Breaking News
ಮರಿಯಮ್ಮನಹಳ್ಳಿ ಬಿಎಂಎಂ ಕಾರ್ಖಾನೆ ಬಳಿ ಎನ್. ಎಚ್.ರಸ್ತೆಯಲ್ಲಿ ಸರಣಿ ಅಪಘಾತ.ಐವರ ಸಾವು ಶಂಕೆ.

ಕಿಷ್ಕಿಂಧವಾಣಿ ಸುದ್ದಿ
ಮರಿಯಮ್ಮನಹಳ್ಳಿ(ಹೊಸಪೇಟೆ): ತಾಲೂಕಿನ ಮರಿಯಮ್ಮನಹಳ್ಳಿ ಬಿ ಎಂ ಎಂ ಕಾರ್ಖಾನೆ ಬಳಿ ಎನ್ ಎಚ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸರಣಿ ಅಪಘಾತ ಜರುಗಿ ಐವರು ಮೃತಪಟ್ಟ ಸಂಖ್ಯೆ ಇದ್ದು ಹಲವರಿಗೆ ಗಾಯಗಳಾಗಿವೆ.
ಢಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಹರಿಯಾಣ ನೋಂದಣಿಯ ಲಾರಿಯೊಂದು ಕಾರು, ಸರ್ಕಾರಿ ಬಸ್ ಹಾಗೂ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಬೆಳ್ಳೊಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮೊದಲು ಕಾರಿಗೆ, ಬಳಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಬಸ್ ಹಿಂಭಾಗಕ್ಕೆ ಭೀಕರವಾಗಿ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಸ್ಥಳದಲ್ಲೇ ಭಾರೀ ಅವ್ಯವಸ್ಥೆ ಉಂಟಾಯಿತು.
ಗಾಯಾಳುಗಳ ಸ್ಥಿತಿ : ಬಸ್ ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದು, ಅಪಘಾತದ ವೇಳೆ ಬಸ್‌ನಲ್ಲಿದ್ದ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ಮೂಲಗಳು ತಿಳಿಸಿವೆ.
ಹೆದ್ದಾರಿ ಕಾಮಗಾರಿಯಲ್ಲೇ ಅವಘಡ : ಅಪಘಾತ ಸಂಭವಿಸಿದ ಸ್ಥಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ಕಾರಣದಿಂದಲೇ ವಾಹನಗಳ ಚಾಲಕರು ಗೊಂದಲಕ್ಕೀಡಾಗಿ ಲಾರಿ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಟ್ರಾಫಿಕ್ ಜಾಮ್, ರಕ್ಷಣಾ ಕಾರ್ಯ : ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಉಪನ್ಯಾಸಕ ಕಳಕಪ್ಪ ಕುಂಬಾರ ಅಕಾಲಿಕ ಸಾವು!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಅತಿಥಿ ಉಪನ್ಯಾಸಕ ಕಳಕಪ್ಪ ಕುಂಬಾರ್ (41) ಇವರು ಮಾನ್ವಿ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.
ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ವಿದ್ಯಾರ್ಥಿಗಳ ಅತ್ಯಂತ ಪ್ರೀತಿಯ ಗುರುಗಳಾಗಿದ್ದರು.
ಕುಟುಂಬದವರು ನೀಡಿದ
​ಮಾಹಿತಿಯ ಪ್ರಕಾರ, ಕಳಕಪ್ಪ ಅವರು ತಮ್ಮ ಅತ್ತೆಯ ಮನೆಯಾದ ಕಲ್ಲೂರು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ಆಕಸ್ಮಿಕ ಸಾವು ಅವರ ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗವನ್ನು ತೀವ್ರ ಆಘಾತಕ್ಕೆ ದೂಡಿದೆ.
​ವಿದ್ಯಾರ್ಥಿಗಳ ನೆಚ್ಚಿನ ‘ಸಮಾಜಶಾಸ್ತ್ರ ಉಪನ್ಯಾಸಕ
​ಕಳಕಪ್ಪ ಕುಂಬಾರ್ ಅವರು ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಸರಳ ವ್ಯಕ್ತಿತ್ವ ಹಾಗೂ ಬೋಧನಾ ಶೈಲಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಮನ ಗೆದ್ದಿದ್ದರು.
​ಕಳಕಪ್ಪ ಅವರ ನಿಧನಕ್ಕೆ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ತಂದೆ ತಾಯಿ ಸೋದರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವಿದ್ಯುತ್ ಅಸಮರ್ಪಕ ಪೂರೈಕೆ ಲಕ್ಷ್ಮಿ ಕ್ಯಾಂಪ್,ಗುಂಡಮ್ಮಕ್ಯಾಂಪ್ ಸುತ್ತಲಿನ‌‌ ನಿವಾಸಿಗಳಿಂದ ರಸ್ತೆ ತಡೆದು ದಿಢೀರ್ ಪ್ರತಿಭಟನೆ!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ನಗರದ ಅಂಬೇಡ್ಕರ್ ಸರ್ಕಲ್ ಬಳಿ ಲಕ್ಷ್ಮಿ ಕ್ಯಾಂಪ್ ಗುಂಡಮ್ಮ ಕ್ಯಾಂಪ್ ಮುರಾರಿ ಕ್ಯಾಂಪ್ ಹಾಗೂ ಸುತ್ತಲಿನ ನಿವಾಸಿಗಳು ಶನಿವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಇದರಿಂದ ಕುಡಿಯುವ ನೀರು ಸೇರಿದಂತೆ ಬೇಸಿಗೆಯ ಬಿಸಿಲಿಗೆ ಮನೆಯಲ್ಲಿ ಚಿಕ್ಕ ಮಕ್ಕಳು ವೃದ್ಧರು ಪರಿತಪಿಸುವಂತಾಗಿದೆ.
ಈ ಬಗ್ಗೆ ಜೆಸ್ಕಾಂ ನವರಿಗೆ ಪದೇ ಪದೇ ಮನವಿ ಮಾಡಿದರೂ ನಿರೀಕ್ಷೆ ಮಾಡಲಾಗಿದೆ. ಕುಡಿಯುವ ನೀರು ಹಿಡಿಯಲು ವಿದ್ಯುತ್ ಅವಶ್ಯವಿದ್ದು ವಿದ್ಯುತ್ ಪೂರೈಕೆಯಲ್ಲಿ ಜೆಸ್ಕಾಂನವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಜುಲೈ ನಗರ ಮತ್ತು ಕೇಂದ್ರ ಬಸ್ ನಿಲ್ದಾಣದ ಮಧ್ಯೆ ಗೌಳಿಮಹಾದೇವಪ್ಪ ರಸ್ತೆ ತಡೆದಿದ್ದರಿಂದ
ಬಸ್ ಸಂಚಾರ ಸ್ಥಗಿತವಾಗಿ ಪ್ರಯಾಣಿಕರು ಪರಿತಪಿಸುವಂತಾಯಿತು.

ರಾಮಲಿಂಗೇಶ್ವರ ಬೆಟ್ಡದಿಂದ ಜನವಸತಿ ಪ್ರದೇಶಕ್ಕೆ ಆಗಮಿಸಿದ್ದ ಆರು ಪೀಟು ಉದ್ದದ ಹೆಬ್ಬಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ಪ್ರೇಮಿ ಚನ್ನಬಸವ ಸ್ವಾಮಿ!

*ಕಾಡಿನಲ್ಲೂ ಹಾವು ಸೇರಿ ಅನುಪದ್ರವಿ ಪ್ರಾಣುಗಳಿಗೆ ಮನುಷ್ಯರ ಕಿರುಕುಳ.

 *ಹಾವು ಎಂದರೆ ಈತನಿಗೆ ಪಂಚಪ್ರಾಣ.

ಕಿಷ್ಕಿಂಧವಾಣಿ ಸುದ್ದಿ.

ಗಂಗಾವತಿ: ನಗರದ ವಿರುಪಾಪುರ ತಾಂಡ ಪೊಲೀಸ್ ಕ್ವಾಟ್ರಸ್ ಹೊರ ವಲಯದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬೆಟ್ಟದಿಂದ ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿದ್ದ ಹೆಬ್ಬಾವನ್ನು ಹಿಡಿದು ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಉರಗ ಮತ್ತು ಪ್ರಾಣಿ

ಪ್ರೇಮವನ್ನು

ನಗರದ ಸರೋಜ ನಗರದ ನಿವಾಸಿ ಚನ್ನಬಸವ ಸ್ವಾಮಿ ಮೆರೆದಿದ್ದಾರೆ.

ಚನ್ನಬಸವಸ್ವಾಮಿ ಅವರು ಮೂಲತಹ ದೈಹಿಕ ಶಿಕ್ಷಕರಾಗಿದ್ದು ತಮ್ಮ ವಿಭಿನ್ನ ಆಸಕ್ತಿ ಮತ್ತು ಧೈರ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಹಾವುಗಳನ್ನು ನೋಡಿ ಭಯಪಡುವ ಸಾಮಾನ್ಯ ಜನರ ನಡುವೆ, ಇವರು ಹಾವುಗಳನ್ನೇ ತಮ್ಮ ಪಂಚಪ್ರಾಣವಾಗಿ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಚನ್ನಬಸವಸ್ವಾಮಿ ಅವರು ಕೇವಲ ಹಾವುಗಳನ್ನಷ್ಟೇ ಪ್ರೀತಿಸುವುದಲ್ಲ, ಒಬ್ಬ ಪರಿಸರ ಪ್ರೇಮಿ ಮತ್ತು ಪ್ರಾಣಿಗಳ ಪ್ರೇಮಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಕೃತಿ ಹಾಗೂ ಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ.

ಹಾವು‌ ಸೇರಿ ಪ್ರಾಣಿ,ಪಕ್ಷಿಗಳನ್ನು

ಸ್ನೇಹದಿಂದ ನೋಡಿಕೊಳ್ಳುತ್ತಿರುವುದು ಅವರ ಪ್ರೀತಿ ಮತ್ತು ಧೈರ್ಯಕ್ಕೆ ಉದಾಹರಣೆ. ಹಾವುಗಳ ಬಗ್ಗೆ ಇರುವ ಅನಾವಶ್ಯಕ ಭಯವನ್ನು ದೂರ ಮಾಡುವ ಕಾರ್ಯವನ್ನು ನಿರಂತರ ಮಾಡುತ್ತಿದ್ದಾರೆ.

 

***

“ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಮಹತ್ವ ಇದೆ. ಹಾವುಗಳನ್ನೂ ನಾವು ರಕ್ಷಿಸಬೇಕು. ಅವು ನಮ್ಮ ಪರಿಸರದ ಭಾಗ, ಪರಿಸರ ಸಂರಕ್ಷಣೆ ಮತ್ತು ಪ್ರಾಣಿಗಳ ಮೇಲೆ ಎಲ್ಲರೂ ಪ್ರೀತಿ ತೋರಬೇಕು.ಇತ್ತೀಚೆಗೆ ಕೆಲ ವಿಕೃತಮನಸ್ಸಿನ ಯುವಕರು ಗಂಗಾವತಿ ಸುತ್ತಲಿನ ಬೆಟ್ಟಗಳಿಗೆ ಊಟ,ಮದ್ಯ ಸೇವನೆ ಮಾಡಲು ಹೋಗಿ ಉಳಿದ ಪದಾರ್ಥ,ಗಾಜಿನ ಚೂರು,ಪ್ಲಾಸ್ಟಿಕ್ ಎಸೆಯುವುದು,ಹಾವು,ಚೇಳು,ಉಡಾ,ಓತಿಕ್ಯಾತ,ಮೊಲ‌,ಪಾರಿವಾಳ ಮತ್ತು ಕೌಜುಗಾ

ಸೇರಿ ಸಣ್ಣ ಸಣ್ಣ ಪ್ರಾಣಿ,ಪಕ್ಷಿಗಳನ್ನು ಕೊಲ್ಲುತ್ತಿದ್ದಾರೆ.ಇದು ನಿಲ್ಲಬೇಕು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲೇ ಹಾವು ಕಂಡು ಬಂದಲ್ಲಿ ಸಂಪರ್ಕಿಸಿದರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗುತ್ತದೆ. ಹಾವು ಸೇರಿ ಯಾವುದೇ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡಿದರೆ ಪರಿಸರ ಸಮತೋಲ ಸಾಧ್ಯ.

-ಚನ್ನಬಸವಸ್ವಾಮಿ ಉರಗ ಪ್ರೇಮಿ ಗಂಗಾವತಿ.

ಗಂಗಾವತಿಗೆ ರೈಲು-ಬಿಹಾರದ ಲಲ್ಲೂ ಪ್ರಸಾದ ಯಾದವ್,ರೈಲ್ವೇ ಗುಪ್ತಾ….!

https://youtu.be/HRyU7wIT6YY?si=_c3jmUD1T5qERme4

https://youtu.be/HRyU7wIT6YY?si=_c3jmUD1T5qERme4

*ರೈಲ್ವೇಯಿಂದ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಆಗುತ್ತದೆ.
*ರೈಲ್ವೇ ಗುಪ್ತಾ ಬಂದ…ರಾಜಕಾರಣಿಗಳಿಂದ ಚೇಷ್ಟೇ!

ಕಿಷ್ಕಿಂಧವಾಣಿ ವಿಶೇಷ.

ಕೆ.ನಿಂಗಜ್ಜ.
ಗಂಗಾವತಿ: ಗಂಗಾವತಿ ನಗರಕ್ಕೆ ರೈಲ್ವೆ ಬಂದಿದ್ದೆ ಒಂದು ಇತಿಹಾಸ. ರೈಲ್ವೆ ಎಂದರೆ ಅಭಿವೃದ್ಧಿಗೆ ಪೂರಕ, ರೈಲ್ವೆ ಎಂದರೆ ದೇಶವನ್ನು ಒಗ್ಗೂಡಿಸುವ ಮಾರ್ಗ. ಗಂಗಾವತಿ ರೈಲ್ವೇ ಮಾರ್ಗಕ್ಕೆ 1997 ರಲ್ಲಿ ಬಸವರಾಜ ರಾಯ ರೆಡ್ಡಿ ಅವರು ಸಂಸದರಾಗಿದ್ದ ವೇಳೆ ಮುನಿರಾಬಾದ್ ನಲ್ಲಿ ಮುನಿರಾಬಾದ್ ಗದ್ವಾಲ ರೈಲ್ವೆ ಮಾರ್ಗಕ್ಕೆ ಭೂ ಪೂಜೆ ನೆರವೇರಿತು. ನಂತರ 35 ವರ್ಷಗಳಿಗೂ ಹೆಚ್ಚು ಈ ರೈಲ್ವೆ ಮಾರ್ಗ ಅನುದಾನದ ಕೊರತೆ ಮತ್ತಿತರ ಕಾರಣಕ್ಕಾಗಿ ಕಾಮಗಾರಿ ನೆನೆಗುದಿಗೆ ಬಿತ್ತು.
1997 ರಲ್ಲಿ ಮುನಿರಾಬಾದ್ ಗದ್ವಾಲ್ ರೈಲು ಮಾರ್ಗ ಕೇಂದ್ರ ಸರಕಾರದ ಬಜೆಟ್ ನಲ್ಲಿ ಘೋಷಣೆಯಾದರೂ 2004-09 ರಲ್ಲಿ ಈ ಕಾಮಗಾರಿಗೆ ಸ್ವಲ್ಪ ಮಟ್ಡಿನ ಚಾಲನೆ ದೊರಕಿತು.
ಅಂದಿನ ಸಂಸದರಾದ ಕೆ ವಿರೂಪಾಕ್ಷಪ್ಪ ಸಿಂಧನೂರು ಇವರು ಅಂದು ರಾಜ್ಯದಲ್ಲಿ ಎಸ್ಎಂ ಕೃಷ್ಣ ನೇತೃತ್ವದ ಸರ್ಕಾರಕ್ಕೆ ಮನವೊಲಿಸಿ ರೈಲ್ವೆ ಮಾರ್ಗಕ್ಕಾಗಿ ಭೂ ಸ್ವಾಧೀನ ಕಚೇರಿಯನ್ನು ಲಿಂಗಸಗೂರಿನಲ್ಲಿ ಆರಂಭಿಸಿದರು. ನಂತರ ಪ್ರತಿ ಬಜೆಟ್ ನಲ್ಲಿ ಇಂತಿಷ್ಟು ಅನುದಾನವನ್ನು ಮೀಸಲಿಸಿದರು.
ಆಗ ಗಂಗಾವತಿಯ ವರ್ತಕ ವಿಪಿ ಗುಪ್ತ ಅವರು ನಾಗರೀಕ ವೇದಿಕೆ ರಚನೆ ಮಾಡಿಕೊಂಡು ವೈಯಕ್ತಿಕವಾಗಿ ಹಣವನ್ನು ಖರ್ಚು ಮಾಡಿ ಪತ್ರ ವ್ಯವಹಾರ ನಡೆಸಿದರು. ಜೊತೆಗೆ ದೆಹಲಿ, ಬೆಂಗಳೂರು ಸೇರಿದಂತೆ ರೈಲ್ವೆ ವಲಯದ ಕಚೇರಿಗೆ ಪತ್ರ ಸಂಪರ್ಕ ಹಾಗೂ ಅಲೆದು ಮುನಿರಾಬಾದ್ ಗದ್ವಾಲ್ ರೈಲ್ವೆ ಮಾರ್ಗಕ್ಕೆ ಹೆಚ್ಚಿನ ಅನುದಾನ ಮತ್ತು ಇಚ್ಛಾಶಕ್ತಿ ತೋರುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು.
ಕೇಂದ್ರದಲ್ಲಿ ಯುಪಿಎ-2 ಸರಕಾರ ಇದ್ದ ಸಂದರ್ಭದಲ್ಲಿ ರೈಲ್ವೇ ಸಚಿವರಾಗಿದ್ದ ಲಲ್ಲೂ ಪ್ರಸಾದ ಯಾದವ್ ಅವರನ್ನು ಭೇಟಿ ಮಾಡಲು ಸಂಸದರಾಗಿದ್ದ ಕೆ.ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ 38 ಜನರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಲಲ್ಲೂ ಪ್ರಸಾದ ಯಾದವ್ ಅವರನ್ನು ಹಿಂದಿ ಭಾಷೆಯಲ್ಲಿ ಮಾತನಾಡಿ ಮನವೊಲಿಸಿದ ನಂತರ ಮುನಿರಾಬಾದ್ ಗದ್ವಾಲ್ ರೈಲು ಮಾರ್ಗ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶೇ50:50ಯೋಜನೆಯಾಗಿದ್ದು ರಾಜ್ಯ ಸರಕಾರದ ಶೇ.50 ಅನುದಾನ ಕೊಡಲು ಒಪ್ಪಿಗೆ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕೊಡಬೇಕಿದ್ದು, ಈ ಪತ್ರವನ್ನು ಕೊಟ್ಟರೆ ಈ ಕೂಡಲೇ ಯೋಜನೆಗೆ ಚಾಲನೆ ನೀಡುವುದಾಗಿ ಲಲ್ಲೂ ಪ್ರಸಾದ್ ಯಾದವ್ ದೆಹಲಿಗೆ ತೆರಳಿದ್ದ ಯೋಗಕ್ಕೆ ಸ್ಪಷ್ಟಪಡಿಸಿದರು.
ಕೂಡಲೇ ಗಂಗಾವತಿಗೆ ಗುಪ್ತಾ ಆಗಮಿಸಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಮನವರಿಕೆ ಮಾಡಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪತ್ರ ಪಡೆಯಲು ಬೆಂಗಳೂರಿಗೆ ತೆರಳಿದರು. ಆಗ ಬೆಂಗಳೂರಿನಲ್ಲಿ ಇಕ್ಬಾಲ್ ಅನ್ಸಾರಿ ಅವರು ಗುಪ್ತಾ ಅವರನ್ನು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಹೆಚ್. ಡಿ. ರೇವಣ್ಣ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹತ್ತಿರ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ರೈಲ್ವೆ ಯೋಜನೆಗೆ ಶೇಕಡ 50ರಷ್ಟು ಅನುದಾನ ಕೊಡುವ ರಾಜ್ಯ ಸರ್ಕಾರದ ಒಪ್ಪಿಗೆ ಪತ್ರವನ್ನು ಕೇಂದ್ರಕ್ಕೆ ರವಾನಿಸುವಲ್ಲಿ ಯಶಸ್ವಿಯಾದರು.
ನಂತರ ಕೇಂದ್ರ ಸರ್ಕಾರ ರೈಲ್ವೆ ಮಾರ್ಗದ ಕಾಮಗಾರಿಗೆ ಶರವೇಗ ನೀಡಿ 2024ರಲ್ಲಿ ಹುಬ್ಬಳ್ಳಿಯಿಂದ ಗಂಗಾವತಿವರೆಗೆ ರೈಲು ಸಂಚಾರವನ್ನು ಆರಂಭಿಸಿತು.
ಗಂಗಾವತಿಗೆ ರೈಲು ಬರುವಲ್ಲಿ ವಿ.ಪಿ. ಗುಪ್ತಾ ಅವರ ಪಾತ್ರ ಸ್ಮರಣೀಯ, ಅವರಿಗೆ ಈಗ 95 ವಯಸ್ಸು ಆಗಿದ್ದು ಅವರ ರೈಲ್ವೆ ಹೋರಾಟವು ಇತಿಹಾಸದಲ್ಲಿ ಉಳಿಯುತ್ತದೆ. ಗಂಗಾವತಿಗೆ ರೈಲು ಬರುವಂತೆ ಮಾಡಲೇಬೇಕು ಎನ್ನುವ ಛಲದೊಂದಿಗೆ 20 ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದರು.
ಗಂಗಾವತಿಗೆ ರೈಲು ಬಂದ ನಂತರ ಗಂಗಾವತಿಯ ಜನರು ಗುಪ್ತಾ ಅವರನ್ನು ರೈಲ್ವೆ ಗುಪ್ತಾ ಎಂದು ಕರೆಯುತ್ತಿದ್ದಾರೆ.ಗುಪ್ತಾ ಅವರ ಹೋರಾಟಗಾರರನ್ನು ಜನರು ಎಂದಿಗೂ ಮರೆಯುವುದಿಲ್ಲ.

****
ರೈಲ್ವೆ ಮಾರ್ಗದಿಂದ ನೇರ ಪರೋಕ್ಷವಾಗಿ ಅನೇಕ ಲಾಭಗಳಿದ್ದು ಗಂಗಾವತಿ ಗೆ ರೈಲ್ವೇ ಬರಲು ಎಲ್ಲಾ ಸಂಸದರು,ಶಾಸಕರು,ಸಚಿವರುಗಳು,ಜಿ.ಪಂ.ಸದಸ್ಯರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪತ್ರಕರ್ತರು ಕಾರಣರಾಗಿದ್ದಾರೆ. ಕೆಲವು ರಾಜಕಾರಣಿಗಳು ಗುಪ್ತ ಅವರು ರೈಲು ಹೋರಾಟದಿಂದ ಹೆಚ್ಚು ಪ್ರಚಾರ ಪಡೆದು ನಮ್ಮನ್ನು ಹಿಂದೆ ಬೀಳಿಸುತ್ತಾರೆ ಎಂಬ ಭಾವನೆಯಿಂದ ನನಗೆ ಯಾವುದನ್ನು ಹೇಳುತ್ತಿರಲಿಲ್ಲ, ಆದರೂ ನಾನು ಗಂಗಾವತಿಗಾಗಿ ಇಲ್ಲಿಯ ಜನರಿಗಾಗಿ ರೈಲ್ವೆ ಬೇಕೇ, ಬೇಕು ಎಂದು ನಿರಂತರವಾಗಿ ಹೋರಾಟ ಮಾಡಿದೆ ನನ್ನನ್ನು ಕೆಲವರು ಹುಚ್ಚ ಎಂದರು. ಆದರೂ ಅವರಿಗೆ ಯಾವುದೇ ಉತ್ತರ ಕೊಡದೆ ಎಲ್ಲರ ಸಹಕಾರದೊಂದಿಗೆ ರೈಲು ಹೋರಾಟ ಮಾಡಿದೆ, ಇದೀಗ ರೈಲು ಬಂದಿದೆ ಬಹಳ ಸಂತೋಷವಾಗಿದೆ. ಈ ರೈಲು ಮಾರ್ಗ ದೇಶದ ವಿವಿಧ ಮೆಟ್ರೋ ನಗರಗಳ ಜೊತೆಗೆ ಧೋರಣೆಯಾದರೆ ಮಾತ್ರ ಇನ್ನಷ್ಟು ಅಭಿವೃದ್ಧಿಗೆ ಚಾಲನೆ ದೊರೆಯುತ್ತದೆ. ಯುವಕರು ಮುಂಬರುವ ದಿನಗಳಲ್ಲಿ ರೈಲ್ವೆ ಕುರಿತು ಇನ್ನಷ್ಟು ಹೋರಾಟ ಮಾಡುವ ಮೂಲಕ ದೇಶದ ವಿವಿಧ ನಗರಗಳಿಗೆ ರೈಲ್ವೆ ಸಂಪರ್ಕ ಮತ್ತು ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ.
-ವಿ.ಪಿ.ಗುಪ್ತಾ ರೈಲ್ವೇ ಹೋರಾಡಗಾರರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ.

*ಚುನಾವಣೆ ಅಸಂವಿಧಾನಿಕ ಎಂದು ಕಿಷ್ಕಿಂಧವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ಏ.19 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಯನ್ನು ಕರ್ನಾಟಕ ಹೈಕೋರ್ಟ್ ಏ.17 ರಂದು

ತಡೆಯಾಜ್ಞೆ ನೀಡಿದೆ.

ಮತದಾರರ ಪಟ್ಟಿ ಪ್ರಕಟಣೆ ವಿಳಂಬ, ಕೆಲ ಮತದಾರರ ಹೆಸರು ಬಿಟ್ಟು ಹೋಗಿರುವುದು, ನಿಧರಾದವರು ಮತ್ತು ನಿವೃತ್ತರಾದವರನ್ನು ಪಟ್ಟಿಗೆ ಸೇರಿಸಿರುವ ಕುರಿತಂತೆ ಆಕ್ಷೇಪಗಳು ಹೆಚ್ಚಾಗಿದ್ದರಿಂದ ರಾಜ್ಯದ ವಿವಿಧಡೆ ಆರೋಪಗಳು, ದೂರುಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಕುರಿತು ಕೆಲವರು ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಏಪ್ರಿಲ್ 17ರಂದು ಸಂಜೆ ಚುನಾವಣೆ ಕುರಿತಂತೆ ತಡೆಯಾಜ್ಞೆ ನೀಡಿದೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡದೆ ಕೆಲವು ತಾಲೂಕುಗಳಲ್ಲಿ ಮತದಾರ ಪಟ್ಟಿಯನ್ನು ಆಕ್ಷೇಪಣೆ ಸಲ್ಲಿಸದೆ ಪಟ್ಟಿಯಿಂದ 3000ಕ್ಕೂ ಹೆಚ್ಚು ಶಿಕ್ಷಕರನ್ನ ಕೈ ಬಿಡಲಾಗಿದೆ. ಕನಕಗಿರಿ ಸೇರಿದಂತೆ ರಾಜ್ಯದ ಕೆಲವು ತಾಲೂಕಗಳ ಘಟಕಗಳಿಗೆ ಚುನಾವಣೆಯನ್ನು ನಡೆಸದಿರುವುದು ಸೇರಿ ಚುನಾವಣೆಯಲ್ಲಿ ಹಲವು ನ್ಯೂನ್ಯತೆ ಇದ್ದುದ್ದನ್ನು ಪ್ರಶ್ನಿಸಲಾಗಿದೆ.

ಚುನಾವಣೆ ಮಾಡಲು ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಹೈಕೋರ್ಟ್ ತಡೆಯಾಗಿ ನೀಡುವ ಮೂಲಕ ಮಹತ್ವದ ನಿರ್ಣಯ ಕೈಗೊಂಡಿದೆ.

ನಿಯಮಾನಸಾರ ಚುನಾವಣೆ ಮಾಡದೆ ತಾವೇ ಚುನಾವಣಾ ಪಟ್ಟಿಯನ್ನು ಬರೆದುಕೊಂಡು ಚುನಾವಣೆ ನಡೆದಿದೆ ಎಂದು ಬಿಂಬಿಸಲು ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಹೈಕೋರ್ಟ್ ತಡೆಯಾಜ್ಞೆ ಮೂಲಕ ಭಾರಿ ಅಕ್ರಮಕ್ಕೆ ಕಡಿವಾಣ ಬಿದ್ದಿದೆ ಎನ್ನಲಾಗುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಕಗ್ಗೊಲೆ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ಸುಮಾರು 48ಕ್ಕೂ ಹೆಚ್ಚು ತಾಲೂಕುಗಳಲ್ಲಿ ಚುನಾವಣೆ ನಡೆಸದೆ ಅಧಿಕಾರದ ಆಸೆಯಿಂದ ಮತ್ತೊಮ್ಮೆ ಗದ್ದಿಗೆ ಹಿಡಿಯಲು ಹೊರಟವರಿಗೆ ನ್ಯಾಯಾಲಯದ ಆದೇಶವು ಭಾರಿ ಮುಖಭಂಗ ಉಂಟು ಮಾಡಿದೆ .

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನಿರ್ದೇಶಕರ ಚುನಾವಣೆ ಮತ್ತು ಇದರ ನ್ಯೂನ್ಯತೆಗೆ ಕುರಿತು ಕಿಷ್ಕಿಂಧ ವಾಣಿ ದಿನಪತ್ರಿಕೆ ಮುಂಚಿತವಾಗಿ ವಿಸೃತವಾದ ಸುದ್ದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು

ಬಸ್ ಮತ್ತು  ‌ಕಾರು ಡಿಕ್ಕಿ ಒಂದೇ ಕುಟುಂಬದ ಮೂರು ಹಸುಗೂಸುಗಳು ಸೇರಿ ಏಳು ಜನ ಭಸ್ಮ!

*ತಿಂಥಿಣಿ ಮೌನೇಶ್ವರ ದರ್ಶನ ಮುಗಿಸಿಕೊಂಡು ಮರಳಿ ಊರಿಗೆ ಹೊರಟವರು ವಿಧಿಯಾಟಕ್ಕೆ ಬಲಿ!

ಕಿಷ್ಕಿಂಧವಾಣಿ ಸುದ್ದಿ

ಸುರಪುರ:

ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಬಸ್ ಮತ್ತು ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಂಚರಿಸುತ್ತಿದ್ದ ಕಾರು ನಡುವೆ ಯಾದಗಿರಿ ‌ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಏಳು ಮಂದಿ ಸಜೀವ ದಹನಗೊಂಡಿದ್ದಾರೆ.

ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ ಮೂರು ಹಸುಗೂಸುಗಳು ಸೇರಿ‌

ಏಳು ಮಂದಿ ಜೀವಂತ ಭಸ್ಮವಾಗಿದ್ದಾರೆ. ಘಟನೆಯಲ್ಲಿ ಹಲವು ಪ್ರಯಾಣಿಕರಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ನೆರವಿನ ಕಾರ್ಯಾಚರಣೆ ಮಾಡಿದರು.

ಮೃತಪಟ್ಟವರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಮೃತಪಟ್ಟವರು. ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷ) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ,ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡುಕುಟುಂಬ ಸಿರವಾರಕ್ಕೆ ವಾಪಸಗುತ್ತಿದ್ದಾಗ ಈ ದುರಂತ ನಡೆದಿದೆ. ಬಸ್‌ಗೆ ಬೆಂಕಿ ತಗುಲಿದರೂ 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಬೆಂಕಿಯಲ್ಲಿ ಕರಕಲಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣದ ತನಿಖೆ ನಡೆಸಿದ್ದಾರೆ

ತಾಲೂಕಿನಾದ್ಯಂತ ಗುಡುಗು ಸಹಿತ ಅಕಾಲಿಕ ಮಳೆಗೆ ಜನ ಜಾನುವಾರುಗಳಿಗೆ ಅಪಾರ ಹಾನಿ.

 

*ನೆಲಕ್ಕುರುಳಿದ ಭತ್ತದ ಬೆಳೆ ಮಾವಿನ ಫಸಲು,ಪರಿಹಾರಕ್ಕೆ ಆಗ್ರಹ.

*ಸಿದ್ದಿಕೇರಿಯಲ್ಲಿ ಆರು ಆಕಳು ಸಾವು!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನಾದ್ಯಂತ ಗುರುವಾರ ಮಧ್ಯ ರಾತ್ರಿ ಸುರಿದ ಗುಡುಗು ಸಹಿತ ಅಕಾಲಿಕ ಮಳೆಗೆ ಗಂಗಾವತಿ ನಗರ,ಹೊಸಳ್ಳಿ, ಸಿದ್ದಿಕೇರಿ,ಮಲ್ಲಾಪೂರ,ಆನೆಗೊಂದಿ ಹಾಗೂ ಢಣಾಪೂರ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆ,ಮಾವಿನ ಫಸಲು ಮತ್ತು ಬಾಳೆ ಬೆಳೆ,ತೆಂಗಿನ ಗಿಡಗಳು, ನೆಲಕ್ಕುರುಳಿ ಅಪಾರ ಹಾನಿಯಾಗಿದೆ.

ಹಿರೇಜಂತಗಲ್ ಗ್ರಾಮದ

ಯಮನೂರಪ್ಪ ಅವರ ಬೆಳೆದ ಭತ್ತದ ಹೊಲ ಸಂಪೂರ್ಣವಾಗಿ ನಾಶವಾಗಿದ್ದು, ಸುಮಾರು ₹10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಹೊಸಹಳ್ಳಿ ಗ್ರಾಮದ ರೈತ ವಿಠೋಬಣ್ಣ ಇವರಿಗೆ 3 ಎಕರೆ ಭತ್ತದ ಬೆಳೆ ಕೂಡ ಮಳೆಗೆ ಸಂಪೂರ್ಣ ಹಾನಿಯಾಗಿದೆ.

ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಈ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ನಷ್ಟವನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ರೈತರ ಆಗ್ರಹ:

ಬೆಳೆ ನಷ್ಟಕ್ಕೆ ತುರ್ತು ಪರಿಹಾರ ಘೋಷಣೆ

ಜಾನುವಾರು ಸಾವುಗಳಿಗೆ ಪರಿಹಾರ ಧನ

ಮನೆ ಹಾನಿಗೆ ಪರಿಹಾರ ಮತ್ತು ಪುನರ್ ನಿರ್ಮಾಣ ನೆರವು

ಪ್ರಕೃತಿ ವಿಪತ್ತು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ

ಈ ಅಕಾಲಿಕ ಮಳೆಯಿಂದ ಗಂಗಾವತಿ ತಾಲೂಕಿನ ರೈತರ ಬದುಕು ಮತ್ತೊಮ್ಮೆ ಸಂಕಷ್ಟದ ಅಂಚಿಗೆ ತಳ್ಳಲ್ಪಟ್ಟಿದೆ.

 

ವಿದೇಶಿ ಮಹಿಳೆ ಅತ್ಯಾಚಾರ ಹಾಗೂ ಒರ್ವನ ಕೊಲೆ ಸೇರಿ ಪ್ರಮುಖ ಕೇಸ್‌ಗಳ ತೀರ್ಪು ನೀಡಿದ್ದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ವರ್ಗಾ.

*ಪರಿಸರ, ಪ್ಲಾಸ್ಟಿಕ್ ಬಳಕೆ ಬಗ್ಗೆ ಕಡಕ್ ಕಾರ್ಯಾಚರಣೆ ಮೂಲಕ ಜನತೆಗೆ ಜಾಗೃತಿ ಮೂಡಿಸಿದ್ದರು.

*ಐತಿಹಾಸಿಕ ಆನೆಗೊಂದಿಯಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ

 *ಲೋಕ್ ಆದಾಲತ್ ಕಾರ್ಯಕ್ರಮಗಳ ಮೂಲಕ ಸಾವಿರಾರು ಕೇಸ್‌ಗಳ ಇತ್ಯಾರ್ಥ

 *ಮೂರು ವರ್ಷಗಳ ನಂತರ ನ್ಯಾಯಾಧೀಶರ ವರ್ಗಾ.

*ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ವೇದಮೂರ್ತಿ ಬಿ.ಎಸ್ ವರ್ಗಾ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸದಾನಂದ ನಾಗಪ್ಪ ನಾಯ್ಕ ಇವರನ್ನು ಐದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಕ್ಷಿಣ ಕನ್ನಡ ಮಂಗಳೂರು ಪೀಠ ಪುತ್ತೂರು ನ್ಯಾಯಾಧೀಶರನ್ನಾಗಿ ಹಾಗೂ ಗಂಗಾವತಿಯ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ವೇದಮೂರ್ತಿ ಬಿ.ಎಸ್ ಇವರನ್ನು ಹೈಕೋರ್ಟ್ ರಿಜಿಸ್ಟರ್ ಜನರಲ್ ಕೆ.ಎಸ್,ಭರತಕುಮಾರ  ಅವರು ಗುರುವಾರ  ವರ್ಗಾವಣೆ ಆದೇಶ ಮಾಡಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತಾಲೂಕಿನ ಸಾಣಾಪೂರ ಕೆರೆ ದಂಡೆಯ ಮೇಲೆ ದುಷ್ಕರ್ಮಿಗಳಿಂದ ವಿದೇಶ ಮಹಿಳೆಯ ಅತ್ಯಾಚಾರ ಮತ್ತು ಒರ್ವನ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಮರಣದಂಡನೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿದ್ದ ನ್ಯಾಯಾಧೀಶ ಸದಾನಂದ ನಾಯ್ಕ ಅವರು ಜನಪರವಾಗಿ ತಾಲೂಕು ಕಾನೂನು ಸೇವಾ ಸಮಿತಿ ಮೂಲಕ ತಾಲೂಕಿನ ಐತಿಹಾಸಿಕ ಆನೆಗೊಂದಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಸ್ಮಾರಕಗಳ ಸ್ವಚ್ಛತೆ, ಆಗಮಿಸುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸರಿಪಡಿಸಲು ಆನೆಗೊಂದಿಯಲ್ಲಿ ದತ್ತು ಪಡೆದು ಕಾರ್ಯ ಮಾಡಿದ್ದರು. ಜತೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆನೆಗೊಂದಿ  ಗ್ರಾಮ ಬಂದರೂ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಪ್ರಾಧಿಕಾರದ ಅಧಿಕಾರಗಳು,ಪಿಡಿಓ  ಸೇರಿ  ಗ್ರಾಮಸ್ಥರ ಸಭೆ ನಡೆಸಿ ಐತಿಹಾಸಿಕ ಗ್ರಾಮ ಹಾಗೂ ಪ್ರವಾಸೋದ್ಯಮದ ಜಾಗೃತಿ ಮೂಡಿಸಿದ್ದರು.      ಪ್ರತಿ ತಿಂಗಳು ಆಯೋಜನೆಗೊಳ್ಳುವ ರಾಷ್ಟ್ರೀಯ ಲೋಕ್ ಆದಾಲತ್ ಕಾರ್ಯಕ್ರಮದಲ್ಲಿ ಸಾವಿರಾರು ರಾಜೀಯಾಗುವ ಪ್ರಕರಣಗಳನ್ನು ಇತ್ಯಾರ್ಥ ಮಾಡಿದ್ದರು. ಜತೆಗೆ ಹಲವು ಜೋಡಿ ಪತಿ ಪತ್ನಿಯರನ್ನು ಪುನಹ ಒಂದಾಗುವಂತೆ ಕೌನ್ಸಲಿಂಗ್ ನಡೆಸಿ ಕೌಟುಂಬಿಕ ಕಲಹ ನಿಲ್ಲುವಂತೆ ಮಾಡಿದ್ದರು. ಆರೋಗ್ಯ, ಪರಿಸರ, ಹಿರಿಯರನ್ನು ಗೌರವಿಸುವ ಹಾಗೂ  ಮಹಿಳಾ ಸಬಲೀಕರಣ, ಕಾರ್ಮಿಕ ಕಲ್ಯಾಣ, ಬಾಲಕಾರ್ಮಿಕ ನಿಷೇಧ ಕಾನೂನಿನ ನೆರವಿನ ಕುರಿತು ಜಾಗೃತಿಯನ್ನು ವಿಶೇಷ ಆಸಕ್ತಿಯಿಂದ ಮಾಡಿ ಜನಮಾನಸದಲ್ಲಿ ಉಳಿಸಿದ್ದರು.

ಎಸ್ಡಿಎಂಸಿ ಸಭೆಯ ಸುತ್ತಾ ಅನುಮಾನದ ಹುತ್ತಾ!.. ಹೊಸಳ್ಳಿ ಶಾಲೆಯ ಜಾಗ ಮರಳಿ ಸ್ವಾಮೀಜಿಗೆ ವಹಿಸಲು ಎಸ್ಡಿಎಂಸಿ ಅಧ್ಯಕ್ಷೆ ಹಾಗೂ ಹೆಚ್‌ಎಂ ಠರಾವು ಪಾಸ್!

 

*ಎಸ್ಡಿಎಂಸಿ ಅವಧಿ 2024ಕಕ್ಕೆ ಮುಗಿದರೂ 2025ರ ಡಿಸೆಂಬರ್ 12 ರಂದು ಎಸ್ಡಿಎಂಸಿ ಸಭೆ!

*ಇಷ್ಟೆಲ್ಲಾ ನಡೆದರೂ ಬಾಯಿ ಮುಚ್ಚಿಕೊಂಡಿರುವ ಬಿಇಒ, ಡಿಡಿಪಿಐ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದ ಶೈಕ್ಷಣಿಕ ಅಭಿವೃದ್ಧಿ ಮತ್ತು ಗ್ರಾಮೀಣ ಮಕ್ಕಳು ಓದು ಬರಹ ಕಲಿಯಲಿ ಎನ್ನುವ ಸದುದ್ದೇಶದಿಂದ ಈ ಹಿಂದಿನ ಕಲ್ಮಠದ ಪೂಜ್ಯರು 50 ವರ್ಷಗಳ ಹಿಂದೆ ಹೊಸಳ್ಳಿಯ ಶಾಲೆಗೆ(ಪ್ರಸ್ತುತ ಕಲ್ಮಠಶ್ರೀಚನ್ನಬವಸ್ವಾಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣವನ್ನೂ ಮಾಡಲಾಗಿದೆ) ಐದು ಎಕರೆ ಭೂಮಿ ನೀಡಿದ್ದು ಪ್ರಸ್ತುತ ಇರುವ ಪೂಜ್ಯರು ಅದನ್ನು ವಾಪಸ್ ಪಡೆಯಲು ಷಡ್ಯಂತ್ರ ನಡೆಸಿದ್ದು ಗ್ರಾಮೀಣ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಿದ್ದು ಕಳೆದ 50 ವರ್ಷಗಳಿಂದ ಕಾರ್ಯ ನಿರ್ವಹಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಕೊಟ್ಟ ಜಾಗವನ್ನು ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಿಸದೇ ನಿರ್ಲಕ್ಷ್ಯ ವಹಿಸಿದ್ದು ಜತೆಗೆ ಇತ್ತೀಚೆಗೆ 2025 ರಲ್ಲಿ ಶಾಲೆಯ ಅಂದಿನ ಹೆಚ್.ಎಂ ಅವರು ಕುತಂತ್ರ ನಡೆಸಿ ಎಸ್ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಶಾಲೆಗೆ 2 ಎಕರೆ ಭೂಮಿ ಸಾಕು ಉಳಿದ ಭೂಮಿ ಕಲ್ಮಠದ ಸ್ವಾಮೀಜಿಯವರಿಗೆ ಸಂಬಂಧಿಸಿದ್ದು ಎಂದು ಠರಾವು ಪಾಸ್ ಮಾಡಿದ್ದು ಕೂಡಲೇ ಶಿಕ್ಷಣ ಇಲಾಖೆಯ ಆಯುಕ್ತರು ಶಾಲೆಯ ಹೆಚ್.ಎಂ. ಬಿಇಒ ಹಾಗೂ ಡಿಡಿಪಿಐ ಅವರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮಲ್ಲಯ್ಯ ಪಾರಿವಾಳ, ಡಿಎಸ್‌ಎಸ್ ಭೀಮಮಾರ್ಗದ ಬಣದ ಜಿಲ್ಲಾ ಮುಖಂಡ ಡಿ.ಮಹೇಶ, ದುರುಗಪ್ಪ ಹಾಗೂ ರಗಡಪ್ಪ ಒತ್ತಾಯಿಸಿದ್ದಾರೆ.

ಶಾಲೆಯ ಜಾಗವನ್ನು ಕಬಳಿಸುವ ಉದ್ದೇಶದಿಂದ 04-08-2024 ರಂದು ಎಸ್ಡಿಎಂಸಿ ಅವಧಿ ಮುಗಿದರೂ 13-12-2025 ರಂದು ಎಸ್ಡಿಎಂಸಿ ಸಭೆ ಕರೆದಂತೆ ದಾಖಲೆ ಸೃಷ್ಠಿ ಮಾಡಿ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯಗುರುಗಳು ಶಾಲೆ ಮತ್ತು ಕಾಂಪೌಂಡ್ ಇರುವ ಎರಡು ಎಕರೆ ಜಾಗ ಮಾತ್ರ ಶಾಲೆಗೆ ಸೇರಿದ್ದು ಪಹಣಿಯಲ್ಲಿ ಐದು ಎಕರೆ ಎಂದು ನಮೂದು ಆಗಿದೆ. ಆದ್ದರಿಂದ ಮೂರು ಎಕರೆ ಭೂಮಿಯನ್ನು ಕಲ್ಮಠದ ಸ್ವಾಮೀಜಿಯವರಿಗೆ ಸಂಬಂಧಿಸಿರುತ್ತದೆ ಎಂದು ಠರಾವು ಪಾಸ್ ಮಾಡಿ ಠರಾವಿಗೆ ಎಸ್ಡಿಎಂಸಿ ಅಧ್ಯಕ್ಷೆ ದುರುಗಮ್ಮ ಹಾಗೂ ಮುಖ್ಯ ಶಿಕ್ಷಕಿ ಮಲ್ಲಿಕಾ ಸೇರಿದಂತೆ 18 ಜನ ಸದಸ್ಯರು ಸಹಿ ಮಾಡಿದ್ದಾರೆ. ಹೀಗೆ ಮಾಡಲು ಇವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಫೇಕ್ ದಾಖಲೆ ಸೃಷ್ಠಿಸಿರುವ ಅನುಮಾನ ವ್ಯಕ್ತವಾಗುತ್ತಿದೆ. ಕೂಡಲೇ ಮುಖ್ಯಶಿಕ್ಷಕಿಯವರನ್ನು ಸಸ್ಪೆಂಡ್ ಮಾಡಬೇಕು.

ಶಾಲೆಗಾಗಿ ಪೂಜ್ಯರು ಕಳೆದ 50 ವರ್ಷಗಳ ಹಿಂದೆ ಐದು ಎಕರೆ ಭೂಮಿ ದಾನವಾಗಿ ನೀಡಿದ್ದರು. ಇದೀಗ ಕಲ್ಮಠದ ಡಾ.ಕೊಟ್ಟೂರು ಮಹಾಸ್ವಾಮಿಗಳು ಐದು ಎಕರೆ ಭೂಮಿಯಲ್ಲಿ ಮೂರು ಎಕರೆ ಭೂಮಿಯನ್ನು ಮರಳಿ ಪಡೆಯಲು ಅಧಿಕಾರಿಗಳು ಹಾಗೂ ಕೆಲವರನ್ನು ಬುಕ್ ಮಾಡಿಕೊಂಡು ಶಾಲೆಗೆ ಸಂಚಕಾರ ತಂದಿದ್ದಾರೆ. ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಹಳೆಯ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದು ಶೀಘ್ರ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುತ್ತದೆ. ಕನ್ನಡ ಶಾಲೆಗಳ ಬಗ್ಗೆ ಮಾತನಾಡುವ ಕನ್ನಡ ಪರ ಹಾಗೂ ದಲಿತ ಪರ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ಶಾಲೆಯ ಜಾಗ ಉಳಿಸುವ ಹೋರಾಟಕ್ಕೆ ಸಾಥ್ ಕೊಡಬೇಕೆಂದು ಹೊಸಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.