ಸಿಬಿಎಸ್ ಗಂಜ್‌ನಲ್ಲಿ ಗೋಲ್‌ಮಾಲ್ ವ್ಯಾಪಾರಿಯಿಂದ ರೈತರಿಗೆ 13 ಕೋಟಿ ರೂ.ಗಳ ಪಂಗನಾಮ! *ರೈತರ 40 ಸಾವಿರ ಕ್ವಿಂಟಲ್ ಭತ್ತ ಖರೀದಿಸಿ ಹಣ ನೀಡದೇ ನಾಪತ್ತೆ *ವ್ಯಾಪಾರಿಯ ಮನೆ ಮುಂದೆ ರೈತರು, ವರ್ತಕರಿಂದ ಧರಣಿ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಶ್ರೀಚನ್ನಬಸವಸ್ವಾಮಿ ಗಂಜ್ ಪ್ರದೇಶದಲ್ಲಿ ಭತ್ತ ಖರೀದಿ ಮಾಡುವ ವ್ಯಾಪಾರಿಗಳಿಬ್ಬರು ರೈತರಿಂದ 40 ಸಾವಿರ ಕ್ವಿಂಟಲ್ ಭತ್ತ ಖರೀದಿಸಿ ಆರು ತಿಂಗಳು ಕಳೆದರೂ ಹಣ ಪಾವತಿಸದೇ ನಾಪತ್ತೆಯಾಗಿದ್ದು ಕೂಡಲೇ ಹಣ ಪಾವಸತಿಸುವಂತೆ ರೈತರು ಮತ್ತು ದಲಾಲಿ ವರ್ತಕರು ನಾಪತ್ತೆಯಾಗುರುವ ವ್ಯಾಪಾರಿಯ ಮನೆ ಮುಂದೆ ಧರಣಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವರ್ತಕರಾದ ಸಣ್ಣಕ್ಕಿ ನೀಲಪ್ಪ, ವಿನೋದ, ಜಿ.ಶೇಖರಪ್ಪ ಮಾತನಾಡಿ, ಸಂಜಯ್ ಸಿಂಡಿಕೇಟ್ ಮಾಲೀಕ ವಿರೇಶ ಕಲಿಕೇರಿ ಹಾಗೂ ರಾಹುಲ್ ಸಿಂಡಿಕೇಟ್ ಮಾಲೀಕರಾದ ಗಿರಿಜ ಕಲಿಕೇರಿ ಎನ್ನುವವರು ಸಿಬಿಎಸ್ ಗಂಜ್ ನಲ್ಲಿ ರೈತರು ಮತ್ತು ವರ್ತಕರಿಂದ 40 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಭತ್ತವನ್ನು ಖರೀದಿಸಿ ಸುಮಾರು 13 ಕೋಟಿ ರೂ.ಗಳಷ್ಟು ಹಣವನ್ನು ಕೊಡದೇ ರೈತರು ಮತ್ತು ವರ್ತಕರಿಗೆ ಸಂಕಷ್ಟ ಕೊಡುತ್ತಿದ್ದಾರೆ. ಕಳೆದ ನವೆಂಬರ್ ನಲ್ಲಿ ಭತ್ತ ಖರೀದಿ ಮಾಡಿದ್ದು ಪದೇ ಪದೇ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಗಂಜ್ ವ್ಯಾಪಾರಿಗಳು ಸಭೆ ನಡೆಸಿ ಹಣ ಕೊಡುವಂತೆ ತಾಕೀತು ಮಾಡಿದಾಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪೊಲೀಸ್ ಠಾಣೆಯಲ್ಲಿ ಶೇ.40 ರಷ್ಟು ಹಣ ಕೊಡುವ ಭರವಸೆ ನೀಡಿದ್ದು ಪುನಹ ಹಣ ಕೊಡದೇ ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಎಪಿಎಂಸಿಯವರಿಗೆ ರೈತರು ಹಾಗೂ ವರ್ತಕರು ದೂರು ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು. ಕಾನೂನು ರೀತಿ ರೈತರಿಗೆ ಮತ್ತು ವರ್ತಕರಿಗೆ ಹಣ ಕೊಡಿಸಬೇಕು. ಗಂಗಾವತಿ, ಕಂಪ್ಲಿ, ಕಾರಟಗಿ, ಸಿಂಧನೂರು, ಚನ್ನಳ್ಳಿ, ವಡ್ಡರಹಟ್ಟಿ, ಬಸಾಪಟ್ಟಣ, ಕನಕಗಿರಿ ಸೇರಿ ಸುತ್ತಲಿನ ಊರುಗಳ ರೈತರಿಂದ ಭತ್ತ ಖರೀದಿಸಿ ಮೋಸ ಮಾಡಲಾಗಿದ್ದು ಕೂಡಲೇ ಎಪಿಎಂಸಿ ಹಾಗೂ ಪೊಲೀಸರು ಮಧ್ಯೆ ಪ್ರವೇಶ ಮಾಡಿ ರೈತರು ಹಾಗೂ ವರ್ತಕರ ಹಣ ವಸೂಲಿ ಮಾಡಕೊಡಬೇಕು. ಇಲ್ಲವಾದಲ್ಲಿ ರೈತರು ಅನಾಹುತ ಮಾಡಿಕೊಳ್ಳುವ ಸಂಭವವಿದ್ದು ತಾಲೂಕು ಮತ್ತು ಜಿಲ್ಲಾಡಳಿತ ನೆರವಿಗೆ ಬರುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಣ್ಣಕ್ಕಿ ನೀಲಪ್ಪ, ಜಿ.ಶೇಖರಪ್ಪ, ವಿನೋದ್, ಅಮರೇಶಪ್ಪ, ಸಿದ್ದಪ್ಪ, ಶಿವಯೋಗಿ, ನಾಗರಾಜ, ಜಂಬಣ್ಣ, ತ್ರಿಮೂರ್ತಿ, ಶಿವಶಂಕರ, ಶ್ರೀಕಾಂತ ಆರಹಾಳ, ಗಿರಿಶ, ರಾಜಪ್ಪ.ಬಸವರಾಜ, ಹೊನ್ನಪ್ಪ, ಚಂದ್ರು ಲಮಾಣಿ, ಸುರೇಶ, ಪಂಪನಗೌಡ, ವಿರೂಪಾಕ್ಷಪ್ಪ, ಶಿವು, ರುದ್ರೇಶ, ಸೋಮನಾಥ ಸೇರಿ ನೂರಕ್ಕೂ ಹೆಚ್ಚು ರೈತರು, ವರ್ತಕರಿದ್ದರು. *** ಸಂಜಯ್ ಹಾಗೂ ರಾಹುಲ್ ಸಿಂಡಿಕೇಟ್ ಹೆಸರಿನಲ್ಲಿ ಭತ್ತ ಖರೀದಿಸಿ ರೈತರು ಮತ್ತು ವರ್ತಕರಿಗೆ ಹಣ ಪಾವತಿಸದೇ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ವಿರೇಶ ಕಲಿಕೇರಿ ಇವರ ಹೆಸರಿನಲ್ಲಿ ನಿವೇಶನ ಎಪಿಎಂಸಿ ಯಾರ್ಡಿನಲ್ಲಿದೆ. ಜತೆಗೆ ಅವರ ಹೆಸರಿನಲ್ಲಿ ಕೆ.ಟಿ.ನಂಬರ್ ನ್ನು ಬ್ಲಾಕ್ ಮಾಡಲಾಗಿದೆ. ಒಂದು ಭಾರಿ ಸಚಿಧಾನವೂ ಮಾಡಲಾಗಿದ್ದು ಹಣ ಪಾವತಿ ಮಾಡುವುದಾಗಿ ಹೇಳಿ ನಾಪತ್ತೆಯಾಗಿರುವ ಕುರಿತು ಮಾಹಿತಿ ಇದೆ. ಈ ಎಲ್ಲಾ ವಿಷಯವನ್ನು ಕೇಂದ್ರ ಕಚೇರಿಗೆ ವರದಿ ಮಾಡಲಾಗಿದೆ. ಪುನಹ ರೈತರು ಮತ್ತು ವರ್ತಕರ ಹಣ ಕೊಡಿಸಲು ಕಾನೂನು ರೀತಿ ಯತ್ನಿಸಲಾಗುತ್ತದೆ. -ಯಮನಪ್ಪ ಎಪಿಎಂಸಿ ಕಾರ್ಯದರ್ಶಿಗಳು.

