Breaking News
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುರುಬರ ವೆಂಕಟೇಶ ಕೊಲೆ ಪ್ರಕರಣ ನ್ಯಾಯಾಲಯದಿಂದ ತೀರ್ಪು ಪ್ರಕಟ.

 

* ಪ್ರಕರಣದಲ್ಲಿ ಭಾಗಿಯಾಗಿದ್ದ 12 ಜನರ ಪೈಕಿ ಆರು ಜನರಿಗೆ ಶಿಕ್ಷೆ ಉಳಿದವರು ದೋಷ ಮುಕ್ತ.

* ಏಪ್ರಿಲ್ 27ರಂದು ಶಿಕ್ಷೆಯ ಪ್ರಮಾಣ ಪ್ರಕಟ.

* ಆರೋಪಿಗಳು ನ್ಯಾಯಾಲಯಕ್ಕೆ ಬಿಗಿ

ಪೊಲೀಸ್ ಬಂದೋಬಸ್ತ್ ವ್ಯವಸ್ಥೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬಿಜೆಪಿ ಯುವ ಮೋರ್ಚಾದ ನಗರ ಅಧ್ಯಕ್ಷ ಕುರುಬರ ವೆಂಕಟೇಶ ಕೊಲೆ ಪ್ರಕರಣದ ತೀರ್ಪು ಗುರುವಾರ ನಗರದ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕಟಿಸಿದ್ದು ಪ್ರಕರಣದ 12 ಆರೋಪಿಗಳ ಪೈಕಿ ಆರು ಜನರಿಗೆ ಶಿಕ್ಷೆ ಪ್ರಕಟವಾಗಿದ್ದು ಉಳಿದವರು ದೋಷ ಮುಕ್ತರಾಗಿದ್ದಾರೆಂದು ಸರಕಾರಿ ಅಭಿಯೋಜಕಿ ಎನ್.ನಾಗಲಕ್ಷ್ಮಿ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 08 ರಂದು ಬೆಳಗಿನ ಜಾವ 2.30 ಕ್ಕೆ ಗಂಗಾವತಿಯ ಲೀಲಾವತಿ ಆಸ್ಪತ್ರೆಯ ಬಳಿ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕುರುಬರ ವೆಂಕಟೇಶ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ನಗರ ಠಾಣೆಯ ಪೊಲೀಸರು ಕೊಲೆಗೀಡಾದ ಕುರುಬ ವೆಂಕಟೇಶ ಪಾಲಕರಿಂದ ದೂರು ಪಡೆದು ತೀವ್ರಗತಿಯಲ್ಲಿ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಕುರುಬರ್, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮಾ ಅಲಿಯಾಸ್ ಭರತ್, ಸಲೀಂ ಮೊಹಮ್ಮದ್ ರಫೀಕ್ ಗಂಗಾಧರ ಗೌಳಿ ಅಲಿಯಾಸ್ ಗಂಗ್ಯಾ, ಕಾರ್ತಿಕ್, ದಾದಾಪೀರ್ ಮೊಹಮ್ಮದ್ ಅಲ್ತಾಫ್, ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ, ಶರಣಬಸವ ಅಲಿಯಾಸ್ ಹತ್ತು ರೊಟ್ಟಿ ಹಾಗೂ ಚೈತ್ರ ರವಿ ಕುರುಬರ್ ಈ ಆರೋಪಗಳನ್ನು ಬಂಧಿಸಿದ್ದರು.

ಸ್ಥಳೀಯ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ತೀವ್ರಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಥಮವಾಗಿದೆ.

ನಗರ ಪೊಲೀಸರು 977 ಪುಟದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕುರುಬರ ವೆಂಕಟೇಶ ಕೊಲೆ ಪ್ರಕರಣ ರಾಜ್ಯದ್ಯಂತ ತೀವ್ರ ಸಂಚಲನವನ್ನು ಉಂಟು ಮಾಡಿತ್ತು. ಜೊತೆಗೆ ಬಿಜೆಪಿ ರಾಜ್ಯ ಘಟಕ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಿ ಕೂಡಲೇ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.

ನಗರ ಠಾಣೆಯ ಪೊಲೀಸರು ಪ್ರಕರಣ ನಡೆದು 15 ದಿನ ಒಳಗೆ ಎಲ್ಲಾ 12 ಜನ ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಸಾಕ್ಷಾಧಾರಗಳನ್ನು ಮತ್ತು ದೋಷಾರೋಪನೆಯ ಪಟ್ಟಿಯನ್ನು ಸಲ್ಲಿಸಿ ವಿಚಾರಣೆಗೆ ಸಹಕರಿಸಿದ್ದರು.

ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಪ್ರಕರಣವನ್ನು ತೀವ್ರವಾಗಿ

ಪರಿಗಣಿಸಿ ಪ್ರತಿನಿತ್ಯ ವಿಚಾರಣೆ ನಡೆಸಿ ಸಾಕ್ಷಾಧಾರಗಳಿಂದ ಮಾಹಿತಿ ಪಡೆದು ದಾಖಲಿಸಿಕೊಂಡು ದಾಖಲಿಸಿಕೊಂಡು ತೀರ್ಪು ಪ್ರಕಟಿಸಿದ್ದು ಏ. 27ರಂದು ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಯಲಿದೆ.

ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಘೋಷಣೆ ಯಾಗುವ ನಿಮಿತ್ಯ ಆರೋಪಿತರನ್ನು ಕರೆ ತಂದಾಗ

ಕೋರ್ಟಿನ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರಕರಣ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಗುರುವಾರ ಕೋರ್ಟ್ ಸುತ್ತಲೂ ಸಾರ್ವಜನಿಕರು,ವಕೀಲರು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಈಗಾಗಲೇ ಸಾಣಾಪುರ ಕೆರೆ ಹತ್ತಿರ ವಿದೇಶಿ ಮಹಿಳೆ ಅತ್ಯಾಚಾರ ಮತ್ತು ಓರ್ವನ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ತೀರ್ಪು, ಕಾರಟಗಿಯಲ್ಲಿ ಶಿಕ್ಷಕನಿಂದ ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಚಾರಿತ್ರಿಕ ತೀರ್ಪು,

ಹಾಗೂ ಆನೆಗೊಂದಿ ತಳವಾರಘಟ್ಟ ಸೇತುವೆ ಬಿದ್ದ ಪ್ರಕರಣದಲ್ಲಿ ಆರೋಪಿತನಿಗೆ ಶಿಕ್ಷೆಯ ತೀರ್ಪು

ನೀಡಿದ್ದು ದೇಶದಾದ್ಯಂತ ಗಮನ ಸೆಳೆದಿವೆ.

ಕುರುಬರ ವೆಂಕಟೇಶ ಕೊಲೆ ಪ್ರಕರಣ ಅತ್ಯಂತ ಸೂಕ್ಷ್ಮ ಮತ್ತು ಗಂಭೀರವಾಗಿದ್ದರಿಂದ

ವಿಚಾರಣೆಯ ವೇಳೆ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಾಗಪ್ಪ ನಾಯ್ಕ ಅವರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿತ್ತು.

ಕೊಲೆಗೀಡಾದ ಕುರುಬರ ವೆಂಕಟೇಶ್ ಅವರ ತಾಯಿ ಹಾಗೂ ಇಬ್ಬರು ಸಹೋದರಿಯರು ಕೋರ್ಟ್ ಆವರಣದಲ್ಲಿ ಭಾವುಕರಾಗಿ ನ್ಯಾಯಾಧೀಶರಿಗೆ ಅಭಿನಂದಿಸಿ ನೀವು ನಮ್ಮ ಪಾಲಿನ ದೇವರು ಕೊಲೆ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೈ ಮುಗಿದು ಬೇಡಿಕೊಂಡ‌ ದೃಶ್ಯ ಕಂಡು ಬಂತು.