ಹೃದಯ ಸ್ತಂಭನ ಯುವ ನ್ಯಾಯವಾದಿ ಕನಕೇಶ್ ನಿಧನ.
*ಕೋರ್ಟಿನಲ್ಲಿ ಜರುಗಿದ ಕಾರ್ಯಕ್ರಮದ ಊಟ ಸೇವಿಸಿ ಹೊರಬಂದು ಕುಸಿದು ಬಿದ್ದು ಸಾವು.
*ಕಳೆದ ಆರು ತಿಂಗಳ ಹಿಂದೆ ವಕೀಲ ವೃತ್ತಿಯನ್ನು ಆರಂಭಿಸಿದ್ದ ಯುವ ನ್ಯಾಯವಾದಿ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೋರ್ಟ್ ಆವರಣದಲ್ಲಿಯೇ ಯುವ ನ್ಯಾಯವಾದಿ ಬರುವ ಹೃದಯ ಸ್ತಂಭನವಾಗಿ ಕುಸಿದು ಬಿದ್ದು ಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಗರದ ಕೋರ್ಟ್ ಆವರಣದಲ್ಲಿರುವ ಕ್ಯಾಂಟೀನ್ ಹತ್ತಿರ ಬುಧವಾರ ಮಧ್ಯಾಹ್ನ ಜರುಗಿದೆ.
ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ನಿವಾಸಿ ಕನಕೇಶ್
(26) ಹೃದಯ ಸ್ತಂಭನ ಮೃತಪಟ್ಟಿರುವ ಯುವ ನ್ಯಾಯವಾದಿಯಾಗಿದ್ದು ಕಳೆದ ಆರು ತಿಂಗಳ ಹಿಂದೆ ಹಿರಿಯ ನ್ಯಾಯವಾದಿ ಹೆಚ್.ಎಂ.ಮಂಜುನಾಥ ಇವರ ಮಾರ್ಗದರ್ಶನದಲ್ಲಿ ಗಂಗಾವತಿ ಕೋರ್ಟಿನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. ಗಂಗಾವತಿಯ ಅಪ್ಸಾನಿ ನಾರಾಯಣರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಆರು ತಿಂಗಳ ಹಿಂದೆ ಮುಗಿಸಿದ್ದ ಕನಕೇಶ್ ಸ್ಥಳೀಯ ನ್ಯಾಯಾಲಯದಲ್ಲಿ ತಮ್ಮ ವಕೀಲ ವೃತ್ತಿಯನ್ನು ಮಾಡುತ್ತಿದ್ದರು.
ಒಂದನೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸದಾನಂದ ನಾಗಪ್ಪ ನಾಯ್ಕ ಇವರ ವರ್ಗಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಚಟುವಟಿಕೆಯಿಂದ ಪಾಲ್ಗೊಂಡಿದ್ದ ಕನಕೇಶ್ ಬುಧವಾರ ನ್ಯಾಯಾಧೀಶರ ಬಿಳ್ಕೋಡುಗೆ ಕಾರ್ಯಕ್ರಮದ ಊಟ ಮಾಡಿ ನಂತರ ಕೋರ್ಟ್ ಕ್ಯಾಂಟೀನ್ ಹತ್ತಿರ ಬಂದು ಗೆಳೆಯರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಏಕಾಏಕಿ ಕುಸಿದು ಬಿದ್ದು ಎಚ್ಚರ ತಪ್ಪಿದ ಕಾರಣ ಕೂಡಲೇ ಸಹಪಾಠಿಗಳು ಮತ್ತು ವಕೀಲರು ಡಾ.ಜಿ.ಚಂದ್ರಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಪಡಿಸುವ ಯತ್ನ ನಡೆಸಿದರು ವೈದ್ಯರು ಪರೀಕ್ಷೆ ಮಾಡಿ ಹೃದಯ ಸ್ತಂಭನವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರುಗಳು ವಕೀಲರು ಹಾಗೂ ಗಣ್ಯರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

