Breaking News
ಹಿರೇಬೆಣಕಲ್ ಮೋರ್ಯರ ಬೆಟ್ಟದ ಶಿಲಾಸಮಾಧಿ ಸ್ಥಳ ಪ್ರವಾಸಿ ತಾಣವಾಗಿಸಲು ಯೋಜನೆ:ಡಾ.ಸುರೇಶ ಇಟ್ನಾಳ. *ಬೃಹತ್ ಶಿಲಾಯುಗದ ನೆಲೆ ಸಂರಕ್ಷಣೆಗೆ ಅಗತ್ಯ ಅನುದಾನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಹಿರೇಬೆಣಕಲ್ ನಲ್ಲಿ ಮೋರ್ಯರ ಬೆಟ್ಟದ ಪ್ರಾಚೀನ ಬೃಹತ್ ಶಿಲಾಯುಗದ (ಮೆಗಾಲಿಥಿಕ್) ನೆಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾನುವಾರ ಹಿರೇಬೆಣಕಲ್ ನಲ್ಲಿರುವ ಐತಿಹಾಸಿಕ ನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ದರು. ಈ ತಾಣವನ್ನು ಪ್ರವಾಸಿಗರ ಮತ್ತು ಪರಿಸರ ಸ್ನೇಹಿಯಾಗಿ, ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

“ನಾಡಿನ ಹೆಮ್ಮೆಯ ಈ ಬೃಹತ್ ಶಿಲಾಯುಗದ ನೆಲೆ ಕೊಪ್ಪಳ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಈ ತಾಣದ ಸಂರಕ್ಷಣೆಗೆ ನಾವು ಮೊದಲ ಆದ್ಯತೆ ನೀಡಿದ್ದೇವೆ. ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳ ರಕ್ಷಣೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಈಗಾಗಲೇ 80 ಲಕ್ಷ ರೂಪಾಯಿಗಳ ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಿಂದ ಹಿರೇಬೆಣಕಲ್ ನೆಲೆಯ ಕೆಳ ಭಾಗದವರೆಗೆ ಸುಗಮ ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಅರಣ್ಯ ಅಧಿಕಾರಿ ನಿರ್ಮಲಾ ಅವರಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮುರಳಿಧರ, ಮಾರ್ಗದರ್ಶಕ ಮಂಜುನಾಥ ಗುಡ್ಲಾನೂರ, ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ, ವೀರೇಶ ಅಂಗಡಿ, ಬಸನಗೌಡ ಹೊಸಹಳ್ಳಿ, ಮಂಜುನಾಥ ಡಿ, ಚಂದ್ರಶೇಖರ, ಹೆಚ್. ಭಾಷಾ,ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಉಪವಲಯ ಅರಣ್ಯ ಅಧಿಕಾರಿ ಉಮೇಶ್ವರ್, ಅರಣ್ಯಪಾಲಕ ಮಂಜುನಾಥ ನರೇರ, ಶಿವಕುಮಾರ ವಾಲಿ, ಶಿವಾನಂದ ತಳವಾರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಆನೆಗೊಂದಿ:ಸಾರ್ವಜನಿಕರಿಗೆ ತೊಂದರೆ ಕೊಡುವ ಅರಣ್ಯ ರಕ್ಷಕ ಲೋಕಾಯುಕ್ತ ದೂರು

ಕಿಷ್ಕಿಂಧವಾಣಿ ಸುದ್ದಿ

 ಗಂಗಾವತಿ: ಆನೆಗೊಂದಿ, ಸಾಣಾಪೂರ ಗ್ರಾ.ಪಂ.ಭಾಗದಲ್ಲಿ ಸಾರ್ವಜನಕರಿಗೆ ಮತ್ತು ರಸ್ತೆಗಳ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡುವವರಿಗೆ ಅರಣ್ಯ ಇಲಾಖೆಯ ರಕ್ಷಕ ಗುಂಡಪ್ಪ ಎನ್ನುವ ಅಧಿಕಾರಿ ಅಶ್ಲೀಲ ಪದಗಳಿಂದ ನಿಂದಿಸುವುದು ಸೇರಿ ದೈಹಿಕ ಹಲ್ಲೆಯಂತಹ ಕೃತ್ಯವೆಸಗುತ್ತಿದ್ದು ಈ ಕುರಿತು ಅರಣ್ಯ ಇಲಾಖೆಯ ವಲಯ ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಂಗ್ಲಿ ರಂಗಾಪೂರ ಗ್ರಾಮದ ನಿವಾಸಿ ರಾಕೇಶ್ ಬಾಬು ಕಾಕರ‍್ಲಾ  ಒತ್ತಾಯಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಅರಣ್ಯ ರಕ್ಷಕ  ಗುಂಡಪ್ಪ ವಿರುದ್ಧ ನೀಡಿರುವ ದೂರಿನ ಪ್ರತಿ ಬಿಡುಗಡೆ ಮಾಡಿ ಮಾತನಾಡಿದರು.  ರಸ್ತೆ ಪಕ್ಕದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ತೊಂದರೆ ಕೊಡುತ್ತಿದ್ದಾರೆ.   ಮಾರ್ಚ್ 5 ರಂದು ಸಂಜೆ 5:39 ಕ್ಕೆ, ರಂಗಾಪುರ ಗ್ರಾಮದ ಮಿತಿಯೊಳಗೆ ಗುಂಡಪ್ಪ ಅವರು ನಡೆಸುತ್ತಿರುವ ಅಕ್ರಮವಾಗಿ ಮರಳು ಮತ್ತು ಮಣ್ಣು ಗಣಿಗಾರಿಕೆ ಮತ್ತು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಕಸ ವಿಲೇವಾರಿ, ಮತ್ತು ಅತೀ ಸೂಕ್ಷ್ಮ ವಲಯ ಎಂದು ನೀರಾವರಿ ಇಲಾಖೆಯವರು ಗುರುತಿಸಿರುವ  ತುಂಗಭದ್ರಾ  ಎಡದಂಡೆಯ ಕಾಲುವೆಯ ಒಡ್ಡನ್ನು ಅಗೆದು ಸಸಿ ನೆಡುವ  ಕುರಿತು ಕೊಪ್ಪಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ ರಹಸ್ಯ ದೂರು ನೀಡಲಾಗಿದೆ.  . ಈ ದೂರುಗಳಿಗೆ ಬೆಂಬಲವಾಗಿ ಸ್ಥಳದ ನಕ್ಷೆ ಮತ್ತು ಛಾಯಾಚಿತ್ರದ ಪುರಾವೆಗಳನ್ನು ಒದಗಿಸಲಾಗಿದೆ. ಈ ವರದಿಯ ನಂತರ, ಅರಣ್ಯಪಾಲಕ ಗುಂಡಪ್ಪ (ಈ ವಿಭಾಗದ ಉಸ್ತುವಾರಿ ಅಧಿಕಾರಿ) ರಾತ್ರಿ 9:05 ಕ್ಕೆ ನನಗೆ ಮೊಬೈಲ್ ಕರೆಯ ಮೂಲಕ  ಸಂಪರ್ಕಿಸಿದರು. ಈ ಅನಧಿಕೃತ ಕರೆಯ ಸಮಯದಲ್ಲಿ, ಅಧಿಕಾರಿ ನನ್ನನ್ನು ಆಕ್ರಮಣಕಾರಿ ಮೌಖಿಕ ವಾದಗಳಿಗೆ ಮತ್ತು ಅವರ ವ್ಯಾಪ್ತಿಯಲ್ಲಿರುವ ಅಕ್ರಮ ಚಟುವಟಿಕೆಗಳನ್ನು ವರದಿ ಮಾಡಿದ್ದಕ್ಕಾಗಿ ನೇರ ಬೆದರಿಕೆ ಹಾಕಿದ್ದಾರೆ. . ಈ ಘಟನೆಯು ಎರಡು ಪ್ರಮುಖ ಕಾಳಜಿಗಳನ್ನು ಹುಟ್ಟುಹಾಕುತ್ತದೆ: ಗೌಪ್ಯತೆ ಉಲ್ಲಂಘನೆ: ದೂರುದಾರನಾಗಿ ನನ್ನ ಗುರುತನ್ನು ದೂರಿಗೆ ಒಳಗಾದ ವ್ಯಕ್ತಿಗೆ ಅನುಚಿತವಾಗಿ ಬಹಿರಂಗಪಡಿಸಲಾಗಿದೆ. ಬೆದರಿಕೆ: ಒಬ್ಬ ಸಾರ್ವಜನಿಕ ಸೇವಕ ಪರಿಸರ ಉಲ್ಲಂಘನೆಗಳನ್ನು ವರದಿ ಮಾಡಿದ ನಾಗರಿಕನಿಗೆ ಬೆದರಿಕೆ ಹಾಕಲು ತನ್ನ ಸ್ಥಾನಮಾನವನ್ನು ಬಳಸಿದ್ದಾನೆ. ನನ್ನ ಬಳಿ ಮಾಡಲಾದ ಬೆದರಿಕೆಗಳ ಆಡಿಯೋ ರೆಕಾರ್ಡಿಂಗ್ ಇದೆ. ಅರಣ್ಯಪಾಲಕ ಗುಂಡಪ್ಪ ಅವರ ನಡವಳಿಕೆಯ ಬಗ್ಗೆ ಔಪಚಾರಿಕ ವಿಚಾರಣೆ ಪ್ರಾರಂಭಿಸಲು ಮತ್ತು ನನ್ನ ಸುರಕ್ಷತೆ ಮತ್ತು ಅರಣ್ಯ ಇಲಾಖೆಯ ಜಾರಿ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು. ನಾನು ಸಂಚಾರ ಮಾಡುವ ರಸ್ತೆಯಲ್ಲಿ ಅಡ್ಡ ಬಂದು ಪದೇ ಪದೇ ತೊಂದರೆ ಕೊಡುತ್ತಿದ್ದು  ಅರಣ್ಯ ಇಲಾಖೆಯ ಮೇಲಾಧಿಕಾರಿಗಳು, ಕೊಪ್ಪಳ ಎಸ್ಪಿಯವರು ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಶೀಘ್ರ ಗುಂಡಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಿಬಿಎಸ್ ಗಂಜ್‌ನಲ್ಲಿ ಗೋಲ್‌ಮಾಲ್ ವ್ಯಾಪಾರಿಯಿಂದ ರೈತರಿಗೆ 13 ಕೋಟಿ ರೂ.ಗಳ ಪಂಗನಾಮ! *ರೈತರ 40 ಸಾವಿರ ಕ್ವಿಂಟಲ್ ಭತ್ತ ಖರೀದಿಸಿ ಹಣ ನೀಡದೇ ನಾಪತ್ತೆ *ವ್ಯಾಪಾರಿಯ ಮನೆ ಮುಂದೆ ರೈತರು, ವರ್ತಕರಿಂದ ಧರಣಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಶ್ರೀಚನ್ನಬಸವಸ್ವಾಮಿ ಗಂಜ್ ಪ್ರದೇಶದಲ್ಲಿ ಭತ್ತ ಖರೀದಿ ಮಾಡುವ ವ್ಯಾಪಾರಿಗಳಿಬ್ಬರು ರೈತರಿಂದ 40 ಸಾವಿರ ಕ್ವಿಂಟಲ್ ಭತ್ತ ಖರೀದಿಸಿ ಆರು ತಿಂಗಳು ಕಳೆದರೂ ಹಣ ಪಾವತಿಸದೇ ನಾಪತ್ತೆಯಾಗಿದ್ದು ಕೂಡಲೇ ಹಣ ಪಾವಸತಿಸುವಂತೆ ರೈತರು ಮತ್ತು ದಲಾಲಿ ವರ್ತಕರು ನಾಪತ್ತೆಯಾಗುರುವ ವ್ಯಾಪಾರಿಯ ಮನೆ ಮುಂದೆ ಧರಣಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವರ್ತಕರಾದ ಸಣ್ಣಕ್ಕಿ ನೀಲಪ್ಪ, ವಿನೋದ, ಜಿ.ಶೇಖರಪ್ಪ ಮಾತನಾಡಿ, ಸಂಜಯ್ ಸಿಂಡಿಕೇಟ್ ಮಾಲೀಕ ವಿರೇಶ ಕಲಿಕೇರಿ ಹಾಗೂ ರಾಹುಲ್ ಸಿಂಡಿಕೇಟ್ ಮಾಲೀಕರಾದ ಗಿರಿಜ ಕಲಿಕೇರಿ ಎನ್ನುವವರು ಸಿಬಿಎಸ್ ಗಂಜ್ ನಲ್ಲಿ ರೈತರು ಮತ್ತು ವರ್ತಕರಿಂದ 40 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಭತ್ತವನ್ನು ಖರೀದಿಸಿ ಸುಮಾರು 13 ಕೋಟಿ ರೂ.ಗಳಷ್ಟು ಹಣವನ್ನು ಕೊಡದೇ ರೈತರು ಮತ್ತು ವರ್ತಕರಿಗೆ ಸಂಕಷ್ಟ ಕೊಡುತ್ತಿದ್ದಾರೆ. ಕಳೆದ ನವೆಂಬರ್ ನಲ್ಲಿ ಭತ್ತ ಖರೀದಿ ಮಾಡಿದ್ದು ಪದೇ ಪದೇ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಗಂಜ್ ವ್ಯಾಪಾರಿಗಳು ಸಭೆ ನಡೆಸಿ ಹಣ ಕೊಡುವಂತೆ ತಾಕೀತು ಮಾಡಿದಾಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪೊಲೀಸ್ ಠಾಣೆಯಲ್ಲಿ ಶೇ.40 ರಷ್ಟು ಹಣ ಕೊಡುವ ಭರವಸೆ ನೀಡಿದ್ದು ಪುನಹ ಹಣ ಕೊಡದೇ ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಎಪಿಎಂಸಿಯವರಿಗೆ  ರೈತರು ಹಾಗೂ ವರ್ತಕರು ದೂರು ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು. ಕಾನೂನು ರೀತಿ ರೈತರಿಗೆ ಮತ್ತು ವರ್ತಕರಿಗೆ ಹಣ ಕೊಡಿಸಬೇಕು. ಗಂಗಾವತಿ, ಕಂಪ್ಲಿ, ಕಾರಟಗಿ, ಸಿಂಧನೂರು, ಚನ್ನಳ್ಳಿ, ವಡ್ಡರಹಟ್ಟಿ, ಬಸಾಪಟ್ಟಣ, ಕನಕಗಿರಿ ಸೇರಿ ಸುತ್ತಲಿನ ಊರುಗಳ ರೈತರಿಂದ ಭತ್ತ ಖರೀದಿಸಿ ಮೋಸ ಮಾಡಲಾಗಿದ್ದು ಕೂಡಲೇ ಎಪಿಎಂಸಿ ಹಾಗೂ ಪೊಲೀಸರು ಮಧ್ಯೆ ಪ್ರವೇಶ ಮಾಡಿ ರೈತರು ಹಾಗೂ ವರ್ತಕರ ಹಣ ವಸೂಲಿ ಮಾಡಕೊಡಬೇಕು. ಇಲ್ಲವಾದಲ್ಲಿ ರೈತರು ಅನಾಹುತ ಮಾಡಿಕೊಳ್ಳುವ ಸಂಭವವಿದ್ದು ತಾಲೂಕು ಮತ್ತು ಜಿಲ್ಲಾಡಳಿತ ನೆರವಿಗೆ ಬರುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಣ್ಣಕ್ಕಿ ನೀಲಪ್ಪ, ಜಿ.ಶೇಖರಪ್ಪ, ವಿನೋದ್, ಅಮರೇಶಪ್ಪ, ಸಿದ್ದಪ್ಪ, ಶಿವಯೋಗಿ, ನಾಗರಾಜ, ಜಂಬಣ್ಣ, ತ್ರಿಮೂರ್ತಿ, ಶಿವಶಂಕರ, ಶ್ರೀಕಾಂತ ಆರಹಾಳ, ಗಿರಿಶ, ರಾಜಪ್ಪ.ಬಸವರಾಜ, ಹೊನ್ನಪ್ಪ, ಚಂದ್ರು ಲಮಾಣಿ, ಸುರೇಶ, ಪಂಪನಗೌಡ, ವಿರೂಪಾಕ್ಷಪ್ಪ, ಶಿವು, ರುದ್ರೇಶ, ಸೋಮನಾಥ ಸೇರಿ ನೂರಕ್ಕೂ ಹೆಚ್ಚು ರೈತರು, ವರ್ತಕರಿದ್ದರು. *** ಸಂಜಯ್ ಹಾಗೂ ರಾಹುಲ್ ಸಿಂಡಿಕೇಟ್ ಹೆಸರಿನಲ್ಲಿ ಭತ್ತ ಖರೀದಿಸಿ ರೈತರು ಮತ್ತು ವರ್ತಕರಿಗೆ ಹಣ ಪಾವತಿಸದೇ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು  ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ವಿರೇಶ ಕಲಿಕೇರಿ ಇವರ ಹೆಸರಿನಲ್ಲಿ ನಿವೇಶನ ಎಪಿಎಂಸಿ ಯಾರ್ಡಿನಲ್ಲಿದೆ. ಜತೆಗೆ ಅವರ ಹೆಸರಿನಲ್ಲಿ ಕೆ.ಟಿ.ನಂಬರ್ ನ್ನು ಬ್ಲಾಕ್ ಮಾಡಲಾಗಿದೆ. ಒಂದು ಭಾರಿ ಸಚಿಧಾನವೂ ಮಾಡಲಾಗಿದ್ದು ಹಣ ಪಾವತಿ ಮಾಡುವುದಾಗಿ ಹೇಳಿ ನಾಪತ್ತೆಯಾಗಿರುವ ಕುರಿತು ಮಾಹಿತಿ ಇದೆ. ಈ ಎಲ್ಲಾ ವಿಷಯವನ್ನು ಕೇಂದ್ರ ಕಚೇರಿಗೆ ವರದಿ ಮಾಡಲಾಗಿದೆ. ಪುನಹ ರೈತರು ಮತ್ತು ವರ್ತಕರ ಹಣ ಕೊಡಿಸಲು ಕಾನೂನು ರೀತಿ ಯತ್ನಿಸಲಾಗುತ್ತದೆ. -ಯಮನಪ್ಪ ಎಪಿಎಂಸಿ ಕಾರ್ಯದರ್ಶಿಗಳು.

ಗಂಗಾವತಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಬೆಂಕಿಯ ಕೆನ್ನಾಲಿಗೆ: ಕಿಡಿಗೇಡಿಗಳ ದುಷ್ಕೃತ್ಯ. *ಬೆಂಕಿ ಹೊತ್ತಿಕೊಂಡು ಮೂರು ತಾಸು ಕಳೆದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಇದೀಗ ಬೇಸಿಗೆ ಆರಂಭವಾಗಿದ್ದು ಅರಣ್ಯ ಪ್ರದೇಶದಲ್ಲಿ ಕಾಡಗಿಚ್ಚು ಕಾಣಿಸಿಕೊಳ್ಳುವ ಸಂಭವ ಹೆಚ್ಚಿದೆ. ಶುಕ್ರವಾರ ಸಂಜೆ ಗಂಗಾವತಿ ನಗರದ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬೆಟ್ಟ ಪ್ರದೇಶವನ್ನು ವ್ಯಾಪಿಸಿದ್ದು ಅಪಾರ ಪ್ರಮಾಣದ ಸಸ್ಯ ಮತ್ತು ಜೀವಜಂತುಗಳು ಬೆಂಕಿಗೆ ಆಹುತಿಯಾಗಿವೆ. ಸಂಜೆ ನಾಲ್ಕು ಗಂಟೆಯಿಂದ ಆರಂಭವಾಗಿರುವ ಬೆಂಕಿ ಇಡೀ ಬೆಟ್ಟವನ್ನು ವ್ಯಾಪಿಸಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಯಾವ ಸಿಬ್ಬಂದಿಯೂ ಭೇಟಿ ನೀಡಿಲ್ಲ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡಿಲ್ಲ. ಜನಸಾಮಾನ್ಯರು ಬೆಟ್ಟಕ್ಕೆ ಬೆಂಕಿ ಹತ್ತಿರುವುದನ್ನು ತಮ್ಮ ಮೊಬೈಲ್ಗಳಲ್ಲಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.
ನಗರಕ್ಕೆ ಹೊಂದಿಕೊಂಡಿರುವ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ನಿತ್ಯವೂ ವಾಯುಹಾರಕ್ಕೆ ಜನರು ತೆರುಳುತ್ತಿದ್ದು ಈ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಬೆಟ್ಟಕ್ಕೆ ಬೆಂಕಿ ಹಚ್ಚಿರುವ ಕುರಿತು ಅನುಮಾನಗಳು ವ್ಯಕ್ತವಾಗುತ್ತವೆ.
ಮಳೆ ಮಲ್ಲೇಶ್ವರ ಬೆಟ್ಟ ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವುದು ಅರಣ್ಯ ಇಲಾಖೆಯವರು ಬೆಟ್ಟಕ್ಕೆ ತಂತಿ ಬೇಲಿಯನ್ನು ಅಳವಡಿಸುವ ಮೂಲಕ ಬೆಟ್ಟ ಪ್ರವೇಶದಂತೆ ಜನರನ್ನು ತಡೆಯುವ ಕ್ರಮ ಕೈಗೊಂಡಿಲ್ಲ ಆದ್ದರಿಂದ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ, ಮರಂ ಸಾಗಾಣಿಕೆ ನಿರಂತರವಾಗಿ ನಡೆದಿದೆ. ಇದೀಗ ದುಷ್ಕರ್ಮಿಗಳು
ಬೆಟ್ಟಕ್ಕೆ ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗುತ್ತಿದೆ.

*ತಿರುಪತಿ ನಾಯಕ ಪಿಲಿಗುಂಡ ಗೆ * ರಾಜ್ಯ ಮಟ್ಟದ ಸರ್ವೋತ್ತಮ ಕ್ರೀಡಾ ಸೇವರತ್ನ ಪ್ರಶಸ್ತಿ.

ಕಿಷ್ಕಿಂಧವಾಣಿ ಸುದ್ದಿ
ಕೊಪ್ಪಳ:-ತಾಲ್ಲೂಕಿನ ಮುನಿರಾಬಾದ
ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ತಿರುಪತಿ ನಾಯಕ ಇವರಿಗೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ನೇತ್ರ ಕಲಾ ಸಂಘ ವತಿಯಿಂದ ನೀಡುವ ರಾಜ್ಯ ಮಟ್ಟದ ಸರ್ವೋತ್ತಮ ಕ್ರೀಡಾ ಸೇವಾ ರತ್ನ ಲಭಿಸಿದೆ,
ತಿರುಪತಿ ನಾಯಕ ದೈಹಿಕ ಶಿಕ್ಷಣ ಉಪನ್ಯಾಸಕರು ಇವರು ಕಳೆದ 10 ವರ್ಷಗಳ ದಿಂದ ವಿದ್ಯಾರ್ಥಿಗಳನ್ನು ಜಿಲ್ಲಾ, ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟ ಕ್ಕೆ ಆಯ್ಕೆಯಾಗುವಲ್ಲಿ ಇವರ ಪಾತ್ರ ಬಹುದೊಡ್ಡದು. ಬಳ್ಳಾರಿ ಯ ಡಾ.ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಮಾರ್ಚ್ 8 ರಂದು ಆಯೋಜಿಸಿರುವ ಸಮಾರಂಭದಲ್ಲಿ
ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಬಂಜಾರ ರಾಷ್ಟ್ರೀಯ ಹೋಳಿ ಉತ್ಸವ-2026:ಯಶಸ್ವಿಯಾಗಿ ನಡೆದ ಬಂಜಾರ ಕವಿಗೋಷ್ಠಿ.

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಹೋಳಿ ಹುಣ್ಣಿಮೆಯಂದು ನಡೆಯುವ ಹೋಳಿ ಹಬ್ಬವು ಬಂಜಾರ ಸಮುದಾಯದ ಅತ್ಯಂತ ಪ್ರಮುಖ ಆಚರಣೆಯಾಗಿದೆ. ಎಲ್ಲಾ ತಾಂಡಾಗಳಲ್ಲೂ ಮಹಿಳೆ ಹಾಗೂ ಪುರುಷರು ವಿಶಿಷ್ಟ ಶೈಲಿಯ ಉಡುಪುಗಳನ್ನು ಧರಿಸಿ ಕೋಲುಗಳನ್ನು ಹಿಡಿದು ಬಂಜಾರ ಜಾನಪದ ಹಾಡುಗಳನ್ನು ಹಾಡುತ್ತಾ ವೃತ್ತಾಕಾರದಲ್ಲಿ ನಗಾರಿ ಹಾಗೂ ತಮಟೆಯ ತಾಳಕ್ಕೆ ಕುಣಿದು ಉತ್ಸಾಹದಿಂದ ಆಚರಿಸುತ್ತಾರೆ.

ಅದೇರೀತಿ ಕೊಪ್ಪಳದ ಐತಿಹಾಸಿಕ ಬಹಾದ್ದೂರ ಬಂಡೆಯಲ್ಲಿ ಇರುವ ಹಾತಿರಾಮ ಬಾವಾಜಿ ರವರ ಕಟ್ಟೆ ಆವರಣದಲ್ಲಿ ಮಾ-3 ರಂದು ಮಹಿಳೆಯರ ಘೂಮರ್ ನೃತ್ಯ, ಡೊಡೋ ನಂಗಾರ ನೃತ್ಯ, ಪುರುಷರ ಲೆಹಂಗಿ ನೃತ್ಯ, ವಾಜಾ-ಭಜನೆ ಅತ್ಯಂತ ಅದ್ಧೂರಿಯಾಗಿ ನಡೆದವು. ಇವರು ತಮ್ಮ ಹಾಡುಗಳಲ್ಲಿ ಹೋಳಿಯ ಹಿನ್ನೆಲೆ, ಸಂಪ್ರದಾಯ, ಪರಂಪರೆ ಕುರಿತು ಹೇಳುತ್ತಾ ಇಡೀ ರಾತ್ರಿ ಸಂಭ್ರಮಿಸಿ ಬೆಳಗಿನ ಜಾವ ಹೋಳಿ ದಹನ ಮಾಡಿ ಸಂಪನ್ನಗೊಳಿಸಿದರು. ಬಂಜಾರ ಸಮುದಾಯದ ವಿಶಿಷ್ಠ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಬ್ಬ-ಹರಿದಿನಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಳಿ ಹುಣ್ಣಿಮೆಯಂದು ರಾಷ್ಟ್ರೀಯ ಹೋಳಿ ಉತ್ಸವ-2026 ರ ನಿಮಿತ್ಯ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು,

ರಾಜ್ಯ ಘಟಕದ ವತಿಯಿಂದ ಉತ್ಸವದ ವೇದಿಕೆಯಲ್ಲಿ ಬಂಜಾರರ ಸಾಹಿತ್ಯದ ರಾಜ್ಯ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿತ್ತು,

ಈ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆಮೂಲೆಯಿಂದ ಐವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗಾವತಿಯ ಎಸ್.ಆರ್. ಸರೋಜಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಇತಿಹಾಸ ಸಂಶೋಧಕ ಡಾ. ರವಿ ಚವ್ಹಾಣ ಮಾತನಾಡಿ, ಬಂಜಾರರ ಮೂಲ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕವನಗಳ ಮೂಲಕ ಪ್ರಚುರಪಡಿಸಿದ್ದು ಬಹಳ ಹೆಮ್ಮೆಯ ವಿಷಯ, ಸಮುದಾಯದ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕವಿಗೋಷ್ಠಿ ಸಹಕಾರಿಯಾಗಿದೆ, ಇಂದಿನ ಯುವ ಪೀಳಿಗೆ ಮೊಬೈಲ್ ಹಾಗೂ ಡಿ.ಜೆ. ಹುಚ್ಚಿನಿಂದ ಹೊರಬಂದು ಉನ್ನತ ವಿದ್ಯಾಭ್ಯಾಸ ಪಡೆದು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗಸುಗೂರಿನ ವಿಜಯ ಮಹಾಂತೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಶ್ರೀ ಗುರು ಗೋಸಾವಿ ಬಾವಾನವರು ಆಶೀರ್ವಚನ ನೀಡಿದರು. ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀಕಾಂತ ಜಾಧವ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಛತ್ರಪ್ಪ ತಂಬೂರಿರವರು ಆಶಯ ನುಡಿಗಳನ್ನು ಹೇಳಿದರು. ಯಾದಗಿರಿಯ ಸುವರ್ಣಬಾಯಿ ರಾಠೋಡ ಹಾಗೂ ಡಾ. ಮಿಟ್ಯಾ ನಾಯ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷ ಪ್ರಕಾಶ ರಾಠೋಡ ತರಲಕಟ್ಟಿ ಹಾಗೂ ಶಿವಾನಂದ ನಾಯ್ಕ ಮುಖ್ಯ ಅಭಿಯಂತರರು ರವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಕುರಿತು ಮಾತನಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಬಂಜಾರ ಕವಿಗಳಾದ ಡಾ. ಎಲ್.ಪಿ. ಕಠಾರಿ ನಾಯ್ಕ, ಕುಬೇರ ನಾಯ್ಕ, ಜ್ಯೋತಿ ಕೃಷ್ಣನಾಯ್ಕ ಬಾಗಲಕೋಟೆ, ಮೋತಿಲಾಲ್ ರಾಠೋಡ ಹುಬ್ಬಳ್ಳಿ, ಪ್ರವೀಣಕಮಾರ ಹರಪನಹಳ್ಳಿ, ಮೂರ್ತಿ ಎಲ್., ಸುರೇಶ ಕಲಾಪ್ರಿಯ, ಲಕ್ಷ್ಮಣ ನಾಯ್ಕ ಎ.ಐ.ಬಿ.ಎಸ್.ಎಸ್, ವಸಂತ್ ಚವ್ಹಾಣ ವಿಜಯಪುರ, ದೀಪಾ ರಾಠೋಡ ಕಾರಟಗಿ, ಪುಷ್ಪಾಬಾಯಿ ಹೂವಿನಹಡಗಲಿ, ಶಂಕರ ನಾಯ್ಕ, ಕುಮಾರ ರಾಠೋಡ, ಕೂಪಳಗಡ್ ಬಹಾದ್ದೂರ ಬಂಡಾ ಟ್ರಸ್ಟನ ಅಧ್ಯಕ್ಷರಾದ ಭರತ ನಾಯ್ಕ, ಗಂಗಾವತಿಯ ಶಿವಪ್ಪ ಜಾಗೊ, ರವಿನಾಯ್ಕ ಚವ್ಹಾಣ, ಪಾಂಡುನಾಯ್ಕ, ವೆಂಕಟೇಶ ನಾಯ್ಕ ಹಾಗೂ ಅನೇಕ ಕವಿಗಳು, ಹಿರಿಯರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

*ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ*
  • *ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ
    ಕಿಷ್ಕಿಂಧವಾಣಿ ಸುದ್ದಿ
    ಬೆಂಗಳೂರು:
    ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿ.ಎಸ್.ಆರ್.‌ ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷವಾಗಿ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ.
    ತರಬೇತಿಯು ಮಾರ್ಚ್‌ 25 ರಿಂದ 27ರ ವರೆಗೆ ಮೈಸೂರಿನ ಇನ್‌ಫೋಸಿಸ್‌ ಕ್ಯಾಂಪಸ್‌ನಲ್ಲಿ ನಡೆಯಲಿದೆ.
    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಬಹುದು.
    ಆಸಕ್ತ ಪತ್ರಕರ್ತೆಯರು ಗೂಗಲ್‌ ಫಾರ್ಮ್‌ https://forms.gle/tozr4GxUQibDHBvk9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ.
    • ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತೆಯರು ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಅಥವಾ ಕಚೇರಿಯ ಅಧಿಕೃತ ಗುರುತಿನಚೀಟಿ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತ ದಾಖಲೆ ಹಾಗೂ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಕುರಿತು ಸೇವಾನುಭವ ದಾಖಲೆಗಳನ್ನು ಸಲ್ಲಿಸಬೇಕು.
    • ಇದು ಮೂರು ದಿನಗಳ ವಸತಿಯುತ ತರಬೇತಿಯಾಗಿದ್ದು, ಪತ್ರಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
    • ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್‌ ಮಾಧ್ಯಮ, ಎಐ ಬಳಕೆ ಹಾಗೂ ಸಾಫ್ಟ್‌ಸ್ಕಿಲ್‌ ಅಭಿವೃದ್ಧಿ ಮತ್ತು ನಾಯಕತ್ವ ತರಬೇತಿ ನೀಡಲಾಗುವುದು.

    ಪತ್ರಕರ್ತೆಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಅಕಾಡೆಮಿಯದ್ದೇ ಆಗಿರುತ್ತದೆ.
    • ಅರ್ಜಿ ಸಲ್ಲಿಸಲು ಮಾರ್ಚ್ 10, 2026 ಕೊನೆಯ ದಿನವಾಗಿದೆ.

Read More *ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ*

ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ: ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ *ಬರೆದ ಪ್ರತೀ ವರದಿ-ತೋರಿಸಿದ ಪ್ರತಿ ಸುದ್ದಿ-ಕ್ಯಾಮರಾ ಎದುರು ಆಡಿದ ಪ್ರತೀ ಮಾತಿಗೂ ಉತ್ತರದಾಯಿತ್ವ ಹೊಂದುವ ಹೊಣೆಗಾರಿ ಪತ್ರಕರ್ತರಾಗಿ: ಕೆ.ವಿ.ಪ್ರಭಾಕರ್ ಕರೆ.

ಕಿಷ್ಕಿಂಧವಾಣಿ ಸುದ್ದಿ
ಬೆಂಗಳೂರು:
ಪ್ರಸ್ತುತ ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನ‌ಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ್ದ “ಮಾಧ್ಯಮ ಹಬ್ಬ-2026” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅರಳುವ ಹೂವಿನ ಒಳಗೆ ಮಕರಂದ ಬೆರೆತಿರುವ ಹಾಗೆ ಅರಳುವ ಪತ್ರಕರ್ತ, ಪತ್ರಕರ್ತೆಯ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು ಎಂದರು.
ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಜನ‌ ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ‌ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಸ್ಪಷ್ಟ ಎಚ್ಚರ ಇರಬೇಕಾಗುತ್ತದೆ.
ಈ ಎಚ್ಚರ ಇದ್ದಾಗ ತಾನು ಬರೆದ ಪ್ರತೀ ವರದಿ, ತಾನು ತೋರಿಸಿದ ಪ್ರತೀ ಸುದ್ಧಿ, ಕ್ಯಾಮರಾ ಮುಂದೆ ತಾನು ಆಡಿದ ಪ್ರತೀ ಮಾತಿಗೂ ಉತ್ತರದಾಯಿತ್ವ ಹೊಂದಿರುವ ಹೊಣೆಗಾರಿ ಪತ್ರಕರ್ತರು ರೂಪುಗೊಳ್ಳುತ್ತಾರೆ.
ಈ ಸಾಮಾಜಿಕ ಎಚ್ಚರ ಬರುವುದು ನಮ್ಮ ನೋಟದಿಂದ. ಸಮಾಜವನ್ನು ನೋಡುವ ಕಣ್ಣುಗಳಿಂದ.
ಯಾರ ಕಣ್ಣುಗಳಿಂದ ಹಾಗೂ ಯಾವ ಕಣ್ಣುಗಳಿಂದ ನಾವು ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಮ್ಮ ನೋಟ, ನಮ್ಮ ಗ್ರಹಿಕೆ ರೂಪುಗೊಳ್ಳುತ್ತದೆ ಎಂದು ವಿವರಿಸಿದರು.
ಹುಟ್ಟಿದ ಮಗು ಮಾತಿಗೆ ಮೊದಲು ನೋಡಿ ಕಲಿಯುತ್ತದೆ. ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ.
ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು “ಇರುವುದನ್ನು ಇರುವ ಹಾಗೆ ಗಮನಿಸಬೇಕು”. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ ಎಂದು ವಿವರಿಸಿದರು.

ವೇದಿಕೆ ಮೇಲಿರುವ ದಿನೇಶ್‌ ಅಮೀನ್ ಮಟ್ಟು ಅವರು ಸೇರಿದಂತೆ ವಡ್ಡರ್ಸೆ ರಘುರಾಮ್ ಶೆಟ್ಟರು, ಪಿ.ಲಂಕೇಶ್, ಖಾದ್ರಿ ಶಾಮಣ್ಣ, ವೈಎನ್ ಕೆ, ಮೊಹರೆ ಹನುಮಂತರಾಯರು, ಡಿವಿಜಿ, ಟಿಎಸ್ ಆರ್ ರೀತಿಯ ಹಲವು ಹಿರಿಯರು ಸೂಜಿಗಳಾಗಿ, ದರ್ಜಿಗಳಾಗಿ, ನೇಕಾರರಾಗಿ ಪತ್ರಿಕಾ ವೃತ್ತಿಯ ಪ್ರಜ್ಞೆಯನ್ನು ರೂಪಿಸುವುದರ ಜೊತೆಗೆ ಸಾಮಾಜಿಕ‌ ಪ್ರಜ್ಞೆಯನ್ನೂ ರೂಪಿಸಿದ್ದಾರೆ. ಸಮಾಜವನ್ನು ಬೆಸೆಯುವ ಬೆಸುಗೆಗಳಾಗಿದ್ದಾರೆ ಎಂದು ಎಲ್ಲರಿಗೂ ಧನ್ಯತೆ ಅರ್ಪಿಸಿದರು.
ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಪತ್ರಿಕೋದ್ಯಮದ‌ ಪಟ್ಟುಗಳನ್ನು ಕಲಿಯಲು ಸಾಧ್ಯವಿಲ್ಲ ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳು ಸ್ಪಷ್ಡವಾಗಿ ತಿಳಿಯಬೇಕಿದೆ. ಓದು, ಸಂಘಟನೆ ಹಾಗೂ ಸ್ವತಂತ್ರ ಚಿಂತನೆಯಿಂದ ಮಾತ್ರ ಒಳನೋಟಗಳನ್ನು ಪಡೆಯಬಹುದು.‌ ಒಳನೋಟವೇ ಇಲ್ಲದವರಿಗೆ ಪತ್ರಿಕೋದ್ಯಮ ಕೈಹಿಡಿಯದು. ಹಾಗಾಗಿ ಈ ಒಳನೋಟಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಒಳಗಣ್ಣುಗಳನ್ನು ತೆರೆದು ತಯಾರಿ ನಡೆಸಿಕೊಳ್ಳಬೇಕಿದೆ. ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಕೂಡ ಪತ್ರಕರ್ತರಾಗಿದ್ದವರು. ಇವರೆಲ್ಲಾ ಪತ್ರಕರ್ತರಾಗಿದ್ದಾಗ ಪತ್ರಿಕೋದ್ಯಮಕ್ಕೆ ಹಣದ ಬಡತನವಿತ್ತು. ಸತ್ಯಕ್ಕೆ ಬಡತನ ಇರಲಿಲ್ಲ. ಈಗ ಹಣದ ಬಡತನದಿಂದ ಹೊರಗೆ ಬಂದಿರುವ ಪತ್ರಿಕೋದ್ಯಮ ಸತ್ಯದ ಬಡತನಕ್ಕೆ ಜಾರಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸತ್ಯಕ್ಕೆ ಹಲವು‌ ಮುಖಗಳು ಇರುತ್ತವೆ. ಆ ಎಲ್ಲ‌ ಮುಖಗಳನ್ನು ನಿರ್ಭಿಡೆಯಾಗಿ ಅನಾವರಣಗೊಳಿಸಲು ಎಲ್ಲ ಜಾತಿ, ಮತ, ಧರ್ಮ, ಆಚಾರ, ವಿಚಾರಗಳನ್ನು ಹೊಂದಿರುವವರು ಮಾಧ್ಯಮ ಕ್ಷೇತ್ರದಲ್ಲಿ ಇದ್ದಷ್ಟು ಮಾಧ್ಯಮ ಕ್ಷೇತ್ರ ಸದೃಢಗೊಳ್ಳುತ್ತದೆ.
ಸ್ವಾತಂತ್ರ್ಯ ಹೋರಾಟದಲ್ಲಿ “ಒಗ್ಗಟ್ಟು” ದೇಶದ ಮೌಲ್ಯವಾಗಿತ್ತು. ಸ್ವಾತಂತ್ರ್ಯಾ ನಂತರ “ವಿವಿಧತೆಯಲ್ಲಿ ಏಕತೆ” ದೇಶದ ಮೌಲ್ಯವಾಗಿತ್ತು. ಭಾರತವನ್ನು ರೂಪಿಸಿದ ಈ ಎರಡೂ ಮೌಲ್ಯಗಳನ್ನೂ ಹಾಳುಗೆಡವುತ್ತಿರುವ ಈ ಹೊತ್ತಲ್ಲಿ “ಬಹುತ್ವ” ನಮ್ಮ ನೆಲದ ಮಂತ್ರವಾಗಿದೆ, ಮೌಲ್ಯವಾಗಿದೆ. ಇದು ಕಾಪಾಡುವ ಹೊಣೆಗಾರಿಕೆ ಹಾಲಿ ಮತ್ತು ಭಾವಿ ಪತ್ರಕರ್ತರ ಮೇಲಿದೆ ಎಂದರು.
ಮಾಧ್ಯಮಗಳಲ್ಲಿ ಆಯಾ ಕಟ್ಟಿನ ಹುದ್ದೆಯಲ್ಲಿರುವವರು ಒಂದೇ ವರ್ಗಕ್ಕೆ ಸೇರಿದರೆ, ಬಹುತ್ವವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ.
ಇಂದು ಮೊಬೈಲ್ ನಲ್ಲಿ ಹರಿದಾಡುವ ಲಕ್ಷಾಂತರ ಕಟೆಂಟ್ ಗಳು ಬಹುತ್ವದ ನೆಲೆಯಲ್ಲಿಯೇ ಸೃಷ್ಟಿಯಾಗಿವೆ. ಮಾಹಿತಿ ಸಾಗರ ಪತ್ರಿಕೋದ್ಯಮಕ್ಕೆ ಬೆದರಿಕೆಯೆಂದು ಭಾವಿಸಬೇಕಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲೊಂದು ಸಂಗತಿಯನ್ನು ಮಾಧ್ಯಮ ಕ್ಷೇತ್ರ ಸ್ಷಷ್ಡವಾಗಿ ಅಳವಡಿಸಿಕೊಳ್ಳಬೇಕಿದೆ. ಅದೇನೆಂದರೆ
ಒಂದು ಸಮುದಾಯ, ಒಂದು ಭಾಷೆ, ಒಂದು ಜಾತಿಯ ದನಿಗಳನ್ನಷ್ಟೆ ಕೇಳುತ್ತಿದ್ದ ಕಾಲಘಟ್ಟದಲ್ಲಿ‌ ಕಟೆಂಟ್ ಸುರಿಮಳೆಯಲ್ಲಿ ನಾನಾ ಮಣ್ಣಿಗೆ ಸೇರಿದ ವಿಭಿನ್ನ ದನಿಗಳಿವೆ.
ಈ‌ ಎಲ್ಲಾ ದನಿಗಳಿಂದ ಡಿಜಿಟಲ್ ಮಾಧ್ಯಮ ವರ್ಣಮಯವಾಗಿದೆ ಮತ್ತು ವಿಭಿನ್ನ ದನಿಗಳ‌ ಕಾರಣಕ್ಕೆ ಜನರನ್ನು ಹಿಡಿದಿಡುತ್ತಿದೆ ಎಂದರು.
ಪತ್ರಿಕೆಗಳಲ್ಲಿ ಮೊದಲೆಲ್ಲ ಪ್ರೂಫ್ ರೀಡರ್ ಇರುತ್ತಿದ್ದರು. ಕ್ರಮೇಣ ಆ ಪರಂಪರೆ ಇಲ್ಲವಾಯಿತು. ವಿಷಯ ತಪ್ಪಿಲ್ಲದ ಹಾಗೆ ಅಚ್ಚಿಗೆ ಹೋಗಲು ಪ್ರೂಪ್ ರೀಡರ್ ಹೇಗೆ ಮುಖ್ಯವಾಗುತ್ತಿದ್ದರೋ ಪ್ರಸ್ತುತ ಎಲ್ಲ ಬಗೆಯ ಮಾಧ್ಯಮಗಳಿಗೂ ಬೇಕಿರುವುದು ಫ್ಯಾಕ್ಟ್ ಚೆಕರ್ಸ್.
ಸುಳ್ಳುಗಳ‌ ನಡುವೆ ಸತ್ಯವನ್ನು, ನೈಜ‌ ಸುದ್ದಿಯನ್ನು ಹೆಕ್ಕಿ, ಜನರ ಮುಂದೆ ಪರಿಣಾಮಕಾರಿಯಾಗಿ ಇಡಬಲ್ಲವರು ಮಾತ್ರ ಪರಿಣಾಮಕಾರಿ ಪತ್ರಕರ್ತರಾಗಿ ಮಂಚೂಣಿಗೆ ಬರಲು ಸಾಧ್ಯವಿದೆ.
ಸಾವಿರ ಸುಳ್ಳಿನ ಕಟೆಂಟ್ ಗಳ ನಡುವೆ ಸತ್ಯ ಹೇಳುವ ಕಟೆಂಟ್ ಗಳಿಗೆ ಆರಂಭದಲ್ಲಿ ಹಿನ್ನಡೆಯಾದರೂ ಅದು ಗೆಲ್ಲುತ್ತದೆ. ಆ ಭರವಸೆಯಲ್ಲಿ ಪತ್ರಕರ್ತರು ಸತ್ಯವನ್ನು ಹುಡುಕಬೇಕಿದೆ.
ಈ ಸತ್ಯವನ್ನು ಹುಡುಕುವ ಕಣ್ಣುಗಳನ್ನು, ನೋಟವನ್ನು, ಗ್ರಹಿಕೆಯನ್ನು ಕೊಡುವ ಮೂಲಕ “ಸಾಮಾಜಿಕ ಪ್ರಜ್ಞೆ-ನೈತಿಕ ಪ್ರಜ್ಞೆ ಬೆರೆತ ಪತ್ರಕರ್ತರು ರೂಪುಗೊಳ್ಳಲು ಈ ಕಾರ್ಯಾಗಾರ ನೆರವಾಗಲಿ ಎಂದು ಆಶಿಸಿದರು.
ಹಿರಿಯ ಸಮಾಜವಾದಿ ಚಿಂತಕರೂ, ಪತ್ರಕರ್ತರೂ ಆದ ದಿನೇಶ್ ಅಮೀನ್ ಮಟ್ಟು ಅವರು ಮಾತನಾಡಿ, ” ಬರೆಯುವುದಕ್ಕಿಂತ ಹೆಚ್ಚಾಗಿ ಓದಬೇಕು. ಪತ್ರಕರ್ತರಾಗುವವರಿಗೆ ಓದಿನ‌ ಹಸಿವು ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ವೃತ್ತಿ ಸಾಮಾಜಿಕ ಪಾಪ. ಪಾತಕ, ಮೂಡನಂಬಿಕೆಗಳನ್ನು ವಿಜ್ರಂಭಿಸುವವರು ಒಳ್ಳೆ ಪತ್ರಕರ್ತ ಇರಲಿ, ಒಬ್ಬ ಜವಾಬ್ದಾರಿಯುತ ನಾಗರಿಕ ಕೂಡ ಆಗಿರಲು ಸಾಧ್ಯವಿಲ್ಲ. ಅಜ್ಞಾನ, ಅಸೂಕ್ಷ್ಮ ಆಗಿರುವವರು ಪತ್ರಕರ್ತ ಎನ್ನಿಸಲು ಸಾಧ್ಯವೇ ಇಲ್ಲ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ‌ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಕುಲಪತಿ ಪ್ರೊ.ರಮೇಶ್ ಬಿ, ಕುಲಸಚಿವ ನೀವೀನ್ ಜೋಸೆಫ್, ವಾರ್ತಾ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಪೈ ಮೆಡಿಕಲ್ ಅಕಾಡೆಮಿ ಪಿಯುಸಿ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಪೈ ಮೆಡಿಕಲ್ ಅಕಾಡೆಮಿಯ ಬಿಬಿಸಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಭಾಗವಹಿಸಿದ ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI), ರೋಬೋಟಿಕ್ಸ್, ಡೋನ್ ಪ್ರದರ್ಶನ, 3D ಹೊಲೊಗ್ರಾಮ್, ರಕ್ತ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷೆ, ತ್ಯಾಜ್ಯ ನಿರ್ವಹಣೆ, ನೀರಿನ ಶುದ್ದೀಕರಣ, ಫ್ರೀ ಎನರ್ಜಿ, ಹೈಡ್ರಾಲಿಕ್ ಬ್ರಿಡ್ಡ ( ಜಲಚಾಲಿತ ತಂತ್ರಜ್ಞಾನ ), ವಿವಿಧ ರಾಸಾಯನಿಕ ಕ್ರಿಯೆಗಳು, ಹೀಗೆಯೇ 30ಕ್ಕೂ ಹೆಚ್ಚು ಪ್ರದರ್ಶನಗಳು ಕಂಡುಬಂದವು.

ಮೊದಲನೆಯ ದಿನ ಪಾಲಕರು ಹಾಗೂ ಎರಡನೇ ದಿನ ಹಲವಾರು ಪ್ರೌಢಶಾಲೆಯ ವಿದ್ಯಾರ್ಥಿಗಳು ಬಂದು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಪೈ ಮೆಡಿಕಲ್ ಅಕಾಡೆಮಿಯ ಸಂಸ್ಥಾಪಕ ವಿನೋದ್ ಎಸ್ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಮತ್ತು ಸಂಶೋಧನಾ ಆಸಕ್ತಿಯನ್ನು ಪ್ರೇರೇಪಿಸುವ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದು ಪಠ್ಯಪುಸ್ತಕದ ಜ್ಞಾನವನ್ನು ಪ್ರಾಯೋಗಿಕ ಮಾದರಿಗಳ ಮೂಲಕ ಅನ್ವೇಷಿಸಲು, ಪರಿಸರ ಸಂರಕ್ಷಣೆ, ತಂತ್ರಜ್ಞಾನದ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಹ ಸಂಸ್ಥಾಪಕ ಗಾಂಧಿ ಕೆ, ಉಪ ಪ್ರಾಂಶುಪಾಲ ಸಂದೀಪ ನಾಯಕ ಹಾಗೂ ಎಲ್ಲಾ ಉಪನ್ಯಾಸಕರು ಇದ್ದರು.

ರಾಜಾ ಶ್ರೀರಂಗದೇವರಾಯಲು ಕಂಚಿನ ಪುತ್ಥಳಿಯ ಸ್ಥಾಪನೆಗೆ ಶೀಘ್ರ ಅಭಿಮಾನಿಗಳ ಸಭೆ ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನ ರಚನೆಗೆ ನಿರ್ಧಾರ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಪ್ರತಿ ವರ್ಷ ಸತ್ಕರಿಸಲು ಯೋಜನೆ

ಕಿಮ್ಮಿಂಧವಾಣಿ ಸುದ್ದಿ

 

ಗಂಗಾವತಿ: ಮಾಜಿ ಸಚಿವರು ಹಾಗೂ ಆನೆಗೊಂದಿ ರಾಜವಂಶಸ್ಥರಾದರಾಜಾ ಶ್ರೀರಂಗದೇವರಾಯಲು

 

ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಸತ್ಕರಿಸಲು ತೀರ್ಮಾನ ಕೈಗೊಳ್ಳಲಾಯಿತು.ರಾಜಾಶ್ರೀರಂಗದೇವರಾಯಲು ಕಂಚಿನ ಪುತ್ಥಳಿಯ ಸ್ಥಾಪನೆಗೆ ಶೀಘ್ರಅಭಿಮಾನಿಗಳ ಸಭೆ ಕರೆದು ತೀರ್ಮಾನಿಸಲಾಗುತ್ತದೆ ಎಂದು ಆನೆಗೊಂದಿಯ ಹಿರಿಯ ಮುಖಂಡರಾದ ಹಂಪಿ ಹನುಮಂತಯ್ಯ ಹೇಳಿದರು.

 

ಸಾವಯವ ಕೃಷಿ ಕೇಂದ್ರದಲ್ಲಿ ರಾಜಾ ಅವರು ತಾಲೂಕಿನ ತಿರುಮಲಾಪೂರದ

 

ಶ್ರೀರಂಗದೇವರಾಯಲು ಪ್ರತಿಷ್ಠಾನ ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತಾಡಿದರು.

 

ಶ್ರೀರಂಗದೇವರಾಯಲು ಜನಸಾಮಾನ್ಯರ ರಾಜಕಾರಣಿಯಾಗಿದ್ದರು. ಅವರ ಹೆಸರಿನಲ್ಲಿ ಮತ್ತು ಅವರ ಕುಟುಂಬಸ್ಥರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜನೆ ಮಾಡಬೇಕು. ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಪ್ರತಿ ವರ್ಷ ಸತ್ಕರಿಸಬೇಕು.

 

ವೈಚಾರಿಕ ಮತ್ತು ಜನೋಪಯೋಗಿ ಯೋಜನೆಗಳ ಕುರಿತು ಶ್ರೀರಂಗದೇವರಾಯಲು ಅವರಿಗಿದ್ದ ಕಳಕಳಿಯನ್ನು ಕಾರ್ಯಕ್ರಮ ರೂಪದಲ್ಲಿ

 

ಅನುಷ್ಠಾನ ಮಾಡಬೇಕು. ತುಂಗಭದ್ರಾ ಡ್ಯಾಂ ಕಾಲುವೆಗಳ ಕುರಿತು ಮತ್ತು ವಿಶೇಷವಾಗಿ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿಗಾಗಿ

 

ಮೂಲಕ ಶ್ರೀರಂಗದೇವರಾಯಲು ಇನ್ನೂ ಜನಮಾನಸದಲ್ಲಿದ್ದು ಅವರ ಕಾರ್ಯಗಳನ್ನು ಪ್ರತಿಷ್ಠಾನಗಳ ಮೂಲಕ ಅನುಷ್ಟಾನ ಮಾಡಲು ತೀರ್ಮಾನಿಸಾಗಿದೆ ಎಂದರು.

 

ಹಲವು ಭಾರಿ ಮುಖ್ಯಮಂತ್ರಿಗಳಿಗೆ ಅವರು ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಶಾಶ್ವತ ದುರಸ್ತಿ ಕಾರ್ಯಗಳಾಗಿದ್ದು ಅವರಿದ್ದ ನೀರಾವರಿ ಕಾಳಜಿ ಮತ್ತು ಬಡವರಿಗೆ ಮನೆಗಳ ನಿರ್ಮಾಣ ಮತ್ತು ಆನೆಗೊಂದಿ ಉತ್ಸವ ಹಾಗೂ ತಳವಾರ ಘಟ್ಟ ಸೇತುವೆ ಕನಸು ಹೀಗೆ ಹಲವು ಜನಪರವಾದ ಯೋಜನೆಗಳನ್ನು ಮತ್ತು ಗಂಗಾವತಿಯಲ್ಲಿ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಬೃಹತ್ ಬಸ್ ನಿಲ್ದಾಣ, 100 ಹಾಸಿಗೆ ಸರಕಾರಿ ಆಸ್ಪತ್ರೆ, ಮಿನಿವಿಧಾನಸೌಧ ಹೀಗೆ ಹಲವು ಕಾರ್ಯಗಳ

 

ಸಭೆಯಲ್ಲಿ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಟಿ.ಸತ್ಯನಾರಾಯಣ, ಪತ್ರಕರ್ತರಾದ ಕೆ.ಮಲ್ಲಿಕಾರ್ಜುನ ಸಾಣಾಪೂರ, ಕೆ.ನಿಂಗಜ್ಜ, ಮುಖಂಡರಾದ ಕೆ.. ತಿರುಕಪ್ಪ, ಟಿ.ಜಿ.ಬಾಬು, ವೈರಮೇಶ, ನರಸಿಂಹಲು. ಕೆ. ವೆಂಕಟೇಶ. ಇಲ್ಲೂರು ರಾಮಕೃಷ್ಣ, ಚಂದ್ರಣ್ಣ, ಯುವರಾಜ,ನಟ ವಿಷ್ಣುಜೋಶಿ ಆದಾಪೂರ, ಶಿವಚ್ಯು, ಬಾಳೆಕಾಯಿ ತಿಮ್ಮಪ್ಪ,ಕೆ.ಪವನಕುಮಾರ ಸೇರಿ ಆನೆಗೊಂದಿ ಭಾಗದ ಮುಖಂಡರಿದ್ದರು