Breaking News
ಅನುದಾನ ರಹಿತವಾಗಿ ಅಂಬೇಡ್ಕರ್ ಸರ್ಕಲ್” ನಿರ್ಮಾಣ ಹಗರಿಬೊಮ್ಮನಹಳ್ಳಿಯಲ್ಲಿ ದಲಿತ ಸಂಘಟನೆಗಳ ಆಕ್ರೋಶ !

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ:

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣ ವಿಚಾರ ಇದೀಗ ದಲಿತ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ದಶಕಗಳಿಂದ ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದ ದಲಿತ ಸಂಘಟನೆಗಳು, ಈ ವರ್ಷ ಅಂಬೇಡ್ಕರ್ ಜಯಂತಿಯ ಎರಡು ವಾರಗಳ ಮುಂಚಿತವಾಗಿ ಮಾಡಿದ ಸರ್ಕಲ್ ನಿರ್ಮಾಣದ ಭೂಮಿ ಪೂಜೆಯನ್ನು “ರಾಜಕೀಯ ಗಿಮಿಕ್” ಎಂದು ಆರೋಪಿಸಿವೆ.

ರಾಮನಗರ ಪೊಲೀಸ್ ಠಾಣೆ ಸಮೀಪದಲ್ಲಿ ನಿರ್ಮಾಣವಾಗಬೇಕಿರುವ ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಹೇಳಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ. ನೇಮಿರಾಜ್ ನಾಯ್ಕ ವಿರುದ್ಧ ದಲಿತ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಅನುದಾನ ಯಾವ ಇಲಾಖೆಯಿಂದ ಬಂದಿದೆ, ಯಾವ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ ಹಾಗೂ ಗುತ್ತಿಗೆದಾರರು ಯಾರೆನ್ನುವ ವಿಷಯ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

“20 ವರ್ಷಗಳ ಕಾಲ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜಕೀಯ ಸೌಲಭ್ಯಗಳನ್ನು ಪಡೆದು ಅಧಿಕಾರ ಅನುಭವಿಸಿದವರು, ಅಂಬೇಡ್ಕರ್ ಅವರ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಇಷ್ಟು ವರ್ಷ ತಡ ಮಾಡಿದ್ದು ಸರಿಯಲ್ಲ,

50 ಲಕ್ಷ ರೂ. ಅನುದಾನ ಯಾವ ಅನುದಾನದಲ್ಲಿ ಮಂಜೂರಾಗಿದೆ,

ಕಾಮಗಾರಿ ಟೆಂಡರ್ ಪ್ರಕ್ರಿಯೆ ಏನಾಗಿದೆ,

ಕಾಮಗಾರಿ ಸ್ಥಳದಲ್ಲಿ ವಿವರವಾದ ಮಾಹಿತಿ ನಾಮಫಲಕ ಯಾಕೆ ಹಾಕಿಲ್ಲ,

ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಮಾತ್ರ ಹೊಗಳಿ, ಕಾರ್ಯರೂಪಕ್ಕೆ ತರದಿರುವುದು ಯಾಕೆಂದು ದಲಿತ ಪರ ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ.

“ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ಅದು ದಲಿತ ಸಮುದಾಯದ ಆತ್ಮಗೌರವದ ಸಂಕೇತ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಗೌರವವನ್ನು ಜಾರಿಗೆ ತರುವುದೇ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ” ಎಂದು ದಲಿತ ಪರ ಸಂಘಟನೆಗಳ ಮುಖಂಡರಾದ ಪರಶುರಾಮ್ ಹೆಗ್ಡಳ್ ,ಮರಿಯಪ್ಪ ದಸಮಾಪುರ, ರಮೇಶ್ ಚಿಂತ್ರಪಳ್ಳಿ, ಬಾಸವರಾಜ್ ಕಾಳಿ, ಪಕ್ಕೀರಪ್ಪ ಕಡ್ಲಬಾಳು, ಕೊಟೆಪ್ಪ ದೂಪದಹಳ್ಳಿ, ನಾಗರಾಜ್ ಕಲ್ಲಹಳ್ಳಿ, ಮೈಲಪ್ಪ ಕೋಗಳಿ, ರಾಮೇಶ್ ಪೂಜಾರ್, ಬಸವರಾಜ್ ಕೆಚ್ಚಿನಬಂಡಿ, ಗೋಣೆಪ್ಪ ಕೆಚ್ಚಿನಬಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

****

ಈಗಾಗಲೇ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಸೇರಿ ನಾಲ್ಕು ಮಹನೀಯರ ಸರ್ಕಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಪೊಲೀಸ್ ಠಾಣೆಯ ಹತ್ತಿರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸರ್ಕಲ್ ನಿರ್ಮಾಣಕ್ಕೆ ಶಾಸಕರ ವಿಶೇಷ ಅನುದಾನದಲ್ಲಿ ಈಗಾಗಲೇ 50 ಲಕ್ಷ ರೂ.ಮಂಜೂರು ಮಾಡಲಾಗಿದ್ದು ಇನ್ನೂ15 ಲಕ್ಷ ರೂ.ಮಂಜೂರಿ ಮಾಡಲಾಗುತ್ತದೆ. ಈಗಾಗಲೇ ಭೂಮಿ ಲೇವೆಲ್ ನಿರ್ಮಾಣ ಕಾಮಗಾರಿ ನಡೆದಿದ್ದಿ ಇನ್ನೂ ಡಿಸೈನ್ ಬಂದಿಲ್ಲ.ಡಿಸೈನ್ ಬಂದ ನಂತರ ಪೂರ್ಣ ಪ್ರಮಾಣದ ಕಾಮಗಾರಿ ನಡೆಯುತ್ತದೆ. ಅಂಬೇಡ್ಕರ್ ಬಗ್ಗೆ ನಮಗೆ ಬದ್ದತೆ ಇದೆ.ಸಂಘಟನೆಗಳ ಮುಖಂಡರು ಅನ್ಯತಾ ಭಾವಿಸದೇ ಸಹಕಾರ ನೀಡಬೇಕು. ನಾಲ್ಕು ಸರ್ಕಲ್ ಗಳ ನಿರ್ಮಾಣ ಶೀಘ್ರ ಮುಕ್ತಾಯಗೊಳಿಸಲಾಗುತ್ತದೆ.

-ನೇಮಿರಾಜ್ ನಾಯ್ಕ ಶಾಸಕರು ಹಗರಿಬೊಮ್ಮನಹಳ್ಳಿ