ಭೂಮಿ ಇದ್ದವರಿಗೆ ನಿಯಮ ಉಲ್ಲಂಘಿಸಿ ಗಾಂವಠಾಣಾ ಭೂಮಿಯನ್ನು ಮಂಜೂರು ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳು!

*35 ಎಕರೆ ನೀರಾವರಿ ಇದ್ದವರಿಗೆ ದಶಕಗಳ ಹಿಂದೆ 1.10 ಎಕರೆ ಭೂಮಿ ಮಂಜೂರಿ.
*ಪೋತಿ ಖಾತೆ ಮಾಡಸಲು ಮಕ್ಕಳಿಂದ ಅರ್ಜಿ.
*ಗಾಂವ್ ಠಾಣಾ ಭೂಮಿ ವಾಪಸ್ ಪಡೆದು ಬಡವರಿಗೆ ನಿವೇಶನ ಹಂಚಲು ಆಗ್ರಹ
ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಹಲವು ದಶಕಗಳಿಂದ 35 ಎಕರೆ ನೀರಾವರಿ ಭೂಮಿ ಇರುವ ಕುಟುಂಬಕ್ಕೆ 1.10 ಎಕರೆ ಗಾಂವ್ ಠಾಣಾ ಭೂಮಿ ಮಂಜೂರು ಮಾಡುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಗಾಳಿ ತೂರಿದ ಉಲ್ಲಂಘಿಸಿದ ಪ್ರಕರಣ ತಾಲೂಕಿನ ಸಾಣಾಪುರ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಸಾಣಾಪುರ ಗ್ರಾಮದ ಸರ್ವೆ ನಂಬರ್ 31 ರಲ್ಲಿರುವ 3.35 ಎಕರೆ ಭೂಮಿಯ ಪೈಕಿ 1.10 ಎಕರೆ ಭೂಮಿಯನ್ನು ಆನೆಗೊಂದಿ ಗ್ರಾಮದ ದಿವಂಗತ ಕೆ.ವೆಂಕಟೇಶ್ವರಲು ಎನ್ನುವ ಶ್ರೀಮಂತ ವ್ಯಕ್ತಿಗೆ ಕಂದಾಯ ಇಲಾಖೆಯಮಂಜೂರು ಮಾಡಿದ್ದು ಇತ್ತೀಚಿಗೆ ಕೆ
ವೆಂಕಟೇಶ್ವರಲು ನಿಧನರಾಗಿದ್ದು ಅವರ ಪುತ್ರರಾದ ಕೆ.ಮುರಳಿ ಹಾಗೂ ಕೆ.ಗೋವಿಂದರಾಜು ಇವರು ತಮ್ಮ ಹೆಸರಿಗೆ ಪೋತಿ ಖಾತೆ ಮಾಡುವಂತೆ ತಹಸೀಲ್ದಾರ್ ರಿಗೆ ಅರ್ಜಿ ಹಾಕಿದ್ದು ಸಾಣಾಪುರ ಗ್ರಾಮಸ್ಥರು ಗಾಂವ್ ಠಾಣಾ ಭೂಮಿಯನ್ನು ಸರಕಾರ ವಾಪಸ್ ಪಡೆದು ನಿವೇಶನ ರಹಿತ ಎಸ್ಸಿ,ಎಸ್ಟಿ,ಹಿಂದುಳಿದ ಹಾಗೂ ಬಡವರಿಗ
ಹಂಚಿಕೆ ಮಾಡುವಂತೆ ತಹಸೀಲ್ದಾರ್ ರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
ಈಗಾಗಲೇ ದಿವಂಗತ ಕೆ ವೆಂಕಟೇಶ್ವರಲು ಕೆ ಮುರಳಿ ಹಾಗೂ ಗೋವಿಂದರಾಜು ಹಾಗೂ ಕುಟುಂಬದವರಿಗೆ ಆನೆಗೊಂದಿ, ರಾಂಪುರ- ಮಲ್ಲಾಪುರ ಮತ್ತು ಸಾಣಾಪುರದಲ್ಲಿ ಸುಮಾರು 35 ಎಕರೆ ನೀರಾವರಿ ಭೂಮಿ ಇದ್ದು ಭೂಮಿ ಇದ್ದವರಿಗೆ ಕಂದಾಯ ಇಲಾಖೆಯ ಈ ಹಿಂದಿನ ಅಧಿಕಾರಿಗಳು ಭೂಮಿ ಇಲ್ಲದವರು ಎಂದು ಗುರುತಿಸಿ ಸಾಣಾಪುರದ ಸರ್ವೆ ನಂಬರ್ 31ರಲ್ಲಿರುವ 3.35 ಎಕರೆ ಭೂಮಿ ಪೈಕಿ ಕೆ.ವೆಂಕಟೇಶ್ವರಲು ಇವರ ಕುಟುಂಬಕ್ಕೆ 1.10 ಎಕರೆ ಭೂಮಿಯನ್ನು ಮಂಜೂರಿ ಮಾಡಿದ್ದು ಉಳಿದ ಭೂಮಿಯನ್ನು ಸಹ ಭೂಮಿ ಇದ್ದವರಿಗೆ ಮಂಜೂರು ಮಾಡಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಮಂಜೂರಾಗಿರುವ ಗಾಂವ್ ಠಾಣಾ ಭೂಮಿಯನ್ನು ವಾಪಸ್ ಪಡೆದು ಸಾಣಾಪುರ ಗ್ರಾಮದಲ್ಲಿರುವ ಎಸ್ಸಿ ಎಸ್ಟಿ ಹಿಂದುಳಿದ ಮತ್ತು ಬಡವರಿಗೆ ನಿವೇಶನಗಳನ್ನು ಹಂಚಬೇಕೆಂದು ತಹಸೀಲ್ದಾರ್ ಮೂಲಕ ಮನವಿಪತ್ರ ಸಲ್ಲಿಸಿದ್ದಾರೆ.
ಈ ಮಧ್ಯೆ ತಹಸೀಲ್ದಾರ್ ಯು.ವಸಂತಕುಮಾರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ನ್ಯಾಯಾಲಯದಲ್ಲಿ ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಮುಂದಿನ ವಿಚಾರಣೆಯನ್ನು ಮೇ 29ರಂದು ನಡೆಸಲು ದಿನಾಂಕವನ್ನು ಕೊಟ್ಟಿದ್ದಾರೆ.
ದೂರು: ಅಕ್ರಮವಾಗಿ ಭೂಮಿ ಇದ್ದವರಿಗೆ ಸಾಣಾಪುರ ಗ್ರಾಮದಲ್ಲಿ ಸರ್ವೇ ನಂಬರ್ 31 ರಲ್ಲಿ 1.10 ಎಕರೆ ಭೂಮಿಯನ್ನು ದಿವಂಗತ ಕೆ
ವೆಂಕಟೇಶ್ವರಲು ಇವರಿಗೆ ಮಂಜೂರು ಮಾಡಿದ್ದು ಈಗ ಮಕ್ಕಳಾದ ಕೆ.ಮುರಳಿ ಹಾಗೂ ಕೆ.ಗೋವಿಂದರಾಜು ಇವರ ಹೆಸರಿನಲ್ಲಿ ಪೋತಿ ಖಾತೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಗಾಂವ್ ಠಾಣಾ ಭೂಮಿಯನ್ನು ಪೋತಿಖಾತೆ ಮಾಡದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
**
ಗ್ರಾಮದ ಗಾಂವ್ ಠಾಣಾ ಭೂಮಿಯನ್ನು ಅಕ್ರಮವಾಗಿ ಈಗಾಗಲೇ ಭೂಮಿ ಇರುವ ವ್ಯಕ್ತಿಗೆ ನಿಯಮ ಉಲ್ಲಂಘನೆ ಮಾಡಿ ಮಂಜೂರು ಮಾಡಲಾಗಿದೆ. ಮಂಜೂರು ಮಾಡಿದ ಭೂಮಿಯನ್ನು ವಾಪಸ್ ಪಡೆದು ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತಹಸೀಲ್ದಾರ್ ರು ತಮ್ಮ ನ್ಯಾಯಾಲಯದಲ್ಲಿ ಪ್ರಕರಣವನ್ನು ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು ಸಾಣಾಪುರ ಗ್ರಾಮಸ್ಥರಿಗೆ ನ್ಯಾಯ ದೊರಕುವ ಭರವಸೆ ಇದೆ.
-ಸಾಣಾಪುರ ಗ್ರಾಮದ ಮಹಿಳೆಯರು.

