Breaking News
ಭೂಮಿ ಇದ್ದವರಿಗೆ ನಿಯಮ ಉಲ್ಲಂಘಿಸಿ ಗಾಂವಠಾಣಾ ಭೂಮಿಯನ್ನು ಮಂಜೂರು ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳು!

*35 ಎಕರೆ ನೀರಾವರಿ ಇದ್ದವರಿಗೆ ದಶಕಗಳ ಹಿಂದೆ 1.10 ಎಕರೆ ಭೂಮಿ ಮಂಜೂರಿ.

*ಪೋತಿ ಖಾತೆ ಮಾಡಸಲು ಮಕ್ಕಳಿಂದ ಅರ್ಜಿ.

*ಗಾಂವ್ ಠಾಣಾ ಭೂಮಿ ವಾಪಸ್ ಪಡೆದು ಬಡವರಿಗೆ ನಿವೇಶನ ಹಂಚಲು ಆಗ್ರಹ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಹಲವು ದಶಕಗಳಿಂದ 35 ಎಕರೆ ನೀರಾವರಿ ಭೂಮಿ ಇರುವ ಕುಟುಂಬಕ್ಕೆ 1.10 ಎಕರೆ ಗಾಂವ್ ಠಾಣಾ ಭೂಮಿ ಮಂಜೂರು ಮಾಡುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಗಾಳಿ ತೂರಿದ ಉಲ್ಲಂಘಿಸಿದ ಪ್ರಕರಣ ತಾಲೂಕಿನ ಸಾಣಾಪುರ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಸಾಣಾಪುರ ಗ್ರಾಮದ ಸರ್ವೆ ನಂಬರ್ 31 ರಲ್ಲಿರುವ 3.35 ಎಕರೆ ಭೂಮಿಯ ಪೈಕಿ 1.10 ಎಕರೆ ಭೂಮಿಯನ್ನು ಆನೆಗೊಂದಿ ಗ್ರಾಮದ ದಿವಂಗತ ಕೆ.ವೆಂಕಟೇಶ್ವರಲು ಎನ್ನುವ ಶ್ರೀಮಂತ ವ್ಯಕ್ತಿಗೆ ಕಂದಾಯ ಇಲಾಖೆಯಮಂಜೂರು ಮಾಡಿದ್ದು ಇತ್ತೀಚಿಗೆ ಕೆ

ವೆಂಕಟೇಶ್ವರಲು ನಿಧನರಾಗಿದ್ದು ಅವರ ಪುತ್ರರಾದ ಕೆ.ಮುರಳಿ ಹಾಗೂ ಕೆ.ಗೋವಿಂದರಾಜು ಇವರು ತಮ್ಮ ಹೆಸರಿಗೆ ಪೋತಿ ಖಾತೆ ಮಾಡುವಂತೆ ತಹಸೀಲ್ದಾರ್ ರಿಗೆ ಅರ್ಜಿ ಹಾಕಿದ್ದು ಸಾಣಾಪುರ ಗ್ರಾಮಸ್ಥರು ಗಾಂವ್ ಠಾಣಾ ಭೂಮಿಯನ್ನು ಸರಕಾರ ವಾಪಸ್ ಪಡೆದು ನಿವೇಶನ ರಹಿತ ಎಸ್ಸಿ,ಎಸ್ಟಿ,ಹಿಂದುಳಿದ ಹಾಗೂ ಬಡವರಿಗ

ಹಂಚಿಕೆ ಮಾಡುವಂತೆ ತಹಸೀಲ್ದಾರ್ ರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.

ಈಗಾಗಲೇ ದಿವಂಗತ ಕೆ ವೆಂಕಟೇಶ್ವರಲು ಕೆ ಮುರಳಿ ಹಾಗೂ ಗೋವಿಂದರಾಜು ಹಾಗೂ ಕುಟುಂಬದವರಿಗೆ ಆನೆಗೊಂದಿ, ರಾಂಪುರ- ಮಲ್ಲಾಪುರ ಮತ್ತು ಸಾಣಾಪುರದಲ್ಲಿ ಸುಮಾರು 35 ಎಕರೆ ನೀರಾವರಿ ಭೂಮಿ ಇದ್ದು ಭೂಮಿ ಇದ್ದವರಿಗೆ ಕಂದಾಯ ಇಲಾಖೆಯ ಈ ಹಿಂದಿನ ಅಧಿಕಾರಿಗಳು ಭೂಮಿ ಇಲ್ಲದವರು ಎಂದು ಗುರುತಿಸಿ ಸಾಣಾಪುರದ ಸರ್ವೆ ನಂಬರ್ 31ರಲ್ಲಿರುವ 3.35 ಎಕರೆ ಭೂಮಿ ಪೈಕಿ ಕೆ.ವೆಂಕಟೇಶ್ವರಲು ಇವರ ಕುಟುಂಬಕ್ಕೆ 1.10 ಎಕರೆ ಭೂಮಿಯನ್ನು ಮಂಜೂರಿ ಮಾಡಿದ್ದು ಉಳಿದ ಭೂಮಿಯನ್ನು ಸಹ ಭೂಮಿ ಇದ್ದವರಿಗೆ ಮಂಜೂರು ಮಾಡಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಮಂಜೂರಾಗಿರುವ ಗಾಂವ್ ಠಾಣಾ ಭೂಮಿಯನ್ನು ವಾಪಸ್ ಪಡೆದು ಸಾಣಾಪುರ ಗ್ರಾಮದಲ್ಲಿರುವ ಎಸ್ಸಿ ಎಸ್ಟಿ ಹಿಂದುಳಿದ ಮತ್ತು ಬಡವರಿಗೆ ನಿವೇಶನಗಳನ್ನು ಹಂಚಬೇಕೆಂದು ತಹಸೀಲ್ದಾರ್ ಮೂಲಕ ಮನವಿಪತ್ರ ಸಲ್ಲಿಸಿದ್ದಾರೆ.

ಈ ಮಧ್ಯೆ ತಹಸೀಲ್ದಾರ್ ಯು.ವಸಂತಕುಮಾರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ನ್ಯಾಯಾಲಯದಲ್ಲಿ ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಮುಂದಿನ ವಿಚಾರಣೆಯನ್ನು ಮೇ 29ರಂದು ನಡೆಸಲು ದಿನಾಂಕವನ್ನು ಕೊಟ್ಟಿದ್ದಾರೆ.

ದೂರು: ಅಕ್ರಮವಾಗಿ ಭೂಮಿ ಇದ್ದವರಿಗೆ ಸಾಣಾಪುರ ಗ್ರಾಮದಲ್ಲಿ ಸರ್ವೇ ನಂಬರ್ 31 ರಲ್ಲಿ 1.10 ಎಕರೆ ಭೂಮಿಯನ್ನು ದಿವಂಗತ ಕೆ

ವೆಂಕಟೇಶ್ವರಲು ಇವರಿಗೆ ಮಂಜೂರು ಮಾಡಿದ್ದು ಈಗ ಮಕ್ಕಳಾದ ಕೆ.ಮುರಳಿ ಹಾಗೂ ಕೆ.ಗೋವಿಂದರಾಜು ಇವರ ಹೆಸರಿನಲ್ಲಿ ಪೋತಿ ಖಾತೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಗಾಂವ್ ಠಾಣಾ ಭೂಮಿಯನ್ನು ಪೋತಿಖಾತೆ ಮಾಡದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.

**

ಗ್ರಾಮದ ಗಾಂವ್ ಠಾಣಾ ಭೂಮಿಯನ್ನು ಅಕ್ರಮವಾಗಿ ಈಗಾಗಲೇ ಭೂಮಿ ಇರುವ ವ್ಯಕ್ತಿಗೆ ನಿಯಮ ಉಲ್ಲಂಘನೆ ಮಾಡಿ ಮಂಜೂರು ಮಾಡಲಾಗಿದೆ. ಮಂಜೂರು ಮಾಡಿದ ಭೂಮಿಯನ್ನು ವಾಪಸ್ ಪಡೆದು ಬಡವರಿಗೆ ನಿವೇಶನಗಳನ್ನು ಹಂಚಿ‌ಕೆ ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ‌ ಮಾಡಲಾಗಿದೆ. ತಹಸೀಲ್ದಾರ್ ರು ತಮ್ಮ ನ್ಯಾಯಾಲಯದಲ್ಲಿ ಪ್ರಕರಣವನ್ನು ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು ಸಾಣಾಪುರ ಗ್ರಾಮಸ್ಥರಿಗೆ ನ್ಯಾಯ ದೊರಕುವ ಭರವಸೆ ಇದೆ.

-ಸಾಣಾಪುರ ಗ್ರಾಮದ ಮಹಿಳೆಯರು.

ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಗೆ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಗೋಲ್ ಮಾಲ್!

*ಮೇರಿಟ್ ನಂತೆ ಆಯ್ಕೆಯಾಗದ ವಿದ್ಯಾರ್ಥಿಗಳು, ಆಯ್ಕೆ ಪಟ್ಟಿಗೆ ರದ್ದುಗೊಳಿಸುವಂತೆ ಆಗ್ರಹ.

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟಲ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಹಾಸ್ಟೆಲ್ ಗೆ ಆಯ್ಕೆಯಾದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಹಾಗೂ ಹಾಸ್ಟೆಲ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟ ಮಾಡಿದ್ದು ಹಾಸ್ಟೆಲ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಿರುವ ಮಾನದಂಡದ ಕುರಿತು ಅನುಮಾನಗಳು ವ್ಯಕ್ತವಾಗಿವೆ.

ಕೂಡಲೇ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮತ್ತೊಮ್ಮೆ ಪಾರದರ್ಶಕವಾಗಿ ಆಯ್ಕೆಪಟ್ಟಿ ಪ್ರಕಟಿಸುವಂತೆ ಪಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಯವರು ಒತ್ತಾಯಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಸುವ ಜಿಲ್ಲೆಯ 60 ಕ್ಕೂ ಹೆಚ್ಚು ಮೆಟ್ರಿಕ್ ಪೂರ್ವ ವಸತಿ ಸಹಿತ ಹಾಸ್ಟೆಲ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಇಲಾಖೆಯವರು ನಡೆಸುತ್ತಾರೆ.

ಪ್ರತಿ ಹಾಸ್ಟೆಲಿಗೆ 60 ಸೀಟುಗಳಿದ್ದು ಅಲ್ಪಸಂಖ್ಯಾತರ ಇಲಾಖೆಯ ನಿಯಮದಂತೆ ಶೇ. 75 ರಷ್ಟು ಅಲ್ಪಸಂಖ್ಯಾತರಿಗೆ ಉಳಿದ ಶೇ. 25 ಎಸ್ಸಿ, ಎಸ್ಟಿ, ಒಬಿಸಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶವಿದೆ.

ಕಳೆದ ಮಾರ್ಚ್ -ಏಪ್ರಿಲ್ ನಲ್ಲಿ ಜರುಗಿದ ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು ಕಳೆದ ವಾರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಲಾಖೆಯು ಕಚೇರಿ ಮತ್ತು ಹಾಸ್ಟೆಲ್ ಗಳ ನೋಟಿಸ್ ಬೋರ್ಡ್ ನಲ್ಲಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ಆಗಿರುವ ಕುರಿತು ವಿದ್ಯಾರ್ಥಿ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ.

ಎಸ್ಸಿ ಒಳಮೀಸಲಾತಿ ಅನ್ವಯ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು 83 ಅಂಕ ಪಡೆದ ವಿದ್ಯಾರ್ಥಿಗೆ ಅವಕಾಶ ಸಿಕ್ಕಿಲ್ಲ,37 ಅಂಕ ಪಡೆದ ವಿದ್ಯಾರ್ಥಿ ಸೀಟು ಸಿಕ್ಕಿದೆ, ಅತ್ಯಂತ ಬಡತನದಲ್ಲಿರುವ ಕುಷ್ಟಗಿ ಅಲೆಮಾರಿ ಕುಟುಂಬದ ವಿದ್ಯಾರ್ಥಿನಿ 42 ಅಂಕ ಪಡೆದಿದ್ದರೂ ಪ್ರವೇಶ ಸಿಕ್ಕಿಲ್ಲ. ಇದರಿಂದಾಗಿ ಮೇರಿಟ್ ಆಧಾರದಲ್ಲಿ ಹಾಸ್ಟೆಲ್ ಗೆ ವಿದ್ಯಾರ್ಥಿಗಳ ಆಯ್ಕೆಯಾಗಿರುವುದು ಅನುಮಾನವಾಗಿದ್ದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳ ಮೇಲೆ ಪಾಲಕರು ಅನುಮಾನಪಡುವಂತಾಗಿದೆ.

ಕಳೆದ ವರ್ಷ ವಸತಿ ಶಾಲೆಗಳಿಗೆ ಬೋಧಕ ಸಿಬ್ಬಂದಿ ಆಯ್ಕೆ ಮಾಡುವಾಗಲೂ ಗೋಲ್ಮಾನ್ ನಡೆದಿರುವ ಕುರಿತು ದೂರುಗಳಿದ್ದು ಅಲ್ಪಸಂಖ್ಯಾತರ ಇಲಾಖೆಯ ಮೇಲಾಧಿಕಾರಿಗಳು ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ.

ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಗಳಿಗೆ ಮಕ್ಕಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಬೇಕಿದೆ. ಆಗಿರುವ ನ್ಯೂನ್ಯತೆ ಕುರಿತು ತನಿಖೆ ನಡೆಸಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಸೀಟು ಸಿಗುವಂತಾಗಬೇಕಿದೆ.

***

ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಇರುವ ಹಾಸ್ಟೆಲ್ ಗಳಿಗೆ ಮಕ್ಕಳ ಪ್ರವೇಶ ಪಡೆಯಲು ನಡೆಸಿದ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಗೊಂದಲದಿಂದ ಕೂಡಿದೆ. ಎಸ್ಸಿ ಒಳಮೀಸಲಾತಿ ಅನ್ವಯ 83 ಅಂಕ ಪಡೆದ ವಿದ್ಯಾರ್ಥಿಗೆ ಹಾಸ್ಟೆಲ್ ನಲ್ಲಿ ಸೀಟು ಸಿಕ್ಕಿಲ್ಲ .37 ಅಂಕ ಪಡೆದ ವಿದ್ಯಾರ್ಥಿಗೆ ಸೀಟು ಸಿಕ್ಕಿದೆ. ಕುಷ್ಟಗಿಯ ಅಲೆಮಾರಿ ಜನಾಂದ ವಿದ್ಯಾರ್ಥಿನಿ 42 ಅಂಕ ಪಡೆದಿದ್ದರೂ ಸೀಟು ಸಿಗದೆ ಅನ್ಯಾಯವಾಗಿದ್ದು ಇದರಂತೆ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಆದ್ದರಿಂದ ಕೂಡಲೇ ಆಯ್ಕೆ ಪಟ್ಟನ್ನು ರದ್ದು ಮಾಡಿ ಪಾರದರ್ಶಕವಾಗಿ ಆಯ್ಕೆಪಟ್ಟಿ ಪ್ರಕಟಿಸಬೇಕು. ಇಲ್ಲದಿದ್ದರೆ ಡಿ ವೈ ಎಫ್ ಐ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ.ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹಲವು ಗೋಲ್ ಮಾಲ್ಗಳಿಗೆ ಹೆಸರಾಗಿದ್ದು,ಕಳೆದ ವರ್ಷ ಬೋಧಕರನ್ನು ನೇಮಕ ಮಾಡಿಕೊಳ್ಳುವಾಗಲೂ ಗೋಲ್ಮಾಲ್ ಮಾಡಿದ್ದಾರೆ.

ಕೂಡಲೇ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕು.

-ಅಮರೇಶ ಕಡಗದ್ ಮುಖಂಡ ಡಿವೈಎಫ್ ಐ ಕೊಪ್ಪಳ.