ ಆದ್ಯತೆ: ಆರೋಪ

*ಪಕ್ಷದ ಸಂಘಟನೆ, ಸದಸ್ಯತ್ವ ಇತರೆ ಕಾರ್ಯಗಳನ್ನು ಅನ್ಸಾರಿ ಸಾಹೇಬರ ಅನುಮತಿ ಕಡ್ಡಾಯ!

*ಪುನೀತ್ ಎನ್ನುವ ವ್ಯಕ್ತಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಬಗ್ಗೆ ಆಕ್ಷೇಪ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನಾಗರಾಜ್ ನಂದಾಪುರ ಅವರನ್ನು ನೇಮಕ ಮಾಡಲಾಗಿದ್ದು ಇವರ ನೇಮಕವನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಾಹೇಬರು ಶಿಫಾರಸು ಮಾಡಿಲ್ಲ ಆದ್ದರಿಂದ ನಾಗರಾಜ ನಂದಾಪುರ ಅವರು ಅನ್ಸಾರಿ ಸಾಹೇಬರ ಬಣ ಅಲ್ಲ ಎಂದು ಅನ್ಸಾರಿ ಬಣದ ಕಾರ್ಯಕರ್ತ ಪುನೀತ್ ಎನ್ನುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅನ್ಸಾರಿ ಬಣದ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ನಾಗರಾಜ್ ನಂದಾಪುರವರು 2018ರಲ್ಲಿ ಅನುಸರಿ ಸಾಹೇಬರ ಬಣದಲ್ಲಿ ಗುರುತಿಸಿಕೊಂಡು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಅನುಭವಿಸಿ ನಂತರ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ ಇವರಂತೆ ಕೊಪ್ಪಳ ಜಿಲ್ಲೆಯಲ್ಲಿ ಅನೇಕರು ಬಿಜೆಪಿ ಆರೆಸ್ಸೆಸ್ ಬೆಂಬಲಿಸುವವರಿದ್ದು ಗಂಗಾವತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಇವರನ್ನು ಬೆಂಬಲಿಸುವ ಮೂಲಕ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಸಾಕ್ಷಿ ಸಮೇತ ದೂರು ನೀಡಿದರೂ ಇದುವರೆಗೂ ಶಿಸ್ತು ಕ್ರಮ ಜರುಗಿಲ್ಲ, ಆದರೆ ದಾವಣಗೆರೆಯ ಉಪಚುನಾವಣೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂದು ಕೆಲವರನ್ನು ಪಕ್ಷದಿಂದ ಹೊರಹಾಕಲಾಗಿದೆ. ದಾವಣಗೆರೆಯಲ್ಲಿ ಒಂದು ನ್ಯಾಯ ಗಂಗಾವತಿಯಲ್ಲಿ ಮತ್ತೊಂದು ನ್ಯಾಯವಾಗಿದೆ.

ಆದ್ದರಿಂದ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಸಂಘಟನೆ ಪಕ್ಷದ ಸದಸ್ಯತ್ವ ಅಭಿಯಾನ ಪಕ್ಷದ ಸಭೆ ಸಮಾರಂಭಕ್ಕೆ ಅನ್ಸಾರಿ ಬಣದ ಕಾಂಗ್ರೆಸ್ ಕಾರ್ಯಕರ್ತರು ತೆರಳಬೇಕಾದರೆ ಅನ್ಸಾರಿ ಸಾಹೇಬರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಪುನೀತ್ ಸೂಚನೆ ನೀಡಿದ್ದು ಈ ಸಂದೇಶವನ್ನು ಕಾಂಗ್ರೆಸ್ ವಾಟ್ಸಪ್ ಗ್ರೂಪ್ ಸೇರಿದಂತೆ ಗಂಗಾವತಿಯ ಮತ್ತು ಕೊಪ್ಪಳದ ಪ್ರಮುಖ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಲಾಗಿದೆ.

 

ಹೊಲದ ಹದ್ದುಬಸ್ತು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಗರಿಬೊಮ್ಮನಹಳ್ಳಿ ಸರ್ವೇಯರ್ ಲೋಕಾಯುಕ್ತರ ಬಲೆಗೆ!.

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಹೊಲದ ಹದ್ದುಬಸ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಭೂಮಾಪನಾ ಇಲಾಖೆಯ ಸರ್ವೇಯರ್ ಲಂಚದ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಕರಣ ಗುರುವಾರ ಪಟ್ಟಣದ ಭೂಮಾಪನಾ ಇಲಾಖೆಯ ಕಚೇರಿಯಲ್ಲಿಜರುಗಿದೆ.

ತಾಲೂಕಿನ ವರದಾಪುರ ಗ್ರಾಮದ ದೇವೇಂದ್ರಪ್ಪ ಎನ್ನುವವರು ತಮ್ಮ ಹೊಲದ ಹದ್ದುಬಸ್ತಿಗಾಗಿ

2024 ರಲ್ಲಿಯೇ ಸರ್ವೆಯರ್ ಕೊಟ್ರೇಶ್ ನಾಯಕ್ ಅವರಿಗೆ ದೇವೇಂದ್ರಪ್ಪ ಅವರ ಕಡತ ಬಂದಿತ್ತು. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಕೊಟ್ರೇಶ್ ಅವರು ಹದ್ದುಬಸ್ತು ಮಾಡಿಕೊಡದೆ ವಿಳಂಬ ಮಾಡುತ್ತಿದ್ದರು. ಈಗಾಗಲೇ ಹತ್ತು ಸಾವಿರ ರೂ. ಲಂಚ ಹಣ ಪಡೆದಿದ್ದು, ಪುನ ಮೂವತ್ತು ಸಾವಿರ ರೂ. ಲಂಚದ ಹಣವನ್ನು ಬೇಡಿಕೆ ಇಟ್ಟಿದ್ದರು.ಈ ಕುರಿತು ದೇವೇಂದ್ರಪ್ಪ ವಿಜಯನಗರ ಜಿಲ್ಲಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣದ ಸಮೇತ ಕೊಟ್ರೇಶ ಅವರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ ಪಿ ಸಚಿನ್ ಎಸ್ ಛಲವಾದಿ, ಪೊಲೀಸ್ ನಿರೀಕ್ಷಕ ರಾಜೇಶ ಎಸ್. ಲಮಾಣಿ, ಇನ್ಸ್ಪೆಕ್ಟರ ಅಮರೇಶ್ ಹುಬ್ಳಿ, ಸಿಬ್ಬಂದಿಯವರಾದ . ಸುರೇಶ, ಶ್ರೀನಿವಾಸ, ರೇಣುಕಪ್ಪ. ಕುಮಾರ ನಾಯ್ಕ್ ಚನ್ನಬಸಪ್ಪ ಮತ್ತು ಕೃಷ್ಣ ಇದ್ದರು.

ಕುವೆಂಪು ವಿಶ್ವವಿದ್ಯಾಲಯದಿಂದ  ಕೃಷ್ಣಕುಮಾರ್ ಮೈಲಾ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

 

 

ಕಿಷ್ಕಿಂಧವಾಣಿ ಸುದ್ದಿ

​ಗಂಗಾವತಿ:ನಗರದ ಕಲ್ಮಠ ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಕುಮಾರ್ ಮೈಲಾ ಅವರು ತಮ್ಮ  ಸಂಶೋಧನೆಗಾಗಿ ಕುುವೆಂಪು ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದುಕೊಂಡಿದ್ದಾರೆ. ​ ಕೃಷ್ಣಕುಮಾರ್ ಅವರು ಮಾರ್ಗದರ್ಶಕ ಡಾ. ಶ್ವೇತಾ ಅಳವಂಡಿ ಅವರ ಮಾರ್ಗದರ್ಶನದಲ್ಲಿ ​”ಕರ್ನಾಟಕದ ಗಂಗಾವತಿ ತಾಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿ ಅವಿಫೌನಾಗಳ (Avifauna) ವೈವಿಧ್ಯತೆ ಮತ್ತು ವಿತರಣೆಯ ಕುರಿತು ಅಧ್ಯಯನಗಳು – ಜೇನುನೊಣ ತಿನ್ನುವವರಿಗೆ ವಿಶೇಷ ಉಲ್ಲೇಖದೊಂದಿಗೆ (ಮೆರಾಪ್ಸ್ ಫಿಲಿಪಿನಸ್ ಮತ್ತು ಮೆರಾಪ್ಸ್ ಓರಿಯಂಟಲಿಸ್)”  ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದಕ್ಕೆ ಡಾಕ್ಟರೇಟ್ ಪದವಿ ದೊರಕಿದೆ. ​ ಏಪ್ರಿಲ್ 6, 2026 ರಂದು ನಡೆದ ಕುುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಕೃಷ್ಣಕುಮಾರ್ ಮೈಲಾ ಅವರಿಗೆ  ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಾಗರಾಜ ನಂದಾಪುರ ನೇಮಕ

*ಶಾಮೀದ್ ಮನಿಯಾರ್ ಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಸ್ಥಾನದ ಭರವಸೆ
*ತೀವ್ರ ಯತ್ನದ ಮಧ್ಯೆ
ಅನ್ಸಾರಿ ಬಣದ ಹುಸೇನಪ್ಪ ಹಂಚಿನಾಳ ಗೆ ತಪ್ಪಿದ ಅಧ್ಯಕ್ಷ ಸ್ಥಾನ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೊನೆಗೂ ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಾಗರಾಜ ನಂದಾಪೂರ ಅವರಿಗೆ ಲಭಿಸಿದ್ದು, ಕಳೆದ 8 ವರ್ಷ 3 ತಿಂಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಅವರಿಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸುವ ಭರವಸೆಯೊಂದಿಗೆ ನಾಗರಾಜ ನಂದಾಪೂರ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಮೇ,05 ರಂದು ನೇಮಕ ಮಾಡಿ ಆದೇಶ ಹೊರಡಿಸಿ ಪಕ್ಷ ಸಂಘಟನೆಯನ್ನು ಎಲ್ಲರ ಜತೆಗೂಡಿ ಮಾಡುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ.
ಚಲುವಾದಿ ಸಮಾಜದ (ದಲಿತ ಬಲಗೈ) ಸಮುದಾಯದವರಾಗಿರುವ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಾಗರಾಜ ನಂದಾಪುರ ಅವರು ಈ ಹಿಂದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಣದಲ್ಲಿ ಗುರುತಿಸಿಕೊಂಡು ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ನಂತರ ಅನ್ಸಾರಿ ಬಣದಿಂದ ಹೊರ ಬಂದಿದ್ದ ನಂದಾಪುರ ನಾಗರಾಜ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

****
ಕಾಂಗ್ರೆಸ್ ಹೈಕಮಾಂಡ್ ನನಗೆ ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದೆ. ನಾನು ಗಂಗಾವತಿಯಲ್ಲಿ ಯಾವುದೇ ಬಣ ರಾಜಕಾರಣ ಮಾಡಿದವನಲ್ಲ. ಎಲ್ಲಾ ಮುಖಂಡರೊಂದಿಗೆ ಆತ್ಮೀಯದಿಂದ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಹೈಕಮಾಂಡ್ ನನಗೆ ಈ ಜವಬ್ದಾರಿ ನೀಡಿದೆ. ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರ ವಿಶ್ವಾಸದಿಂದ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ. ಬಣ ರಾಜಕಾರಣಕ್ಕೆ ಮುಕ್ತಿ ಹಾಡಿ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಗಟ್ಟಿ ನೆಲೆ ತಂದುಕೊಡುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಬ್ದಾರಿ ನೀಡಿರುವ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೂ, ಕಾರ್ಯಕರ್ತರಿಗೂ ಅಭಿನಂದಿಸುತ್ತೇನೆ. ಪಕ್ಷದ ಸೂಚನೆಯಂತೆ ನಾನು ಕೆಲಸ ಮಾಡುತ್ತೇನೆ.
-ನಾಗರಾಜ ನಂದಾಪೂರ ನಗರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ

***
ಕಾಂಗ್ರೆಸ್ ಪಕ್ಷ ನನಗೆ ಗಂಗಾವತಿ ನಗರ ಬ್ಲಾಕ್ ಅಧ್ಯಕ್ಷನಾಗಿ ಎಂಟು ವರ್ಷಗಳ ಮೂರು ತಿಂಗಳ ಕಾಲ ಕೆಲಸ ಮಾಡುವ ಅವಕಾಶ ನೀಡಿತ್ತು. ಪಕ್ಷದ ಸಿದ್ಧಾಂತದಂತೆ ನಾನು ಇಲ್ಲಿವರೆಗೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ನಾಗರಾಜ ನಂದಾಪುರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ನಾನು ಸ್ವಾಗತಿಸುತ್ತೇನೆ. ಇಷ್ಟು ವರ್ಷ ಸುದೀರ್ಘವಾಗಿ ಪಕ್ಷದ ಸಂಘಟನೆ ಮಾಡಿರುವುದು ಮತ್ತು ಮೂರು ಅವಧಿ ನಗರಸಭೆ ಸದಸ್ಯನಾಗಿ ಅನುಭವ ಹೊಂದಿರುವ ನನಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯಮಟ್ಟದ ನಿಗಮ ಮಂಡಳಿಯ ಹೆಚ್ಚಿನ ಜವಬ್ದಾರಿ ನೀಡುತ್ತದೆ ಎಂಬ ವಿಶ್ವಾಸವಿದೆ. ನೂತನ ಬ್ಲಾಕ್ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ.
-ಶ್ಯಾಮೀದ್ ಮನಿಯಾರ್, ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು.

ಫಿಕ್ಸ್ ಆಯ್ತು ಗೌಳಿಮಹಾದೇವಪ್ಪ ಬೈಪಾಸ್ ರಸ್ತೆಯ ಅಗಲೀಕರಣ!

*ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ನೀಲಕಂಠೇಶ್ವರ ಸರ್ಕಲ್ ವರೆಗಿನ ಕಾಮಗಾರಿಗೆ ಮರು ಜೀವ!
*ರಸ್ತೆ ಅಗಲೀಕರಣ ಮಾಡಲು ನಗರಸಭೆ ಅಧಿಕಾರಿಗಳಿಂದ ಮೂಲ ದಾಖಲಾತಿಯಂತೆ ಅಳತೆ.
*80 ಪೀಟ್ ಅಳತೆಯ ದ್ವಿಮುಖ ರಸ್ತೆ,ಒತ್ತುವರಿ ತೆರವು ಶೀಘ್ರ

ಕಿಷ್ಕಿಂಧವಾಣಿ ಕೊಪ್ಪಳ
ಗಂಗಾವತಿ: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು ಈ ಮಧ್ಯೆ ನಗರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಜುಲೈ ನಗರದಿಂದ ನೀಲಕಂಠೇಶ್ವರ ನಗರದ ಸರ್ಕಲ್ ವರೆಗಿನ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆಯ ಅಗಲೀಕರಣ ನಿಗದಿಯಾಗಿದ್ದು ಶೀಘ್ರದಲ್ಲೇ ಬೈಪಾಸ್ ರಸ್ತೆಯ ಒತ್ತುವರಿ ಕಾಮಗಾರಿ ಕಾರ್ಯಾಚರಣೆ ಜರುಗಲಿದೆ.
ಜುಲೈನಗರದ ಇಂದಿರಾಗಾಂಧಿ ಸರ್ಕಲ್ ನಿಂದ ಕನಕದಾಸ ಸರ್ಕಲ್ ವರೆಗೆ 80 ಪೀಟ್ ರಸ್ತೆ ಇದ್ದು ಇದರಲ್ಲಿ ಎಡ ಬಲ ಎರಡು ಭಾಗದಲ್ಲಿ 5-10 ಪೀಟ್ ರಸ್ತೆಯ ಒತ್ತುವರಿ ಮಾಡಿರುವುದರಿಂದ ಪುಟ್ ಪಾತ್ ಇಲ್ಲವಾಗಿದೆ. ರಸ್ತೆಗೆ ಬೈಕ್ ಸೇರಿ ವಾಹನಗಳು ಹಾಗೂ ಪಾದಚಾರಿಗಳು ನಿಲ್ಲುವುದರಿಂದ ಕೇಂದ್ರ ಬಸ್ ನಿಲ್ದಾಣ ಹಾಗೂ ಹೊಸಪೇಟೆ, ಆನೆಗೊಂದಿ ಮತ್ತು ಹುಲಿಗಿ ಕಡೆ ಹೋಗುವ ಬಸ್,ಲಾರಿ ಇತರೆ ವಾಹನಗಳು ಹೋಗಲು ತೊಂದರೆ ಆಗುತ್ತಿದೆ.ಜತೆಗೆ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿದೆ.‌ಕಳೆದ ಹತ್ತು ವರ್ಷಗಳಿಂದ ಬೈಪಾಸ್ ರಸ್ತೆ ಅಗಲೀಕರಣ ಮಾಡಲು ನಗರಸಭೆಯವರು ಯತ್ನಿಸಿದರೂ ಕೆಲವರು ಕೋರ್ಟ್ ಮೂಲಕ ತಡೆಯಾಜ್ಞೆ ತಂದು ಕಾಮಗಾರಿ‌ ನಡೆಯದಂತೆ ತಡೆಯುತ್ತಿದ್ದಾರೆ. ಪರಣ್ಣ ಮುನವಳ್ಳಿ ಮುನವಳ್ಳಿ ಶಾಸಕರಾಗಿದ್ದ ವೇಳೆ ನಗರೋತ್ಥಾನ ವಿಶೇಷ ಅನುದಾನದಲ್ಲಿ ಅಗಲೀಕರಣ ವಿದ್ಯುತ್ ದೀಪ ಅಳವಡಿಸಲು ಟೆಂಡರ್ ಕರೆದ ಸಂದರ್ಭದಲ್ಲಿ ನ್ಯಾಯಾಲಯದಿಂದ ಕೆಲವರು ತಡೆಯಾಜ್ಞೆ ತಂದಿದ್ದರು.ಇದೀಗ ಕಳೆದ ಮೂರು ವರ್ಷಗಳಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕೋರ್ಟ್ ಗೆ ಹೋಗಿದ್ದವರ ಸ್ಥಳೀಯರು ಹಾಗೂ ಕಾಂಟ್ರಾಕ್ಟರ್ ಅವರೊಂದಿಗೆ ಸಂಧಾನದ ಮಾತುಕತೆ ನಡೆಸಿ ರಸ್ತೆ ಅಗಲೀಕರಣ ಮಾಡಲು ಆರಂಭಿಸಿದ್ದು ಕಳೆದ ಮೂರು ದಿನಗಳಿಂದ ಒತ್ತುವರಿ ಮಾಡಿದ ಮನೆ,ವಾಣಿಜ್ಯ ಸಂಕೀರ್ಣಗಳ ಮಾರ್ಕ್ ಮಾಡುವ ಕಾರ್ಯ ನಡೆದಿದೆ.ನಗರದ ಸೌಂದರ್ಯ ಮತ್ತು ವಿಶಾಲ ರಸ್ತೆಗಳ ಸಲುವಾಗಿ ಬೈಪಾಸ್ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ.ಈಗಾಗಲೇ ನಗರದಲ್ಲಿ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಕುರಿತು ಚರ್ಚೆಗಳು ಆರಂಭವಾಗಿವೆ.

***
ನಗರದ ಸೌಂದರ್ಯದ ದೃಷ್ಟಿಯಿಂದ ಮತ್ತು ನಗರಕ್ಕೆ ದೇಶ ವಿದೇಶದ ಪ್ರವಾಸಿಗರು, ವಾಣಿಜ್ಯೋದ್ಯಮಗಳು ಆಗಮಿಸುವುದರಿಂದ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ತಿರುಮಲಾಪುರದ ವರೆಗೆ ರಸ್ತೆಯನ್ನು ಅಗಲೀಕರಣ ಮಾಡಿ ದ್ವಿಮುಖ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಗಂಗಾವತಿ ನಗರ ಹಾಗೂ ಗ್ರಾಮೀಣ ಭಾಗಕ್ಕೆ ಬಹಳ ಅನುಕೂಲವಾಗಲಿದೆ. ಪ್ರವಾಸೋದ್ಯಮ ಬೆಳೆದು ನೇರ ಪರೋಕ್ಷ ಉದ್ಯೋಗ ದೊರಕಲಿವೆ. ಆದ್ದರಿಂದ ಗಂಗಾವತಿಯ ಜನರು ಮತ್ತು ಗ್ರಾಮೀಣ ಭಾಗದ ಜನರು ರಸ್ತೆಯ ಅಗಲೀಕರಣಕ್ಕೆ ಸಹಕರಿಸಬೇಕು. ಈಗಾಗಲೇ ನಗರಸಭೆ ಅಧಿಕಾರಿಗಳು ಬೈಪಾಸ್ ರಸ್ತೆಯ ಸರ್ವೆ ಮಾಡಿ ಒತ್ತುವರಿ ಮಾರ್ಕಿಂಗ್ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಬೈಪಾಸ್ ರಸ್ತೆಯಲ್ಲಿ ಒತ್ತುವರಿ ಮಾಡಿದ ರಸ್ತೆಯನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಒತ್ತುವರಿ ಮಾಡಿದವರು ಸ್ವಯಂ ಪ್ರೇರಣೆಯಿಂದ ಸರ್ಕಾರಿ ಜಾಗವನ್ನು ಬಿಟ್ಟು ಕೊಡಬೇಕು, ಇಲ್ಲದಿದ್ದರೆ ನಗರಸಭೆಯ ಜೆಸಿಬಿ ಗಳಿಂದ ತೆರವು ಮಾಡಿಸಲಾಗುತ್ತದೆ.
-ಗಾಲಿ ಜನಾರ್ದನ ರೆಡ್ಡಿ ಶಾಸಕರು.

***
ನಗರದಲ್ಲಿರುವ ಫುಟ್ಪಾತ್ಗಳ ಒತ್ತುವರಿ ಮತ್ತು ರಸ್ತೆಯ ಒತ್ತುವರಿಯನ್ನು ತೆರವು ಕಾರ್ಯಾಚರಣೆ ಮೂಲಕ ಬಿಡಿಸಿಕೊಳ್ಳಲಾಗುತ್ತದೆ. ಅದರಂತೆ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆಯು ಸಹ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಈಗಾಗಲೇ ಸರ್ವೇ ಮಾಡಿ ಮಾರ್ಕಿಂಗ್ ಮಾಡಿದ ಜಾಗದಲ್ಲಿ ಶೀಘ್ರದಲ್ಲೇ ಅಗಲೀಕರಣ ಮಾಡಲಾಗುತ್ತದೆ. ಒತ್ತುವರಿ ಮಾಡಿದವರು ಸ್ವಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ತೆರವು ಮಾಡಲಾಗುತ್ತದೆ.
-ಆರ್.ವಿರೂಪಾಕ್ಷ ಮೂರ್ತಿ ಪೌರಾಯುಕ್ತರು.ನಗರಸಭೆ

95 ಗಂಟೆಗಳಲ್ಲಿ 4750 ಕಿ.ಮೀ. ಪ್ರಯಾಣಿಸಿ ಸೋಮಾಲಿಯಾದಿಂದ ಬಿಹಾರಕ್ಕೆ ಆಗಮಿಸಿದ ಗಿಡುಗ ಪಕ್ಷಿ!

 

ಕಿಷ್ಕಿಂಧವಾಣಿ ಸುದ್ದಿ(ಆನ್ ಲೈನ್ ಕೃಪೆ)

ಗಯಾ(ಬಿಹಾರ): ಗಿಡುಗ ಒಂದು 98 95 ಗಂಟೆಗಳಲ್ಲಿ 4750 ಕಿ.ಮೀ ಕ್ರಮಿಸಿ ಬಿಹಾರ್ ರಾಜ್ಯದ ಗಯಾ ಪ್ರದೇಶಕ್ಕೆ ಆಗಮಿಸಿದ ಅಪರೂಪದ ಘಟನೆ ಜರುಗಿದೆ. ‘ಅಪಾಪಂಗ್’ ಎಂದು ಹೆಸರಿಡಲಾದ ಅಮುರ್ ಫಾಲ್ಕನ್(ಗಿಡುಗ) ಹಕ್ಕಿಯೊಂದು, ಸೋಮಾಲಿಯಾದಿಂದ ಭಾರತಕ್ಕೆ ಸುಮಾರು 4,750 ಕಿ.ಮೀ. ದೂರವನ್ನು ಕೇವಲ 95 ಗಂಟೆಗಳಲ್ಲಿ ನಿರಂತರ ಹಾರಾಟದ ಮೂಲಕ ಪೂರೈಸಿದೆ. ಈ ಬಗ್ಗೆ ಈ ಹಕ್ಕಿಯ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬೀರಿಯಾ ಮತ್ತು ಚೀನಾದಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗುವಾಗ ಭಾರತದ ಮೂಲಕ ಹಾದುಹೋಗುವ ಸಣ್ಣ ವಲಸೆ ಹಕ್ಕಿ ಇದಾಗಿದೆ. ಇಷ್ಟು . ಸುದೀರ್ಘ ಹಾರಾಟ ನಡೆಸುವುದಕ್ಕಾಗಿ ಗಾಳಿಯ ಅನುಕೂಲತೆ ಮತ್ತು ಬದುಕುಳಿಯಲು ತಮ್ಮ ದೇಹದ ಕೊಬ್ಬಿನ ಸಂಗ್ರಹವನ್ನೇ ಈ ಹಕ್ಕಿಗಳು ಅವಲಂಬಿಸಿರುತ್ತವೆ. ಉಪಗ್ರಹದ ಮೂಲಕ ಈ ಹಕ್ಕಿಯ ವಲಸೆ ಮಾರ್ಗದ ಕಣ್ಣಾವಲು ನಡೆಸಲಾಗುತ್ತಿದೆ. ಆಫ್ರಿಕಾ ಖಂಡದ ಹೊರಟು ಸೋಮಾಲಿಯಾದಿಂದ ವಿಶಾಲ ಅರಬ್ಬಿ ಸಮುದ್ರದುದ್ದಕ್ಕೂ ರೆಕ್ಕೆ ಬಡಿಯುತ್ತಾ ನಿರಂತರವಾಗಿ ಸಾಗಿ, ವಾರಾಣಸಿ ಬಳಿ ವಿಶ್ರಾಂತಿಗಾಗಿ ಇಳಿದಿದೆ. ಇಲ್ಲಿ ಕೆಲ ಗಂಟೆಗಳ ವಿಶ್ರಾಂತಿ ಪಡೆದು, ಮತ್ತೆ 200 ಕಿ.ಮೀ. ಹಾರಾಟ ನಡೆಸಿ ಬಿಹಾರದ ಗಯಾದಲ್ಲಿ ತಂಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.