Breaking News
ದಿ ಕೇರಳ ಸ್ಟೋರಿ-2 ವಿದ್ಯಾರ್ಥಿನಿಯರು,ಮಹಿಳೆಯರಿಗೆ ಉಚಿತ ಪ್ರದರ್ಶನ:ದೀಪಕ್ ಬಾಂಠಿಯಾ.

*ಮಾ.17ರಂದು ಗಂಗಾವತಿ ಚಂದ್ರಹಾಸ ಟಾಕೀಸ್ ನಲ್ಲಿ ಪ್ರದರ್ಶನ ವ್ಯವಸ್ಥೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮತಾಂತರ ಮತ್ತು ಲವ್ ಜಿಹಾದ್ ನಂತಹ ಕೃತ್ಯಕ್ಕೆ ಒಳಗಾಗುವ ವಿದ್ಯಾರ್ಥಿನಿಯರ ಕಥೆಯನ್ನು ಒಳಗೊಂಡ “ದಿ ಕೇರಳ ಸ್ಟೋರಿ ಭಾಗ 2” ಚಲನಚಿತ್ರವನ್ನು ಗಂಗಾವತಿ ನಗರದ ಚಂದ್ರಹಾಸ ಚಿತ್ರಮಂದಿರದಲ್ಲಿ ಮಾರ್ಚ್ 17ರಂದು ಸಂಜೆ 5.30 ಗಂಟೆಗೆ ಉಚಿತವಾಗಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದ್ದು ವಿದ್ಯಾರ್ಥಿನಿಯರು ಮತ್ತು ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ತಪ್ಪದೇ ವೀಕ್ಷಣೆ ಮಾಡುವಂತೆ ಬಿಜೆಪಿ ಯುವ ಘಟಕದ ಮುಖಂಡ ದೀಪಕ್ ಬಾಂಠಿಯಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ದಿ ಕೇರಳ ಸ್ಟೋರಿ ಭಾಗ-01 ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡು ಸಾಮಾಜಿಕ ಜಾಗೃತಿ ಮೂಡಿಸುವ ಜತೆಗೆ ಚರ್ಚೆ ಹುಟ್ಟು ಹಾಕಿತ್ತು. ಮತಾಂತರ ಮಾಡುವ ಉದ್ದೇಶದಿಂದ ಇಂದು ಮಹಿಳೆಯರು ಮತ್ತು ವಿದ್ಯಾರ್ಥಿನಿಯರನ್ನು ಕೆಲ ಮತಾಂದರು ತಲೆ ಕೆಡಿಸಿ ಧರ್ಮಂತರ ಮಾಡಲು ಪ್ರೀತಿಯ ನಾಟಕವಾಡುತ್ತಾರೆ ಈ ಕಥಾ ಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಭಾಗ 2 ಸಿನಿಮಾವನ್ನು ತಪ್ಪದೇ ಎಲ್ಲರೂ ನೋಡುವಂತೆ ದೀಪಕ್ ಮನವಿ ಮಾಡಿದ್ದಾರೆ

ಎಎಸ್ ಐ ಸ್ಮಾರಕಗಳಿಲ್ಲದಿದ್ದರೂ ಆನೆಗೊಂದಿ ಕಿಷ್ಕಿಂಧಾ ಭಾಗ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅವೈಜ್ಞಾನಿಕ, ಪ್ರಾಧಿಕಾರದಿಂದ ಕಿಷ್ಕಿಂಧಾ ಭಾಗ ಕೈ ಬಿಡುವಂತೆ ಆಗ್ರಹ!

*ಮಾ.18ರಂದು ಕಡೆಬಾಗಿಲು ಶ್ರೀರಂಗದೇವರಾಯಲು ಸರ್ಕಲ್‌ ಬಳಿ ಸ್ಥಳೀಯರಿಂದ ಪ್ರತಿಭಟನೆ.

*ಸ್ಟೇಕ್ ಹೋಲ್ಡರ್ ಅಭಿಪ್ರಾಯವಿಲ್ಲದೆ 2021 ರಲ್ಲಿ ಮಾಸ್ಟರ್ ಪ್ಲಾನ್ ರಚನೆ ಆಕ್ರೋಶ.

*ಹಲ್ಲು ಕಿತ್ತ ಹಾವಿನಂತಾಗಿರುವ ಆನೆಗೊಂದಿ, ಸಾಣಾಪೂರ ಮತ್ತು ಮಲ್ಲಾಪೂರ ಗ್ರಾ.ಪಂ.ಆಡಳಿತ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗುಂದಿ ಭಾಗದಲ್ಲಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಎಎಸ್ಐ ಸ್ಮಾರಕಗಳು ಇರದಿದ್ದರೂ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಭಿವೃದ್ಧಿಗೆ ಮಾರಕಾಗುವಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಕೂಡಲೇ ಆನೆಗೊಂದಿ ಕಿಸ್ಕಿಂದ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ್ ಬಾಬು ಹಾಗೂ ಗ್ರಾಮ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಿರೇಮಠ ಒತ್ತಾಯಿಸಿದರು.

ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 35 ವರ್ಷಗಳಿಂದ ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಜೊತೆಗೆ ನೂರಾರು ವರ್ಷಗಳಿಂದ ವಾಸವಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಡ್ಡಗಾಲು ಹಾಕುತ್ತಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು ಪರವಾನಿಗೆ ಪಡೆಯಲು ಹರಸಹಾಸಪಟ್ಟರೂ ಹಂಪಿ ಅಭಿವೃದ್ಧಿ ಪದಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸ್ಥಳೀಯ ಯುವಕರೆಲ್ಕಾ ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವ ಸ್ಥಿತಿ ಬಂದಿದೆ. ಗ್ರಾಮ ಸ್ವರಾಜ್ಯ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಕನಸನ್ನು ಆನೆಗೊಂದಿ, ಸಾಣಾಪುರ, ಮಲ್ಲಾಪುರ ಮತ್ತು ಸಂಗಪುರ ಗ್ರಾಮಗಳಲ್ಲಿ ಅನುಷ್ಠಾನ ಮಾಡಲು ಆಗುತ್ತಿಲ್ಲ, ಪ್ರತಿಯೊಂದು ವಿಷಯದಲ್ಲಿಯೂ ಅಭಿವೃದ್ಧಿ ಪ್ರಾಧಿಕಾರ ಮೂಗು ತೂರಿಸಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ.

ಆದ್ದರಿಂದ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೂಡಲೇ ಕೈಬಿಡಬೇಕು. ಇದಕ್ಕಾಗಿ ಸ್ಥಳೀಯ ಎಲ್ಲಾ ಜನರನ್ನು ಸೇರಿಸಿ ಮಾ. 18ರಂದು ಕಡಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ.

ವಿಶ್ವ ಪರಂಪರ ಪಟ್ಟಿಗೆ ಸೇರುವ ಪ್ರದೇಶದಲ್ಲಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯವರು ಗುರುತಿಸುವ ಎಎಸ್ಐ ಸ್ಮಾರಕಗಳು ಇರಬೇಕು. ಆನೆಗೊಂದಿ ಭಾಗದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ಹಕ್ಕಿನಲ್ಲಿ ಕೊಟ್ಟಿರುವ ಮಾಹಿತಿಯಂತೆ ಆನೆಗೊಂದಿ ಭಾಗದಲ್ಲಿ ಯಾವುದೇ ಎಎಸ್ಐ ಸ್ಮಾರಕಗಳು ಇಲ್ಲ. ಇಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಗುರುತಿಸಲ್ಪಟ್ಟ ಎಲ್ಲಾ ದೇವಸ್ಥಾನಗಳು, ಸ್ಮಾರಕಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರು ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಸ್ಥಳೀಯರಿಗೆ ಒದಗಿಸಿ ಕೊಟ್ಟಿದ್ದಾರೆ. ಇದರಿಂದ ಉದ್ಯೋಗ ದದೊರೆಯುತ್ತವೆ. ಜೊತೆಗೆ ದೇಶ ವಿದೇಶದಲ್ಲಿ ಆನೆಗೊಂದಿ ಕಿಷ್ಕಿಂಧಾ ಭಾಗ ಪ್ರಸಿದ್ಧವಾಗಿದೆ. ದೇಶದ ಎಲ್ಲಾ ಪ್ರವಾಸಿ ತಾಣಗಳಲ್ಲಿ ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲಾಗಿದ್ದರು. ಆನೆಗೊಂದಿ ಭಾಗದಲ್ಲಿರುವ ರಸ್ತೆಗಳನ್ನು ಅಗಲೀಕರಣ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಡ್ಡಗಾಲಿನಿಂದಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಹಳೆಮಳೆಗಳನ್ನು ಕೆಡವಿ ಹೊಸ ಮನೆಗಳ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಜನಸಂಖ್ಯೆ ಹೆಚ್ಚುತ್ತಿದೆ ಗ್ರಾಮಗಳು ವಿಸ್ತರಣೆಯಾಗಲು ಹಂಪಿ ಪ್ರಾಧಿಕಾರ ಬಿಡುತ್ತಿಲ್ಲ.

ನಿರೀಕ್ಷೆ ಸುಳ್ಳಾಗಿದೆ: ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಪ್ರತಿ ವರ್ಷ ಸ್ಟೇಕ್ ಹೋಲ್ಡರ್ಸ್ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಜೊತೆಗೆ ಪ್ರತಿ 10 ವರ್ಷಕ್ಕೊಮ್ಮೆ ಮಾಸ್ಟರ್ ಪ್ಲಾನ್, ಮಹಾಯೋಜನೆ ಪ್ರಕಟಣೆ ಮಾಡುವ ಮಾತನಾಡಿದ್ದರು, ಆದರೆ 35 ವರ್ಷ ಕಳೆದರೂ ಆನೆಗುಂದಿ ಭಾಗ ಮೊದಲಿದ್ದಂತೆ ಇದೆ ಯಾವುದೇ ಕಾರ್ಯಕ್ರಮಗಳು ಅಭಿವೃದ್ಧಿ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ನಿರ್ಣಯವನ್ನು ಮಾಡಿ ಆನೆಗೊಂದಿ ಭಾಗದಲ್ಲಿ ಯಾವುದೇ ಎಎಸ್ಐ ಸ್ಮಾರಕ ಇಲ್ಲ,ಆದ್ದರಿಂದ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಕಾರದಿಂದ ಹೊರಗಿಟ್ಟು ಹಂಪಿ ಪ್ರದೇಶದಲ್ಲಿ ಮಾತ್ರ ಪ್ರಾಧಿಕಾರ ತನ್ನ ಕೆಲಸ ಮಾಡಲಿ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದಂತ ಹೋರಾಟ ನಡೆಸಲು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿ.ಎಚ್.ಪ್ರಸಾದ,ಪ್ರಶಾಂತ,ರಾಗ, ಹೊನ್ನಪ್ಪ ನಾಯಕ,ಶ್ರೀನಾಥ,ನೀಲಪ್ಪ,ಹರ್ಷಾ,ನ್ಯಾಯವಾದಿ ಸಾಯಿಕುಮಾರ,ವಿರೇಶ ಹನುಮನಹಳ್ಳಿ,ಮಂಜುನಾಥ ಗೌಡ,ಬಾಳೇಶ ಹನುಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಗಂಗಾವತಿ: ಮೃತ್ಯು ಇಂಜೆಕ್ಷನ್ ಹಾವಳಿ!  ಮಾತ್ರೆ ಪುಡಿಯ ಇಂಜೆಕ್ಷನ್ ಚುಚ್ಚಿಕೊಳ್ತಿದ್ದಾರೆ ಯುವಕರು!

*ನಗರ ಠಾಣೆ ದೂರು ದಾಖಲು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದಲ್ಲಿ ಈಗ ಹೊಸದೊಂದು ಆತಂಕ ಶುರುವಾಗಿದೆ!

ಶಾಮಿಯಾನ ಕೆಲಸ ಮಾಡೋ ಯುವಕರು, ಸ್ಲಂ ನಿವಾಸಿಗಳನ್ನೇ ಟಾರ್ಗೆಟ್ ಮಾಡಿರೋ ‘ಟ್ಯಾಬ್ಲೆಟ್’ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ! ಮೈಕೈ ನೋವಿಗೆ ಬಳಸೋ ಪೇನ್ ಕಿಲ್ಲರ್ ಮಾತ್ರೆ ಈಗ ಕಿಕ್ ಕೊಡೋ ಡ್ರಗ್ಸ್ ಆಗಿ ಬದಲಾಗಿದೆ!

ಯುವಕರ ಬದುಕಲ್ಲಿ ಇಂಜೆಕ್ಷನ್ ವಿಷ!

ಶಾಮಿಯಾನ ಕೆಲಸ ಮಾಡುವಾಗ ಬರೋ ಮೈಕೈ ನೋವನ್ನ ಕಡಿಮೆ ಮಾಡಿಕೊಳ್ಳೋಕೆ ಅಂತ ಯುವಕರು ನುಂಗೋಕೆ ಶುರು ಮಾಡಿದ ‘ಟ್ಯಾಪೆಂಟಡಾಲ್’ ಅನ್ನೋ ಮಾತ್ರೆ ಈಗ ಅವರ ಪ್ರಾಣಕ್ಕೆ ಕುತ್ತಾಗಿದೆ. ಮೊದಲು ಮಾತ್ರೆ ನುಂಗುತ್ತಿದ್ದವರು ಈಗ ಹೆಚ್ಚಿನ ಅಮಲಿಗಾಗಿ ಆ ಮಾತ್ರೆಯನ್ನ ಪುಡಿ ಮಾಡಿ, ನೀರಿನಲ್ಲಿ ಕಲಸಿ, ನೇರವಾಗಿ ನರಗಳಿಗೆ ಇಂಜೆಕ್ಟ್ ಮಾಡಿಕೊಳ್ತಿದ್ದಾರೆ! ಇದರಿಂದ ಕೈಕಾಲುಗಳು ಊದಿಕೊಳ್ಳುತ್ತಿವೆ, ಮೈಮೇಲೆ ಗಾಯಗಳಾಗ್ತಿವೆ!

ಫ್ಯಾನ್ಸಿ ಸ್ಟೋರ್‌ನಲ್ಲಿ ವಿಷದ ವ್ಯಾಪಾರ!

ನಗರದ ದುರ್ಗಾದೇವಿ ಗುಡಿ ಹತ್ತಿರ ಇರೋ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ ಈ ಕಿರಾತಕ ಕೆಲಸಕ್ಕೆ ಅಡ್ಡಾವಾಗಿದೆ! ಅಂಗಡಿ ಮಾಲೀಕ ಕಿಶನ್ ಕುಮಾರ್ ಕೇವಲ 300 ರೂಪಾಯಿಗೆ ಎರಡೆರಡು ಮಾತ್ರೆಗಳನ್ನ ವೈದ್ಯರ ಚೀಟಿ ಇಲ್ಲದೆ ಮಾರುತ್ತಿದ್ದಾನೆ. ಈ ಮಾತ್ರೆ ಸಿಗಲಿಲ್ಲ ಅಂದ್ರೆ ಯುವಕರು ಹುಚ್ಚರಂತಾಗ್ತಿದ್ದಾರೆ, ಹಣಕ್ಕಾಗಿ ಹೆತ್ತವರ ಜೇಬಿಗೇ ಕನ್ನ ಹಾಕ್ತಿದ್ದಾರೆ!

ದೂರು ದಾಖಲು:

ಈ ಜಾಲದ ಬಗ್ಗೆ ಸಂತ್ರಸ್ತ ಯುವಕ ಪೊಲೀಸ್ ಠಾಣೆ

ದೂರು ನೀಡಿದ್ದು ನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳೆ ಅವರು . ಬಿ.ಎನ್.ಎಸ್. ಸೆಕ್ಷನ್ 123 ರಡಿ ಕೇಸ್ ದಾಖಲಾಗಿದ್ದು, ಫ್ಯಾನ್ಸಿ ಸ್ಟೋರ್ ಮಾಲೀಕ ಕಿಶನ್ ಕುಮಾರ್‌ನನ್ನ ತನಿಖೆಗೆ ಒಳಪಡಿಸಲಾಗಿದ್ದು ಇನ್ನಷ್ಟು ದುಷ್ಕರ್ಮಿಗಳ ಬಂಧನ ಸಾಧ್ಯತೆ ಇದೆ.

ಲಕ್ಷ ರೂ.ಮೌಲ್ಯದ ಬೋರಮಳ ಚಿನ್ನದ ಸರವನ್ನು ಮಾಲಕಿಗೆ ಮರಳಿಸಿದ ಕೆ ಎಸ್ ಸರ್ ಟಿ ಸಿ  ಸಿಬ್ಬಂದಿ ವರ್ಗ!

*ಕೊಪ್ಪಳ ರಾಯಚೂರು ಬಸ್ ನಲ್ಲಿ ಚಿನ್ನದ ಸರದ ಬ್ಯಾಗ ಇಟ್ಟಿದ್ದ ಮಹಿಳೆ.

*ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಬಸ್ ತಪ್ಪಿಸಿಕೊಂಡಿದ್ದ ಮಹಿಳೆ.

*ಕೆಎಸಾರ್ಟಿಸಿ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬಸ್ಸಿನಲ್ಲಿ ಚಿನ್ನದ ಸರವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದ ಮಹಿಳಾ ಪ್ರಯಾಣಿಕರಿಗೆ ಚಿನ್ನದ ಸರದ ಬ್ಯಾಗನ್ನು ಕೆಎಸಾರ್ಟಿಸಿ ಅಧಿಕಾರಿಗಳು ಮರಳಿಸಿದ್ದಾರೆ. ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ರಾಯಚೂರಿಗೆ ಹೋಗಲು ಕೊಪ್ಪಳ ರಾಯಚೂರು ಬಸ್ಸಿನಲ್ಲಿ ಸೀಟು ಹಿಡಿದು ಸೀಟಿನ ಮೇಲೆ ತನ್ನ ಬ್ಯಾಗನ್ನು ಇಟ್ಡು ಶೌಚಾಲಯಕ್ಕೆ ತೆರಳಿದಾಗ ಬಸ್ ಹೊರಟಿದ್ದು ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಕೆಎಸಾರ್ಟಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದು ಗಂಗಾವತಿ ಬಸ್ ನಿಲ್ದಾಣದಲ್ಲಿ ಬಸ್ ನಲ್ಲಿ ಇದ್ದ ಬ್ಯಾಗನ್ನು ಸಹಾಯಕ ನಿಯಂತ್ರಣ ಅಧಿಕಾರಿ ನಾಗರಾಜ ಪೂಜಾರ ಹಾಗೂ ಬಸ್ ಕಂಡಕ್ಟರ್ ಶರಣಪ್ಪ ಮಹಿಳೆಯನ್ನು ಕೊಪ್ಪಳ ದಿಂದ ಕರೆಸಿ ಬ್ಯಾಗನ್ನು ತಲುಪಿಸಿದ್ದಾರೆ

ಬ್ಯಾಗ ತೆರೆದು ನೋಡಿದಾಗ ಐದು ಗ್ರಾಂ ಗೂ ಹೆಚ್ಚು ಚಿನ್ನದ ಬೋರಮಳದ ಸರ ಇರುವುದು ಗೊತ್ತಾಗಿದೆ.

ಒತ್ತಡ ಬದುಕಿನ ಮಧ್ಯದಲ್ಲೂ ಕೆಎಸಾರ್ಟಿಸಿ ನೌಕರರು ಪ್ರಯಾಣಿಕರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಒಳಗಾಗಿದೆ

ಚಿನ್ನದ ಸರ ವಾಪಸ್ ಪಡೆದ ಮಹಿಳೆ ಕೆಎಸಾರ್ಟಿಸಿ ನೌಕರರು, ಕಂಡಕ್ಟರ್, ಡ್ರೈವರ್ ಅಧಿಕಾರಿಗಳಿಗೆ ಅಭಿನಂದಿಸಿದ್ದಾರೆ.

ಸರಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ

ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಕೆ. ನೈಜತೆ ಪರಿಶೀಲನೆಗೆ ಆರು ಜನ ನೋಡಲ್ ಅಧಿಕಾರಿಗಳ ನೇಮಕ.
*ನಕಲಿ ದಾಖಲೆ ಸಲ್ಲಿಸಿದ ಅತಿಥಿ ಉಪನ್ಯಾಸಕರಲ್ಲಿ ಡವ..ಡವ..

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳಲು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರ ದಾಖಲಾತಿಗಳ ನೈಜತೆ ಪರಿಶೀಲನೆಗಾಗಿ ಪ್ರಾದೇಶಿಕವಾರು
ಆರು ಪ್ರಾಧ್ಯಾಪಕರನನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಆದೇಶ ಮಾಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಖಾಲಿ ಇದ್ದ ಪ್ರಾಧ್ಯಾಪಕರ ಹುದ್ದೆಗಳ ಹಿನ್ನೆಲೆಯಲ್ಲಿ ಆಯಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಯುಜಿ ಮತ್ತು ನಾನ್ ಯುಜಿ ಅರ್ಹತೆಯಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿ ಪ್ರಕ್ರಿಯೆ ಜರುಗಿ ಅತಿಥಿ ಉಪನ್ಯಾಸಕರು ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಈಗಾಗಲೇ ತಮ್ಮ ಕರ್ತವನ್ನು ನಿರ್ವಹಿಸುತ್ತಿದ್ದಾರೆ.
ಈ ಮಧ್ಯೆ ಅತಿಥಿ ಉಪನ್ಯಾಸಕರ ಹುದ್ದೆ ಸಿಗದವರು ಮತ್ತು ಸಾಮಾಜಿಕ ಹೋರಾಟಗಾರರು ನಕಲಿ ಪಿಎಚ್ಡಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ನೇಮಕಗೊಂಡಿರುವವರನ್ನು ಕುರಿತು ಆಕ್ಷೇಪಣೆ ಸಲ್ಲಿಸಿದ್ದರಿಂದ ಉನ್ನತ ಶಿಕ್ಷಣ ಇಲಾಖೆ ದಾಖಲೆಗಳ ನೈಜತೆಯನ್ನು ಪಡೆದುಕೊಳ್ಳಲು ಹಲವು ಸೂಚನೆ ನೀಡಿದ್ದರೂ ಸಹ ಬಹುತೇಕ ಅಧಿಕ ಅತಿಥಿ ಉಪನ್ಯಾಸಕರು ತಮ್ಮ ದಾಖಲೆಗಳ ನೈಜತೆ
ಸಲ್ಲಿಸಿಲ್ಲ. ಈ ಮಧ್ಯೆ ಸುಮಾರು 1200 ಜನ ಅತಿಥಿ ಉಪನ್ಯಾಸಕರು ವಿವಿಧ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹೊರಗೆ ಹೋಗಿದ್ದಾರೆ. ಜೊತೆಗೆ ಉನ್ನತ ಶಿಕ್ಷಣ ಇಲಾಖೆಯವರು ಆಯಾ ಕಾಲೇಜಿನ ಪ್ರಾಚಾರ್ಯರು ನೈಜತೆ ಪ್ರಮಾಣ ಪತ್ರ ಪರಿಶೀಲನೆ ಮಾಡುವ ಆದೇಶ ಹೊರಡಿಸಿದ್ದು ಇದು ಅವೈಜ್ಞಾನಿಕ ವಾಗಿದೆ ಆದ್ದರಿಂದ ಉನ್ನತ ಶಿಕ್ಷಣ ಇಲಾಖೆ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡುವಂತೆ ಅತಿಥಿ ಉಪನ್ಯಾಸಕರ ಸಂಘದವರು ಇಲಾಖೆ
ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರಿಂದ ಇದೀಗ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಪ್ರಾದೇಶಿಕವಾರು ಆರು ಜನ ಪ್ರಾಧ್ಯಾಪಕರನ್ನು ಅತಿಥಿ ಉಪನ್ಯಾಸಕರ ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರಗಳ ನೈಜತೆಯನ್ನು
ಪರಿಶೀಲನೆ ಮಾಡಿ ಇಲಾಖೆಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಪ್ರಸ್ತುತ ಕರ್ತವ್ಯ ನಿರ್ವಹಿಸುವವರು ಮತ್ತು ರಾಜೀನಾಮೆ ನೀಡಿದವರ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.
ಬಹುತೇಕ ಅತಿಥಿ ಉಪನ್ಯಾಸಕರು ನಕಲಿ ಪಿಎಚ್ಡಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿ ಉಪನ್ಯಾಸಕರಾಗಿ ನೇಮಕಗೊಂಡಿದ್ದು ಇದನ್ನು ಪ್ರಶ್ನಿಸಿ ನಿಜವಾದ ಪಿ ಎಚ್ ಡಿ ಮಾಡಿದವರು ಮತ್ತು ಅಂಗವಿಕಲತೆಯನ್ನು ಹೊಂದಿದವರು ನಕಲಿ ಪಿಎಚ್ಡಿ ಮತ್ತು ಅಂಗವಿಕಲತೆಯ ಪ್ರಮಾಣ ಪತ್ರ ಹೊಂದಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂಯೆ ಉನ್ನತ ಇಲಾಖೆಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಇದೀಗ ರಾಜೀನಾಮೆ ನೀಡಿ ಹೊರಗೆ ಹೋಗಿರುವ 12 ನೂರು ಜನ ಅತಿಥಿ ಉಪನ್ಯಾಸಕರು ಸೇರಿದಂತೆ ಪ್ರಸ್ತುತ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ದಾಖಲಾತಿ ನಕಲಿಯೋ ಅಸಲಿಯೋ ಎಂಬ ಜಿಜ್ಞಾಸೆಯಲ್ಲಿ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರ ಎದಿಯಲ್ಲಿ ಡವ..ಡವ.. ಶುರುವಾಗಿದ್ದು ಇಲಾಖೆ ಶೀಘ್ರದಲ್ಲೇ ನೈಜತೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಬುಡಕಟ್ಟು ಲಕ್ಷಣಗಳ ಕುರುಬ ಜನಾಂಗಕ್ಕೆ ಎಸ್.ಟಿ.ಮೀಸಲಾತಿ ಶೀಘ್ರ ಘೋಷಣೆಗೆ ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ ಮನವಿ ಸಲ್ಲಿಕೆ.

*ಪೂಜ್ಯ ಶ್ರೀನಿರಂಜನನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಮನವಿ ಸಲ್ಲಿಕೆ.

ಕಿಷ್ಕಿಂಧವಾಣಿ ಸುದ್ದಿ
ನವದೆಹಲಿ: ಸಾವಿರಾರು ವರ್ಷಗಳಿಂದ ಬುಡಕಟ್ಟು ಮತ್ತು ದೇಶದ ಮೂಲ ಸಂಸ್ಕೃತಿಯ ಲಕ್ಷಣಗಳನ್ನು ಹೊಂದಿರುವ ಕುರುಬ ಸಮಾಜಕ್ಕೆ ಕರ್ನಾಟಕದಲ್ಲಿ
ಎಸ್.ಟಿ.ಮೀಸಲಾತಿಯವನ್ನು ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯ ಘೋಷಣೆ ಮಾಡುವಂತೆ
ಶ್ರೀ ರೇವಣಸಿದ್ದೇಶ್ವರ ಕನಕ ಗುರು ಪೀಠ ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೇಂದ್ರದ ಬುಡಕಟ್ಟು ಸಚಿವಾಲಯದ ಆಯುಕ್ತರಿಗೆ ಕುರುಬ ಸಮುದಾಯದ ಮುಖಂಡರು ಸಂಘಟನೆಗಳ ಹಿರಿಯರು ಮನವಿ ಪತ್ರವನ್ನು ಸಲ್ಲಿಸಿದರು.
ಈಗಾಗಲೇ ಕರ್ನಾಟಕದಲ್ಲಿ 1980ರ ದಶಕದ ಹಿಂದೆ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಕೆಲ ಕಾರಣಗಳಿಂದ ಮಧ್ಯದಲ್ಲಿ ಎಸ್‌ಟಿ ಮೀಸಲಾತಿ ಸರ್ಕಾರ ತೆಗೆದುಹಾಕಿದ್ದು ಪುನಃ ಸಮುದಾಯದ ಬೇಡಿಕೆಯಂತೆ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ಸೇರಿದಂತೆ ಅಗತ್ಯ ತಾಂತ್ರಿಕ ಮಾಹಿತಿಯನ್ನು ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದು ಕೇಂದ್ರ ಸರ್ಕಾರದ ಬುಡಕಟ್ಟು ಅಧ್ಯಯನ ಮತ್ತು ಸಚಿವಾಲಯ ಎಸ್ ಟಿ ಮೀಸಲಾತಿ ಕಲ್ಪಿಸುವ ಕಡತವನ್ನು ಪರಿಶೀಲನೆ ಮಾಡಿದ್ದು ಶೀಘ್ರದಲ್ಲೇ ಕೇಂದ್ರ ಸರ್ಕಾರದ ಸಚಿವ ಸಂಪುಟದ ಮುಂದೆ ಕಡತವನ್ನು ಮಂಡನೆ ಮಾಡಿ ಎಸ್ ಟಿ ಮೀಸಲಾತಿಯನ್ನು ಘೋಷಣೆ ಮಾಡುವಂತೆ ಆಯುಕ್ತರಲ್ಲಿ ಮನವಿ ಮಾಡಲಾಯಿತು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ,ವಿಧಾನಪರಿಷತ್ ಮಾಜಿ ಸಭಾಧ್ಯಕ್ಷ ರಘುನಾಥ್ ಮಲ್ಕಾಪೂರೆ,ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ,ಹಾಲುಮತ ಮಹಾಸಭಾ ಅಧ್ಯಕ್ಷ ರುದೃಣ್ಣ ಗುಳಗುಳಿ ಸೇರಿದಂತೆ ಕುರುಬ ಸಮಾಜದ ಹಿರಿಯ ಮುಖಂಡರು ಇದ್ದರು.

ನೂತನ ಜಡ್ಜ್ ಆಗಿ ನೇಮಕಗೊಂಡ ಸಂತೋಷ ಬೆಳಗೋಡ ಅವರಿಗೆ ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದಲ್ಲಿ ಸನ್ಮಾನ.

*ಪರಿಶ್ರಮ ಅಧ್ಯಯನದ ಮೂಲಕ ಗುರಿ ಸಾಧಿಸಿದ ಸಂತೋಷ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸತತ ಪರಿಶ್ರಮ ಹಾಗೂ ಅಧ್ಯಯನದ ಮೂಲಕ ಯಾರು ಬೇಕಾದರೂ ಗುರಿಯನ್ನು ತಲುಪಬಹುದು ಎಂದು ನೂತನವಾಗಿ ಜಡ್ಜ್ ಆಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಅವರಿಂದ ಸರ್ವರೂ ಸಾಧಿಸುವುದನ್ನು ಕಲಿಯಬೇಕು ಎಂದು ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದ ಮುಖ್ಯಸ್ಥರಾದ

ಸೈಯದ್ ತಾಹಿರ್ ಕಾದ್ರಿ ಆದಿಲ್ ಪಾಶ ಸಾಹೇಬರು ಸಜ್ಜದ ನಸಿನ್ ಕರಿ ಮುಲ್ಲಾ ಕಾದ್ರಿ ಹೇಳಿದರು.

ಅವರು ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಶ್ರೀ ಕರಿಮುಲ್ಲಾ ಖಾದ್ರಿ ಅವರ ದರ್ಗಾದ ಉರುಸು ಕಾರ್ಯಕ್ರಮದಲ್ಲಿ ನೂತನವಾಗಿ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಇವರನ್ನು ಸಮಸ್ತ ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಶಿಕ್ಷಣದ ಮೂಲಕ ಸರ್ವರೂ ಉನ್ನತ ಹುದ್ದೆಗೆ ಹೋಗಲು ಸಾಧ್ಯ, ಆದರೆ ಪರಿಶ್ರಮ ಮತ್ತು ಸತತ ವಿದ್ಯಾಭ್ಯಾಸ ಮಾಡುವುದು ಅವಶ್ಯಕ.ಗ್ರಾಮೀಣ ಭಾಗದಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆದು ಪಾಲಕರ ಕನಸನ್ನು ಮಕ್ಕಳು ನನಸು ಮಾಡಿ ಇಡೀ ಸಮುದಾಯ ಮೆಚ್ಚುವ ಕಾರ್ಯ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ

ಕಾರ್ಯಕ್ರಮದಲ್ಲಿ ಚಿಕ್ಕ ಜಂತಗಲ್ ಗ್ರಾಮದ ಹಿರಿಯರಾಗಿರುವ ಸೈಯದ್ ಅಲಿ ಸಾಹೇಬ, ನ್ಯಾಯವಾದಿಗಳಾದ ಸೈಯದ್ ಹಾಶುಮುದ್ದೀನ್, ಗೌಸ್ ಪಿರ್, ಎಜಿಪಿ ಭಾನು ಬಿ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮುಖಂಡ ಡಾ.ಶೇಖ್ ಇಲಿಯಸ್ ಬಾಬಾ, ಶರಣಯ್ಯ ಸ್ವಾಮಿ, ಬಟಾರಿ ಮಂಜುನಾಥ, ಬಿ ವೀರಪ್ಪ, ಅಂದನಯ್ಯ ಸ್ವಾಮಿ, ರಾಜಸಾಬ, ರಾಜಶೇಖರ, ಮುಕ್ಕಣ್ಣಗೌಡ, ಬಿ ಮಂಜು, ಆದಿಂ ಪಾಷಾ, ವಲಿಸಾಬ, ಇಮ್ರಾನ ಸಾಬ, ಬುಡನ ಸಾಬ, ಬಾಸು ಸಾಬ, ಬಶೀರ್, ಖಾಜಾ ಸಾಬ, ಶೇಕ್ ಮಹಮ್ಮದ

ಸೇರಿ ಅನೇಕರಿದ್ದರು.

ದಲಿತ ಸಾಹಿತ್ಯ ಪರಿಷತ್ ನಿಂದ ಅಕ್ಷದ ಅವ್ವ ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ಪ್ರದಾನ ಶೋಷಿತರು, ದಮನಿತರ ಸಾಹಿತ್ಯದ ಧ್ವನಿಯಾಗಿ ದಸಾಪ ಕಾರ್ಯ ನಿರ್ವಹಿಸುತ್ತಿದೆ:ಡಾ.ಗೊಳಸಂಗಿ *ದಸಾಪದಿಂದ ಪ್ರಥಮ ಮಹಿಳಾ ಶಿಕ್ಷಕಿಯರಾದ ಸಾವಿತ್ರಿ ಬಾಯಿಪುಲೆ, ಫಾತೀಮಾ ಶೇಖ್ ಜಯಂತಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಶೋಷಿತರು, ದಮನಿತರು ಹಾಗೂ ಅವಕಾಶ ವಂಚಿತ ಸಾಹಿತ್ಯ ಕೃಷಿ ಮಾಡುವವರಿಗಾಗಿ ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾಗೊಳಿಸಲು ದಲಿತ ಸಾಹಿತ್ಯ ಪರಿಷತ್ ಕಳೆದ 30 ವರ್ಷಗಳಿಂದ ನಿರಂತರವಾಗಿ ಕಾರ್ಯ ಮಾಡುತ್ತಿದೆ ಎಂದು ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.
ಅವರು ನಗರದ ಐಎಂಎ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯವು ಕೆಲವೇ ಜನರಿಗೆ ಸೀಮೀತ ಎನ್ನುವ ವಾತಾವರಣ ಸೃಷ್ಠಿಯಾಗಿದ್ದ ಸಂದರ್ಭದಲ್ಲಿ ದಸಾಪ ಅಸ್ತಿತ್ವಕ್ಕೆ ಬಂದಿದ್ದು ದಲಿತರು, ಶೋಷಿತ ಮತ್ತು ಹಿಂದುಳಿದ ವರ್ಗದವರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದು ಪುಸ್ತಕ ಪ್ರಕರಟಣೆ, ಸಾಹಿತ್ಯ ಸಮ್ಮೇಳನ, ಕಾರ್ಯಾಗಾರ ಮತ್ತು ಸಾಹಿತ್ಯ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮೊಟ್ಟ ಮೊದಲ ಭಾರಿಗೆ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಗದುಗಿನ ಪೂಜ್ಯ ತೋಂಟದಾರ್ಯ ಶ್ರೀಗಳ ಸಹಕಾರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಯಿತು. ಅಂದಿನಿಂದ ಸರಕಾರಕ್ಕೆ ಜನವೇರಿ 03 ರಂದು ಸಾವಿತ್ರಿ ಬಾಯಿ ಪುಲೆ ಜಯಂತಿ ಆಚರಣೆ ಮಾಡುವಂತೆ ಸರಕಾರಕ್ಕೆ ಮನವಿ ಕೊಡಲಾಗಿತ್ತು.2014 ರಿಂದ ಸರಕಾರ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆದೇಶ ಮಾಡಿದೆ. ನಂತರ ಇದೀಗ ಪ್ರಥಮ ಶಿಕ್ಷಕಿಯಾಗಿ ಕೆಲಸ ಮಾಡಿದ ಫಾತೀಮಾ ಶೇಖ್ ಇವರ ಜಯಂತಿಯನ್ನು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾವಿತ್ರ ಬಾಯಿ ಪುಲೆ ಮತ್ತು ಫಾತೀಮಾ ಶೇಖ್ ಇವರ ಹೆಸರಿನಲ್ಲಿ ಶಿಕ್ಷಕಿ
ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಕಾಂಗ್ರೆಸ್ ಮಹಿಳಾ ರಾಜ್ಯ ಮುಖಂಡರಾದ ಶೈಲಜಾ ಹಿರೇವ್ಮಠ ಮಾತನಾಡಿ, ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಭಿ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದ್ದು ಸಾವಿತ್ರಿ ಬಾಯಿ ಪುಲೆ ಅವರು ಅಂದಿನ ಸಂಪ್ರದಾಯವಾದಿಗಳ ವಿರೋಧದ ಮಧ್ಯೆ ಮಹಿಳೆಯರಿಗೆ ಶಿಕ್ಷಣ ಕೊಡುವ ಮಹತ್ವದ ಕಾರ್ಯ ಮಾಡಿದರು. ಮಹಿಳೆಯರು ಮೂಡನಂಬೀಕೆ ಮತ್ತು ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ಶಿಕ್ಷಣ ಪಡೆಯುವ ಮೂಲಕ ಸರ್ವ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ಇವರ ಸಂಖ್ಯೆ ಹೆಚ್ಚಾಗಬೇಕು. ಸಾವಿತ್ರ ಬಾಯಿ ಪುಲೆ ಅವರ ಜೀವನ ಪ್ರತಿ ಮಹಿಳೆಗೂ ಆದರ್ಶವಾಗಬೇಕು ದೇಶದಲ್ಲಿ ಹೆಣ್ಣು ಮಕ್ಕಳ ಸಂರಕ್ಷಣೆಯ ಮಾತುಗಳನ್ನಾಡುತ್ತಲೇ ನಿತ್ಯವೂ ಆತ್ಯಾಚಾರ, ಅನಾಚಾರಗಳಂತಹ ಪ್ರಕರಣ ಹೆಚ್ಚು ನಡೆಯುತ್ತಿವೆ.ಎಫ್‌ಸ್ಟೀನ್ ಫೈಲ್ ನಂತಹ ಪ್ರಕರಣದಿಂದ ಇಡೀ ವಿಶ್ವವೇ ಕಳವಳಗೊಳ್ಳುವ ಸ್ಥಿತಿ ಬಂದಿದೆ ಎಂದರು.
ಹಿರಿಯ ಹೋರಾಟಗಾರ ಜೆ.ಭಾರದ್ವಾಜ್, ಭಾಗ್ಯವಂತಪ್ಪ, ಕನಕಪ್ಪ ಚಿತ್ರಗಾರ, ಶಿವಪ್ಪ ಜಾಗೋಗೋರ್, ಮಹಮದ್ ರಫಿ, ವಿರೇಶ ಎಂ ಅಂಗಡಿ, ಸೋಮಶೇಖರಗೌಡ, ಆಶಾ ಅಗಸಿಮನಿ,ಹನುಮಂತಪ್ಪ ಚಳ್ಳೂರು,ಸೋಮಪ್ಪ,ಗಫೂರ ಸಾಬ,ಮಂಜುನಾಥ ಹೊಸಮನಿ,ವೆಂಕಪ್ಪ,ಶಶಿಕಲಾ ಚೌಹಾಣ್,ನಟರಾಜ್, ನಾಗಮ್ಮ ನಾಯಕ,ಮೋಜೆಸ್ ಪೌಲ್,ಕವಿತಾ, ಎಂ.ಶ್ರೀದೇವಿ ಇವರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಳ್ಳಿ,ತಾಲೂಕು ಅಧ್ಯಕ್ಷ ಛತ್ರಪ್ಪ ತಂಬೂರಿ,ಪ್ರಮುಖರಾದ ರಮೇಶ ಗಬ್ಬೂರು,ಕೆ.ನಿಂಗಜ್ಜ,ಡಾ.ಜಾಜಿ ದೇವೆಚಿದ್ರಪ್ಪ, ಡಾ.ಶರಣಬಸಪ್ಪ ಕೋಲ್ಕಾರ್,ಅಜಮೀರ್ ನಂದಾಪೂರ,ಡಿಡಿಪಿಐ ಸೋಮಶೇಖರಗೌಡ,ಬಿಇಒ ನಟೇಶ, ಪ್ರಕಾಶ ರಾಠೋಡ್, ಡಾ.ಶಿವಕುಮಾರ ಮಾಲೀಪಾಟೀಲ್,ರುದ್ರೇಶ ಮಡಿವಾಳ, ಶಿವಶಂಕರ ಕಲ್ಮಠ,ಮೈಲಾರಪ್ಪ ಬೂದಿಹಾಳ, ಶ್ರೀನಿವಾಸ ಉಪ್ಪಾರ, ಸುಂಕಪ್ಪ, ಪದ್ಮಾವತಿ, ರಮೇಶ ಬನ್ನಿಕೊಪ್ಪ, ಗುರುಪ್ರಸಾದ, ಚಂದ್ರಶೇಖರ ಸೇರಿ ಅನೇಕರಿದ್ದರು.

ಕುಟುಂಬದ ಏಳ್ಗೆ, ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ: ಪದ್ಮವಿಠ್ಠಲ್  *ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳಾ ದಿನಾಚರಣೆ

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಕುಟುಂಬದ ಏಳ್ಗೆ ಮತ್ತು ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ. ಆದ್ದರಿಂದ ಮಹತ್ವದ ವಿಷಯಗಳನ್ನು ಪುರುಷರು

ಮಹಿಳೆಯರ ಹತ್ತಿರ ಚರ್ಚಿಸುವುದು ಅಗತ್ಯವಾಗಿದೆ ಎಂದು ಸಂಘಪರಿವಾರದ ಹಿರಿಯರಾದ ಪದ್ಮವಿಠಲ್ ಹೇಳಿದರು.

ರಾಷ್ಟ್ರೋತ್ಥಾನ ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉದ್ಘಾಟಿಸಿದರು

ಪ್ರಸಕ್ತ ದಿನಗಳಲ್ಲಿ ಮಹಿಳೆ ನೌಕರಿಯ ಜೊತೆಗೆ ಕುಟುಂಬ ಪಾಲನೆಯ ಹೊರೆ ಹಾಗೂ ಜವಾಬ್ದಾರಿ ಮಹತ್ತರವಾಗಿದೆ ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯೂ ಆಕೆಯ ಮೇಲಿದೆ.

ಕುಟುಂಬವನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸಲು ಮಹಿಳೆಯು ಉದ್ಯೋಗಸ್ಥಿಯಾಗುವುದು ಅನಿವಾರ್ಯವಾಗಿದೆ ಎಂದರು.

ಪ್ರಸ್ತಾವಿಕವಾಗಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂಪಿಎಂ ಮಂಜುನಾಥ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕ ಮಹಿಳೆಯರ ವಸೇವೆ ಯನ್ನು ಗುರುತಿಸಿ ಈ ವರ್ಷ ಸನ್ಮಾನಿಸುತ್ತಿರುವುದು ಸಂಘದ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ನಾಗರತ್ನ ವೈ ಇಟಗಿ, ಸಂಘದ ಪದಾಧಿಕಾರಿಗಳಾದ ಆರ್. ಜಯಶ್ರೀ, ಅರ್ಪಿತ ಆನಂದ್, ಗಾಳೆಮ್ಮ. ಸಾವಿತ್ರಿ ಬಾಯಿಪುಲೆ ಶಿಕ್ಷಕಿಯರ ಸಂಘದ ದೀಪಿಕಾ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜೆ.ಎಂ. ಜ್ಯೋತೇಶ್ವರಿ. ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಗೌರಮ್ಮ ಆಯುಷ್ಯ ಡಾ. ಹಾಲಮ್ಮ, ಎಂ. ಯಂಕ ರೆಡ್ಡಿ. ಹಂಸಾಗರದ ಆನಂದ,ಆಂಜನೇಯ, ಸೋಮಶೇಖರ್,

ಎನ್ ಮಂಜುನಾಥ, ಸದಸ್ಯ ರಾಜು ಸೋಗಿ, ಸೊನ್ನದ ಕೊಟ್ರೇಶ್, ಹೆಚ್ ಲೋಕಪ್ಪ, ಗುಲ್ಜಾರ್ ಬೇಗಮ್, ನಾಗಲಕ್ಷ್ಮಿ, ಕೆಎಂ ನಿರ್ಮಲ,ಭಾರತಿ. ಪ್ರಮೋದಿನಿ, ಕವಿತಾ, ಉಷಾರಾಣಿ,ಖಾಜಾ ಬೂನ, ಶಾಂತಕುಮಾರಿ, ಶೋಭಾ, ಶಾರದಾ ಇದ್ದರು.

ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿಸುವಂತೆ ಗ್ರಾಮಸ್ಥರಿಂದ ಪಾದಯಾತ್ರೆ ಪ್ರತಿಭಟನೆ. * ಕಂದಾಯ ನಿರೀಕ್ಷಕನಿಂದ ಅವಜ್ಞಾನಿಕ ವರದಿ ತಿರಸ್ಕರಿಸುವಂತೆ ಒತ್ತಾಯ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಆಗ್ರಹಿಸಿ ಬಸವನದುರ್ಗ ಗ್ರಾಮಸ್ಥರು ತಮ್ಮ ಗ್ರಾಮದಿಂದ ಗಂಗಾವತಿಯ ತಹಸೀಲ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಕೆ. ವಿ. ವೆಂಕಟೇಶ ಬಾಬು ಮಾತನಾಡಿ, ಬಸವನದುರ್ಗ ಗ್ರಾಮ ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಇಲ್ಲಿ ಕೂಲಿ ಕಾರ್ಮಿಕರು, ಬಡವರು, ರೈತರು, ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಹಟ್ಟಿ, ಕ್ಯಾಂಪು,ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕುರಿತು ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜಿಲ್ಲಾಡಳಿತಕ್ಕೆ ವರದಿಯನ್ನು ಕಳಿಸುವಾಗ ಆನೆಗೊಂದಿ ಭಾಗದ ಕಂದಾಯ ನಿರೀಕ್ಷಕ ಬಷೀರ್ ಅಹಮದ್ ಎನ್ನುವ ಅಧಿಕಾರಿ ಬಸವನ ದುರ್ಗದ ಬಗ್ಗೆ ತಪ್ಪು ಮಾಹಿತಿಯನ್ನು ಕಳಿಸಿದ್ದರಿಂದ ಈ ಭಾರಿ ಬಸವನದುರ್ಗ ಕಂದಾಯ ಗ್ರಾಮವಾಗಿ ಮಾರ್ಪಡಲು ಸಾಧ್ಯವಿಲ್ಲ, ಆದ್ದರಿಂದ ಅಧಿಕಾರಿಯ ಅವೈಜ್ಞಾನಿಕ ವರದಿಯನ್ನು ತಿರಸ್ಕಾರ ಮಾಡಿ, ಪುನಃ ವರದಿ ಪಡೆದು ಇದೇ ವರ್ಷದಲ್ಲಿ ಬಸವನ ದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಇಲ್ಲದಿದ್ದರೆ ನಿರಂತರವಾಗಿ ಗ್ರಾಮದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ,  ಗ್ರಾ.ಪಂ.ಮಾಜಿ  ಸದಸ್ಯ ರಾಜಶೇಖರ, ರಾಮಕೃಷ್ಣ ನಾಯಕ,  ಯಮನಪ್ಪ, ಲೈಂದರ್,  ಸಲೀಂ ಪಾಷಾ,  ಎ.ರಮೇಶ,  ಶ್ರೀನಿವಾಸ ರೆಡ್ಡಿ, ನಾಗೆರೆಡ್ಡಿ,  ಗೋಪಾಲ್ ರೆಡ್ಡಿ,  ಜಗದೀಶ, ಮಂಜುನಾಥ ಜಂಗರ,   ವೇಣುಗೋಪಾಲ,  ಎ. ರವಿ,  ರಾಮನಗೌಡ, ರಂಗಪ್ಪ , ಅಂಬರೀಶ, ಸುಗಪ್ಪ , ಬೇಗಮ್ಮ, ರೇಣಮ್ಮ, ದುರ್ಗಮ್ಮ, ಯಮನಮ್ಮ ಸೇರಿದಂತೆ ಅನೇಕರಿದ್ದರು.