Breaking News
ಗಂಗಾವತಿಯಲ್ಲಿ 25 ವರ್ಷ ಅಧಿಕಾರ ಕಳೆದುಕೊಂಡರೂ ಬುದ್ಧಿ ಕಲಿಯದ ಕಾಂಗ್ರೆಸ್ಸಿಗರು! *ಸಂಘಟನೆಯ ಕೊರತೆ ಬಿಎಲ್‌ಎ-01 ನಿಂದ ಅನ್ಸಾರಿ ಕೋಕ್,ಸಂಸದ ಹಿಟ್ನಾಳ ಸ್ಥಾನ

 

 *ಬಣ ಬಡಿದಾಟದಿಂದ  ಪಕ್ಷ ಸಂಘಟನೆ ಶೂನ್ಯ, ಮನೆಯೊಂದು ಹಲವು ಬಾಗಿಲು *ಬಹುತೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅನ್ಯ ಪಕ್ಷಗಳ ಪಾಲು *ರಾಷ್ಟ್ರೀಯ ಹಬ್ಬಗಳು, ಮಹನೀಯರ ಜಯಂತಿ ಆಚರಣೆ ಗಂಗಾವತಿ ಕಾಂಗ್ರೆಸ್ ನಲ್ಲಿಲ್ಲ

ಕಿಷ್ಕಿಂಧವಾಣಿ ವಿಶೇಷ: ಕೆ.ನಿಂಗಜ್ಜ

ಗಂಗಾವತಿ:ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದ್ದ ಗಂಗಾವತಿಯಲ್ಲೀಗ ಕಾಂಗ್ರೆಸ್ ಪಕ್ಷ ಹಲವು ಬಣ, ಗುಂಪುಗಾರಿಕೆಯಿಂದ ಕೂಡಿದ್ದು ಸಂಘಟನಾತ್ಮಕವಾಗಿ ಪಕ್ಷ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಇದರ ಪರಿಣಾಮ ಎನ್ನುವಂತೆ ಕಳೆದ 25 ವರ್ಷಗಳಿಂದ ಗಂಗಾವತಿಯಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗುವಲ್ಲಿ ಮುಖಂಡರು ಸಂಪೂರ್ಣ ವಿಫಲರಾಗಿದ್ದಾರೆ. ದಿವಂಗತ ಶ್ರೀರಂಗದೇವರಾಯಲು ಸೋಲಿನಿಂದ ಆರಂಭವಾದ ಕಾಂಗ್ರೆಸ್ ನೆಲಕಚ್ಚುವಿಕೆ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವರೆಗೂ ಇದು ಮುಂದುವರಿದೆ. ಗಂಗಾವತಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿದ್ದರೂ ಕಾಂಗ್ರೆಸ್ ಪಕ್ಷದಲ್ಲಿರುವ ಬಣ ಬಡಿದಾಟದ ಪರಿಣಾಮ ಒಬ್ಬರನ್ನು ಸೋಲಿಸಲು ಇನ್ನೊಬ್ಬರು ಅಖಂಡ ಸಿದ್ದಪಡಿಸಿಕೊಂಡಿದ್ದರ ಪರಿಣಾಮ ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಗೆಲುವನ್ನು ಕಂಡಿಲ್ಲ.    ಇದೀಗ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಕುರಿತಂತೆ ಮತ್ತು ಚುನಾವಣಾ ಆಯೋಗದ ಸಭೆಗಳಿಗೆ ತೆರಳಲು ಮತ್ತು ಸಲಹೆ ಸೂಚನೆ ಕೊಡಲು ಕೆಪಿಸಿಸಿ ಯಿಂದ ಇದುವರೆಗೂ ಬಿಎಲ್‌ಎ-01 ಆಗಿ ನೇಮಕವಾಗಿದ್ದ ಇಕ್ಬಾಲ್ ಅನ್ಸಾರಿಯವರು ಪಕ್ಷದ ಸಂಘಟನೆ ಸೇರಿ ರಾಷ್ಟ್ರೀಯ ಹಬ್ಬಗಳು, ಕಾರ್ಯಕರ್ತರ ಕುಂದು ಕೊರತೆ ಮತ್ತು ಕೆಪಿಸಿಸಿ ಗೆ ಪತ್ರ ವ್ಯವಹಾರ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಇರುವುದನ್ನು ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕಕುಮಾರ ಅವರು ಗಂಗಾವತಿಯ ಬಿಎಲ್-01 ಆಗಿ ಸಂಸದ ಕೆ.ರಾಜಶೇಖರ ಹಿಟ್ನಾಳ ಇವರನ್ನು ನೇಮಕ ಮಾಡಿ ಚುನಾವಣಾ ಆಯೋಗಕ್ಕೆ ಪತ್ರ ರವಾನಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 235 ಬೂತ್ ಗಳಿದ್ದು ಪ್ರತಿ ಬೂತ್‌ಗೂ ಒರ್ವ ಅಧ್ಯಕ್ಷರನ್ನು ಬಿಎಲ್‌ಎ-01 ನೇಮಕ ಮಾಡಿ ಪ್ರತಿಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಮಾಡುವುದು, ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಡೆಲಿಟ್ ಮಾಡುವಲ್ಲಿ ಚುನಾವಣಾ ಆಯೋಗಕ್ಕೆ ಸಲಹೆ ಸೂಚನೆ ನೀಡುವ ಕಾರ್ಯ ಆರಂಭವಾಗಿದ್ದು ಗಂಗಾವತಿ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಅವರಿಗೆ ಸಂಸದ ಕೆ.ರಾಜಶೇಖರ ಹಿಟ್ನಾಳ ಜವಾಬ್ದಾರಿ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅನ್ಸಾರಿ ಬಣದ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲ. ದಾವಣಗೆರೆ ಮುಖಂಡರು ನಂತರ ಇದೀಗ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಯನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಇಕ್ಬಾಲ್ ಅನ್ಸಾರಿಯವರು ದಿವಂಗತ ಶ್ರೀರಂಗದೇವರಾಯಲು ಅವರ ವಿರುದ್ಧ ರೆಬೆಲ್ ಆಗಿ ಜೆಡಿಎಸ್ ಸೇರ್ಪಡೆಯಾಗಿ  ಶಾಸಕರಾಗಿ ಮಂತ್ರಿಯಾಗುವಲ್ಲಿ ಯಶಸ್ವಿಯಾಗಿದ್ದರು. ನಂತರ ಅಯ್ಯಪ್ಪ ಸ್ವಾಮಿ ಗಲಾಟೆಯ ಲಾಭ ಪಡೆದ ಬಿಜೆಪಿಯ ಪರಣ್ಣ ಮುನವಳ್ಳಿ 2008 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿಯನ್ನು ಸೋಲಿಸಿ ಶಾಸಕರಾದರು.ಪುನಹ ಕಾಂಗ್ರೆಸ್ ಸೇರಿದ್ದ ಇಕ್ಬಾಲ್ ಅನ್ಸಾರಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಾದ್ಯಂತ ಕಾಂಗ್ರೆಸ್ ಗಾಳಿಯ ಮಧ್ಯೆದಲ್ಲೂ ಪರಾಜಿತರಾಗಿದ್ದರು.ನಂತರ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಚಟುವಟಿಕೆಗಳಿಂದ ದೂರ ಇದ್ದು ಗಂಗಾವತಿಯಲ್ಲಿ ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ಮತ್ತು ತಮ್ಮ ಬಣದ ಕಾರ್ಯಕರ್ತರಿಗೆ ನಾಮನಿರ್ದೇಶನ ಮಾಡಿಸುವಲ್ಲಿ ಮುಖ್ಯಮಂತ್ರಿಗಳ ಮನವೊಲಿಕೆ ಮಾಡಿ ಯಶಸ್ವಿಯಾಗುತ್ತಿದ್ದರು. ಆದರೆ ನಗರಪೊಲೀಸ್ ಠಾಣೆಯ ಪಿಐ ಸೇರಿ ಕೆಲ ಅಧಿಕಾರಿಗಳ ವರ್ಗಾವಣೆ ಮತ್ತು ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇಮಕಾತಿ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಅನ್ಸಾರಿ ಮಾತಿಗೆ ಮಣೆ ಹಾಕದೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ ಹಾಗೂ ಶಾಮೀದ್ ಮನಿಯಾರ್ ಅವರ ಶಿಫಾರಸ್ಸಿನಂತೆ ನಗರ ಪಿಐ ಮತ್ತು ಬ್ಲಾಕ್ ಅಧ್ಯಕ್ಷರ ನೇಮಕಾತಿ ಮಾಡಲಾಗಿದೆ. ನಗರ ಯೋಜನಾ ಪ್ರಾಧಿಕಾರಕ್ಕೂ ಪ್ರಸ್ತುತ ಇರುವ ಅನ್ಸಾರಿ ಬಣದ ಇಲಿಯಾಸ್ ಖಾದ್ರಿಗೆ  ಕೋಕ್ ನೀಡಿ ಎಂ.ಮಲ್ಲಿಕಾರ್ಜುನ ನಾಗಪ್ಪ, ಹೆಚ್.ಆರ್.ಶ್ರೀನಾಥ ಹಾಗೂ ಹಿಟ್ನಾಳ್ ಫ್ಯಾಮಿಲಿ ಸೂಚನೆ ನೀಡುವವರಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಗುವ  ಮುನ್ಸೂಚನೆ ಇದೆ.  ಮುಂಬರುವ ವಿಧಾನಸಭಾ ಚುನಾವಣೆಗೆ ಒನ್ನೂ ಒಂದುವರೆ ವರ್ಷ ಬಾಕಿ ಇದ್ದು ಕಾಂಗ್ರೆಸ್ ಬಣ ಬಡಿದಾಟ ನಿಲ್ಲದಿದ್ದರೆ ಮತ್ತು ಮನೆಯೊಂದು ಮೂರು-ನಾಲ್ಕು ಬಾಗಿಲು ತಡೆಯದಿದ್ದರೆ  ಮತ್ತೊಮ್ಮೆ ಬಿಜೆಪಿ ಬಾವುಟ ಹಾರುವುದರಲ್ಲಿ ಅನುಮಾನವಿಲ್ಲ. ಬಾಕ್ಸ್ ಎಸ್‌ಐಆರ್ ಸೇರಿ ವಿಧಾನಸಭೆ, ಜಿ.ಪಂ.ತಾ.ಪಂ. ಮತ್ತು ನಗರಸಭೆ, ಗ್ರಾ.ಪಂ. ಸಾಲು ಸಾಲು ಚುನಾವಣೆಗಳು  ಬರುತ್ತಿದ್ದು ಕಾಂಗ್ರೆಸ್ ಪಕ್ಷ ಇದಕ್ಕಾಗಿ ಪೂರ್ವ ಸಿದ್ದತೆ ಆಗಬೇಕಿದ್ದು ಈ ಕುರಿತು ಹಲವು ಸಲ ಖುದ್ದು  ಬಿಎಲ್‌ಎ ಆಗಿದ್ದ ಇಕ್ಬಾಲ್ ಅನ್ಸಾರಿಯವರನ್ನು ಕಂಡು ಮತ್ತು ಮೊಬೈಲ್ ಕರೆ ಮೂಲಕ ಸಂಪರ್ಕ ಮಾಡಿ ಸಲಹೆ ಸೂಚನೆ ನೀಡಿದರೂ ಸ್ಪಂದನೆ ಸಿಗಲಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ವಿಷಯ ಹೋಗಿದ್ದರಿಂದ ಗಂಗಾವತಿ ಬಿಎಲ್‌ಎ-01 ಆಗಿ ಸಂಸದ ಕೆ.ರಾಜಶೇಖರ ಹಿಟ್ನಾಳ್ ಇವರನ್ನು ಕೆಪಿಸಿಸಿ ನೇಮಿಸಿ ಚುನಾವಣಾ ಆಯೋಗಕ್ಕೆ ಪತ್ರ ರವಾನಿಸಿದ್ದು ಮುಂಬರುವ ದಿನಗಳಲ್ಲಿ ಎಲ್ಲಾ ಮುಖಂಡರು ಸೇರಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಕಾರ್ಯ ಮಾಡಬೇಕು. ಅನ್ಸಾರಿಯರಿಗೆ ಯಾವುದೇ ಅನ್ಯಾಯವಾಗಿಲ್ಲ. ಪಕ್ಷದ ಸಂಘಟನೆ ದೃಷ್ಠಿಯಿಂದ ಬದಲಾಯಿಸಲಾಗಿದೆ. -ಅಮರೇಗೌಡ ಭಯ್ಯಾಪೂರ ಮಾಜಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.