Breaking News
ಎಸ್ಸೆಸೆಲ್ಸಿ ಪರೀಕ್ಷೆ: ಹಾಲ್ಟ್ ಟಿಕೇಟ್ ಬಾರದೇ ಪರೀಕ್ಷೆ ಬರೆಯದ  ಮರಳಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳು!

*ಹಾಜರಾತಿ ಕಡಿಮೆ ಹಾಗೂ ಕಿರು ಪರೀಕ್ಷೆಗೆ ಗೈರು ಹಾಲ್ಟ್ ಟಿಕೇಟ್ ಬರದಿರಲು ಕಾರಣ: ಮುಖ್ಯ ಶಿಕ್ಷಕಿ ಹೇಳಿಕೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬುಧವಾರದಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ತಾಲೂಕಿನ ಮರಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಪೈಕಿ 12 ಜನ ವಿದ್ಯಾರ್ಥಿಗಳ ಪರೀಕ್ಷೆಯ ಪ್ರವೇಶ ಪತ್ರಗಳುವ ಹಾಜರಾತಿ ಕೊರತೆ ಮತ್ತು ಶಾಲೆಯ ಕಿರು ಪರೀಕ್ಷೆ ವಿದ್ಯಾರ್ಥಿಗಳು ಗೈರು ಆಗಿದ್ದು ಬೋರ್ಡ್ ನಿಂದಲೇ ಪ್ರವೇಶ ಪತ್ರಗಳು ಬಂದಿಲ್ಲ

ಎನ್ನುವ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಣೆ ಮಾಡಿಲ್ಲ ಎನ್ನಲಾಗುತ್ತಿದೆ.

ಹಾಲ್ ಟಿಕೆಟ್ ಬೋರ್ಡ್ ಬಂದರೂ ನಮಗೆ ವಿತರಣೆ ಮಾಡಿಲ್ಲ ಎಂದು 12 ಜನ ವಿದ್ಯಾರ್ಥಿಗಳು ಭಾರತೀಯ ದಲಿತ ಸೇನೆ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿ ನಮಗೆಲ್ಲ ಹಾಲ್ ಟಿಕೆಟ್ ವಿತರಿಸಬೇಕು.ನಮ್ಮ ಭವಿಷ್ಯದ ಜತೆ ಆಟವಾಡಿದ ಮುಖ್ಯ ಶಿಕ್ಷಕರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಮರಳಿ ಸರಕಾರಿ ಪ್ರೌಢಶಾಲೆಯ ಯಮನೂರ ಸಾಬ ,ಮೌನೇಶ,ಪ್ರದೀಪ್, ಮಹೇಶ,ನವಾಜ್,ಹೇಮಂತ,ಶಶಾಂಕ್,ನಿರಂಜನ್ ಮತ್ತು ಪ್ರವೀಣ್, ಶ್ರೀನಿವಾಸ, ವೆಂಕಟೇಶ ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಬಂದಿಲ್ಲ.

ಬಾಕ್ಸ್

ವಿದ್ಯಾರ್ಥಿಗಳು ಶಾಲೆಗೆ ಸತತ ಗೈರು ಮತ್ತು ಕಿರು ಪರೀಕ್ಷೆ ಬರೆದಿರುವುದರಿಂದ ಅವರುಗಳ ಹಾಲ್ ಟಿಕೆಟ್ ಅನ್ನು ಎಸೆಸೆಲ್ಸಿ ಪರೀಕ್ಷಾ ಮಂಡಳಿಯವರು ಕಳುಹಿಸಿಲ್ಲ. ಆದ್ದರಿಂದ ಇದರಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಇತರ ಶಿಕ್ಷಕರ ಪಾತ್ರ ಇಲ್ಲ, ಪಾಲಕರಿಗೂ ಸಹ ಅನೇಕ ಬಾರಿ ಮನೆಗೆ ಹೋಗಿ ಮಾಹಿತಿ ನೀಡಲಾಗಿದೆ.ಜೊತೆಗೆ ಮೊಬೈಲ್ ಮೂಲಕ ಕರೆ ಮಾಡಿ ವಿದ್ಯಾರ್ಥಿಗಳು ಸತತ ಗೈರು ಮತ್ತು ಕಿರುಪರೀಕ್ಷೆ ಬರೆದಿರುವ ಕುರಿತು ತಿಳಿಸಲಾಗಿದೆ.

-ಆಶಾ ಮುಖ್ಯ ಶಿಕ್ಷಕಿ.

 

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಿರಾಣಿ ಅಂಗಡಿ, ಪಂಚರ್ ಶಾಪ್ ಸುಟ್ಟು ಭಸ್ಮ, ಲಕ್ಷಾಂತರ ನಷ್ಟ.

*ಗಂಗಾವತಿ ಬಸವೇಶ್ವರ ಸರ್ಕಲ್ ಬಳಿ ಘಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪ್ ಸುಟ್ಟ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ಗಂಗಾವತಿಯ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ಸರ್ಕಲ್ ಬಳಿ ಜರುಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೇಗೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಧ್ಯರಾತ್ರಿ ಏಕಾಏಕಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪಿಗೆ ಬೆಂಕಿ ಹತ್ತಿಕೊಂಡು ಕಿರಾಣಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ದವಸ ಧಾನ್ಯ ಹಾಗೂ ಪ ಪಂಚರ್ ಶಾಪಿನಲ್ಲಿದ್ದ ಟೈರ್,ಟ್ಯೂಬ್ ಇತರೆ ಸಲಕರಣೆಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಾಹನ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ.

ಕಿರಾಣಿ ಅಂಗಡಿ ಮಾಲೀಕ ಅಮಾತೆಮ್ಮ ಹಾಗೂ ಪಂಚರ್ ಶಾಪ್ ಮಾಲೀಕ ಶಾಮೀದ್ ಅಲಿ ಬೆಂಕಿ ಅನಾವುತದ ಬಗ್ಗೆ ಕೇಸ್ ದಾಖಲಿಸಿದ್ದಾರೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಏಕಪಕ್ಷೀಯ ನಿಯಮಗಳ ವಿರುದ್ಧ ಆನೆಗೊಂದಿ ಭಾಗದ ಜನರಿಂದ ಪ್ರತಿಭಟನೆ.

*ಆನೆಗೊಂದಿಯನ್ನು ಕೋರ್ ಜೋನ್ ನಿಂದ ತೆಗೆದು ಹಾಕಬೇಕು.

*ಕಾರಿಗನೂರನ್ನು ಪ್ರಾಧಿಕಾರದಿಂದ ಕೈ ಬಿಟ್ಟಂತೆ ಆನೆಗೊಂದಿಯ 15 ಗ್ರಾಮಗಳನ್ನು ಕೈ ಬಿಡಬೇಕು.

*ಪಕ್ಷಾತೀತ ಹೋರಾಟಕ್ಕೆ ವ್ಯಾಪಕ ಬೆಂಬಲ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಏಕಪಕ್ಷೀಯ ನಿಯಮಗಳನ್ನು ಖಂಡಿಸಿ ಆನೆಗೊಂದಿ ಭಾಗದ 15 ಗ್ರಾಮಗಳ ನಿವಾಸಿಗಳು ಕಡೆ ಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತವನ್ನು ಸಲ್ಲಿಸಿದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಂಪಿ ಪ್ರದೇಶವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು ಆ ಮೂಲಕ ಇನ್ನೋಸ್ಕೋ ಪಟ್ಟಿಯಲ್ಲಿ ಹಂಪಿಯನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಮಾಡುತ್ತಿದೆ ಆದರೆ ಪ್ರಾಧಿಕಾರ ಸ್ಥಾಪನೆ ಆಗುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಮಾಸ್ಟರ್ ಪ್ಲಾನ್ ಬದಲಾಯಿಸುವ ಜೊತೆಗೆ ಕಾಲ ಕಾಲಕ್ಕೆ ಸ್ಟೇಕ್ ಹೋಲ್ಡರ್ಸ್(ಸ್ಥಳೀಯರು) ಅವರ ಸಭೆ ಕರೆದು ಪರಂಪರೆ ಉಳಿಸುವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಸಲಹೆ ಸೂಚನೆ ಪಡೆಯುವ ಭರವಸೆ ಉಸಿಯಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು 15 ಗ್ರಾಮಗಳ ಜನರ ಜೀವನವನ್ನು ಕತ್ತಲು ಮಾಡಿದ್ದಾರೆ. ಹಿರಿಯರು ನಿರ್ಮಿಸಿದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಗ್ರಾಮಗಳಲ್ಲಿ ಹೊಸ ಲೇಔಟ್ ಗಳನ್ನು ಮಾಡಿ ನಿವೇಶನಗಳನ್ನು ಹಂಚಿಕೊಳ್ಳಲು ಅಥವಾ ಪಡೆಯಲು ಆಗುತ್ತಿಲ್ಲ, ಕುಡಿಯುವ ನೀರು, ಶಾಲಾ ಕಾಂಪೌಂಡು, ಆಸ್ಪತ್ರೆಗಳು ಸೇರಿದಂತೆ ಯಾವುದೇ ಹೊಸ ಯೋಜನೆಗಳನ್ನು ಅನುಷ್ಠಾನ ಆಗಬೇಕಾದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸೆಕ್ಷನ್ 14 ನಂತೆ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರ ಇಲ್ಲ, ಕಡ್ಡಾಯವಾಗಿ ಪ್ರಾಧಿಕಾರದ ನಿರಾಪೇಕ್ಷಣ ಪತ್ರ ಪಡೆಯಬೇಕಿದೆ. ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳಿಂದಾಗಿ ಆನೆಗೊಂದಿ ಭಾಗವು 50 ವರ್ಷಗಳ ಹಿಂದೆ ಹೋಗಿದೆ. ವಿಶ್ವದಾದ್ಯಂತ ಇರುವ ಯುನೆಸ್ಕೋ ಸ್ಥಳಗಳ ಮೇಲುಸ್ತುವಾರಿಗಾಗಿ ಎಲ್ಲಿಯೂ ನಿರ್ವಹಣಾ ಪ್ರಾಧಿಕಾರ ಇಲ್ಲ ಹಂಪಿಗೆ ಮಾತ್ರ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಜತೆಗೆ ಕೋರ್ ಜೋನ್ ಪ್ರದೇಶಗಳನ್ನು ಅಧಿಕಾರಿಗಳು ಸ್ಥಳೀಯರ ಅಭಿಪ್ರಾಯ ಪಡೆಯದೇ ಆನೆಗೊಂದಿ ಮತ್ತು ವಿರೂಪಾಪೂರಗಡ್ಡಿ ಗ್ರಾಮವನ್ನು ಶೇ100 ಮಾಡಿ ಎಎಸ್ ಐ ಸ್ಮಾರಕಗಳಿರುವ ಹೊಸಪೇಟೆ ತಾಲೂಕಿನ ಕಮಲಾಪೂರ ವನ್ನು ಶೆ.100 ರಿಂದ 40ಕ್ಕೆ ಇಳಿಸಲಾಗಿದೆ.

ಪ್ರಾಧಿಕಾರದಲ್ಲಿದ್ದ ಕಾರಿಗನೂರನ್ನು ಗಣಿ ಉದ್ಯಮ ನಡೆಸುವ ಉದ್ದೇಶದಿಂದ ಕೈ ಬಿಡಲಾಗಿದೆ.

ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಗ್ರಾ.ಪಂ.ಕಾಯ್ದೆಯನ್ನು ಹಂಪಿ ಪ್ರಾಧಿಕಾರ ಗಾಳಿ ತೂರಿದ್ದು ಆನೆಗೊಂದಿ, ಸಾಣಾಪುರ, ಮಲ್ಲಾಪೂರ ಹಾಗೂ ಸಂಗಾಪೂರ ಗ್ರಾ.ಪಂ.ಆಡಳಿತ ವನ್ನು ನಡೆಸಲು ಬಿಡದೇ ಪ್ರತಿ ಹಂತದಲ್ಲೂ ಆಕ್ಷೇಪ ಎತ್ತಲಾಗುತ್ತಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳಲು ಬಿಡುತ್ತಿಲ್ಲ.

ಹಂಪಿ ಭಾಗವು ಕೋರ್ ಜೋನ್ ನಲ್ಲಿದ್ದರೂ ವಾಣಿಜ್ಯ ವ್ಯವಹಾರ, ಮನೆ ನಿರ್ಮಾಣ,ಸ್ಟಾರ್ ಹೊಟೇಲ್ ಗಳ ನಿರ್ಮಾಣ ಹೀಗೆ ಎಲ್ಲಾ ವ್ಯವಹಾರ ನಡೆಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಆನೆಗೊಂದಿ ಭಾಗದಲ್ಲಿ ಮನೆ ಹಾಗೂ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ನಡೆಸುವವರ ವಿರುದ್ದ ಪ್ರಾಧಿಕಾರ ಕೆಂಗಣ್ಣು ಬಿಟ್ಟು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.ಕೂಡಲೇ ರಾಜ್ಯ ಸರಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈ ಬಿಡಬೇಕು.ಜತೆಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಆನೆಗೊಂದಿಯ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕೈ ಬಿಟ್ಟು

ಆನೆಗೊಂದಿ ಒಳಗೊಂಡಂತೆ ಕಿಷ್ಕಿಂಧಾ ಅಂಜನಾದ್ರಿ ಪ್ರಾಧಿಕಾರ ರಚನೆ ಪ್ರಸ್ತಾಪ ಹಾಗೂ ಕೋರ್ ಜೋನ್ ಸೇರಿ ವಿವಿಧ ವಲಯಗಳ ನಿಯಮ ಸರಳೀಕರಣ ಮಾಡಬೇಕು. ಪ್ರತಿ ಗ್ರಾಮಕ್ಕೆ ಗಾಂವಠಾಣಾ ಗುರುತಿಸಬೇಕು. ಆನೆಗೊಂದಿ ಭಾಗದ ಅರಣ್ಯ ಪ್ರದೇಶದಲ್ಲಿ ಜನ ವಸತಿ ಗುರುತಿಸಿ ಬೇರೆ ಕಡೆ ಅರಣ್ಯ ಇಲಾಖೆಗೆ ಕಂದಾಯ ಭೂಮಿ ಡಿನೋಟಿಫೈ ಮಾಡಬೇಕು.ಆನೆಗೊಂದಿ ಭಾಗವನ್ನು ಪ್ರವಾಸೋದ್ಯಮದಲ್ಲಿ ಬೆಳೆಸುವ ಅಂಶಗಳುಳ್ಳ

ನಿಯಮಗಳನ್ನು ಅನುಷ್ಠಾನ ಮಾಡಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಪ್ರತಿಭಟನೆಯಲ್ಲಿ ಶ್ರೀಕೃಷ್ಣದೇವರಾಯ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ, ನ್ಯಾಯವಾದಿ ಎಚ್.ಸಿ.ಯಾದವ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಡಾ.ವೆಂಕಟೇಶ ಬಾಬು,ಗ್ರಾ.ಪಂ.ಮಾಜಿ ಸದಸ್ಯ. ಮಲ್ಲಿಕಾರ್ಜುನ ಸ್ವಾಮಿ,ಪದ್ಮನಾಭರಾಜು,ನರಸಿಂಹಲು, ಸಿ.ಎಚ್.ಪ್ರಸಾದ,ಪಿ.ಲಕ್ಷ್ಮಣ್ ನಾಯ್ಕ, ಸುಬ್ಬರಾವ್,

ನ್ಯಾಯವಾದಿ ಸಾಯಿಕುಮಾರ,ವಿರೇಶ ಹನುಮನಹಳ್ಳಿ, ವೆಂಕಾರೆಡ್ಡಿ,ಎನ್.ಚಂದ್ರಶೇಖರ ರೆಡ್ಡಿ, ಬೆಳೂರು ಮಲ್ಲಪ್ಪ,ನೀಲಪ್ಪ,ಮಂಜುನಾಥಗೌಡ,ಅಯ್ಯಪ್ಪ,ಸುಬ್ಬಾರಾವ್,ಅಂಬೀಗೆರ ಹನುಮಂತಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷೆ ದುರುಗಮ್ಮ, ತಾ.ಪಂ.ಮಾಜಿ ಸದಸ್ಯೆ ಸಕ್ರಿಬಾಯಿ,ಸುನೀಲ್ ನಾಯ್ಡು,ಗೋಪಿ,ರವಿ,ಲಕ್ಷ್ಮೀನಾರಾಯಣ, ಅಂಜನಾದೇವಿ ಸೇರಿದಂತೆ ಆನೆಗೊಂದಿ ಹಾಗೂ15 ಗ್ರಾಮಗಳ ನಿವಾಸಿಗಳಿದ್ದರು.

ಬಸ್ಸಾಪುರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ ಅಪಾರ ಪ್ರಮಾಣದ ನೀರು ಪೋಲು!

 

*ರೈತರ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿದ ನೀರು,ಲಕ್ಷಾಂತರ ರೂ.ಗಳ ನಷ್ಟ.
*ರಾಯಚೂರು ಜಿಲ್ಲೆಯ ಕುಡಿಯುವ ನೀರಿಗಾಗಿ ಮಾ.11ರಿಂದ ಎಡದಂಡೆ ಕಾಲುವೆ ನೀರು ಹರಿಸಲಾಗುತ್ತಿತ್ತು.
*ಕಾಲುವೆಯಿಂದ ನೀರು ಸೋರಿಕೆ ಕುರಿತು ರೈತರಿಂದ ನೀರಾವರಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ, ಬೋಂಗಾ ಬಿದ್ದು ಕಾಲುವೆ ಒಡೆದು
ಅಪಾರ ಪ್ರಮಾಣದ ನೀರು ನೂರಾರು ಎಕರೆ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ಸಮೀಪದ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಜರುಗಿದೆ.
ರಾಯಚೂರು ಜಿಲ್ಲೆಗೆ ಬೇಸಿಗೆ ನಿಮಿತ್ಯ ಕುಡಿಯುವ ನೀರನ್ನು ಎಡದಂಡೆಯ ಕಾಲುವೆಯ ಮೂಲಕ ಪೂರೈಕೆ ಮಾಡಲು ತುಂಗಭದ್ರಾ ಡ್ಯಾಮಿನಿಂದ ಮಾರ್ಚ್ 11 ರಿಂದ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು .
ಮಂಗಳವಾರ ಕಾಲುವೆಯಲ್ಲಿ ಸುಮಾರು 2300 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ.
ಬಸಾಪುರ ಹತ್ತಿರ ಎಡದಂಡೆ ಸಣ್ಣ ಸೇತುವೆ ಬಳಿ
ಕಳೆದ ವರ್ಷ ಬೋಂಗಾ ಬಿದ್ದಿರುವ ಕುರಿತು ರೈತರು ಜಲಸಂಪನ್ಮೂಲ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ಮಂಗಳವಾರ ಮಧ್ಯರಾತ್ರಿ ಬಸಾಪುರ ಹತ್ತಿರ ಎಡದಂಡೆ ಕಾಲುವೆ ಸೋರಿಕೆ ಕಂಡು ಬಂದಿದ್ದು ಸುಮಾರು 60 ಫೀಟಿನಷ್ಟು ಕಾಲುವೆ ಕೊಚ್ಚಿಕೊಂಡು ಹೋಗಿ ನೂರಾರು ಎಕರೆ ಭತ್ತದ ಗದ್ದೆ ಹಾಗೂ ಸುಮಾರು ಹತ್ತಕ್ಕೂ ಹೆಚ್ಚು ರೆಸಾರ್ಟ್ ಗಳಿಗೆ ಕಾಲುವೆ ನೀರು ನುಗ್ಗಿದ್ದರಿಂದ ಭತ್ತದ ಬೆಳೆ ನಷ್ಟವಾಗಿದೆ, ರೆಸಾರ್ಟ್ ಗಳು ಮತ್ತು ಅವುಗಳಲ್ಲಿದ್ದ ಫ್ರಿಡ್ಜ್ ,ಜನರೇಟರ್ , ಬೈಕ್ ಗಳು, ರೆಸಾರ್ಟ್ ಗಳ ಇತರ ಸಲಕರಣೆಗಳು ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಾಲುವೆಯಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಡ್ಯಾಮಿನ ಅಧಿಕಾರಿಗಳು ನೀರಿನ ಹರಿವನ್ನು ಕಡಿಮೆ ಮಾಡಿದ್ದರು ಸಾಣಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಮರಳಿ ಬಸಾಪುರ ಕಡೆ ಬರುತ್ತಿರುವುದರಿಂದ ನೀರಿನ ಪ್ರವಾಹ ತಗ್ಗುತ್ತಿಲ್ಲ ಇದರಿಂದ ಇನ್ನಷ್ಟು ಭತ್ತದ ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಸ್ಥಳಕ್ಕೆ ಜಲಸಂಪನ್ಮೂಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಕಟಾವಿಗೆ ಬಂದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದ್ದು ಸರಕಾರ ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರವನ್ನು ಕಲ್ಪಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.