Breaking News
ದ್ವಿತೀಯ ಪಿ.ಯು.ಸಿ ಫಲಿತಾಂಶ. ಶ್ರೀವಿದ್ಯಾನಿಕೇತನ ಸಂಸ್ಥೆಯ ಪಿಯುಸಿ ಕಾಲೇಜುಗಳ ಅದ್ವಿತೀಯ ಸಾಧನೆ *ರಾಜ್ಯಮಟ್ಟದ ೨ ಮತ್ತು ೩ನೇ ರ‍್ಯಾಂಕ್‌ಗಳು ವಿದ್ಯಾನಿಕೇತನ ಕಾಲೇಜಿನ ಪಾಲಿಗೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ೨೦೨೫-೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಪ್ರಕಟಿಸಿದ್ದು.ಗಂಗಾವತಿ  ಗಂಗಾವತಿ,ಶ್ರೀರಾಮನಗರ, ವಡ್ಡರಹಟ್ಟಿ ಹಾಗೂ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪಿ.ಯು. ಕಾಲೇಜ್ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದು ಗಂಗಾವತಿಯ ಕೀರ್ತಿ ಹೆಚ್ಚುವಂತೆ ಮಾಡಿದೆ.   ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು ೧೭೭೪ ವಿದ್ಯಾರ್ಥಿಗಳಲ್ಲಿ ೧೭೬೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ ೯೯.೬೦ ರಷ್ಟು ಫಲಿತಾಂಶವನ್ನು ಸಾಧಿಸಿದ್ದು, ೧೪೬೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೨೯೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.     ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿಯಾದ  ಯು. ಶ್ರಾವಣಿ ೬೦೦ಕ್ಕೆ ೫೯೮ ಅಂಕಗಳನ್ನು ಪಡೆಯುವ ಮೂಲಕ ಅಮೋಘ ಸಾಧನೆಗೈದು ರಾಜ್ಯಮಟ್ಟದಲ್ಲಿ ೨ನೇ ರ‍್ಯಾಂಕ್ ಗಳಿಸಿದ್ದಾಳೆ. ಅದೇ ರೀತಿ  ಅರ್ಜುನ್ ಗ್ವಾಟಗಿ ೬೦೦ಕ್ಕೆ ೫೯೭ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೩ನೇ ರ‍್ಯಾಂಕ್ ಪಡೆದಿದ್ದು,  ವೈಷ್ಣವಿ ೬೦೦ಕ್ಕೆ ೫೯೫ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೫ನೇ ರ‍್ಯಾಂಕ್ ಹಾಗೂ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.      ವಾಣಿಜ್ಯ ವಿಭಾಗದಲ್ಲಿ ಕುಮಾರಿ ವಂದನಾ ಜೈನ್ ೬೦೦ಕ್ಕೆ ೫೯೪ ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ೭ನೇ ರ‍್ಯಾಂಕ್ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಯನ್ನು ಗೈದಿದ್ದಾಳೆ.  ಯು.ಶ್ರಾವಣಿ ೫೯೮ ಅಂಕ, ಅರ್ಜುನ ಗ್ವಾಟಗಿ ೫೯೭, ವೈಷ್ಣವಿ ೫೯೫, ಅಭಿಷೇಕ ಎಂ,ಮಣಿಕಂಠ ಡಿ, ಶ್ರೀಗೌರಿ, ವಂದನಾ ಜೈನ್ ೫೯೪ ಅಂಕಗಳನ್ನು ಪಡೆದಿದ್ದಾರೆ.ಬೃಂದಾ, ಭಾವನಾ, ಜಿ.ಭಾಸ್ಕರ್ ಸಾತ್ವಿಕ್, ಸಂಧ್ಯಾ ಪಾಟೀಲ್, ತೇಜಶ್ವೀನಿ, ದೀಪಿಕಾ ಇವರು ೫೯೩ ಅಂಕಗಳನ್ನು ಪಡೆದಿದ್ದಾರೆ.   ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ತೊಲಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಅಂತರಾಷ್ಟೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ರಾಜ್ಯಮಟ್ಟದ ಅತ್ಯುನ್ನತ್ತ ರ‍್ಯಾಂಕ್‌ಗಳನ್ನು ಪಡೆದು ಅಮೋಘ ಸಾಧನೆಯನ್ನು ಗೈದಿದೆ.     ಸತತ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು   ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅಭಿನಂದಿಸಿದ್ದಾರೆ. ಅದೇ ರೀತಿ ಸೂಕ್ತ ಮಾರ್ಗದರ್ಶನ ನೀಡಿದ ಕಾಲೇಜಿನ ಪ್ರಾಂಶುಪಾಲ ಜಗನ್ನಾಥರಾವ್, ಮಲ್ಲಿಕಾರ್ಜುನ್,  ಉಮಾಶಂಕರ್,  ಅಭಿಷೇಕ್ ಡಿ.ಎಮ್,ಉಪನ್ಯಾಸಕವೃಂದವನ್ನು ಅಭಿನಂದಿಸಿದ್ದಾರೆ.

ಕಿಷ್ಕಿಂಧಾ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಬ್ಯಾನರ್ ಅಭಿಯಾನ!

 

*ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಮನೆ ಮನೆ ರಸ್ತೆ ಇದ್ದಕ್ಕೂ ರಾರಾಜಿಸುತ್ತಿರುವ ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗೊಂದಿ ಕಿಷ್ಕಿಂಧಾ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಆನೆಗೊಂದಿ ಭಾಗದ 15 ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದ್ದು ಗ್ರಾಮದ ಮನೆ ಮತ್ತು ರಸ್ತೆ ಉದ್ದಕ್ಕೂ ಪ್ರಾಧಿಕಾರ ಮುಕ್ತ ಕಿಷ್ಕಿಂಧಾ ಅಂಜನಾದ್ರಿ ಭಾಗ ಎನ್ನುವ ಘೋಷಣೆಯೊಂದಿಗೆ ಆನೆಗೊಂದಿ ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಬರೆಸಿ ಅಂಜನಾದ್ರಿ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಧಿಕಾರಿಗಳಿಗೆ ಮತ್ತು ಯುನ್ನೋಸ್ಕೋ ತಂಡದ ಪ್ರತಿನಿಧಿಗಳಿಗೆ ತಮ್ಮ ಕಷ್ಟಗಳನ್ನು ಇಲ್ಲಿಯ ಜನರು ಹೇಳಿಕೊಳ್ಳುತ್ತಿದ್ದಾರೆ.

ಕಳೆದ 35 ವರ್ಷಗಳ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಸೇರಿಸಲಾಗಿದೆ. ಜೊತೆಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿ ಗ್ರಾಮಗಳನ್ನು ಶೇ.100ರಷ್ಟು ಕೋರ್ ಝೋನ್ ಎಂದು ಅವೈಜ್ಞಾನಿಕವಾಗಿ ಘೋಷಣೆ ಮಾಡಿ ವಾಣಿಜ್ಯ, ವ್ಯಾಪಾರ ನೂತನ ಕಟ್ಟಡ ನಿರ್ಮಾಣ, ಹಾಗೂ ಬಿದ್ದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಅವಕಾಶ ಇಲ್ಲದಂತೆ ಹಂಪಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯರಿಗೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಸಣ್ಣ ಪುಟ್ಟ ವ್ಯಾಪಾರ ಮಾಡಲು ಅಂಗಡಿ ಮುಂಗಟ್ಟುಗಳನ್ನು ರಸ್ತೆ ಬದಿಯಲ್ಲಿ ಇಟ್ಟುಕೊಂಡು ಅವುಗಳಿಗೆ ವಿದ್ಯುತ್ ಸಂಪರ್ಕ ಜೋಡಣೆಗೆ ಅಡ್ಡಿಪಡಿಸುತ್ತಿದ್ದಾರೆ. ಪ್ರಸ್ತುತ ಇರುವ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಸುವುದು ಮತ್ತು ಹೊಸ ವ್ಯಾಪಾರ ವಹಿವಾಟುಗಳಿಗೆ ವಿದ್ಯುತ್ ಸಂಪರ್ಕ ಕೊಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡುತ್ತಿರುವುದು ಸ್ಥಳೀಯರನ್ನು ಕೆರಳಿಸಿದೆ.

ಈ ಮಧ್ಯೆ ಯುನೆಸ್ಕೋ ತಂಡದ ಪ್ರತಿನಿಧಿಗಳು ಆನೆಗೊಂದಿ, ಅಂಜನಾದ್ರಿ ಭಾಗದಲ್ಲಿ ನೂತನ ನಿರ್ಮಾಣಗಳು ಹಾಗೂ ಪರಿಸರ ಉಳಿಸಲಾಗಿದೆಯಾ ಎನ್ನುವ ಕುರಿತು ಪರಿಶೀಲನೆ ನಡೆಸಲು ಆಗಮಿಸುತ್ತಿದ್ದು ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್ ಮೂಲಕ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಬರೆಸಿ ಸ್ಥಳೀಯರು ಯುನೆಸ್ಕೋ ತಂಡದವರ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದಾರೆ.

ಈಗಾಗಲೇ ಕಡೆಬಾಗಿಲು ಶ್ರೀರಂಗದೇವರಾಯಲು ವೃತ್ತದಲ್ಲಿ ಮತ್ತು ಸಾಣಾಪುರದ ಗ್ರಾಮ ಪಂಚಾಯತ್ ಎದುರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಆನೆಗೊಂದಿ ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ನ್ಯಾಯಾಧೀಶರ ಎದುರು ವಾದ ಮಂಡಿಸುತ್ತಲೇ ಕುಸಿದು ಬಿದ್ದು ಹಸುನೀಗಿದ ನ್ಯಾಯವಾದಿ,ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ !

*ಕುಷ್ಟಗಿ ನ್ಯಾಯಾಲಯದಲ್ಲಿ ಘಟನೆ.
*ನ್ಯಾಯವಾದಿಗಳು, ವಕೀಲರು ದಿಗ್ಭ್ರಮೆ .

ಕಿಷ್ಕಿಂಧವಾಣಿ ಸುದ್ದಿ

ಕುಷ್ಟಗಿ: ಕೇಸ್ ಒಂದರ ವಾದ ಮಾಡುತ್ತಲೇ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ ತಾವರಗೇರಾ ಇವರು ಮೃತಪಟ್ಟ ಘಟನೆ ಕುಷ್ಟಗಿ ನ್ಯಾಯಾಲಯದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.
ತಾವರಗೇರಾ ಮೂಲದ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ(50) ಇವರು ಭೂ ವಿವಾದದ ಕೇಸ್ ಒಂದರಲ್ಲಿ ಮಾನ್ಯ ನ್ಯಾಯಾಧೀಶರ ಎದುರು ತಮ್ಮ ವಾದವನ್ನು ಮಂಡಿಸುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಕುಷ್ಟಗಿ ನ್ಯಾಯಾಲಯದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಜರುಗಿದೆ. ಮೃತ ನಿಂಗಪ್ಪ ಸುದ್ದಿ ಇವರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತ ನಿಂಗಪ್ಪ ಸುದ್ದಿ ಅವರು ಕಳೆದ 20 ವರ್ಷಗಳಿಂದ ಗಂಗಾವತಿ ಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಜೊತೆಗೆ ರಂಗಭೂಮಿ ಬಗ್ಗೆ ಒಲವಿದ್ದ ಅವರು ವಿವಿಧ ನಾಟಕ ಕಂಪನಿಗಳು ಹಾಗೂ ಅಮೆಚೂರ್ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಕೇಸ್ ಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಕುಷ್ಟಗಿ ನ್ಯಾಯಾಲಯದಲ್ಲಿ ಕೇಸ್ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿಂಗಪ್ಪ ಸುದ್ದಿ ನಿಧನಕ್ಕೆ ಗಂಗಾವತಿ ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ವಕೀಲರ ಸಂಘದವರು ಕಂಬನಿ ಮಿಡಿದಿದ್ದಾರೆ