ಗಂಗಾವತಿಯ ಹಿರೇಜಂತಗಲ್ ವೀರಣ್ಣನ ಗುಡ್ಡದಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ :
ಕಿಷ್ಕಿಂಧವಾಣಿ:
ಗಂಗಾವತಿ ನಗರದ ವಿರುಪಾಪುರ ವ್ಯಾಪ್ತಿಯಲ್ಲಿ ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ ಶಿಲಾ ಶಾಸನವನ್ನು ಗಂಗಾವತಿ ಚಾರಣಬಳಗ ಪತ್ತೆಮಾಡಿದೆ ಎಂದು ಚಾರಣ ಬಳಗದ ಸಂಚಾಲಕ ದಂತವೈದ್ಯ ಡಾ. ಶಿವಕುಮಾರ್ ಮಾಲಿ ಪಾಟೀಲ್ ತಿಳಿಸಿದ್ದಾರೆ .
ನಗರದ ವಿರುಪಾಪುರ ವ್ಯಾಪ್ತಿಯ ಹಿರೇಜಂತಕಲ್ ವೀರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯೊಂದರಲ್ಲಿ ಈ ಶಾಸನ ಕಂಡು ಬಂದಿದೆ .
ಪತ್ತೆಯಾಗಿರುವ ಶಾಸನವನ್ನು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಪರಿಶೀಲಿಸಿದ್ದು ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ .ಶಾಸನದ ಮೇಲ್ಭಾಗದಲ್ಲಿ ಸೂರ್ಯ ,ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ .ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಸನವು ಶಾಲಿವಾಹನ 1448ನೆಯ ಸಂವತ್ಸರದ ಮಾಘ ಶುದ್ಧ 7ರ ಕಾಲವನ್ನು ಉಲ್ಲೇಖಿಸುತ್ತದೆ .
ಅದು ಪ್ರಸ್ತುತ ಸಾಮಾನ್ಯ ಶಕೆ 1527 ಕ್ಕೆ ಸರಿಯಾಗುತ್ತದೆ .ಅಂದರೆ 16ನೇ ಶತಮಾನದ ಶಾಸನವಿದು. ಶಾಸನದಲ್ಲಿ ಶ್ರೀ ಮನ್ಮಾಹಾರಾಜಾಧಿರಾಜ ಪರಮೇಶ್ವರ ವೀರಪ್ರತಾಪ ಕೃಷ್ಣರಾಯರ ಆಳ್ವಿಕೆ ಕಾಲದಲ್ಲಿ ಆನೆಗುಂದಿ ಮಾಗಣೆಯನ್ನು ಯಾವುದೋ ವ್ಯಕ್ತಿ ಯ ( ಅಕ್ಷರ ಸವೆದಿವೆ) ಮಗ ಪಾಲಿಸುತ್ತಿರುವಾಗ ಭದ್ರಯ್ಯನ ಮಗ ಗಂಧದ ಸೂರಯ್ಯನು ವಿರುಪಾಪುರ ಸೀಮೆಯ ಮಲ್ಲಿಕಾರ್ಜುನ ದೇವರಿಗೆ ಹಾಗೂ ಕೆಲವು ಬ್ರಾಹ್ಮಣರಿಗೆ ಭೂಮಿಯನ್ನು ದಾನ ನೀಡಿದ ಬಗ್ಗೆ ತಿಳಿಸುತ್ತದೆ . ಶಾಸನದ ಕೆಳಸಾಲುಗಳು ಸವೆದಿರುವುದರಿಂದ ಹೆಚ್ಚಿನ ವಿಷಯ ಸ್ಪಷ್ಟವಾಗುತ್ತಿಲ್ಲ.ಗಂಗಾವತಿ ನಗರದಲ್ಲಿ ಈಗಾಗಲೇ ವಿಜಯನಗರದ ಪ್ರೌಢದೇವರಾಯ ಮತ್ತು ಸದಾಶಿವದೇವರಾಯನ ಶಾಸನಗಳು ಮಾತ್ರ ದೊರೆತಿದ್ದವು .
ಈಗ ಕೃಷ್ಣದೇವರಾಯನ ಕಾಲದ ಶಾಸನ ದೊರೆತಿರುವುದು ಮಹತ್ವದ ಸಂಗತಿ ಯಾಗಿದೆ .
ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಚಾರಣ ಬಳಗದ ಕೇಶವ ನಾಯ್ಕ್, ಪ್ರಲ್ಹಾದ್ ಕುಲಕರ್ಣಿ, ಮಂಜುನಾಥ್ ಗುಡ್ಲಾನೂರ,ಚಿದಾನಂದ ಕೀರ್ತಿ ಮತ್ತು ವಿನಯ್ ಕುಮಾರ್ ಅಂಗಡಿ ನೆರವಾಗಿದ್ದಾರೆಂದು ಡಾ. ಕೋಲ್ಕಾರ್ ತಿಳಿಸಿದ್ದಾರೆ.

