ನ್ಯಾಯಾಧೀಶರ ಎದುರು ವಾದ ಮಂಡಿಸುತ್ತಲೇ ಕುಸಿದು ಬಿದ್ದು ಹಸುನೀಗಿದ ನ್ಯಾಯವಾದಿ,ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ !


*ಕುಷ್ಟಗಿ ನ್ಯಾಯಾಲಯದಲ್ಲಿ ಘಟನೆ.
*ನ್ಯಾಯವಾದಿಗಳು, ವಕೀಲರು ದಿಗ್ಭ್ರಮೆ .
ಕಿಷ್ಕಿಂಧವಾಣಿ ಸುದ್ದಿ
ಕುಷ್ಟಗಿ: ಕೇಸ್ ಒಂದರ ವಾದ ಮಾಡುತ್ತಲೇ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ ತಾವರಗೇರಾ ಇವರು ಮೃತಪಟ್ಟ ಘಟನೆ ಕುಷ್ಟಗಿ ನ್ಯಾಯಾಲಯದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.
ತಾವರಗೇರಾ ಮೂಲದ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ(50) ಇವರು ಭೂ ವಿವಾದದ ಕೇಸ್ ಒಂದರಲ್ಲಿ ಮಾನ್ಯ ನ್ಯಾಯಾಧೀಶರ ಎದುರು ತಮ್ಮ ವಾದವನ್ನು ಮಂಡಿಸುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಕುಷ್ಟಗಿ ನ್ಯಾಯಾಲಯದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಜರುಗಿದೆ. ಮೃತ ನಿಂಗಪ್ಪ ಸುದ್ದಿ ಇವರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತ ನಿಂಗಪ್ಪ ಸುದ್ದಿ ಅವರು ಕಳೆದ 20 ವರ್ಷಗಳಿಂದ ಗಂಗಾವತಿ ಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಜೊತೆಗೆ ರಂಗಭೂಮಿ ಬಗ್ಗೆ ಒಲವಿದ್ದ ಅವರು ವಿವಿಧ ನಾಟಕ ಕಂಪನಿಗಳು ಹಾಗೂ ಅಮೆಚೂರ್ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಕೇಸ್ ಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಕುಷ್ಟಗಿ ನ್ಯಾಯಾಲಯದಲ್ಲಿ ಕೇಸ್ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿಂಗಪ್ಪ ಸುದ್ದಿ ನಿಧನಕ್ಕೆ ಗಂಗಾವತಿ ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ವಕೀಲರ ಸಂಘದವರು ಕಂಬನಿ ಮಿಡಿದಿದ್ದಾರೆ

