Breaking News
ಬಸ್ಸಾಪುರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ ಅಪಾರ ಪ್ರಮಾಣದ ನೀರು ಪೋಲು!

 

*ರೈತರ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿದ ನೀರು,ಲಕ್ಷಾಂತರ ರೂ.ಗಳ ನಷ್ಟ.
*ರಾಯಚೂರು ಜಿಲ್ಲೆಯ ಕುಡಿಯುವ ನೀರಿಗಾಗಿ ಮಾ.11ರಿಂದ ಎಡದಂಡೆ ಕಾಲುವೆ ನೀರು ಹರಿಸಲಾಗುತ್ತಿತ್ತು.
*ಕಾಲುವೆಯಿಂದ ನೀರು ಸೋರಿಕೆ ಕುರಿತು ರೈತರಿಂದ ನೀರಾವರಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ, ಬೋಂಗಾ ಬಿದ್ದು ಕಾಲುವೆ ಒಡೆದು
ಅಪಾರ ಪ್ರಮಾಣದ ನೀರು ನೂರಾರು ಎಕರೆ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ಸಮೀಪದ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಜರುಗಿದೆ.
ರಾಯಚೂರು ಜಿಲ್ಲೆಗೆ ಬೇಸಿಗೆ ನಿಮಿತ್ಯ ಕುಡಿಯುವ ನೀರನ್ನು ಎಡದಂಡೆಯ ಕಾಲುವೆಯ ಮೂಲಕ ಪೂರೈಕೆ ಮಾಡಲು ತುಂಗಭದ್ರಾ ಡ್ಯಾಮಿನಿಂದ ಮಾರ್ಚ್ 11 ರಿಂದ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು .
ಮಂಗಳವಾರ ಕಾಲುವೆಯಲ್ಲಿ ಸುಮಾರು 2300 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ.
ಬಸಾಪುರ ಹತ್ತಿರ ಎಡದಂಡೆ ಸಣ್ಣ ಸೇತುವೆ ಬಳಿ
ಕಳೆದ ವರ್ಷ ಬೋಂಗಾ ಬಿದ್ದಿರುವ ಕುರಿತು ರೈತರು ಜಲಸಂಪನ್ಮೂಲ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ಮಂಗಳವಾರ ಮಧ್ಯರಾತ್ರಿ ಬಸಾಪುರ ಹತ್ತಿರ ಎಡದಂಡೆ ಕಾಲುವೆ ಸೋರಿಕೆ ಕಂಡು ಬಂದಿದ್ದು ಸುಮಾರು 60 ಫೀಟಿನಷ್ಟು ಕಾಲುವೆ ಕೊಚ್ಚಿಕೊಂಡು ಹೋಗಿ ನೂರಾರು ಎಕರೆ ಭತ್ತದ ಗದ್ದೆ ಹಾಗೂ ಸುಮಾರು ಹತ್ತಕ್ಕೂ ಹೆಚ್ಚು ರೆಸಾರ್ಟ್ ಗಳಿಗೆ ಕಾಲುವೆ ನೀರು ನುಗ್ಗಿದ್ದರಿಂದ ಭತ್ತದ ಬೆಳೆ ನಷ್ಟವಾಗಿದೆ, ರೆಸಾರ್ಟ್ ಗಳು ಮತ್ತು ಅವುಗಳಲ್ಲಿದ್ದ ಫ್ರಿಡ್ಜ್ ,ಜನರೇಟರ್ , ಬೈಕ್ ಗಳು, ರೆಸಾರ್ಟ್ ಗಳ ಇತರ ಸಲಕರಣೆಗಳು ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಾಲುವೆಯಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಡ್ಯಾಮಿನ ಅಧಿಕಾರಿಗಳು ನೀರಿನ ಹರಿವನ್ನು ಕಡಿಮೆ ಮಾಡಿದ್ದರು ಸಾಣಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಮರಳಿ ಬಸಾಪುರ ಕಡೆ ಬರುತ್ತಿರುವುದರಿಂದ ನೀರಿನ ಪ್ರವಾಹ ತಗ್ಗುತ್ತಿಲ್ಲ ಇದರಿಂದ ಇನ್ನಷ್ಟು ಭತ್ತದ ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಸ್ಥಳಕ್ಕೆ ಜಲಸಂಪನ್ಮೂಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಕಟಾವಿಗೆ ಬಂದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದ್ದು ಸರಕಾರ ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರವನ್ನು ಕಲ್ಪಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.