Breaking News
ದ್ವಿತೀಯ ಪಿಯುಸಿ ಫಲಿತಾಂಶ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ.

 

*ಕಿಷ್ಕಿಂಧ ಪಿಯು ಕಾಲೇಜು ಅತ್ಯುತ್ತಮ ಸಾಧನೆ, ಶೇ. 100 ಫಲಿತಾಂಶ.

*ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಕಿಷ್ಕಿಂಧ ಪಿಯು ಕಾಲೇಜು ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ. ಒಟ್ಟು 163 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿರುವುದು ಕಾಲೇಜಿನ ಶೈಕ್ಷಣಿಕ ಬದ್ಧತೆಯನ್ನು ತೋರಿಸುತ್ತದೆ. ಇವರಲ್ಲಿ 145 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, 18 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಡಾ.ಜಿ.ಚಂದ್ರಪ್ಪ ಹೇಳಿದರು.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೇವಲ ಶೇ.45 ಅಂಕಗಳನ್ನು ಪಡೆದ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ, ಆಧ್ಯಾಪಕ ವೃಂದ ಮತ್ತು ಪಾಲಕರ ಸಹಕಾರದೊಂದಿಗೆ ಉತ್ತಮ ತರಬೇತಿ ನೀಡಿ, ಇಂದು ಶೇ. 95 ಮಟ್ಟದ ಸಾಧನೆಗೇರಿಸಿರುವುದು ಕಾಲೇಜಿನ ಮಹತ್ವದ ಸಾಧನೆಯಾಗಿದೆ.

ವಾಣಿಜ್ಯ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿ ಶೇ.100 ಫಲಿತಾಂಶ ತಂದುಕೊಟ್ಟಿದ್ದಾರೆ. ಕೆಲ ಕಾಲೇಜುಗಳು ಹೆಚ್ಚಿನ ಪರ್ಸೆಂಟೇಜ್ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ಕಿಷ್ಕಿಂಧ ಕಾಲೇಜು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ, ಅವರನ್ನು ಜಿಲ್ಲಾಮಟ್ಟದಲ್ಲಿ ಮೆರೆದಿರುವುದು ಗಮನಾರ್ಹವಾಗಿದೆ.

, “ನಮ್ಮ ಗುರಿ ಶೇಕಡಾವಾರು ಆಧಾರಿತ ಆಯ್ಕೆ ಅಲ್ಲ, ಬದಲಾಗಿ ಗುಣಮಟ್ಟದ ಶಿಕ್ಷಣ ನೀಡುವುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಕಷ್ಟ ನಮಗೆ ತಿಳಿದಿದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ಮುಂದಕ್ಕೆ ತರುವುದು ನಮ್ಮ ಧ್ಯೇಯವಾಗಿದ್ದು ಪ್ರಾಂಶುಪಾಲ ಮುರಳೀ ಕೃಷ್ಣ ಹಾಗೂ ಆಡಳಿತ ಮಂಡಳಿ ಸದಸ್ಯರಾದ ವೀರಭದ್ರರಾವ್, ಡಾ. ಮಲ್ಲನಗೌಡ ಮತ್ತು ಅಧ್ಯಾಪಕರ ಪರಿಶ್ರಮದಿಂದ ಕಾಲೇಜಿಗೆ ಉತ್ತಮ ಹೆಸರು ಬಂದಿದೆ. ಪಾಲಕರ ಸಹಕಾರವೂ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಆಡಳಿತಾಧಿಕಾರಿ ವೀರಭದ್ರರಾವ್ ಮಾತನಾಡಿ, “ಕೆಲವು ಖಾಸಗಿ ಕಾಲೇಜುಗಳು ಪ್ರಚಾರಕ್ಕೆ ಆದ್ಯತೆ ನೀಡಿ ಪ್ರಚಾರದ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಪಾಲಕರು ಮತ್ತು ವಿದ್ಯಾರ್ಥಿಗಳು ಇಂತಹ ಪ್ರಚಾರಕ್ಕೆ ಮರುಳಾಗದೇ, ನಿಜವಾದ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯನ್ನು ಆಯ್ಕೆ ಮಾಡಬೇಕು,” ಎಂದು ಸಲಹೆ ನೀಡಿದರು.

ಒಟ್ಟಾರೆ, ಕಿಷ್ಕಿಂಧ ಪಿಯು ಕಾಲೇಜು ಕಡಿಮೆ ಅಂಕಗಳಿಂದ ಬಂದ ವಿದ್ಯಾರ್ಥಿಗಳನ್ನು ಉತ್ತೇಜಿಸಿ, ಶೇ.100 ಫಲಿತಾಂಶ ಸಾಧಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ

ಈ ಸಂದರ್ಭದಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಪಾಲಕರು ಉಪಸ್ಥಿತರಿದ್ದರು

ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ: ಹೆಚ್.ಆರ್.ಶ್ರೀನಾಥಮಾನವಹಕ್ಕುಗಳ ಉಲ್ಲಂಘಟನೆಯಾಗುತ್ತಿದೆ: ಹೆಚ್.ಆರ್.ಶ್ರೀನಾಥ

 

*ರಾಜ್ಯ ಸರಕಾರ ಆನೆಗೊಂದಿ ಭಾಗವನ್ನು ಹಂಪಿ ಪ್ರಾಧಿಕಾರದಿಂದ ಕೂಡಲೇ ಕೈ ಬಿಡಬೇಕು.

*ಪ್ರಾಧಿಕಾರದಿಂದ ಬಡವರ ಊಟಕ್ಕೂ ಸಂಚಕಾರ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗೊಂದಿ ಭಾಗದಲ್ಲಿರುವ ಸ್ಮಾರಕಗಳ ಸಂರಕ್ಷಣೆಯ ನೆಪದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಸೇರ್ಪಡೆ ಮಾಡಿದ್ದು ಪ್ರಾಧಿಕಾರದ ನಿಯಮಗಳ ಪಾಲನೆ ನೆಪದಲ್ಲಿ ಅಧಿಕಾರಿಗಳು ಮಾನವ ಹಕ್ಕುಗಳ ಉಲ್ಲಂಘಟನೆಯ ಕಾರ್ಯ ನಿರಂತರವಾಗಿದ್ದು ಬಡವರ ಊಟಕ್ಕೂ ಸಂಚಕಾರ ಉಂಟಾಗಿದೆ. ರಾಜ್ಯ ಸರಕಾರ ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈ ಬಿಡುವಂಡೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ ಒತ್ತಾಯಿಸಿದರು.

ಅವರು ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ದೀನ ದಲಿತರು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರ ಜೀವನವನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದಲ್ಲಿ ಸರ್ವರೂ ನಡೆಯುವ ಮೂಲಕ ದೇಶವನ್ನು ಸಮ ಸಮಾಜದ ಕಡೆ ತೆಗೆದುಕೊಂಡು ಹೋಗಬೇಕಿದೆ. ಆದರೆ ನೌಕರ ಶಾಹಿ ವರ್ಗದವರು ಆನೆಗೊಂದಿ ಭಾಗದಲ್ಲಿ ಎಸ್ಸಿ ಎಸ್ಟಿ ಹಿಂದುಳಿದವರು ಗುಡ್ಡಗಾಡು ಪ್ರದೇಶದಲ್ಲಿ ಶತಮಾನಗಳಿಂದ ಜೀವನ ಕಟ್ಟಿಕೊಂಡು ಜೀವನ ಮಾಡುತ್ತಿದ್ದು ಕಳೆದ 35 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹಂಪಿ ಅಭಿವೃದ್ದಿ ಪ್ರಾಧಿಕಾರದ ನೆಪದಲ್ಲಿ ಹೊಸಪೇಟೆಯಲ್ಲಿರುವ ಹೊಟೇಲ್ ಲಾಭಿಯವರ ಮಾತು ಕೇಳಿ ಆನೆಗೊಂದಿ ಭಾಗದ 15 ಗ್ರಾಮಗಳ ಜನರ ಜೀವನ ಜತೆ ಆಟವಾಡುತ್ತಿದ್ದಾರೆ. ಇಡೀ ಪ್ರದೇಶವನ್ನು ಕೋರ್ ಝೋನ್, ಗ್ರೀನ್ ಝೋನ್ ಎಂದು ವಿಂಗಡಿಸಿ ನಿಯಮಗಳ ನೆಪದಲ್ಲಿ ಬಿದ್ದ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈ ಬಿಟ್ಟು ಕಿಷ್ಕಿಂಧಾ ಪ್ರಾಧಿಕಾರ ರಚನೆ ಮಾಡಿ ಸ್ಥಳೀಯರ ಬದುಕನ್ನು ಹಸನು ಮಾಡಬೇಕು. ಅಂಬೇಡ್ಕರ ಅವರ ಆಶಯವೂ ಅದೇ ಆಗಿದ್ದು ಸ್ಥಳೀಯರು ಉಗ್ರ ಹೋರಾಟ ಮಾಡುವ ಮೊದಲು ರಾಜ್ಯ ಸರಕಾರ 1988 ಪುರತತ್ವ ಕಾಯ್ದೆ ತಿದ್ದುಪಡಿ ಮಾಡಿ ಆನೆಗೊಂದಿ, ವಿರೂಪಾಪೂರಗಡ್ಡಿ ಗ್ರಾಮಗಳನ್ನು ಕೋರ್ ಝೋನ್ ದಿಂದ ತೆಗೆದು ಹಾಕಬೇಕು. ಸ್ಥಳೀಯ ಸ್ಮಾರಕಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರೇ ಸಂರಕ್ಷಣೆ ಮಾಡಿ ಇಂದು ಅವುಗಳನ್ನು ನೋಡಲು ಉಳಿಸಿದ್ದಾರೆ. ಮುಂದೆಯೂ ಸ್ಥಳೀಯರು ಸಂರಕ್ಷಣೆ ಮಾಡುತ್ತಾರೆ. ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ಪ್ರಾಧಿಕಾರದ ಕಿರುಕುಳದಿಂದ ತಪ್ಪಿಸಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿ ಡಾ.ಚಂದ್ರಶೇಖರ ಅವರು ಡಾ.ಬಿ.ಆರ್.ಅಂಬೇಡ್ಕರ ಅವರ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃರ ಹಿರಿಯ ಪತ್ರಕರ್ತ ಕೆ.ಮಲ್ಲಿಕಾರ್ಜುನ, ಕೊಪ್ಪಳದ ಮುಖಂಡರಾದ ಸೈಯದ್, ಪಬ್ಲಿಕ್ ಪವರ್ ಸಂAಘಟನೆಯ ನ್ಯಾಯವಾದಿ ಬಿ.ಆರ್.ಪಾಟೀಲ್,

ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ, ಮಾಜಿ ಉಪಾಧ್ಯಕ್ಷ ನರಸಿಂಹಲು, ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ರಾಜ್ಯ ಮುಖಂಡ ಕೋಡಿ ನಾಗೇಶ, ನಾಗಮುನಿರೆಡ್ಡಿ, ರಘುರಾಮ ರೆಡ್ಡಿ ಸೇರಿ ಗ್ರಾಮಸ್ಥರಿದ್ದರು.

ಮಾಲವಿ ಡ್ಯಾಂ ಕ್ರಸ್ಟ್‌ ಗೇಟ್ ಗಳ ಅಳವಡಿಕೆಗೆ 4 ಕೋಟಿ ರೂ.ಮಂಜೂರಿಯಾದರೂ ಗುತ್ತಿಗೆದಾರ ನಾಪತ್ತೆ! ಕಾಮಗಾರಿ ವಿಳಂಭ ರೈತಸಂಘದ ಮುಖಂಡರಿಂದ ಪ್ರತಿಭಟನೆಯ ಎಚ್ಚರಿಕೆ.

­

 

*ಶಾಸಕರು,ಉಸ್ತುವಾರಿ ಸಚಿವರು ಹಾಗೂ ಸಂಸದರ ವಿರುದ್ದ ಆಕ್ರೋಶ.

*ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ನೇತೃತ್ವದಲ್ಲಿ ಏ 27ರಂದು ಉಗ್ರ ಪ್ರತಿಭಟನೆ.

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಮಳೆ ಆಶ್ರಿತ ಬಯಲು ಪ್ರದೇಶವಾಗಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಡ್ಯಾಂ ಕ್ರಸ್ಟ್‌ ಗೇಟ್ ಗಳ ಅಳವಡಿಕೆ,ದುರಸ್ತಿ ಕಾಮಗಾರಿಗೆ 4ಕೋಟಿ ರೂ.ಮಂಜೂರು ಆಗಿದ್ದರೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕ್ರಸ್ಟ್‌ ಗೇಟ್ ಅಳವಡಿಸುವ ಕಾಮಗಾರಿ ಅರ್ಧಂಬರ್ಧ ಮಾಡಿ ನಾಪತ್ತೆಯಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಎರಡು ಕ್ರಸ್ಟ್ ಗೇಟ್ ಗಳ ಜೋಡಣೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ನೀರು ಹೋಲಾಗುವ ಆತಂಕವಿದೆ ಇದಕ್ಕೆ ತಾಲೂಕಿನ ಶಾಸಕರು, ಉಸ್ತುವಾರಿ ಸಚಿವರು, ಸಂಸದರು ಹಾಗೂ

ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಕೂಡಲೇ ಕ್ರಸ್ಟ್ ಗೇಟ್ ಗಳ ಜೋಡಣೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮಳೆಗಾಲದ ವೇಳೆಗೆ ಡ್ಯಾಂ ನಲ್ಲಿ ಮಳೆ ನೀರು ನಿಲ್ಲುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವರು ಬುಧವಾರ ಮಾಲವಿ ಡ್ಯಾಂ ಸ್ಥಳಕ್ಕೆ ರೈತ ಸಂಘಟನೆಯ ನಿಯೋಗದೊಂದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಗರಿಬೊಮ್ಮನಹಳ್ಳಿ ತಾಲುಕಿನ ಜೀವನಾಡಿ ಹಾಗೂ ಪಂಪ್ ಸೆಟ್ ಗಳ ಅಂತರ ಜಲ ಹೆಚ್ಚಳಕ್ಕೆ ಕಾರಣವಾಗಿರುವ ಮಾಲವಿ ಜಲಾಶಯದ ೧೦ ಗೇಟ್‌ಗಳ ಪೈಕಿ ೮ ಕ್ರಸ್ಟ್‌ಗೇಟ್ ದುರಸ್ಥಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಎರಡ ಕ್ರಸ್ಟ್‌ ಗೇಟ್ ಅಳವಡಿಕೆ ಕಾರ್ಯ ಕಳೆದ ೨ ತಿಂಗಳಿಂದ ಸ್ಥಗಿತಗೊಂಡಿದೆ ,ಇದೇ ಏಪ್ರಿಲ್ ೨೬ರ ಒಳಗಾಗಿ ಕಾರ್ಯ ಪ್ರಾರಂಭವಾಗದಿದ್ದರೆ ಎ.೨೭ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶಾಸಕ ನೇಮಿರಾಜ್,ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್,ಸಂಸದ ಈ.ತುಕಾರಾಂ

ಹಾಗೂಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ವಿರುಧ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನೀರು ಸಂಗ್ರಹ ಮಾಡುವ ಡ್ಯಾಂ ಮತ್ತು ಬೃಹತ್ ಕೆರೆಗಳು ಇರಲಿಲ್ಲ,

ದಿವಂಗತ ಶಾಸಕರಾದ ಬಾಚಿಗೊಂಡನಹಳ್ಳಿಯ

ಚನ್ನಬಸವನಗೌಡ್ರು ಮಾಲವಿ ಡ್ಯಾಂ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಪ್ರಸ್ತುತದಲ್ಲಿ ಡ್ಯಾಂ ರಾಜ್ಯ ಸರಕಾತ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಕುಡಿಯುವ ನೀರಿಗಾಗಿ ಬಳಸುವಂತೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಮಾಲವಿ ಜಲಾಶಯಕ್ಕೆ 800 ಕೋಟಿ ರೂ.ಗಳನ್ನು ಖರ್ಚು ಮಾಡಿ ಮಾಲವಿ ಡ್ಯಾಂ ಭರ್ತಿ ಮಾಡುವ ಕೆಲಸವಾಗಿದ್ದು ಪ್ರಸ್ತುತ

ಕ್ರಸ್ಟ್‌ ಗೇಟ್ ದುರಸ್ಥಿ ಕಾಮಗಾರಿಯ ೨ ಗೇಟ್ ಅಳವಡಿಕೆ ವಿಳಂಬವಾಗಿದೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿ ಹಾಗೂ ಸಂಭಂಧಿಸಿದ ಇಲಾಖೆಯ ಅಧಿಕಾರಿಗಳು ಕಾರಣರಾಗಿದ್ದಾರೆ.

ಮಾಲವಿ ಡ್ಯಾಂ ಕೇವಲ 7.5 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗಷ್ಡೆ ಸಂಬಂಧಿಸಿದ್ದಲ್ಲ,

ಇಡೀ ಹಗರಿಬೊಮ್ಮನಹಳ್ಳಿ ಸಾರ್ವಜನಿಕರಿಗೆ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ.

ಇನ್ನೂ ಕೆಲವೇ ದಿನಗಳಲ್ಲಿ ಮುಂಗಾರು ಮಳೆಗಾಲ ಪ್ರಾರಂಬವಾಗುತ್ತದೆ, ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದರೆ ಡ್ಯಾಂನಲ್ಲಿ ಸಂಗ್ರಹವಾಗುತ್ತದೆ.

ಕೂಡಲೇ ಎರಡು ಕ್ರಸ್ಟ್‌ ಟ್ರಸ್ಟ್ ಗೇಟ್ಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಕಳೆದ ವರ್ಷ ನೀರು ಪೋಲದಂತೆ ಈ ಮಳೆಗಾಲದಲ್ಲೂ ಡ್ಯಾಂ ನೀರು ಪೋಲಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಸಾಹಿತಿ ಬಾಚಿಗೊಂಡನಹಳ್ಳಿ

ಹುರಕಡ್ಲಿ ಶಿವಕುಮಾರ್, ರಾಜ್ಯ ರೈತ ಸಂಘದ ತಂಬ್ರಹಳ್ಳಿ ರವಿಕುಮಾರ ಸೇರಿದಂತೆ ರೈತ ಮುಖಂಡರಿದ್ದರು.

ಗಂಗಾವತಿ: ಕೊನೆಗೂ ಖಾಯಂ ನೂತನ ತಹಸೀಲ್ದಾರರಾಗಿ , ಯು ವಸಂತಕುಮಾರಿ ಅವರನ್ನು ವರ್ಗಾಯಿಸಿದ ಕಂದಾಯ ಇಲಾಖೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಗಂಗಾವತಿಯ ನೂತನ ತಸೀಲ್ದಾರರಾಗಿ ಬೆಂಗಳೂರು ಉತ್ತರ ನಗರಪಾಲಿಕೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಯು ವಸಂತ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ
ನರಸಿಂಹಮೂರ್ತಿ ಜಿ.ಕೆ ಇವರು ಆದೇಶ ಹೊರಡಿಸಿದ್ದಾರೆ.
ಇದುವರೆಗೂ ಯು.ವಸಂತಕುಮಾರಿ, ತಹಶೀಲ್ದಾರ್ ಗ್ರೇಡ್-2, ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಆದೇಶದವರೆಗೆ ತಹಶೀಲ್ದಾರ್ ಗ್ರೇಡ್-1 ಗಂಗಾವತಿ ತಾಲ್ಲೂಕಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಯು ವರ್ಗಾಯಿಸಿದ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕಂದಾಯ ಇಲಾಖೆಗೆ ಮಾಹಿತಿ ಕಳುಹಿಸುವಂತೆ ಸೂಚಿಸಲಾಗಿದೆ.
ಗಂಗಾವತಿ ತಹಸೀಲ್ದಾರ್ ಆಗಿದ್ದ ಯು.ನಾಗರಾಜ ಇವರನ್ನು ಸರಕಾರ ವರ್ಗಾಯಿಸಿದ ನಂತರ ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ ಅವರಿಗೆ ಗಂಗಾವತಿ ತಹಸೀಲ್ದಾರ್ ಹುದ್ದೆಯನ್ನು ಪ್ರಭಾರವನ್ನು ವಹಿಸಲಾಗಿತ್ತು.

 

 

ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗ ಕೈಬಿಡುವಂತೆ ಪ್ರಧಾನಿ ಮತ್ತು ಸಿಎಂ ಗೆ ಸ್ಥಳೀಯರಿಂದ ಪತ್ರ ಚಳುವಳಿ.   

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗುಂದಿ ಕಿಷ್ಕಿಂಧಾ ಆನೆಗೊಂದಿ ಭಾಗವನ್ನು ಕೈ ಬಿಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಯ ಸಿದ್ದರಾಮಯ್ಯನವರಿಗೆ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರು ಮೇಲ್ ಮುಖಾಂತರ ಪತ್ರ ಬರೆದು ಮನವಿ ಮಾಡಿದ್ದಾರೆ.

35 ವರ್ಷಗಳ ಹಿಂದೆ ಯುನೋಸ್ಕೋ ಪ್ರದೇಶವನ್ನು ವಿಶ್ವ ಪರಂಪರ ಪಟ್ಟಿಗೆ ಸೇರಿಸಿದ ನಂತರ ಹಂಪಿ ಭಾಗದ 14 ಆನೆಗೊಂದಿ ಭಾಗದ 15 ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಮಹಾಯೋಜನೆ( ಮಾಸ್ಟರ್ ಪ್ಲಾನ್) ತಿದ್ದುಪಡಿ ಮಾಡುವ ಕುರಿತು ಸರ್ಕಾರ ಮತ್ತು ಸ್ಥಳೀಯ ರೊಂದಿಗೆ ಒಪ್ಪಂದವಾಗಿದ್ದು ಆದರೆ ಅಧಿಕಾರಿಗಳು ಏಕ ಪಕ್ಷಿಯವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಮತ್ತು ಮಾಸ್ಟರ್ ಪ್ಲಾನ್ ಗಳನ್ನು ತಮಗಿಷ್ಟ ಬಂದಂತೆ ಮಾಡಿಕೊಂಡು ಅವೈಜ್ಞಾನಿಕವಾಗಿ ಝೋನ್ ಗಳನ್ನು ಸೃಷ್ಟಿ ಮಾಡಿಕೊಂಡು ಆನೆಗೊಂದಿ ಭಾಗವನ್ನು ಅಭಿವೃದ್ಧಿಯಿಂದ ಹಿಮ್ಮುಖವಾಗುವಂತೆ ಮಾಡಿದ್ದಾರೆ. ಆದ್ದರಿಂದ ನೂರಾರು ವರ್ಷಗಳಿಂದ ವಾಸವಾಗಿರುವ ನಾವೆಲ್ಲ ಹಿರಿಯರು ನಿರ್ಮಿಸಿರುವ ಮನೆ,ಮಠಗಳನ್ನು ಪುನರ್ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕು. ಇದರಿಂದ ಈ ಭಾಗದ ಅಭಿವೃದ್ಧಿಯಾಗುತ್ತದೆ. ಕಳೆದ ಎರಡು ತಲೆ ಮಾರುಗಳಿಂದ ಇಲ್ಲಿ ಹೊಸ ಮನೆಗಳ ನಿರ್ಮಾಣ ಮತ್ತು ಬಿದ್ದಿರುವ ಹಳೆಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಆಗುತ್ತಿಲ್ಲ. ಪ್ರತಿಯೊಂದಕ್ಕೂ ಪ್ರಾಧಿಕಾರ ಕ್ಯಾತೆ ತೆಗಿಯುತ್ತಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜೊತೆಗೆ ಬದುಕುವ ಹಕ್ಕನ್ನು ಪ್ರಾಧಿಕಾರದ ಅಧಿಕಾರಿಗಳು ಕಸಿದುಕೊಂಡಿದ್ದು ಪರೋಕ್ಷವಾಗಿ ಊರುಗಳನ್ನು ಒಕ್ಕಲಿಸುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಹೊಸಪೇಟೆ ಕಡೆ ವಾಣಿಜ್ಯ ವ್ಯಾಪಾರ ಮಾಡುವವರ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೆಯುತ್ತಿವೆ ಎನ್ನುವ ಅನುಮಾನವನ್ನು, ಆದ್ದರಿಂದ ಶತಶತಮಾನಗಳಿಂದಲೂ ಆನೆಗೊಂದಿ ಭಾಗದಲ್ಲಿರುವ ಸ್ಮಾರಕಗಳನ್ನು ಸ್ಥಳೀಯರೇ ಸಂರಕ್ಷಣೆ ಮಾಡಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಸಹ ಸ್ಥಳೀಯರು ಹೊಂದಿದ್ದು ಸರ್ಕಾರ ಕೂಡಲೇ ಆನೆಗುಂದಿ ಭಾಗದ 15 ಗ್ರಾಮಗಳನ್ನು ಹಂಪಿ ಪ್ರಾಧಿಕಾರದಿಂದ ಕೈಬಿಡಬೇಕು.ಜೊತೆಗೆ ಆನೆಗೊಂದಿ ಮತ್ತು ವಿರುಪಾಪುರ ಕಡ್ಡಿಯನ್ನು 1988 ಕರ್ನಾಟಕ ರಾಜ್ಯ ಪುರಾತತ್ವ ಮತ್ತು ರಾಜ್ಯ ವಸ್ತು ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಾಡಿ ಕೋರ್ ಝೋನ್ ಎಂದು ಘೋಷಣೆ ಮಾಡಿದ್ದು ಈಗಾಗಲೇ ವಿರುಪಾಪುರ ಗಡ್ಡಿಯನ್ನು ಜನವಸತಿ ರಹಿತವನ್ನಾಗಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಆನೆಗೊಂದಿಯನ್ನು ಕೂಡ ಜನವಸತಿ ರಹಿತವನ್ನಾಗಿ ಪ್ರಾಧಿಕಾರದ ಅಧಿಕಾರಿಗಳು ಷಡ್ಯಂತರ ಮಾಡಿರುವ ಸಂಶಯವಿದ್ದು ಕೂಡಲೇ ಸರ್ಕಾರ ಸೂಕ್ತ ನಿರ್ಣಯ ತೆಗೆದುಕೊಂಡು ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವರ ಕಚೇರಿಯ ಮೇಲ್

ಗೆ ಪತ್ರವನ್ನು ಕಳಿಸುವ ಮೂಲಕ ಮನವಿ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರು ಕಡೆಬಾಗಿಲು ಗ್ರಾಮದ ಶ್ರೀರಂಗದೇವರಾಯಲು ಸರ್ಕಲ್ ನಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಾಣಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಜೊತೆಗೆ ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಹ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಕ್ತ ಗ್ರಾಮವನ್ನು ಮಾಡಬೇಕೆಂದು ಪ್ರತಿಭಟನೆ ನಡೆಸಿ ಮನೆ ಪತ್ರ ಸಲ್ಲಿಸಿದ್ದಾರೆ. ಇದೀಗ 15 ಗ್ರಾಮಗಳ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಕ್ತ ಆನಿಗೊಂದಿ ಗ್ರಾಮ ಎನ್ನುವ ಅಭಿಯಾನದ ಮೂಲಕ ಹೋರಾಟ ನಡೆಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಗಾಯಕಿ ಹಾಗೂ ಶಾಸ್ತ್ರೀಯ ಸಂಗೀತದ ಧ್ರುವತಾರೆ  ಆಶಾ ಭೋಸ್ಲೆ ನಿಧನ.

 

ಕಿಷ್ಕಿಂಧವಾಣಿ ವಿಶೇಷ

ಮುಂಬೈ:

ಭಾರತೀಯ ಚಿತ್ರರಂಗದ ಮತ್ತು ಶಾಸ್ತ್ರೀಯ ಸಂಗೀತದ ದ್ರುವ ತಾರೆ ಮತ್ತು ಪಾಪ್ ಆಧುನಿಕ ಶೈಲಿಯ ಕ್ಯಾಬರೆ ಹಾಡುಗಳ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ನಿಧನರಾಗಿದ್ದಾರೆ.

ಹೃದಯಾಘಾತದ ಹಿನ್ನೆಲೆ ಶನಿವಾರ ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.ಚಿಕಿತ್ಸೆ ಫಲಕಾರಿಯಾಗದೇ ಬೋಸ್ಲೇ ಜೀ ಅವರು ನಿಧನರಾಗಿದ್ದಾರೆ.

ಪರಿಚಯ:

ಆಶಾ ಭೋಸ್ಲೆ (ಸೆಪ್ಟೆಂಬರ್ ೮, ೧೯೩೩ರಂದು ಜನಿಸಿದರು) ಒಬ್ಬ ಭಾರತೀಯ ಗಾಯಕಿ. ಅವರು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅತ್ಯುನ್ನತ ಮನ್ನಣೆಯನ್ನು ಪಡೆದ ಹಿಂದಿ,ತೆಲುಗು ಕನ್ನಡ ಸಿನೆಮಾಗಳ ಹಿನ್ನೆಲೆ ಗಾಯಕರಲ್ಲಿ ಒಬ್ಬರು, ಅಲ್ಲದೆ ಅವರು ಅತ್ಯಂತ ವ್ಯಾಪಕ ಸಂಗೀತ ಸಂಗ್ರಹವನ್ನು ಹೊಂದಿದ್ದಾರೆ.

ಅವರ ವೃತ್ತಿಜೀವನ ೧೯೪೩ರಲ್ಲಿ ಆರಂಭವಾಯಿತು ಮತ್ತು ಅದು ಆರು ದಶಕಗಳವರೆಗೂ ಮುಂದುವರೆಯಿತು. ಅವರು ಸುಮಾರು ೧೦೦೦ ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ, ಮತ್ತ್ತು ಇತರ ಚಟುವಟಿಕೆಗಳಾಗಿ ಅವರು ಅನೇಕ ಖಾಸಗಿ ಆಲ್ಬಂಗಳ ಧ್ವನಿಮುದ್ರಣವನ್ನೂ ಮಾಡಿದ್ದಾರೆ.ಇತ್ತೀಚೆಗೆ ಅವರ ಮೊಮ್ಮಗಳ ಆಲ್ಬಂ ಗೂ ಹಾಡಿದ್ದರು. ಭಾರತ ಮತ್ತು ಹೊರದೇಶಗಳಲ್ಲಿ ಬಹುಸಂಖ್ಯೆಯ ಸಂಗೀತ ರಸಮಂಜರಿ ಗಾನಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಭೋಂಸ್ಲೆ ಅವರು ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌‌ರ ಕಿರಿಯ ಸಹೋದರಿ. ಅವರ ಧ್ವನಿಗಾಗಿ ಪ್ರಸಿದ್ಧಿಯಾಗಿದ್ದರು ಮತ್ತು ಆಗಾಗ್ಗೆ ಅವರ ಸರ್ವತೋಮುಖ ಶಕ್ತಿಗಾಗಿ ಮನ್ನಣೆಗೊಳಗಾಗುತ್ತಿದ್ದರು,ಭೋಂಸ್ಲೆರ ಗಾಯನಗಳಲ್ಲಿ ಚಲನಚಿತ್ರ ಸಂಗೀತ, ಪಾಪ್, ಗಝಲ್‌ಗಳು, ಭಜನಗಳು, ಸಾಂಪ್ರದಾಯಕ ಭಾರತೀಯ ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಕವ್ವಾಲಿಗಳು, ರಬೀಂದ್ರ ಸಂಗೀತಗಳು ಮತ್ತು ನಝ್ರುಲ್ ಗೀತೆಗಳು ಸೇರಿವೆ. ಅಸ್ಸಾಮೀ, ಹಿಂದಿ, ಉರ್ದು, ತೆಲುಗು, ಕನ್ನಡ, ಮರಾಠಿ, ಬೆಂಗಾಲಿ, ಗುಜರಾತಿ, ಪಂಜಾಬಿ, ತಮಿಳು, ಇಂಗ್ಲಿಷ್, ರಷ್ಯನ್, ಛೆಕ್, ನೇಪಾಳಿ, ಮಲೈ ಮತ್ತು ಮಲಯಾಳಂ ಸೇರಿ ಅವರು ಸುಮಾರು ೧೮ ಭಾಷೆಗಳಲ್ಲಿ ಹಾಡಿದ್ದಾರೆ. ೨೦೦೬ರಲ್ಲಿ, ಆಶಾ ಭೋಂಸ್ಲೆ ತಾವು ಸುಮಾರು ೧೨,೦೦೦ ಹಾಡುಗಳನ್ನು ಹಾಡಿದ್ದಾಗಿ ಹೇಳಿಕೆಯನ್ನು ನೀಡಿದ್ದರು,ಅನೇಕ ಇತರ ಮೂಲಗಳು ಸಹ ಇದೇ ಸಂಖ್ಯೆಯನ್ನೇ ಪುನರಾವರ್ತಿಸಿದವು. ಪ್ರಪಂಚದ ಉನ್ನತ ದಾಖಲೆಗಳನ್ನು ಪ್ರಮಾಣಿಸುವ, ಅಂತರರಾಷ್ಟ್ರೀಯ ಸಂಸ್ಥೆಯಾದ ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿಯು, ಸೆಪ್ಟೆಂಬರ್ ೨೦೦೯ರಲ್ಲಿ ಭೋಂಸ್ಲೆಯವರನ್ನು ಪ್ರಪಂಚದಲ್ಲೇ “ಅತ್ಯಂತ ಹೆಚ್ಚಿನ ಹಾಡುಗಳನ್ನು ರೆಕಾರ್ಡಿಂಗ್ ಮಾಡಿದ ಕಲಾವಿದೆ” ಎಂದು ಗುರುತಿಸಿದೆ..

ಆಶಾ ಭೋಂಸ್ಲೆಯವರು ಬಾಂಬೆ ಪ್ರಾಂತ್ಯದ (ಈಗಿನ ಮಹಾರಾಷ್ಟ್ರದಲ್ಲಿದೆ), ಸಾಂಗ್ಲಿಯಲ್ಲಿನ ಗೋರ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಖ್ಯಾತ ರಂಗಭೂಮಿ ಕಲಾವಿದ ಸಂಗೀತ ಗಾಯಕ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಇವರ ತಂದೆಯಾಗಿದ್ದು ಸಂಗೀತ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯವರು ರಂಗಭೂಮಿಯ ಕಲಾವಿದರು ಮತ್ತು ಶಾಸ್ತ್ರೀಯ ಗಾಯಕರಾಗಿದ್ದರು. ಅವರು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆಯವರು ಮರಣ ಹೊಂದಿದರು. ಅವರ ಕುಟುಂಬವು ಪೂನಾ ದಿಂದ ಕೊಲ್ಹಾಪೂರ್‌ಗೆ ಮತ್ತು ಅಲ್ಲಿಂದ ಮುಂಬಯಿಗೆ ತೆರಳಿತು. ಅವರು ಮತ್ತು ಅವರ ಸಹೋದರಿ ಲತಾ ಮಂಗೇಶ್ಕರ್ ತಮ್ಮ ಕುಟುಂಬದ ನೆರವಿಗಾಗಿ ಹಾಡುವುದನ್ನು ಮತ್ತು ಚಲನಚಿತ್ರಗಳಲ್ಲಿ ನಟಿಸುವುದನ್ನು ಪ್ರಾರಂಭಿಸಿದ್ದರು. ಅವರು ಮಝಾ ಬಲ್ (೧೯೪೩) ಎಂಬ ಮರಾಠಿ ಚಿತ್ರಕ್ಕಾಗಿ ತಮ್ಮ ಮೊದಲ ಚಲನಚಿತ್ರ ಗೀತೆ ಚಲಾ ಚಲಾ ನವ್ ಬಲಾ ವನ್ನು ಹಾಡಿದರು. ಈ ಚಿತ್ರಕ್ಕಾಗಿ ಸಂಗೀತ ರಚನೆಯನ್ನು ದತ್ತ ದವ್ಜೇಕರ್‌ರವರು ಮಾಡಿದ್ದರು. ಹಂಸ್ರಾಜ್ ಬೆಲ್ಹ್‌ರ ಚುನಾರಿಯಾ (೧೯೪೮) ಚಿತ್ರಕ್ಕಾಗಿ ಸಾವನ್ ಆಯಾ ಗೀತೆಯನ್ನು ಹಾಡುವುದರ ಮೂಲಕ ಅವರು ಹಿಂದಿ ಚಲನಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದ್ದರು.

ಅವರ ಮೊದಲ ಹಿಂದಿ ಸೋಲೋ ಹಾಡನ್ನು ರಾತ್ ಕಿ ರಾಣಿ (೧೯೪೯) ಚಿತ್ರಕ್ಕಾಗಿ ಹಾಡಿದರು. ಗಣಪತ್‌ರಾವ್ ಭೋಂಸ್ಲೆ ಜೊತೆ ಪ್ರೇಮ ವಿವಾಹವಾಗಿದ್ದು ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲ. ಗಣಪತ್‌ರಾವ್, ಸಹೋದರಿ ಲತಾ ಮಂಗೇಸ್ಕರ್ ಅವರ ಕಾರ್ಯದರ್ಶಿಯಾಗಿದ್ದರು. ಮದುವೆಯು ವಿಫಲವಾಯಿತು. ಅವರ ಪತಿ ಮತ್ತು ಅತ್ತೆ-ಮಾವಂದಿರಿಂದ ಅವರನ್ನು ಕೀಳಾಗಿ ಕಾಣಲಾಗಿತ್ತು. ಮದುವೆಯಾದ ಕೆಲವು ವರ್ಷಗಳ ನಂತರ, ಭೋಂಸ್ಲೆರವರು (ಸುಮಾರು ೧೯೬೦ರಲ್ಲಿ) ಸಂಶಯ ಸ್ವಭಾವದ ಗಣಪತ್‌ರಾವ್‌ರವರಿಂದ ದೂರವಾದರು. ಮತ್ತು ಅವರು ತಮ್ಮ ಎರಡು ಮಕ್ಕಳೊಂದಿಗೆ ಹಾಗು ಮೂರನೆಯ ಮಗು, ಆನಂದ್‌‌ನನ್ನು ಹೊಟ್ಟೆಯಲ್ಲಿ ಹೊತ್ತು ತವರುಮನೆಗೆ ಹೋದರು. ಅವರು ಹಣ ಸಂಪಾಧನೆ ಮಾಡಲು ಚಲನಚಿತ್ರಗಳಲ್ಲಿ ಹಾಡುವುದನ್ನು ಮುಂದುವರೆಸಿದರು.

ಆ ಸಮಯದಲ್ಲಿ, ಗೀತಾ ದತ್, ಶಂಷಾದ್ ಬೇಗಮ್ ಮತ್ತು ಲತಾ ಮಂಗೇಶ್ಕರ್ (ಅವರ ಸಹೋದರಿ)ರಂತಹ ಪ್ರಖ್ಯಾತ ಹಿನ್ನೆಲೆ ಗಾಯಕಿಯರು “ನಾಯಕಿನಟಿ” ಪಾತ್ರಗಳಿಗೆ ಮತ್ತು ದೊಡ್ಡ ಮಟ್ಟದ ಚಿತ್ರಗಳಿಗೆ ಗುತ್ತಿಗೆಯನ್ನು ಮಾಡಿಕೊಂಡು ಹಾಡುತ್ತಿದ್ದರು, ಆಗ ಅವರು ತಗೆದುಕೊಳ್ಳದೆ ಬಿಟ್ಟ ಚಿತ್ರಗಳಿಗೆ ಹಾಡುವ ಅವಕಾಶವನ್ನು ಆಶಾ ಭೋಂಸ್ಲೆ ಪಡೆಯುತ್ತಿದ್ದರು. ಅವರು ಬ್ಯಾಡ್ ಗರ್ಲ್ಸ್ ಮತ್ತು ವ್ಯಾಂಪ್ಸ್‌‍ಗಳಿಗೆ ಹಾಡುತ್ತಿದ್ದರು, ಅಥವಾ ಎರಡನೇ ದರ್ಜೆಯ ಚಲನಚಿತ್ರಗಳಲ್ಲಿ ಹಾಡುತ್ತಿದ್ದರು. ೧೯೫೦ರ ದಶಕದಲ್ಲಿ, ಅವರು ಬಾಲಿವುಡ್‌ನಲ್ಲಿನ ಇತರ ಎಲ್ಲಾ ಹಿನ್ನೆಲೆ ಗಾಯಕರಿಗಿಂತಲೂ ಹೆಚ್ಚಿನ ಹಾಡುಗಳನ್ನು ಹಾಡಿದ್ದರು. ಇವುಗಳಲ್ಲಿ ಬಹುತೇಕ ಕಡಿಮೆ ಬಂಡವಾಳದ ಬಿ ಅಥವಾ ಸಿ-ದರ್ಜೆಯ ಚಿತ್ರಗಳೇ ಒಳಗೊಂಡಿವೆ. ಅವರ ಆರಂಭಿಕ ಹಾಡುಗಳಿಗೆ ಸಂಗೀತ ರಚನೆಯನ್ನು ಎ. ಆರ್. ಖುರೇಶಿ, ಸಜ್ಜದ್ ಹುಸೇನ್ ಮತ್ತು ಗುಲಾಮ್ ಮಹಮದ್‌ರವರಿಂದ ಮಾಡಲಾಗಿತ್ತು, ಇವುಗಳಲ್ಲಿ ಬಹುತೇಕವು ಉತ್ತಮ ಸಾಧನೆಯನ್ನು ಮಾಡುವಲ್ಲಿ ವಿಫಲವಾದವು. ಸಜದ್ ಹುಸ್ಸೇನ್ ಸಂಗೀತ ರಚನೆಯನ್ನು ಮಾಡಿದ, ದಿಲೀಪ್ ಕುಮಾರ್-ಅಭಿನಯಿಸಿದ ಸಂಗದಿಲ್ (೧೯೫೨) ಚಿತ್ರದಲ್ಲಿ ಹಾಡುವದರೊಂದಿಗೆ ಅವರಿಗೆ ಸಮರ್ಥನೀಯ ಮನ್ನಣೆಯು ದೊರೆಯಿತು. ಪರಿಣಾಮವಾಗಿ, ಚಿತ್ರ ನಿರ್ದೇಶಕ ಬಿಮಲ್ ರಾಯ್ ಭೋಂಸ್ಲೆರವರಿಗೆ ಪರಿಣೀತ (೧೯೫೩) ಚಿತ್ರದಲ್ಲಿ ಹಾಡುವ ಅವಕಾಶವನ್ನು ನೀಡಿದ್ದರು. ಅವರು ಬೂಟ್ ಪಾಲಿಷ್ (೧೯೫೪) ಚಿತ್ರಕ್ಕಾಗಿ ಮೊಹಮದ್ ರಫಿರ ಜೊತೆಯಲ್ಲಿ ನನ್ನೆ ಮುನ್ನೆ ಬಚ್ಚೆ ಗೀತೆಯನ್ನು ಹಾಡುವ ಒಪ್ಪಂದವನ್ನು ರಾಜ್ ಕಪೂರ್ ಮಾಡಿಕೊಂಡಿದ್ದರು, ಇದು ಅತ್ಯಂತ ಜನಾಧರಣೆಯನ್ನು ಗಳಿಸಿತ್ತು. ಒ. ಪಿ. ನಾಯರ್ ಸಿ.ಐ.ಡಿ. (೧೯೫೬) ಚಿತ್ರದಲ್ಲಿ ಹಾಡುವ ಅವಕಾಶ ನೀಡುವುದರ ಮೂಲಕ ಆಶಾ ಭೋಂಸ್ಲೆಯ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದ್ದರು. ಅವರು ತಮ್ಮ ಮೊದಲ ಸಾಧನೆಯನ್ನು ಗಳಿಸಿದ್ದು ಬಿ. ಆರ್. ಚೋಪ್ರರವರ, ತಾವೇ ಸಂಗೀತ ರಚನೆಯನ್ನು ಮಾಡಿದ ನಯಾ ದೌರ್ (೧೯೫೭) ಚಿತ್ರದಲ್ಲಿ. ರಫಿ ರವರ ಜೊತೆಗಿನ, ಸಹಿರ್ ಲುಧಿಯಾನ್ವಿರವರಿಂದ ಬರೆಯಲಾದ, ಮಾಂಗ್ ಕೆ ಸಾತ್ ತುಮ್ಹಾರ, ಸಾತಿ ಹಾತ್ ಬಡಾನಾ ಮತ್ತು ಉಡೆನ್ ಜಬ್ ಜಬ್ ಝುಲ್ಫೇನ್ ತೆರಿ ಗಳಂತಹ ಜೋಡಿ ಹಾಡುಗಳು ಅವರಿಗೆ ಮನ್ನಣೆಯನ್ನು ಗಳಿಸಿ ಕೊಟ್ಟವು. ಅವರು ಖ್ಯಾತ ನಟರಿಗೆ ಗೀತೆಗಳನ್ನು ಹಾಡುವ ಅವಕಾಶವನ್ನು ಪಡೆದದ್ದು ಇದೇ ಮೊದಲ ಬಾರಿಯಾಗಿತ್ತು. ನಯಾ ದೌರ್ ಚಿತ್ರದ ನಿರ್ಮಾಪಕ ಬಿ ಆರ್ ಚೋಪ್ರ, ಅವರ ಪ್ರತಿಭೆಯನ್ನು ಗುರುತಿಸಿ ತಮ್ಮ ಮುಂದಿನ ಅನೇಕ ಚಿತ್ರಗಳಿಗೆ ಹಾಡುವ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿದ್ದರು. ಇವುಗಳಲ್ಲಿ ವಕ್ತ್ ಮತ್ತು ಗುಮ್ರಾಹ್, ಹಮ್ರಾಝ್, ಆದ್ಮಿ ಔರ್ ಇನ್ಸಾನ್, ಡೂಂಡ್ ಮುಂತಾದವುಗಳು ಸೇರಿವೆ. ಭೋಂಸ್ಲೆ ಜೊತೆಗಿನ ನಯ್ಯರ್‌ರ ಸಹಭಾಗಿತ್ವವು ಸಹ ಅನೇಕ ಜನಪ್ರಿಯ ಹಾಡುಗಳನ್ನು ನಿರ್ಮಿಸಿದೆ. ಕ್ರಮೇಣವಾಗಿ, ಅವರು ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡರು ಮತ್ತು ಸಚಿನ್ ದೇವ್ ಬರ್ಮನ್ ಮತ್ತು ರವಿ ಯಂತಹ ಸ್ವರ ಸಂಯೋಜಕರ ಪ್ರೋತ್ಸಾಹವನ್ನು ಸಹ ಗಳಿಸಿದ್ದರು. ಭೋಂಸ್ಲೆ ಮತ್ತು ನಯ್ಯರ್ ೧೯೭೦ರ ದಶಕದಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ದೂರವಾದರು. ೧೯೬೬ರಲ್ಲಿ, ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್‌ರ ಮೊದಲ ಸಾಧನೆಯನ್ನು ಕಂಡ ಚಿತ್ರ, ತೀಸ್ರಿ ಮಂಝಿಲ್‌ ನಲ್ಲಿನ ಆಶಾರ ಸಾಧನೆಯು ಜನಪ್ರಿಯತೆಯನ್ನು ಪಡೆಯಿತು. ಆಶಾ ಮೊದಲ ಭಾರಿಗೆ ಆಜಾ ಆಜಾ ಹಾಡಿನ ರಾಗವನ್ನು ಕೇಳಿದಾಗ, ಪಾಶ್ಚಿಮಾತ್ಯ ನೃತ್ಯದ ಎಣಿಕೆಯನ್ನು ಹಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಭಾವಿಸಿ ಅವರು ಅದನ್ನು ಬಿಟ್ಟುಬಿಟ್ಟಿದ್ದರು. ಆರ್. ಡಿ. ಬರ್ಮನ್ ಸಂಗೀತವನ್ನು ಬದಲಿಸುವ ಪ್ರಸ್ತಾಪನೆಯನ್ನು ಮಾಡಿದ್ದರು. ಅವರಿಗೆ ಸ್ವಲ್ಪ ಮಟ್ಟಿಗೆ ಮನಸ್ಸಿಗೆ ನೋವಾಗಿತ್ತು, ಮತ್ತು ಅವರು ಆ ಹಾಡನ್ನು ಹಾಡುವುದು ಒಂದು ಸವಾಲಾಗಿ ಪರಿಗಣಿಸಿ ಕೈಗೆತ್ತಿಕೊಂಡರು. ೧೦ ದಿನಗಳ ಸತತ ಅಭ್ಯಾಸದ ನಂತರ, ಅವರು ಹಾಡನ್ನು ಅಂತಿಮವಾಗಿ ಹಾಡಿದಾಗ, ಅದರಿಂದ ಪ್ರಭಾವಗೊಂಡ ಆರ್ .ಡಿ.ಬರ್ಮನ್ ಅವರು ೧೦೦-ರೂಪಾಯಿಗಳ ನೋಟನ್ನು ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಆಜಾ ಆಜಾ ಮತ್ತು ಚಲನಚಿತ್ರದ ಇತರ ಹಾಡುಗಳು, ಓ ಹಸೀನಾ ಝುಲ್ಫೋನ್‌ವಾಲಿ ಮತ್ತು ಓ ಮೇರ ಸೋನಾ ರೆ (ಎಲ್ಲಾ ಮೂರು ಬಾಲಿವುಡ್‌ನ ಮತ್ತೊಂದು ಪ್ರಸಿದ್ಧ ಗಾಯಕ, ರಫಿ ಅವರೊಂದಿಗಿನ ಜೋಡಿ ಹಾಡುಗಳು), ಆ ದಿನದ ಅಬ್ಬರದ ಹಾಡಾಯಿತು. ಚಲನಚಿತ್ರ ನಟ, ಶಮ್ಮಿ ಕಪೂರ್, ಒಂದು ಸಲ ಹೇಳಿದ್ದರು – “ಒಂದು ವೇಳೆ ನನಗಾಗಿ ಹಾಡಲು ಮಹಮದ್ ರಫಿ ಇಲ್ಲದಿದ್ದರೆ, ಈ ಕೆಲಸ ಮಾಡಲು ಆಶಾ ಭೋಂಸ್ಲೆರನ್ನು ಆರಿಸಿಕೊಳ್ಳುತ್ತಿದ್ದೆ”. ಆರ್. ಡಿ. ಬರ್ಮನ್ ಸಹಭಾಗಿತ್ವದೊಂದಿಗಿನ ಆಶಾರ ಸಹಭಾಗಿತ್ವವು ೧೯೭೦ರ ದಶಕದಲ್ಲಿ ಅನೇಕ ಜನಪ್ರಿಯ ಹಾಡುಗಳ ನಿರ್ಮಾಣವನ್ನು ಮಾಡಿತು ಮತ್ತು ಇದು ಮುಂದೆ ಮದುವೆಗೆ ಕಾರಣವಾಯಿತು. ೧೯೬೦ರ ಮತ್ತು ೧೯೭೦ರ ದಶಕಗಳಲ್ಲಿ, ಇವರು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನರ್ತಕಿ, ಹೆಲೆನ್ ಹಾಡುಗಳಿಗೆ ಧ್ವನಿಯಾದರು. ಅವರ ಧ್ವನಿ ಮುದ್ರಣ ಕಾರ್ಯಕ್ರಮಗಳಿಗೆ ಹೆಲೆನ್ ಹಾಜರಾದರೆ ಆದ್ದರಿಂದ ಅವರು ಹಾಡನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ನೃತ್ಯದ ಹಂತಗಳನ್ನು ಯೋಜಿಸಬಹುದು ಎಂದು ಹೇಳಲಾಗಿತ್ತು. ಆಶಾ ಭೋಂಸ್ಲೆ-ಹೆಲೆನ್‌ರ ಕೆಲವು ಪ್ರಸಿದ್ಧ ಹಾಡುಗಳು ಪಿಯಾ ತೂ ಅಬ್ ತೊ ಆಜಾ (ಕಾರವಾನ್ ), ಓ ಹಸೀನಾ ಝುಲ್ಫೋನ್ ವಾಲಿ (ತೀಸ್ರಿ ಮಂಝಿಲ್ ), ಮತ್ತು ಏ ಮೇರಾ ದಿಲ್ (ಡಾನ್ ). ೧೯೮೦ರ ದಶಕದ ವೇಳೆಗೆ, ಆಶಾ ಭೋಂಸ್ಲೆ “ಕ್ಯಾಬರೆ ಗಾಯಕಿ” ಮತ್ತು “ಪಾಪ್ ಕ್ರೂನರ್” ಎಂದು ಸ್ಥಿರವಾದ ಗುರುತ್ವವನ್ನು ಪಡೆದರು. ರೇಖಾ-ನಟಿಸಿದ ಉಮ್ರಾವೊ ಜಾನ್ ಚಿತ್ರದಲ್ಲಿ, ದಿಲ್ ಚೀಝ್ ಕ್ಯಾ ಹೈ, ಇನ್ ಆಂಕೋ ಕಿ ಮಸ್ತಿ ಕೆ, ಎ ಕ್ಯಾ ಜಗಾ ಹೈ ದೋಸ್ತೊ ಮತ್ತು ಜುಸ್ತ್‌ಜು ಜಿಸ್ಕಿ ಥಿ ಗಳಂತಹ ಘಝಲ್‌‌ಗಳನ್ನು ಹಾಡುವುದರ ಮೂಲಕ ಅವರು ತನ್ನ ಬಹುಮುಖ ಸಾಮರ್ಥ್ಯವನ್ನು ದೃಢಪಡಿಸಿದ್ದಾರೆ. ಸಂಗೀತ ನಿರ್ದೇಶಕ ಖಯ್ಯಾಮ್, ಆಶಾರ ಹಾಡುವ ಫಿಚ್‌ನ್ನು ಅರ್ಧ ನೋಟ್ (ಸ್ವರಚಿಹ್ನೆ)ನಷ್ಟು ಕಡಿಮೆಮಾಡಿದ್ದಾರೆ. ಆಶಾ ತಾನು ಅಷ್ಟು ವಿಭಿನ್ನವಾಗಿ ಹಾಡಬೆಲ್ಲೆನಾ ಎಂದು ತಾನೇ ಆಶ್ಚರ್ಯಚಕಿತಳಾದಳು. ಘಝಲ್‌‌‌ಗಳು ಅವಳಿಗೆ ತನ್ನ ವೃತ್ತಿ ಜೀವನದ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿವೆ. ಕೆಲವು ವರ್ಷಗಳ ನಂತರ, ಇಜಾಝತ್ (೧೯೮೭) ಚಿತ್ರದ ಮೇರಾ ಕುಚ್ ಸಮಾನ್ ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ೧೯೯೫ರಲ್ಲಿ, ೬೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ರಂಗೀಲಾ ಚಿತ್ರದಲ್ಲಿ ಕಿರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದರು. ಅವಳಿಂದ ಹಾಡಲ್ಪಟ್ಟ ತನ್ಹಾ ತನ್ಹಾ ಮತ್ತು ರಂಗೀಲಾ ರೇ ಗಳಂತಹ ಧ್ವನಿವಾಹಿನಿ ವಿಶೇಷಗುಣಲಕ್ಷಣ ಹಾಡುಗಳಿಗೆ, ಸಂಗೀತ ರಚನೆಯನ್ನು ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್‌ರವರಿಂದ ನೀಡಲಾಗಿದ್ದು, ಅವರು ಅವಳೊಂದಿಗೆ ಇನ್ನೂ ಅನೇಕ ಹಾಡುಗಳ ರಚನೆಯನ್ನು ಮಾಡಿದ್ದಾರೆ. ತಡವಾಗಿ ೨೦೦೫ರಲ್ಲಿ, ೭೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ತಮಿಳು ಚಿತ್ರ ಚಂದ್ರಮುಖಿ ಗಾಗಿ ಹಾಡಿದ ಹಾಡುಗಳು ಮತ್ತು ಸಲ್ಮಾನ್ ಖಾನ್-ಅಭಿನಯಿಸಿದ ಲಕ್ಕಿ ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟವನ್ನು ಕಂಡ ದ್ವನಿಮುದ್ರಣಗಳಾಗಿದ್ದವು. ಭೋಂಸ್ಲೆರವರಿಂದ ಹಾಡಾಲ್ಪಟ್ಟ ಇತರ ಕೆಲವು ತಮಿಳು ಹಾಡುಗಳೆಂದರೆ ಓಹ್! ಬಟರ್‌ಪ್ಲೈ, ಸೆಪ್ಟೆಂಬರ್ ಮಾಧಮ್ ಮತ್ತು ವೆನ್ನಿಲಾ ವೆನ್ನಿಲಾ. ಅಕ್ಟೋಬರ್ ೨೦೦೪ರಲ್ಲಿ, ೧೯೬೬-೨೦೦೩ರಲ್ಲಿ ಬಿಡುಗಡೆಯಾದ ಆಲ್ಬಂಗಳಿಗೆ ಮತ್ತು ಬಾಲಿವುಡ್ ಚಿತ್ರಗಳಿಗೆ ಭೋಂಸ್ಲೆರವರಿಂದ ಹಾಡಲ್ಪಟ್ಟ ಹಾಡುಗಳ ಸಂಕಲನ ಆಲ್ಬಂ ದಿ ವೆರೀ ಬೆಸ್ಟ್ ಆಫ್ ಆಶಾ ಭೋಂಸ್ಲೆ, ದಿ ಕ್ವೀನ್ ಆಫ್ ಬಾಲಿವುಡ್‌ ನ ದ್ವನಿಮುದ್ರಣವನ್ನು ಮಾಡಲಾಯಿತು.

ಸಂತಾಪ: ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗಂಗಾವತಿಯ ಸಂಗೀತ ಸ್ವರಾಂಜಲಿ ಕಲಾತಂಡ ಹಾಗೂ ನಗರದ ಎಲ್ಲಾ ಕರೋಕೆ ಸ್ಟುಡಿಯೋದ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.

ಹಂಪಿ, ಅಂಜನಾದ್ರಿ ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿಜಿಪಿಗೆ ಪತ್ರ.

*ವಿದೇಶಿ ಪ್ರವಾಸಿಗರ ಮೇಲೆ ದೌರ್ಜನ್ಯ, ಹಣ ವಸೂಲಿ‌ ದಂಧೆ ನಿಯಂತ್ರಿಸಲು ಆಗ್ರಹ.

ಕಿಷ್ಕಿಂಧವಾಣಿ

ಬೆಂಗಳೂರು:ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗೆ ಪ್ರವಾಸಕ್ಕೆ ಬರುವ ವಿದೇಶಿಯರಿಗೆ ದೌರ್ಜನ್ಯ, ಕಿರುಕುಳ, ಹಲ್ಲೆ, ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿರುವ ಕಿಡಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಿದೇಶಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿರವರಿಗೆ ಪತ್ರ ಬರೆದಿದ್ದಾರೆ

ರಾಜ್ಯದ ವಿಶ್ವವಿಖ್ಯಾತ ಐತಿಹಾಸಿಕ ಹಂಪಿಯು ಭಾರತದ ಅತ್ಯಂತ ಪ್ರಸಿದ್ದ ಪುರಾತತ್ವ ಕೆಂದ್ರಗಳಲ್ಲಿ ಒಂದಾಗಿದ್ದು ಪ್ರತಿ ವರ್ಷ ದೇಶ ವಿದೇಶದಿಂದ ಲಕ್ಷಾಂತರ ಜನರು ಪ್ರವಾಸ ಕೈಗೊಳ್ಳುತ್ತಿದ್ದು ನಮ್ಮ ರಾಜ್ಯದ ಸಂಸ್ಕೃತಿ, ಸಂಪ್ರದಾಯ, ಇತಿಹಾಸ ಅಧ್ಯಯನ ಸೇರಿದಂತೆ ನೂತನವಾಗಿ ವಿವಾಹವಾದ ವಿದೇತಿ ಜೋಡಿಗಳು ಹಂಪಿ ಮತ್ತು ಕಿಷ್ಕಿಂಧಾ

ಅಂಜನಾದ್ರಿಯ ಪ್ರವಾಸಕ್ಕೆ ವಿದೇಶಿಗರು ಆಗಮಿಸುತ್ತಿದ್ದು ವಿಜಯನಗರ ಜಿಲ್ಲೆಯ ಹಂಪಿ, ಕಮಲಾಪೂರ, ಹೊಸಪೇಟೆಯ ವಿವಿಧ ಲಾಡ್ಜ್ ಸೇರಿದಂತೆ ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯ ದಂಡೆಯ ವಿರುಪಾಪುರ ಗಡ್ಡಿ,ಸಾಣಾಪುರ, ಬಸಾಪೂರ,ತಿರುಮಲಾಪೂರ,ಜಂಗ್ಲಿ ರೆಸಾರ್ಟ್‌ಗಳಲ್ಲಿ ಹಾಗೂ ಅಂಜನಾದ್ರಿ ಬೆಟ್ಟದ ಆಸುಪಾಸಿನ ಸಣಾಪೂರ ಕೆರೆ ವ್ಯಾಪ್ತಿಯ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ತಂಗುತ್ತಿದ್ದು ಕೆಲವು ಪುಂಡರು ದುರುದ್ದೇಶದಿಂದ ವಿದೇಶಿಗರನ್ನೇ ಗುರಿಯಾಗಿಸಿಕೊಂಡು ಹಲ್ಲೆ, ಬೆದರಿಕೆ, ಅವಾಚ್ಯ ಶಬ್ದಗಳ ಬಳಸಿ ಕಿರುಕುಳ, ಹಣವಸೂಲಿ ಮಾಡುವ ಪ್ರವೃತ್ತಿಯಲ್ಲಿ ತೊಡಗಿರುವುದು ಕಂಡು ಬಂದಿರುತ್ತದೆ. ಕಳೆದ ವರ್ಷ ಮಾರ್ಚ್-06-2025 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಣಾಪೂರ ಕೆರೆ ಬಳಿ ವಾಯುವಿಹಾರದಲ್ಲಿದ್ದ ವಿದೇಶಿ ಮತ್ತು ಸ್ವದೇಶಿಗರಲ್ಲಿ ಹಣಕ್ಕೆ ಬೇಡಿಕೆಯಿಟ್ಟು ನೀಡಲು ಒಪ್ಪದಿದ್ದಾಗ ಇಸ್ರೇಲ್ ಮತ್ತು ಸ್ವದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಇನ್ನುಳಿದವರನ್ನು ತುಂಬಿದ ಕಾಲುವೆಗೆ ತಳ್ಳಿ ಕೊಲೆಗೈದ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ರಾಜ್ಯದ ಭದ್ರತೆ ಮತ್ತು ಸುರಕ್ಷತೆ, ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ ಅಮಾನವೀಯ ಪ್ರಕರಣವು ಹಸಿಯಾಗಿರುವಾಗಲೇ ಅದೇ ಸಣಾಪೂರ ಗ್ರಾಮದಲ್ಲಿ ಫೆಬ್ರವರಿ 17 ರಂದು ವಿದೇಶಿ ಮತ್ತು ಸ್ಥಳೀಯನ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳೀಯ ಶಾಂತಕುಮಾ‌ರ್ ಎನ್ನುವ ವ್ಯಕ್ತಿಯ ಕಾಲಿಗೆ ಗಾಯವಾಗಿದ್ದು ಆತನನ್ನು ಇಸ್ರೇಲ್‌ನ ಜೀವಿತ್ ಎನ್ನುವ ವ್ಯಕ್ತಿಯು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದರೂ ಆತನನ್ನು ಕೆಲವರು ಹೆದರಿಸಿ ಬೆದರಿಸಿ 6 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದ್ದರಿಂದ ದೇಶದ ಮತ್ತು ರಾಜ್ಯದ ಭದ್ರತೆ ಮತ್ತು ಪ್ರವಾಸೋದ್ಯಮದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಪರಿಣಾಮ ಬೀರಲಿರುವುದರಿಂದ ಸದರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ಪ್ರವಾಸಕ್ಕೆ ಬರುವ ವಿದೇಶಿಯರಿಗೆ ಸೂಕ್ತ ರಕ್ಷಣೆ ನೀಡಿ, ವಿದೇಶಿಯರು ತಂಗಲಿರುವ ಸದರಿ ಜಿಲ್ಲೆಗಳ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳ ಮುಂಭಾಗದಲ್ಲಿ ಹಾಗೂ ಹಂಪಿಯ ಮತ್ತು ಅಂಜನಾದ್ರಿ ಬೆಟ್ಟ, ಸಣಾಪೂರ ಕೆರೆ ಸೇರಿದಂತೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ, ಎಲ್ಲಾ ದೇವಸ್ಥಾನಗಳ ಮುಂಭಾಗದಲ್ಲಿ, ಮುಖ್ಯ ರಸ್ತೆಗಳಲ್ಲಿ ವಿದೇಶಿಯರಿಗೆ ಅರ್ಥವಾಗುವ ಭಾಷೆಯಲ್ಲಿ ಸ್ಪಷ್ಟವಾಗಿ ಕಾಣುವಂತೆ ಯಾವುದೇ ಸಮಸ್ಯೆಯಾದಲ್ಲಿ ತುರ್ತು ಸಹಾಯವಾಣಿ 112 ಮತ್ತು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆವುಳ್ಳ ಜಾಗೃತಿ ಫಲಕಗಳನ್ನು ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಡಿಜಿಪಿ ಹಾಗೂ ಬಳ್ಳಾರಿ ವಲಯದ ಐಜಿಪಿರವರಿಗೆ ಪತ್ರ ಬರೆದಿದ್ದಾರೆ

ಶಿಕ್ಷಕರ ಮತದಾರರ ಪಟ್ಟಿಯಲ್ಲೂ ಎಸ್ಐಆರ್!ಪ್ರಬಲ ಆಕಾಂಕ್ಷಿಗಳ ಹೆಸರು ಕೈ ಬಿಟ್ಟು ಪಟ್ಟಿ ಪ್ರಕಟ. *ಪ್ರಜಾಪ್ರಭುತ್ವ ಗಾಳಿಗೆ ತೂರಿದ ಶಾಲಾಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆ! 

*ನೋಟಿಸ್ ಬೋರ್ಡ್ಗೆ ಮತದಾರರಪಟ್ಟಿ ಲಗತ್ತಿಸದೇ  ಚುನಾವಣೆ ಘೋಷಣೆ

*ಪ್ರಬಲ ಆಕಾಂಕ್ಷಿಗಳ ಹೆಸರು ಮತದಾರರ ಪಟ್ಟಿಯಿಂದ ಮಾಯ! *ನಿವೃತ್ತರು,ನಿಧನರಾದವರ ಹೆಸರು ಮತದಾರರ ಪಟ್ಟಿಯಲ್ಲಿ ನಮೂದು *ಕೂಡಲೇ ಚುನಾವಣಾ ಪ್ರಕ್ರಿಯೆ ತಡೆಯುವಂತೆ ಆಗ್ರಹ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳ ನಿರ್ದೇಶಕರ ಸ್ಥಾನಕ್ಕೆ 2026-31 ನೇ ಸಾಲಿನ ಆಡಳಿತ ಮಂಡಳಿ ರಚನೆಗಾಗಿ ಏಪ್ರೀಲ್-19 ರಂದು ಮತದಾನ ಜರುಗಲಿದ್ದು ಇದುವರೆಗೂ ಮೂಲ ಮತದಾನ ಪಟ್ಟಿ ಬಿಡುಗಡೆಯಾಗದೇ ಕರಡು ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಸಲಾಗುತ್ತಿದ್ದು ಏ.11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ಮೂಲ ಮತದಾರರ ಪಟ್ಟಿ ಬಿಡುಗಡೆ ಮಾಡಿ ನಂತರ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ  ಶಿಕ್ಷಕ ಮತದಾರರು ಆಗ್ರಹಿಸಿದ್ದಾರೆ.    ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 08 ನಿರ್ದೇಶಕರ ಸ್ಥಾನಗಳಿದ್ದು ಇದರಲ್ಲಿ ಐದು ಪುರುಷರು, ಮೂರು ಮಹಿಳಾ ನಿರ್ದೇಶಕರಿದ್ದು ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಶಿಕ್ಷಕಿಯರು ಮತದಾರರಾಗಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಇದುವರೆಗೂ ಮತದಾರರ ಮೂಲ ಪಟ್ಟಿ ಬಿಡುಗಡೆ ಮಾಡಿಲ್ಲ. ಬದಲಿಗೆ ಆಲಮಟ್ಟಿ ಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಕರಡು ಮತದಾರರ ಪಟ್ಟಿಯನ್ನು ಕೆಲವರು ಖರೀದಿಸಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಪ್ರಸ್ತುತ ಇರುವ ನಿರ್ದೇಶಕರು ಉದ್ದೇಶಪೂರ್ವಕವಾಗಿ ಚುನಾವಣೆಗೆ ಸ್ಪರ್ಧಿಸುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವಂತೆ ಮಾಡಿ ತಮಗೆ ಬೇಕಾದವರನ್ನು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬರುವಂತೆ ನೋಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.   08 ನಿರ್ದೇಶಕರ ಸ್ಥಾನಗಳಿಗೆ ಏ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಏ.14 ರಂದು ನಾಮಪತ್ರ ಪರಿಶೀಲನೆ ಮತ್ತು ವಾಪಸ್ ಪಡೆಯುವುದು ಅಗತ್ಯ ಬಿದ್ದರೆ ಏ,19 ರಂದು ಮತದಾನ ಮಾಡಲು ಚುನಾವಣಾ ವೇಳಾ ಪಟ್ಟಿ ಬಿಡುಗಡೆಯಾಗಿದೆ.  ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ನಿವೃತ್ತ ಶಿಕ್ಷಕರು 04 ಜನ ಮತ್ತು ಒಬ್ಬ ಮೃತ ಶಿಕ್ಷಕರ ಹೆಸರು ಸೇರ್ಪಡೆಯಾಗಿದೆ.  ಪ್ರಬಲ ಆಕಾಂಕ್ಷಿಗಳಾಗಿದ್ದ ಶರಣಪ್ಪ ಹಕ್ಕಂಡಿ, ಛತ್ರಪ್ಪ ತಂಬೂರಿ ಸೇರಿ ಇನ್ನೂ ಹಲವರ ಹೆಸರು ಮತದಾರರ ಪಟ್ಟಿಯಿಂದ ಕೈ  ಬಿಡಲಾಗಿದೆ. ಒಟ್ಟಾರೆ ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವ ಸಂವಿಧಾನ ವಿರೋಧಿಯಾಗಿದ್ದು ಮತದಾರರ ಪಟ್ಟಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಆಗದಂತೆ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ. ಏ.11 ಎರಡನೇಯ ಶನಿವಾರ, ಏ.12 ರವಿವಾರ, ಏ.14 ಅಂಬೇಡ್ಕರ್ ಜಯಂತಿ ಇದ್ದು ಸಾಲು ಸಾಲು ರಜೆ ಇರುವುದರಿಂದ ಚುನಾವಣಾ ಆಕಾಂಕ್ಷಿಗಳು ಕೋರ್ಟ್ ಮೊರೆ ಹೋಗಲು ಆಗದಂತೆ ಮುಂದಾಲೋಚನೆಯಿAದ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ನಿರ್ದೇಶಕ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಶರಣಪ್ಪ ಹಕ್ಕಂಡಿ ಮತ್ತು ಛತ್ರಪ್ಪ ತಂಬೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಕ್ಸ್  ಈಗಾಗಲೇ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದ್ದು ರಾಜ್ಯ ಚುನಾವಣಾಧಿಕಾರಿಗಳು ನೀಡಿದ ಮತದಾರರ ಪಟ್ಟಿಯ ಅನ್ವಯ ಚುನಾವಣೆ ಘೋಷಣೆ ಮಾಡಲಾಗುತ್ತದೆ. ಹೆಸರು ಬಿಟ್ಟು ಹೋದವರು ಮನವಿ ಪತ್ರ ಸಲ್ಲಿಸಿದರೆ ರಾಜ್ಯ ಚುನಾವಣಾಧಿಕಾರಿಗಳಿಗೆ ಕಳಿಸಲಾಗುತ್ತದೆ. ಉಳಿದಂತೆ ನಮಗೆ ಯಾವುದೇ ಅಧಿಕಾರವಿಲ್ಲ. -ಗವಿಸಿದ್ದಪ್ಪ ಮಡಿವಾಳ ತಾಲೂಕು ಚುನಾವಣಾಧಿಕಾರಿಗಳು ಶಿಕ್ಷಕರ ಸಂಘ

ದ್ವಿತೀಯ ಪಿ.ಯು.ಸಿ ಫಲಿತಾಂಶ. ಶ್ರೀವಿದ್ಯಾನಿಕೇತನ ಸಂಸ್ಥೆಯ ಪಿಯುಸಿ ಕಾಲೇಜುಗಳ ಅದ್ವಿತೀಯ ಸಾಧನೆ *ರಾಜ್ಯಮಟ್ಟದ ೨ ಮತ್ತು ೩ನೇ ರ‍್ಯಾಂಕ್‌ಗಳು ವಿದ್ಯಾನಿಕೇತನ ಕಾಲೇಜಿನ ಪಾಲಿಗೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ೨೦೨೫-೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಪ್ರಕಟಿಸಿದ್ದು.ಗಂಗಾವತಿ  ಗಂಗಾವತಿ,ಶ್ರೀರಾಮನಗರ, ವಡ್ಡರಹಟ್ಟಿ ಹಾಗೂ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪಿ.ಯು. ಕಾಲೇಜ್ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದು ಗಂಗಾವತಿಯ ಕೀರ್ತಿ ಹೆಚ್ಚುವಂತೆ ಮಾಡಿದೆ.   ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು ೧೭೭೪ ವಿದ್ಯಾರ್ಥಿಗಳಲ್ಲಿ ೧೭೬೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ ೯೯.೬೦ ರಷ್ಟು ಫಲಿತಾಂಶವನ್ನು ಸಾಧಿಸಿದ್ದು, ೧೪೬೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೨೯೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.     ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿಯಾದ  ಯು. ಶ್ರಾವಣಿ ೬೦೦ಕ್ಕೆ ೫೯೮ ಅಂಕಗಳನ್ನು ಪಡೆಯುವ ಮೂಲಕ ಅಮೋಘ ಸಾಧನೆಗೈದು ರಾಜ್ಯಮಟ್ಟದಲ್ಲಿ ೨ನೇ ರ‍್ಯಾಂಕ್ ಗಳಿಸಿದ್ದಾಳೆ. ಅದೇ ರೀತಿ  ಅರ್ಜುನ್ ಗ್ವಾಟಗಿ ೬೦೦ಕ್ಕೆ ೫೯೭ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೩ನೇ ರ‍್ಯಾಂಕ್ ಪಡೆದಿದ್ದು,  ವೈಷ್ಣವಿ ೬೦೦ಕ್ಕೆ ೫೯೫ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೫ನೇ ರ‍್ಯಾಂಕ್ ಹಾಗೂ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.      ವಾಣಿಜ್ಯ ವಿಭಾಗದಲ್ಲಿ ಕುಮಾರಿ ವಂದನಾ ಜೈನ್ ೬೦೦ಕ್ಕೆ ೫೯೪ ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ೭ನೇ ರ‍್ಯಾಂಕ್ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಯನ್ನು ಗೈದಿದ್ದಾಳೆ.  ಯು.ಶ್ರಾವಣಿ ೫೯೮ ಅಂಕ, ಅರ್ಜುನ ಗ್ವಾಟಗಿ ೫೯೭, ವೈಷ್ಣವಿ ೫೯೫, ಅಭಿಷೇಕ ಎಂ,ಮಣಿಕಂಠ ಡಿ, ಶ್ರೀಗೌರಿ, ವಂದನಾ ಜೈನ್ ೫೯೪ ಅಂಕಗಳನ್ನು ಪಡೆದಿದ್ದಾರೆ.ಬೃಂದಾ, ಭಾವನಾ, ಜಿ.ಭಾಸ್ಕರ್ ಸಾತ್ವಿಕ್, ಸಂಧ್ಯಾ ಪಾಟೀಲ್, ತೇಜಶ್ವೀನಿ, ದೀಪಿಕಾ ಇವರು ೫೯೩ ಅಂಕಗಳನ್ನು ಪಡೆದಿದ್ದಾರೆ.   ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ತೊಲಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಅಂತರಾಷ್ಟೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ರಾಜ್ಯಮಟ್ಟದ ಅತ್ಯುನ್ನತ್ತ ರ‍್ಯಾಂಕ್‌ಗಳನ್ನು ಪಡೆದು ಅಮೋಘ ಸಾಧನೆಯನ್ನು ಗೈದಿದೆ.     ಸತತ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು   ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅಭಿನಂದಿಸಿದ್ದಾರೆ. ಅದೇ ರೀತಿ ಸೂಕ್ತ ಮಾರ್ಗದರ್ಶನ ನೀಡಿದ ಕಾಲೇಜಿನ ಪ್ರಾಂಶುಪಾಲ ಜಗನ್ನಾಥರಾವ್, ಮಲ್ಲಿಕಾರ್ಜುನ್,  ಉಮಾಶಂಕರ್,  ಅಭಿಷೇಕ್ ಡಿ.ಎಮ್,ಉಪನ್ಯಾಸಕವೃಂದವನ್ನು ಅಭಿನಂದಿಸಿದ್ದಾರೆ.

ಕಿಷ್ಕಿಂಧಾ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಬ್ಯಾನರ್ ಅಭಿಯಾನ!

 

*ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಮನೆ ಮನೆ ರಸ್ತೆ ಇದ್ದಕ್ಕೂ ರಾರಾಜಿಸುತ್ತಿರುವ ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗೊಂದಿ ಕಿಷ್ಕಿಂಧಾ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಆನೆಗೊಂದಿ ಭಾಗದ 15 ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದ್ದು ಗ್ರಾಮದ ಮನೆ ಮತ್ತು ರಸ್ತೆ ಉದ್ದಕ್ಕೂ ಪ್ರಾಧಿಕಾರ ಮುಕ್ತ ಕಿಷ್ಕಿಂಧಾ ಅಂಜನಾದ್ರಿ ಭಾಗ ಎನ್ನುವ ಘೋಷಣೆಯೊಂದಿಗೆ ಆನೆಗೊಂದಿ ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಬರೆಸಿ ಅಂಜನಾದ್ರಿ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಧಿಕಾರಿಗಳಿಗೆ ಮತ್ತು ಯುನ್ನೋಸ್ಕೋ ತಂಡದ ಪ್ರತಿನಿಧಿಗಳಿಗೆ ತಮ್ಮ ಕಷ್ಟಗಳನ್ನು ಇಲ್ಲಿಯ ಜನರು ಹೇಳಿಕೊಳ್ಳುತ್ತಿದ್ದಾರೆ.

ಕಳೆದ 35 ವರ್ಷಗಳ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಸೇರಿಸಲಾಗಿದೆ. ಜೊತೆಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿ ಗ್ರಾಮಗಳನ್ನು ಶೇ.100ರಷ್ಟು ಕೋರ್ ಝೋನ್ ಎಂದು ಅವೈಜ್ಞಾನಿಕವಾಗಿ ಘೋಷಣೆ ಮಾಡಿ ವಾಣಿಜ್ಯ, ವ್ಯಾಪಾರ ನೂತನ ಕಟ್ಟಡ ನಿರ್ಮಾಣ, ಹಾಗೂ ಬಿದ್ದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಅವಕಾಶ ಇಲ್ಲದಂತೆ ಹಂಪಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯರಿಗೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಸಣ್ಣ ಪುಟ್ಟ ವ್ಯಾಪಾರ ಮಾಡಲು ಅಂಗಡಿ ಮುಂಗಟ್ಟುಗಳನ್ನು ರಸ್ತೆ ಬದಿಯಲ್ಲಿ ಇಟ್ಟುಕೊಂಡು ಅವುಗಳಿಗೆ ವಿದ್ಯುತ್ ಸಂಪರ್ಕ ಜೋಡಣೆಗೆ ಅಡ್ಡಿಪಡಿಸುತ್ತಿದ್ದಾರೆ. ಪ್ರಸ್ತುತ ಇರುವ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಸುವುದು ಮತ್ತು ಹೊಸ ವ್ಯಾಪಾರ ವಹಿವಾಟುಗಳಿಗೆ ವಿದ್ಯುತ್ ಸಂಪರ್ಕ ಕೊಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡುತ್ತಿರುವುದು ಸ್ಥಳೀಯರನ್ನು ಕೆರಳಿಸಿದೆ.

ಈ ಮಧ್ಯೆ ಯುನೆಸ್ಕೋ ತಂಡದ ಪ್ರತಿನಿಧಿಗಳು ಆನೆಗೊಂದಿ, ಅಂಜನಾದ್ರಿ ಭಾಗದಲ್ಲಿ ನೂತನ ನಿರ್ಮಾಣಗಳು ಹಾಗೂ ಪರಿಸರ ಉಳಿಸಲಾಗಿದೆಯಾ ಎನ್ನುವ ಕುರಿತು ಪರಿಶೀಲನೆ ನಡೆಸಲು ಆಗಮಿಸುತ್ತಿದ್ದು ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್ ಮೂಲಕ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಬರೆಸಿ ಸ್ಥಳೀಯರು ಯುನೆಸ್ಕೋ ತಂಡದವರ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದಾರೆ.

ಈಗಾಗಲೇ ಕಡೆಬಾಗಿಲು ಶ್ರೀರಂಗದೇವರಾಯಲು ವೃತ್ತದಲ್ಲಿ ಮತ್ತು ಸಾಣಾಪುರದ ಗ್ರಾಮ ಪಂಚಾಯತ್ ಎದುರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಆನೆಗೊಂದಿ ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಮಾಡಿದ್ದಾರೆ.