Breaking News
ಕನಕಗಿರಿ ಕ್ಷೇತ್ರದ ಬಿಸಿಎಂ‌ ಹಾಸ್ಟೆಲ್ ವಿದ್ಯಾರ್ಥಿಗಳ ಎಸ್ಸೆಸೆಲ್ಸಿ ಪರೀಕ್ಷೆಯ ಸಾಧಕರಿಗೆ ಸಚಿವ ಶಿವರಾಜ ತಂಗಡಗಿ ಸನ್ಮಾನ.

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಕನಕಗಿರಿ ಕ್ಷೇತ್ರದ ಬಿಸಿಎಂ ಇಲಾಖೆ ವ್ಯಾಪ್ತಿಯಲ್ಲಿರುವ ಹಾಸ್ಟೆಲ್ ಗಳ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇಡೀ ಕ್ಷೇತ್ರದ ಜನತೆಗೆ ಕೀರ್ತಿ ತಂದಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಮುಂಬರುವ ದಿನಗಳಲ್ಲಿ ಅತ್ಯುನ್ನತ ಹುದ್ದೆಗೆ ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಅವರು ಕಾರಟಗಿಯ ತಮ್ಮ ನಿವಾಸದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಬಿ ಸಿ ಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.

ಕನಕಗಿರಿ ವಿಧಾನಸಭಾ ಕ್ಷೇತ್ರದ, ಬಿಸಿಎಂ ಇಲಾಖೆಯ ವಸತಿ ಶಾಲೆಯ ಮಕ್ಕಳು ಉನ್ನತ ಸಾಧನೆ ಮಾಡಿರುವುದು ಹಾಗೂ ಉತ್ತಮ ಸಾಧನೆ ಮಾಡುವ ಮೂಲಕ ಕ್ಷೇತ್ರಕ್ಕೆ ಹಾಗೂ ನನ್ನ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆ ಯ ವಿಷಯ ಎಂದರು. ಜತೆಗೆ ಮುಂದಿನ ನಿಮ್ಮ ಶೈಕ್ಷಣಿಕ ಜೀವನ ಉತ್ತಮವಾಗಿರಲಿ ಉನ್ನತ ಸರಕಾರಿ ಹುದ್ದೆಯಲ್ಲಿ ಕೆಲಸ ಮಾಡುವ ಗುರಿಯನ್ನು ಇಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಲಿಂಗರಾಜ ತಂದೆ ಶಿವಶಂಕರಪ್ಪ 625 ಕ್ಕೆ 621, (99.63% )ರಾಜ್ಯಕ್ಕೆ 5ನೇ ಸ್ಥಾನ ಪಡೆದಿರುತ್ತಾರೆ. ಪ್ರತಿಭಾ ತಂದೆ ಬಸವರಾಜ 625ಕ್ಕೆ 619,( 99.04)ರಾಜ್ಯಕ್ಕೆ 7ನೇ ಸ್ಥಾನ, ನಂದಿನಿ ತಂದೆ ವೀರೇಶ 625 ಕ್ಕೆ 617 (98.72%) 9ನೇ ಸ್ಥಾನ ಪಡೆದಿರುತ್ತಾರೆ.

ಈ ವೇಳೆ ಪ್ರಾಂಶುಪಾಲರು ಸಿದ್ದಲಿಂಗಪ್ಪ ಉಪನ್ಯಾಸಕರಾದ ವಂದನಾ ಮಲ್ಲಿಕಾರ್ಜುನ, ಶ್ಯಾಮಣ್ಣ ಗುರಿಕಾರ, ವಿರೇಶ ತೆಗ್ಗಿ ಹಳ್ಳಿ, ಸುರೇಶ್ ಹಿರೇಮಠ, ವಿಶ್ವಾನಾಥ ಹಳೆಮನಿ, ಮುದುಕಪ್ಪ ಸೇರಿ ವಿದ್ಯಾರ್ಥಿಗಳು ಇದ್ದರು.

ಅಪಘಾತ ಪ್ರಕರಣ ಆರೋಪಿಗೆ ಶಿಕ್ಷೆ ಪ್ರಕಟ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಕಾರು ಬೈಕ್ ಡಿಕ್ಕಿ

ಅಪಘಾತ ಪ್ರಕರಣ ಒಂದರಲ್ಲಿ ಆರೋಪಿಗೆ ನಗರದ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಜೈಲು ವಾಸ ಹಾಗೂ ದಂಡ ವಿಧಿಸಿ ಶಿಕ್ಷೆಯನ್ನು ಪ್ರಕಟಿಸಿದ.

ನಗರದ ಎಆರ್ ಎಸ್ ಫಾರಂ ಹತ್ತಿರ 2021 ನೇ ಇಸ್ವಿ ನವೆಂಬರ್ 21 ರಂದು ಕಾರು ಹಾಗೂ ಬೈಕ್ ಅಪಘಾತ ಜರುಗಿ ತೊಂಡಿಹಾಳ ಗ್ರಾಮದ ಮೌಲಸಾಬ ತಂದೆ ಮೌಲಾಲಿ (23) ಮೃತಪಟ್ಟಿದ್ದ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಮಂಗಳವಾರ ತೀರ್ಪು ನೀಡಿದ್ದು ಆರೋಪಿ ಹನುಮನಗೌಡ ಹಟ್ಟಿ ಈತನ ವಿರುದ್ಧ ಭಾರತ ದಂಡ ಸಂಹಿತೆ 304/ಎ ಅಡಿಯಲ್ಲಿ ಎರಡು ವರ್ಷ ಒಂಬತ್ತು ತಿಂಗಳು ಜೈಲು ಶಿಕ್ಷೆ ಹಾಗೂ 9500/ರೂ‌.ಗಳ ದಂಡ ವಿಧಿಸಿದ್ದಾರೆ.

ಹಂಪಿ ಪ್ರಾಧಿಕಾರದ ನೋಟೀಸ್ ವಿರುದ್ಧ ಹೈಕೋರ್ಟ್ ಗೆ ಹೋಗಿದ್ದ ಸಾಣಾಪುರ ಮತ್ತು ಆನೆಗೊಂದಿ ಭಾಗದ ರೆಸಾರ್ಟ್ ಮಾಲೀಕರ ದಾವೆ ತಿರಸ್ಕಾರ.

 

*ಶೀಘ್ರ ಪ್ರಾಧಿಕಾರದ ಹಾಗೂ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಸಾಣಾಪುರ ಭಾಗದ ಕೃಷಿ ಭೂಮಿಯಲ್ಲಿ

ರೆಸಾರ್ಟ್, ಹೊಟೇಲ್ ಗಳ ನಿರ್ಮಾಣ ಮಾಡಲಾಗಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವಲಯ ನಿಯಮಾವಳಿಗಳಿಗೆ ವಿರುದ್ದವಾಗಿದೆ ಎಂದು ಪ್ರಾಧಿಕಾರ ಕಳೆದ ನಾಲ್ಕೈದು ವರ್ಷಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ 16 ಜನ ರೆಸಾರ್ಟ್ ಹೊಟೇಲ್ ಮಾಲೀಕರು ತಡೆಯಾಜ್ಞೆ ತಂದಿದ್ದರು.ಇದೀಗ ಪ್ರಾಧಿಕಾರವು ಪ್ರಸ್ತುತ 2007 ನಿಯಮಾಳಿ ಹಾಗೂ ವಲಯ ನಿಯಮಾವಳಿಗಳ ಉಲ್ಲಂಘನೆ ಕುರಿತು ಹೈಕೋರ್ಟ್ ಗೆ ಮನವರಿಕೆ ಮಾಡಿದ್ದು ಏ.21 ರಂದು

ರೆಸಾರ್ಟ್ ,ಹೊಟೇಲ್ ಮಾಲೀಕರ ತಡೆಯಾಜ್ಞೆಯನ್ನು ವಜಾಗೊಳಿಸಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಮೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಗಮನಕ್ಕೆ ತಂದು ಪದ್ಮಾವತಿ ಶ್ರೀನಿವಾಸರಾವ್,ನಾಮಗೌಡ,ಜಮಲಪ್ಪ,ಶಬ್ಬೀರ್ ಅಹಮದ್,ಶೇರಖಾನ್(2),ಮಹಮದ್ ಅಲಿ,ಯಲಕೂರಿ ರಮೇಶ,ರಾಮಾಂಜನೇಯ, ಪೆದ್ದಚಂದ್ರಯ್ಯ,ಲಕ್ಷ್ಮಿ,ಮಣಿಮಹೇಶ,ಮಲದಮ್ಮ,ನೂರಜಹಾನ್ ಮತ್ತು ಶೇರಖಾನ್ ಇವರ ಮಾಲೀಕತ್ವದ ರೆಸಾರ್ಟ್ ಹೊಟೇಲ್ ಗಳನ್ನು ಶೀಘ್ರ ತೆರೆವು ಮಾಡಲಾಗುವುದು ತಿಳಿಸಿದ್ದಾರೆ.

ಕಿಷ್ಕಿಂಧಾ ಅಂಜನಾದ್ರಿ ವಾಹನಪಾರ್ಕಿಂಗ್ ಸ್ಥಳ ಹರಾಜು ಸ್ಥಗಿತ

 

* ಅಧಿಕ ಹಣಕ್ಕೆ ಹರಾಜು ನಿಗದಿ,ಹರಾಜು ಕೂಗಲು ಬಾರದ ಬಿಡ್ ದಾರರು!

*ಪ್ರಚಾರದ ಕೊರತೆ ಹರಾಜಿನಲ್ಲಿ ಬೆರಳೆಕೆಯ ಬಿಡದ್ ದಾರರು ಭಾಗಿ.

*ಪಾರ್ಕಿಂಗ್ ಜಾಗದ ಕೊರತೆಯೂ ಹರಾಜು ಪ್ರಕ್ರಿಯೆ ಸ್ಥಗಿತಕ್ಕೆ ಕಾರಣ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ,ಮ: ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಧಾರ್ಮಿಕ ಕೇಂದ್ರದಲ್ಲಿ ಸೋಮವಾರ ಜರುಗಿದ ವಾಹನಗಳ ಪಾರ್ಕಿಂಗ್ ಹರಾಜು ಪ್ರಕ್ರಿಯೆ ಬೆರಳಿನಕೆಯ ಬಿಡ್ ದಾರರು ಆಗಮಿಸಿದ್ದರಿಂದ ಸ್ಥಗಿತವಾಗಿದೆ.

ಒಂದು ತಿಂಗಳ ಹಿಂದೆ ಅಂಬಾದಾಸ ಎನ್ನುವವರಿಗೆ 31.10ಲಕ್ಷ ರೂ.ಗಳಿಗೆ ಪಾರ್ಕಿಂಗ್ ಜಾಗವನ್ನು ಒಂದು ವರ್ಷದ ಅವಧಿಗೆ ಕೆಲವು‌ ಷರತ್ತಿನೊಂದಿಗೆ ವಹಿಸಲಾಗಿತ್ತು. ನಿಗದಿತ ಸಮಯದಲ್ಲಿ ಹರಾಜು ಹಣ ಪಾವತಿ ಮಾಡದೇ ಇರುವ ಕಾರಣ ಠೇವಣಿ ಹಣ ಮುಟ್ಟುಗೋಲು ಹಾಕಿಕೊಂಡು ಏ.27 ರಂದು

ಪುನಹ ಪಾರ್ಕಿಂಗ್ ಟೆಂಡರ್ ಹರಾಜ ಕರೆಯಲಾಗಿತ್ತು.

ಅಂಜನಾದ್ರಿ ಬೆಟ್ಟ ಪ್ರವರ್ಧಮಾನಕ್ಕೆ ಬಂದಾಗಿನಿಂದ ಕೆಲವು ವರ್ಷಗಳ ಕಾಲ ದೇವಸ್ಥಾನ ಕಮಿಟಿ ಅವರೇ ಪಾರ್ಕಿಂಗ್ ಜಾಗದಲ್ಲಿ ವಾಹನಗಳಿಗೆ ನಿಗದಿತ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದರು.

ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಟೆಂಡರ್ ಜಾಗವನ್ನು ಒಂದು ವರ್ಷದ ಅವಧಿಗೆ ನಿಗದಿ ಮಾಡಿ ಹರಾಜು ಕೂಗಲಾಗುತ್ತಿತ್ತು.

ಕಳೆದ ವರ್ಷ ಬಸಾಪಟ್ಟಣದ ವ್ಯಕ್ತಿಗೆ 25 ಲಕ್ಷ ರೂಪಾಯಿಗ ಪಾರ್ಕಿಂಗ್ ಜಾಗವನ್ನು ಹರಾಜು ನೀಡಲಾಗಿತ್ತು.

ಕಳೆದ ಒಂದು ತಿಂಗಳ ಹಿಂದೆ ಅಂಬಾದಾಸ್ ಎನ್ನುವ ವ್ಯಕ್ತಿಗೆ 31.10ಲಕ್ಷ ರೂ.ಗಳಿಗೆ ಪಾರ್ಕಿಂಗ್ ಜಾಗವನ್ನು ವಹಿಸಲಾಗಿತ್ತು. ಉಳಿದ ಹಣವನ್ನು ಅಂಬಾದಾಸ್ ದೇವಸ್ಥಾನ ಕಮಿಟಿಗೆ ಪಾವತಿ ಮಾಡದೆ ಇರುವ ಕಾರಣ ಠೇವಣಿ ಇಟ್ಟಿದ್ದ ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡು ಪುನಹ ಏ. 27ರಂದು ಪಾರ್ಕಿಂಗ್ ಜಾಗದ ಟೆಂಡರ್ ಪ್ರಕ್ರಿಯೆ ನಡೆಸಲಾಯಿತು.

ದೇವಸ್ಥಾನ ಕಮಿಟಿಯವರ ತಪ್ಪಿನಿಂದಾಗಿ ಪಾರ್ಕಿಂಗ್ ಜಾಗದ ಹರಾಜು ಪ್ರಕ್ರಿಯೆಯನ್ನು ಪತ್ರಿಕೆಗಳಿಗೆ ಜಾಹೀರಾತು ನೀಡದೆ, ಕೆಲವೇ ಕೆಲವು ಪತ್ರಿಕೆಗೆ ಜಾಹೀರಾತು ನೀಡಿ ಪಾರ್ಕಿಂಗ್ ಜಾಗದ ಟೆಂಡರ್ ಹರಾಜು ನಡೆಸಿದ್ದು ಪ್ರಚಾರದ ಕೊರತೆಯ ಕಾರಣ ಬೆರಳೆಣಿಕೆಯ ಹರಾಜು ಕೂಗುವವರು ಬಂದಿದ್ದರು. ಪಾರ್ಕಿಂಗ್ ಜಾಗದಲ್ಲಿ ಮೂಲಸೌಕರ್ಯಗಳ ಕೊರತೆಯ ಕಾರಣ ಹರಾಜು ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳದೆ ಪಾರ್ಕಿಂಗ್ ಜಾಗ ಕಡಿಮೆ ಇದೆ. ದೇವಸ್ಥಾನ ಕಮಿಟಿ ಅವರು ಅಧಿಕ ಬೆಲೆಗೆ ಹರಾಜು ಕೂಗುವುದರಿಂದ ಪಾರ್ಕಿಂಗ್ ಹರಾಜು ಪಡೆದ ನಮಗೆ ಲಾಭವಾಗುವುದಿಲ್ಲ, ಆದ್ದರಿಂದ ಪಕ್ಕದ ಹಂಪಿಯಲ್ಲಿ ಭಾರಿ ವಾಹನಗಳಿಗೆ ರೂ.50 ಕಾರು ಟಾಟಾ ಎಸಿ ಗಳಿಗೆ ರೂ.30 ಆಟೋಗಳಿಗೆ ರೂ.10 ಮತ್ತು ಬೈಕ್ ಗಳಿಗೆ ೫ ರೂಪಾಯಿ ಹಣ ನಿಗದಿ ಮಾಡಿದಂತೆ ಅಂಜನಾದ್ರಿಯಲ್ಲಿಯೂ ಶುಲ್ಕ ನಿಗದಿ ಮಾಡಬೇಕು. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯದ ವ್ಯವಸ್ಥೆ ಮಾಡಬೇಕು ಮತ್ತು ಈಗಿರುವ ಜಾಗವನ್ನು ನಿಗದಿ ಮಾಡಿ ಜಾಗಕ್ಕೆ ತಕ್ಕಂತೆ ವಾಹನಗಳು ನಿಲ್ಲುವಂತೆ ಅಂದಾಜಿಸಿ ಟೆಂಡರ್ ಹಣವನ್ನು ನಿಗದಿ ಮಾಡುವಂತೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಐದು ಜನ ಬಿಟ್ಟುದಾರರು ಮನವಿ ಮಾಡಿದರು.

ಟೆಂಡರ್ ಪ್ರಕ್ರಿಯೆ ಗೊಂದಲದ ಪರಿಣಾಮವಾಗಿ ಗ್ರೇಟ್-2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್ ಅವರು ಸಹಾಯಕ‌ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಟೆಂಡರ್ ಪ್ರಕ್ರಿಯೆ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ನಂತರ ಮುಂಬರುವ ದಿನಗಳಲ್ಲಿ ಪಾರ್ಕಿಂಗ್ ಜಾಗದ ಸರ್ವೆ ಮಾಡಿ ಮೂಲ ಸೌಕರ್ಯ ಒದಗಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಟೆಂಡರ್ ನಡೆಸಲಾಗುತ್ತದೆ ಎಂದು ಟೆಂಡರ್ ನಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ತಿಳಿಸಲಾಯಿತು.

ಆನೆಗೊಂದಿಯಲ್ಲಿ ಪಾರಂಪರೀಕ ಹೋಂಸ್ಟೇ ನಿರ್ಮಾಣಕ್ಕೆ ಪ್ರಾಧಿಕಾರದ ಪರವಾನಿಗೆ ಬೇಕಿಲ್ಲ:ಶಾಸಕ ಜನಾರ್ದನರೆಡ್ಡಿ

 *ಶಾಸಕರ ನೇತೃತ್ವದಲ್ಲಿ ಪ್ರಾಧಿಕಾರ, ಪ್ರವಾಸೋದ್ಯಮ ಹಾಗೂ ಆನೆಗೊಂದಿ ಗ್ರಾಮಸ್ಥರ ಸಭೆ

*ಶ್ರೀಕೃಷ್ಣದೇವರಾಯ ಪುತ್ಥಳಿ ಹತ್ತಿರ 12 ಎಕರೆ ಭೂಮಿ ಸ್ವಾಧೀನಕ್ಕೆ ಸೂಚನೆ

*ಬ್ಯಾಟರಿ ಚಾಲಿತ ವಾಹನಗಳು ಹಾಗೂ ಪ್ರವಾಸಿಗರಿಗೆ ತಂಗುದಾಣ, ಶೌಚಾಲಯ ನಿರ್ಮಾಣ

*ಮನೆಯ ಮಾಲೀಕರೇ ಹೋಂಸ್ಟೇ ನಡೆಸುವ ಷರತ್ತು

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಐತಿಹಾಸಿಕ ಆನೆಗೊಂದಿಯಲ್ಲಿರುವ ಮನೆಗಳಲ್ಲಿ ಪಾರಂಪರೀಕವಾಗಿ ಮನೆಗಳನ್ನು ಪ್ರಾಧಿಕಾರದ ಡಿಸೈನ್ ನಂತೆ ಮನೆಗಳನ್ನು ನಿರ್ಮಿಸಿಕೊಂಡು ಮನೆ ಮಾಲೀಕರು ಒಂದರಿಂದ ಆರು ರೂಮ್ ಗಳ ವರೆಗೆ ಹೋಂಸ್ಟೇ  ಪ್ರವಾಸಿಗರಿಗೆ ಬಾಡಿಗೆ ನೀಡಲು ಅವಕಾಶವಿದ್ದು, ಇದಕ್ಕೆ ಪ್ರಾಧಿಕಾರದ ಎನ್‌ಓಸಿ ಅಗತ್ಯವಿಲ್ಲ.ಶೀಘ್ರ ಆನೆಗೊಂದಿಯ 17 ಮನೆಗಳಲ್ಲಿ ಹೋಂಸ್ಟೇ ನಡೆಸಲು ಅವಕಾಶ ಕಲ್ಪಿಸಲು ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕಾನೂನು ರೀತ್ಯಾ ಒಪ್ಪಿಗೆ ನೀಡಿದ್ದಾರೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು. ಅವರು ಕಮಲಾಪೂರದಲ್ಲಿ ಹಂಪಿ ಅಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಆನೆಗೊಂದಿ ಸ್ಥಳೀಯರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.  ಹೋಂಸ್ಟೇ ನಿರ್ಮಾಣ ಮತ್ತು ಪರವಾನಿಗೆ ನೀಡುವುದು ಪ್ರಾಧಿಕಾರ ಎಂದು ಜನರಲ್ಲಿ ತಪ್ಪು ಕಲ್ಪನೆ ಇದೆ. ಆದ್ದರಿಂದ ಗೊಂದಲ ದೂರ ಮಾಡಲು ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಿದ್ದು ಆನೆಗೊಂದಿಯಲ್ಲಿ ನೆಲ ಮಹಡಿ ಮನೆಗಳನ್ನು ಪ್ರಾಧಿಕಾರ ಕೊಡುವ ಡಿಸೈನ್ ನಂತೆ ನಿರ್ಮಿಸಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಗಾಳಿ, ನೀರು, ಪರಿಸರ ಉತ್ತಮವಾಗಿರಿಸಕೊಳ್ಳಬೇಕು ಹಾಗಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ  ಗ್ರಾ.ಪಂ.ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಎನ್‌ಓಸಿ ಪಡೆದು ಪ್ರಾಧಿಕಾರಕ್ಕೆ ಸಲ್ಲಿಸಿ ಹೋಂಸ್ಟೇನ್ ವ್ಯವಹಾರವನ್ನು ನಡೆಸಲು ಅವಕಾಶವಿದ್ದು ಇದುವರೆಗೂ ಬಾಕಿ ಇದ್ದ  17 ಅರ್ಜಿಗಳಿಗೆ  ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ನೀಡಿದ್ದು ಶೀಘ್ರ 17 ಹೋಂ ಸ್ಟೇಗಳು ಆರಂಭವಾಗಲಿವೆ. ಉಳಿದವರು ಸಹ ಇದೇ ಕಾನೂನು ಪಾಲನೆ ಮಾಡುವ ಮೂಲಕ ಹೋಂ ಸ್ಟೇ ಆರಂಭಿಸಬೇಕು.  ಆನೆಗೊಂದಿ ಪ್ರವೇಶ ದ್ವಾರದ(ಅಗಸಿ) ಹತ್ತಿರ ಇರುವ ಶ್ರೀಕೃಷ್ಣದೇವರಾಯ ಪುತ್ಥಳಿ ಜಾಹ ಶೀಘ್ರ ರಸ್ತೆ ಅಗಲೀಕರಣ ಕಾರಣದಿಂದ ತೆರವು ಮಾಡಲಾಗುತ್ತದೆ. ಪುನಹ ಪುತ್ಥಳಿಯನ್ನು ರಸ್ತೆ ಅಗಲೀಕರಣದ ನಂತರ ಅಲ್ಲೇ ಇರಿಸಲಾಗುವುದು, ಊರಮ್ಮ ಗುಡಿ ಹಿಂದಿನ 12 ಎಕರೆ ಭೂಮಿಯನ್ನು ಜಿಲ್ಲಾಡಳಿತ ಸ್ವಾಧೀನಕ್ಕೆ ಪಡೆದು ಇಲ್ಲಿ ಪ್ರವಾಸಿಗರಿಗೆ ತಂಗುದಾಣ, ಶೌಚಾಲಯ ಮತ್ತು ಪ್ರಾಧಿಕಾರದಿಂದ ಮಂಜೂರಿಯಾದ 20 ಬ್ಯಾಟರಿ ಚಾಲಿತ ಕಾರುಗಳನ್ನು ನಿಲುಗಡೆ ಮಾಡಲಾಗುತ್ತದೆ. ಇನ್ನೂ ಮುಂದೆ ಆನೆಗೊಂದಿಯವರನ್ನು ಹೊರತು ಪಡಿಸಿ ಪ್ರವಾಸಿಗರ ವಾಹನಗಳನ್ನು ಊರಮ್ಮ ಗುಡಿ ಹಿಂದಿನ ಜಾಗದಲ್ಲಿ ಪಾರ್ಕಿಂಗ್ ಮಾಡುವ ವ್ಯವಸ್ಥೆ ಮಾಡಿ ನವವೃಂದಾವನ, ಚಿಂತಾಮಣಿ ಮತ್ತು ಆನೆಗೊಂದಿಯ ತಾಣಗಳನ್ನು ವೀಕ್ಷಣೆಗೆ ಆಗಮಿಸುವವರನ್ನು ಬ್ಯಾಟರಿ ಕಾರುಗಳಲ್ಲಿ ಕರೆದುಕೊಂಡು ಹೋಗುವ ಅನುಕೂಲ ಮಾಡಲಾಗುತ್ತದೆ. ಆನೆಗೊಂದಿ ಯುವಕರಿಗೆ ಇದರಿಂದ ಉದ್ಯೋಗ ಲಭಿಸುತ್ತದೆ.  ಆನೆಗೊಂದಿ ಭಾಗದ ಪ್ರತಿ ಕಾಯಕ್ಕೂ ಪ್ರಾಧಿಕಾರ ತೊಂದರೆ ಕೊಡುತ್ತದೆ ಎನ್ನುವುದು ತಪ್ಪು ಕೆಲ ಪರವಾನಿಗೆ ಕೊಡುವ ಅಧಿಕಾರ ಗ್ರಾ.ಪಂ. ಹಾಗೂ ಪ್ರವಾಸೋದ್ಯಮ ಇಲಾಖೆಗೆ ಇದೆ. ಸರಿಯಾದ ದಾಖಲೆಗಳೊಂದಿಗೆ ಜನರು ಅಧಿಕಾರಿಗಳನ್ನು ಭೇಟಿಯಾಗಬೇಕು. ಸ್ಥಳೀಯರನ್ನೊಳಗೊಂಡ ಸಭೆ ನಡೆಸಿದ್ದು ಶೀಘ್ರ ಆನೆಗೊಂದಿ ಭಾಗದ ಸಮಸ್ಯೆಗಳು ಪರಿಹಾರವಾಗಲಿವೆ ಎಂದರು. ಸಭೆಯಲ್ಲಿ ಪ್ರಾಧಿಕಾರದ ಕಮೀಷನ್ ರಮೇಶ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ನಾಗರಾಜ, ಶ್ರೀಕೃಷ್ಣದೇವರಾಯ,ರತ್ನಶ್ರೀರಾಯ,ಟಿ.ಜಿ.ಬಾಬು,ಮಂಜುನಾಥ ಕಲಾಲ್,ಆನಂದರೆಡ್ಡಿ,ಶಂಕರರೆಡ್ಡಿ,ಯಮನೂರ ಸೇರಿ ಆನೆಗೊಂದಿಯ ಪ್ರಮುಖರಿದ್ದರು.

 

ಕುರಿಗಾಹಿಯ ಮಗನಿಂದ ಕಾನೂನು ಲೋಕದ ಗೆಲುವು!

 

 *ಸಾಧನೆಯ ಶಿಖರ ಏರಿದ ರೇವಣ್ಣ, ಎಲ್‌ಎಲ್‌ಬಿಯಲ್ಲಿ ದ್ವಿತೀಯ ಸ್ಥಾನ, ಗ್ರಾಮಕ್ಕೆ ಹೆಮ್ಮೆ

ಕಿಷ್ಕಿಂಧವಾಣಿ ವಿಶೇಷ

ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಳತಗಾ ಎಂಬ ಸಣ್ಣ ಗ್ರಾಮ. ಇಲ್ಲಿ ದಿನವೂ ಕುರಿಗಳನ್ನು ಮೇಯಿಸುವುದೇ ಜೀವನವಾದ ಒಂದು ಸಾಮಾನ್ಯ ಕುಟುಂಬ. ಅದೇ ಕುಟುಂಬದ ಮಗ ರೇವಣ್ಣ ಶಿವಪೂರೆ ಇಂದು ಎಲ್‌ಎಲ್‌ಬಿ ಪದವಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸುವರ್ಣ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾನೆ.

ರೇವಣ್ಣನ ತಂದೆ ದೇವಪ್ಪ ಶಿವಪೂರೆ ಕುರಿಗಾಹಿ. ದಿನದ ಬಹುಭಾಗವನ್ನು ಕುರಿಗಳೊಂದಿಗೆ ಹೊಲಗಳಲ್ಲಿ ಕಳೆದರೂ, ಮಗನ ಶಿಕ್ಷಣಕ್ಕೆ ಯಾವತ್ತೂ ತಗ್ಗು ಬಾರದಂತೆ ನೋಡಿಕೊಂಡವರು. ಆರ್ಥಿಕ ಸವಾಲುಗಳು ಇದ್ದರೂ, “ಓದಿ ದೊಡ್ಡವನಾಗು” ಎಂಬ ತಂದೆಯ ಮಾತು ರೇವಣ್ಣನಿಗೆ ಸದಾ ಪ್ರೇರಣೆಯಾಯಿತು.

ಗ್ರಾಮದ ಸರಳ ಪರಿಸರದಲ್ಲಿ ಬೆಳೆದ ರೇವಣ್ಣ, ಬಾಲ್ಯದಲ್ಲೇ ಓದಿನತ್ತ ಹೆಚ್ಚು ಆಸಕ್ತಿ ತೋರಿದ. ಬೆಳಗಿನ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿ, ಉಳಿದ ಸಮಯವನ್ನು ಪುಸ್ತಕಗಳೊಂದಿಗೆ ಕಳೆಯುತ್ತಿದ್ದ. ಶಾಲೆಯ ದಿನಗಳಿಂದಲೇ ಅವನ ಪರಿಶ್ರಮ ಮತ್ತು ಶಿಸ್ತು ಶಿಕ್ಷಕರ ಗಮನ ಸೆಳೆದಿತ್ತು.

ಮುಂದೆ ಕಾನೂನು ಪದವಿಯನ್ನು ಆಯ್ಕೆ ಮಾಡಿಕೊಂಡ ರೇವಣ್ಣ, ತನ್ನ ಗುರಿಯತ್ತ ಅಚಲವಾಗಿ ಸಾಗಿದ. ಕಾಲೇಜಿನಲ್ಲಿಯೂ ನಿರಂತರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ಆತ್ಮವಿಶ್ವಾಸದಿಂದ ಎಲ್‌ಎಲ್‌ಬಿ ಪದವಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ಸುವರ್ಣ ಪದಕ ಪಡೆದುಕೊಂಡನು.

ರೇವಣ್ಣನ ಈ ಸಾಧನೆ ಕೇವಲ ಅವನ ಕುಟುಂಬಕ್ಕಷ್ಟೇ ಅಲ್ಲ, ಸಂಪೂರ್ಣ ಗ್ರಾಮದ ಹೆಮ್ಮೆ. ಕುರಿಗಾಹಿಯ ಮಗನೊಬ್ಬ ಕಾನೂನು ಕ್ಷೇತ್ರದಲ್ಲಿ ಮೆರೆದಿರುವುದು ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿದೆ.

ಸರಳ ಜೀವನದಿಂದ ಉನ್ನತ ಸಾಧನೆಗೆ ತಲುಪಿದ ರೇವಣ್ಣನ ಕಥೆ, ಪರಿಶ್ರಮ ಮತ್ತು ಸಂಕಲ್ಪ ಇದ್ದರೆ ಯಾವುದೇ ಅಡೆತಡೆಗಳನ್ನೂ ಜಯಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ

 

***

ನನ್ನ ಸಾಧನೆಗೆ ಉಪನ್ಯಾಸಕರ ಪ್ರೋತ್ಸಾಹವೇ ಪ್ರಮುಖ ಕಾರಣ, ಮುಂದೆ ನ್ಯಾಯಾಧೀಶನಾಗುವ ಬಯಕೆ ಇದೆ.

-ರೇವಣ್ಣ ಶಿವಪೂರೆ

 

****

ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ, ರೇವಣ್ಣ ಅವರ ಮುಂದಿನ ಕಾನೂನು ಹೋರಾಟ ಜೀವನ ಯಶಸ್ವಿಯಾಗಲಿ

-ಹನುಮಗೌಡ ನಿಡಗುಂದಿ, ಹೈಕೋರ್ಟ್ ವಕೀಲರು.

ನಿಯಮ ಉಲ್ಲಂಘಿಸಿ ಸಾಣಾಪುರದಲ್ಲಿ ಲೇಔಟ್ ಗೆ ಪರವಾನಿಗೆ ನೀಡಿದ ಹಂಪಿ ಪ್ರಾಧಿಕಾರ ?

*ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಳ್ಳವರಿಗೆ ಒಂದು, ಬಡವರಿಗೆ ಮತ್ತೊಂದು ನ್ಯಾಯ!

*ಗ್ರೀನ್ ಝೋನ್ ಭೂಮಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಲೇಔಟ್ ರಚನೆಗೆ ನಿಯಮ ಮೀರಿ ಅವಕಾಶ

*ರಸ್ತೆಗೆ ಸಂಬಂಧಿಸಿದಂತೆ ವ್ಯತ್ಯಾಸವಿದ್ದರೂ ಭೂ ಪರಿವರ್ತನೆಗೆ ಓಕೆ ಅನುಮಾನ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಿಯಮ ಮೀರಿ ತಾಲೂಕಿನ ಸಾಣಾಪೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಖಾಸಗಿಯವರ ಭೂ ಪರಿವರ್ತನೆ ಮಾಡಿದ್ದು ವ್ಯಾಪಕ ಚರ್ಚೆಗೆ ಒಳಗಾಗಿದೆ. ಮಾತೆತ್ತಿದರೆ ಕಾನೂನು ಎಂದು ಹೇಳುವ ಪ್ರಾಧಿಕಾರದ ಅಧಿಕಾರಿಗಳು ಹಣವಂತರ ಗ್ರೀನ್ ಝೋನ್ ನಲ್ಲಿರುವ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ನಿಯಮಗಳನ್ನು ಗಾಳಿ ತೂರಿ ಲೇಔಟ್ ರಚನೆ ಮಾಡುವ ಮೂಲಕ ಆನೆಗೊಂದಿ ಭಾಗದ ಸ್ಥಳೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಣಾಪೂರ ಗ್ರಾಮದ ಸರ್ವೇ 22 ಮತ್ತು 23 ರಲ್ಲಿ ಬರುವ 4.7 ಎಕರೆ ಪ್ರದೇಶದ ಭತ್ತ ಬೆಳೆಯುವ ಗ್ರೀನ್ ಝೋನ್ ನಲ್ಲಿ ಬರುವ ಫಲವತ್ತಾದ ಭೂಮಿಯನ್ನು ರೇಸಾರ್ಟ್/ಹೆಲ್ತ್ ರೇಸಾರ್ಟ್ ನಿರ್ಮಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿನ್ಯಾಸ ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿತ್ತು.

ಈ ವಿನ್ಯಾಸವನ್ನು ಗ್ರಾ.ಪಂ.ಗೆ ಸಲ್ಲಿಸಿ ಅನುಮೋದನೆ ಪಡೆದು ನಮೂನೆ 9/11 ಪಡೆಯಬೇಕಿದ್ದು ನಿಯಮಗಳ ಉಲ್ಲಂಘನೆಯ ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಾಣಾಪೂರ ಗ್ರಾ.ಪಂ.ಪಿಡಿಓ 9/11 ನೀಡಲು ತಡೆ ಹಿಡಿದಿದ್ದು ಭೂ ಮಾಲೀಕರು ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಪಿಡಿಓ ಅವರ ಮೇಲೆ ಒತ್ತಡ ಹೇರುತ್ತಿರುವ ಕುರಿತು ಆರೋಪ ಕೇಳಿ ಬಂದಿದೆ.

ಲೇಔಟ್ ವಿನ್ಯಾಸದಲ್ಲಿ ಹುಲಿಗಿ ಮುಖ್ಯ ರಸ್ತೆ ಹಾಗೂ ಸಾಣಾಪೂರ ದಕ್ಷಿಣ ದಿಕ್ಕಿನಲ್ಲಿ 40 ಅಡಿ ಉದ್ದದ ರಸ್ತೆಯನ್ನು ತೋರಿಸಲಾಗಿದೆ. ಆದರೆ ಭೂ ಪರಿವರ್ತನೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿರಾಪೇಕ್ಷಣಾ ಪಡೆಯುವ ಮುಂಚೆ ಸಲ್ಲಿಸಿದ ಸಂಯೋಜಿತ ಸ್ಕೆಚ್ ನಲ್ಲಿ ವಿನ್ಯಾಸದಲ್ಲಿ(ಲೇಔಟ್) ತೋರಿಸಿದ ರಸ್ತೆ ಇರುವುದಿಲ್ಲ. ಆದರೂ ನವೆಂಬರ್ 2025 ರಲ್ಲಿ ಹಂಪಿ ಪ್ರಾಧಿಕಾರದ ಸಭೆಯಲ್ಲಿ ಸಾಣಾಪೂರ ಸರ್ವೇ ನಂಬರ್ 22 ಮತ್ತು 23 ರಲ್ಲಿ ಪ್ರಸ್ತಾವಿತ ಏಕನಿವೇಶನ ವಾಣಿಜ್ಯ ಉದ್ದೇಶದ ಅರ್ಜಿಗೆ ಅನುಮೋದನೆ ನೀಡಲಾಗಿದೆ. 4.7 ಎಕರೆ ಭೂಮಿಯನ್ನು ಬಿನ್ ಶೇತಿ ನಕ್ಷೆ ಹಾಗೂ ವಿನ್ಯಾಸ ನಕ್ಷೆಯಲ್ಲಿ ತೋರಿಸಿದಂತೆ 40 ಅಡಿ ರಸ್ತೆ ಇಲ್ಲ. ದಕ್ಷಿಣಕ್ಕೆ ತೋರಿಸಿದ ರಸ್ತೆ ಸರ್ವೇ ನಂಬರ್ 20 ರಲ್ಲಿ ಬರುತ್ತದೆ. ಜತೆಗೆ ಹುಲಿಗಿ ಮುಖ್ಯರಸ್ತೆಯಲ್ಲಿರುವ (ಶ್ರೀಹುಲಿಗೆಮ್ಮ ದೇವಾಲಯ ಹತ್ತಿರ) ನೀರಾವರಿ ಇಲಾಖೆಯ ವಾಹನಗಳು ಸಂಚಾರ ಮಾಡಲು ಇರುವ ಹಳೆಯ ರಸ್ತೆಯನ್ನು ಭೂ ಮಾಲೀಕರು ತಮ್ಮದೇ ಭೂಮಿ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು ಇದೀಗ ಸರ್ವೇ ನಂಬರ್ 22 ಮತ್ತು 23 ರಲ್ಲಿರುವ 4.7 ಎಕರೆ ಭೂಮಿಯನ್ನು ಕೃಷಿಯೇತರ ಎಂದು ಘೋಷಣೆ ಮಾಡಿರುವುದು ನಿಯಮ ಉಲ್ಲಂಘನೆಯಾಗಿದ್ದು ಈ ಕುರಿತು ಪ್ರಾಧಿಕಾರ, ಜಿಲ್ಲಾಧಿಕಾರಿಗಳು ಮತ್ತು ಗ್ರಾ.ಪಂ. ಗೆ ಸ್ಥಳೀಯರು ಆಕ್ಷೇಪ ಸಲ್ಲಿಸಿ ಗ್ರಾ.ಪಂ.ನಲ್ಲಿ ಈ ಏಕ ನಿವೇಶನ ವಿನ್ಯಾಸ(ಲೇಔಟ್)ಕ್ಕೆ ಅನುಮೋದನೆ ಹಾಗೂ ನಮೂನೆ 9/11 ನೀಡದಂತೆ ಒತ್ತಾಯಿಸಿದ್ದಾರೆ.

ಇಂತಹ ಪ್ರಕರಣಗಳು ಹನುಮನಹಳ್ಳಿಯಲ್ಲಿ 40 ಅಡಿ ರಸ್ತೆ ಇಲ್ಲದಿದ್ದರೂ ಪ್ರಾಧಿಕಾರ ಹೊಟೇಲ್ ನಿರ್ಮಾಣಕ್ಕೆ ಅನುಮತಿ ನೀಡಿದೆ. ಅದೇ ರೀತಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಮತ್ತೊಂದು ಸಾಣಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಖಾಸಗಿ ರೇಸಾರ್ಟ್ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಮುಂಚೇಯೆ ಭೂ ಪರಿವರ್ತನೆಯಾಗಿದ್ದು ವಿನ್ಯಾಸ ಅನುಮೋದನೆಯಾಗಿಲ್ಲದಿದ್ದರೂ ಪ್ರಾಧಿಕಾರದ ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನ ಮೂಡಿಸಿದೆ.

 

***”

ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ಹಂಪಿ ಪ್ರಾಧಿಕಾರ ನೀಡುತ್ತದೆ, ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಿ ಆದೇಶ ಮಾಡುತ್ತಾರೆ. ನಂತರ ಹಂಪಿ ಪ್ರಾಧಿಕಾರ ಏಕ ನಿವೇಶನ ವಾಣಿಜ್ಯವಿನ್ಯಾಸ(ಲೇಔಟ್)ಅನುಮೋದಿಸುತ್ತದೆ. ಏಕ ನಿವೇಶನ ವಿನ್ಯಾಸಕ್ಕೆ ಅನುಮೋದನೆ ನೀಡಿ ನಮೂನೆ 9/11 ನೀಡುವ ಅಧಿಕಾರ ಗ್ರಾ.ಪಂ. ಇದೆ. ರಸ್ತೆ ಎಷ್ಟು ವಿಸ್ತೀರ್ಣ ಇರಬೇಕೆನ್ನುವುದನ್ನು ಗ್ರಾ.ಪಂ. ನಿರ್ಧರಿಸುವುದಿಲ್ಲ. ಯಾಕೆಂದರೆ ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ಕೊಡುವ ಮುಂಚೆ ಪ್ರಾಧಿಕಾರದ ತಂಡ ಇವೆಲ್ಲವನ್ನೂ ಪರಿಶೀಲಿಸುತ್ತದೆ.

-ವತ್ಸಲಾ ಪಿಡಿಓ ಸಾಣಾಪೂರ

ಗಂಗಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ವಾಕ್ ಇನ್ ಇಂಟರ್ವ್ಯೂ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ನರ್ಸರಿಯಿಂದ ನೌಕರಿಯವರೆಗೆ ಎಂಬ ದೃಢಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ವಿದ್ಯಾನಿಕೇತನ ವಿದ್ಯಾಸಂಸ್ಥೆಯು ಈ ಭಾಗದ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಮತ್ತು ಯೋಚನೆಗಳನ್ನು ಹೊಂದಿದ್ದು, ಈ ದಿಶೆಯಲ್ಲಿ ಗಂಗಾವತಿಯಲ್ಲಿ ಮೊಟ್ಟ ಮೊದಲನೇ ಬಾರಿಗೆ ದೇಶದ ಹೆಸರಾಂತ ಸಾಫ್ಟ್ವೇರ್ ಕಂಪನಿಯಾದ ಟಿಸಿಎಸ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನವರು
ಶ್ರೀ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯ ಹಾಗೂ ದೇಶಪಾಂಡೆ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮೇ05 ರಂದು ಗಂಗಾವತಿ ತಾಲೂಕಿನ ವಡ್ಡರಟ್ಟಿಯ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಈ ಭಾಗದ ತಾಂತ್ರಿಕೇತರ ಪದವೀಧರರಿಗೆ (BBA, B.COM, BA, BFSI, BHM, BSW, BBM) ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನವನ್ನು ನಡೆಸುತ್ತಿದ್ದು, ನಮ್ಮ ಭಾಗದ ಪ್ರತಿಭಾವಂತ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಈ ನೇರ ಸಂದರ್ಶನವು ಅತ್ಯಂತ ಸಹಕಾರಿಯಾಗಲಿದ್ದು,
ಈ ಭಾಗದ ಅರ್ಹ ಪದವೀಧರರು ಈ ನೇರ ಸಂದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮನವಿ ಮಾಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುರುಬರ ವೆಂಕಟೇಶ ಕೊಲೆ ಪ್ರಕರಣ ನ್ಯಾಯಾಲಯದಿಂದ ತೀರ್ಪು ಪ್ರಕಟ.

 

* ಪ್ರಕರಣದಲ್ಲಿ ಭಾಗಿಯಾಗಿದ್ದ 12 ಜನರ ಪೈಕಿ ಆರು ಜನರಿಗೆ ಶಿಕ್ಷೆ ಉಳಿದವರು ದೋಷ ಮುಕ್ತ.

* ಏಪ್ರಿಲ್ 27ರಂದು ಶಿಕ್ಷೆಯ ಪ್ರಮಾಣ ಪ್ರಕಟ.

* ಆರೋಪಿಗಳು ನ್ಯಾಯಾಲಯಕ್ಕೆ ಬಿಗಿ

ಪೊಲೀಸ್ ಬಂದೋಬಸ್ತ್ ವ್ಯವಸ್ಥೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬಿಜೆಪಿ ಯುವ ಮೋರ್ಚಾದ ನಗರ ಅಧ್ಯಕ್ಷ ಕುರುಬರ ವೆಂಕಟೇಶ ಕೊಲೆ ಪ್ರಕರಣದ ತೀರ್ಪು ಗುರುವಾರ ನಗರದ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕಟಿಸಿದ್ದು ಪ್ರಕರಣದ 12 ಆರೋಪಿಗಳ ಪೈಕಿ ಆರು ಜನರಿಗೆ ಶಿಕ್ಷೆ ಪ್ರಕಟವಾಗಿದ್ದು ಉಳಿದವರು ದೋಷ ಮುಕ್ತರಾಗಿದ್ದಾರೆಂದು ಸರಕಾರಿ ಅಭಿಯೋಜಕಿ ಎನ್.ನಾಗಲಕ್ಷ್ಮಿ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 08 ರಂದು ಬೆಳಗಿನ ಜಾವ 2.30 ಕ್ಕೆ ಗಂಗಾವತಿಯ ಲೀಲಾವತಿ ಆಸ್ಪತ್ರೆಯ ಬಳಿ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕುರುಬರ ವೆಂಕಟೇಶ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ನಗರ ಠಾಣೆಯ ಪೊಲೀಸರು ಕೊಲೆಗೀಡಾದ ಕುರುಬ ವೆಂಕಟೇಶ ಪಾಲಕರಿಂದ ದೂರು ಪಡೆದು ತೀವ್ರಗತಿಯಲ್ಲಿ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಕುರುಬರ್, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮಾ ಅಲಿಯಾಸ್ ಭರತ್, ಸಲೀಂ ಮೊಹಮ್ಮದ್ ರಫೀಕ್ ಗಂಗಾಧರ ಗೌಳಿ ಅಲಿಯಾಸ್ ಗಂಗ್ಯಾ, ಕಾರ್ತಿಕ್, ದಾದಾಪೀರ್ ಮೊಹಮ್ಮದ್ ಅಲ್ತಾಫ್, ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ, ಶರಣಬಸವ ಅಲಿಯಾಸ್ ಹತ್ತು ರೊಟ್ಟಿ ಹಾಗೂ ಚೈತ್ರ ರವಿ ಕುರುಬರ್ ಈ ಆರೋಪಗಳನ್ನು ಬಂಧಿಸಿದ್ದರು.

ಸ್ಥಳೀಯ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ತೀವ್ರಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಥಮವಾಗಿದೆ.

ನಗರ ಪೊಲೀಸರು 977 ಪುಟದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕುರುಬರ ವೆಂಕಟೇಶ ಕೊಲೆ ಪ್ರಕರಣ ರಾಜ್ಯದ್ಯಂತ ತೀವ್ರ ಸಂಚಲನವನ್ನು ಉಂಟು ಮಾಡಿತ್ತು. ಜೊತೆಗೆ ಬಿಜೆಪಿ ರಾಜ್ಯ ಘಟಕ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಿ ಕೂಡಲೇ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.

ನಗರ ಠಾಣೆಯ ಪೊಲೀಸರು ಪ್ರಕರಣ ನಡೆದು 15 ದಿನ ಒಳಗೆ ಎಲ್ಲಾ 12 ಜನ ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಸಾಕ್ಷಾಧಾರಗಳನ್ನು ಮತ್ತು ದೋಷಾರೋಪನೆಯ ಪಟ್ಟಿಯನ್ನು ಸಲ್ಲಿಸಿ ವಿಚಾರಣೆಗೆ ಸಹಕರಿಸಿದ್ದರು.

ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಪ್ರಕರಣವನ್ನು ತೀವ್ರವಾಗಿ

ಪರಿಗಣಿಸಿ ಪ್ರತಿನಿತ್ಯ ವಿಚಾರಣೆ ನಡೆಸಿ ಸಾಕ್ಷಾಧಾರಗಳಿಂದ ಮಾಹಿತಿ ಪಡೆದು ದಾಖಲಿಸಿಕೊಂಡು ದಾಖಲಿಸಿಕೊಂಡು ತೀರ್ಪು ಪ್ರಕಟಿಸಿದ್ದು ಏ. 27ರಂದು ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಯಲಿದೆ.

ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಘೋಷಣೆ ಯಾಗುವ ನಿಮಿತ್ಯ ಆರೋಪಿತರನ್ನು ಕರೆ ತಂದಾಗ

ಕೋರ್ಟಿನ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರಕರಣ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಗುರುವಾರ ಕೋರ್ಟ್ ಸುತ್ತಲೂ ಸಾರ್ವಜನಿಕರು,ವಕೀಲರು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಈಗಾಗಲೇ ಸಾಣಾಪುರ ಕೆರೆ ಹತ್ತಿರ ವಿದೇಶಿ ಮಹಿಳೆ ಅತ್ಯಾಚಾರ ಮತ್ತು ಓರ್ವನ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ತೀರ್ಪು, ಕಾರಟಗಿಯಲ್ಲಿ ಶಿಕ್ಷಕನಿಂದ ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಚಾರಿತ್ರಿಕ ತೀರ್ಪು,

ಹಾಗೂ ಆನೆಗೊಂದಿ ತಳವಾರಘಟ್ಟ ಸೇತುವೆ ಬಿದ್ದ ಪ್ರಕರಣದಲ್ಲಿ ಆರೋಪಿತನಿಗೆ ಶಿಕ್ಷೆಯ ತೀರ್ಪು

ನೀಡಿದ್ದು ದೇಶದಾದ್ಯಂತ ಗಮನ ಸೆಳೆದಿವೆ.

ಕುರುಬರ ವೆಂಕಟೇಶ ಕೊಲೆ ಪ್ರಕರಣ ಅತ್ಯಂತ ಸೂಕ್ಷ್ಮ ಮತ್ತು ಗಂಭೀರವಾಗಿದ್ದರಿಂದ

ವಿಚಾರಣೆಯ ವೇಳೆ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಾಗಪ್ಪ ನಾಯ್ಕ ಅವರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿತ್ತು.

ಕೊಲೆಗೀಡಾದ ಕುರುಬರ ವೆಂಕಟೇಶ್ ಅವರ ತಾಯಿ ಹಾಗೂ ಇಬ್ಬರು ಸಹೋದರಿಯರು ಕೋರ್ಟ್ ಆವರಣದಲ್ಲಿ ಭಾವುಕರಾಗಿ ನ್ಯಾಯಾಧೀಶರಿಗೆ ಅಭಿನಂದಿಸಿ ನೀವು ನಮ್ಮ ಪಾಲಿನ ದೇವರು ಕೊಲೆ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೈ ಮುಗಿದು ಬೇಡಿಕೊಂಡ‌ ದೃಶ್ಯ ಕಂಡು ಬಂತು.

ಪ್ರವಚನ ಮಾಡುವ ಗವಿಸಿದ್ದೇಶ್ವರ ಸ್ವಾಮಿಗಳು ಕಾರ್ಖಾನೆಗಳ ವಿರುದ್ದ ಹೋರಾಟ ಆರಂಭಿಸಿ ಹಿಂದೆ ಸರಿದದ್ದು ಸರಿಯಲ್ಲ:ಕುಂ.ವೀರಭದ್ರಪ್ಪ ಅಸಮಾಧಾನ.

 

*ಉಸಿರಿದ್ದರೆ ಪ್ರವಚನ, ಜನರ ಜೀವ ಉಳಿಸಲು ಗವಿಶ್ರೀಗಳು ಮುಂದಾಗಲಿ

*ಗದುಗಿನ ತೋಂಟದ ಶ್ರೀಗಳು ನಮಗೆ ಮಾದರಿ: ಕೋರಣೇಶ್ವರ ಸ್ವಾಮೀಜಿ

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ : ಪ್ರವಚನಗಳ ಮೂಲಕ ಖ್ಯಾತರಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳವನ್ನು ಕಾರ್ಖಾನೆಗಳ ಧೂಳು ಮುಕ್ತ ಮಾಡಲು ಹೋರಾಟ ಆರಂಭಿಸಿ ಈಗ ಯಾಕೆ ಹಿಂದೇಟು ಹಾಕುತ್ತಿದ್ದಾರೆ ತಿಳಿಯುತ್ತಿಲ್ಲ, ಕೂಡಲೇ ಶ್ರೀಗಳು ಹೋರಾಟವನ್ನು ತಾರ್ಕಿಕ

ರ ಹಂತಕ್ಕೆ ಮುಟ್ಟೀಸಬೇಕು ಎಂದು ಖ್ಯಾತ ಕಥೆಗಾರ ಮತ್ತು ಸಾಹಿತಿ. ಕುಂ ವೀರಭದ್ರಪ್ಪ ಹೇಳಿದರು.

ಅವರು ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ಬಲ್ಡೋಟಾ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಲ್ಲಿನ ಗವಿಶ್ರೀಗಳು ಪ್ರವಚನ ಮಾಡುವುದಾದರೆ ಮೊದಲು ಈ ಜನರ ಜೀವ ಉಳಿಸಲಿ. ಸರ್ಕಾರದ ವಿರುದ್ಧ ಧ್ವನಿ ಎತ್ತಲಿ. ಈ ಹೋರಾಟ ಆರಂಭ ಮಾಡಿದ ಗವಿಶ್ರೀ ತಾರ್ಕಿಕ ಅಂತ್ಯವನ್ನು ಅವರೆ ಕಾಣಿಸಬೇಕು, ಯಾಕೆ ಹಿಂದಡಿ ಇಟ್ಡರು ಎನ್ನುವದು ನಿಗೂಢವಾಗಿದೆ.

ನಾನು ಹಿರೇಬಗನಾಳ, ಹಾಲವರ್ತಿ ಎನ್ನುವ ಕಾರ್ಖಾನೆ ಬಾಧಿತ ಹಳ್ಳಿಗಳಿಗೆ ಹೋಗಿ ಜನರನ್ನು ಮಾತನಾಡಿಸಿದಾಗ ಅವರ ಮುಖದಲ್ಲಿ ಲವಲವಿಕೆ ಇಲ್ಲ. ಆ ಜನ ಬದುಕುವ ಆಸೆಯನ್ನೇ ಬಿಟ್ಟವರಂತೆ ಕಂಡರು. ಜನ ಯಾವುದೇ ಪಕ್ಷದ ಮುಖಂಡರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ಒಂದು ರೀತಿ ಬಸವಳಿದು, ಬೇಸರಗೊಂಡು ನಮ್ಮನ್ನು ಯಾರು ಕಾಪಾಡುತ್ತಾರೆ ಎಂದು ಮುಗಿಲು ನೋಡುತ್ತಿದ್ದಾರೆ.

ಬಾಧಿತ ಹಳ್ಳಿ ಪ್ರದೇಶ ಸುಟ್ಟ ಮಸಣವಾಗಿ ಕಪ್ಪಿಟ್ಟಂತೆ ಕಾಣುತ್ತಿದೆ. ಅಲ್ಲಿಗೆ ಹೋದ ವೈದ್ಯರು ಇಲ್ಲಿರಬೇಡಿ, ದನಕರು ಕಟ್ಟಬೇಡಿ ಎಂದು ಸಲಹೆ ನೀಡುತ್ತಾರೆ. ಮತ್ತೆ ಈ ಜನ ಎಲ್ಲಿಗೆ ಹೋಗಬೇಕು.? ಸರ್ಕಾರದ ಹತ್ತಿರ ಇದಕ್ಕೆ ಉತ್ತರ ಇದೆಯೇ? ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿನಂತೆ ತುಂಗಾ ಪಾನ ಮಾಡಬೇಡಿ ಎಂದು ಸರ್ಕಾರ ಎಚ್ಚರಿಸುವ ಮಟ್ಟಿಗೆ ನೀರು ಮಾಲಿನ್ಯ ಮಾಡಿದ್ದು ಇದೇ ಫ್ಯಾಕ್ಟರಿಗಳಲ್ಲವೆ ಎಂದು ಪ್ರಶ್ನೆ ಮಾಡಿದರು. ಹಳ್ಳಿಯ ಒಬ್ಬ ಮಹಿಳೆ ಮಕ್ಕಳಿಗೆ ಇಂತಹ ರೋಗ ಬಂದರೆ ನಮ್ಮ ಶವಗಳಿಗೆ ಸಂಸ್ಕಾರ ಮಾಡಲು ಯಾರಿರುತ್ತಾರೆ. ಇಲ್ಲಿಗೆ ಅಧಿಕಾರಿಗಳು, ರಾಜಕಾರಣಿಗಳು ಬರುತ್ತಾರೆ. ಅಯ್ಯೊ ಪಾಪ ಎನ್ನುತ್ತಾರೆ. ಮುಂದೆ ಹೋಗಿ ಮರೆತು ಬಿಡುತ್ತಾರೆ. ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು ಯಾರು ಎಂದು ನಮ್ಮನ್ನೇ ಕೇಳುತ್ತಾರೆ. ತಾಯಿ ಎದೆಹಾಲು ನಂಜಾಗಿ ಕೊಲುವೆಡೆ ಮತ್ತಾರಿಗೇಳಲಿ ಎನ್ನುವ ಶರಣರ ವಚನ ಉಲ್ಲೇಖ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಆಳಂದ ವಿರಕ್ತ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಈ ಹೋರಾಟ ಅತ್ಯಂತ ಸಾರ್ಥಕ, ಸಾತ್ವಿಕವಾಗಿದ್ದು. ಜೀವ, ಆರೋಗ್ಯ, ಭೂಮಿ, ಕೃಷಿ ಉಳಿಸಿಕೊಳ್ಳಲು ನಡೆಸಿದ ನಿಮ್ಮ ಹೋರಾಟ ಗದುಗಿನ ತೋಂಟದ ಶ್ರೀ ಸಿದ್ದಲಿಂಗ ಸ್ವಾಮಿಗಳೆ ಪ್ರೇರಣೆಯಾಗಿದ್ದಾರೆ. ಇಲ್ಲಿ ಜಾನುವಾರುಗಳು ನೀರು ಇಲ್ಲದೆ, ಬಸಾಪುರ ಕೆರೆಯನ್ನು ಬಲ್ಡೋಟ ನುಂಗಿದಾಗ ಗೋರಕ್ಷಕರು ಎಲ್ಲಿದ್ದರು, ಈಗಲಾದರೂ ಮುಂದೆ ಬರಬೇಕು, ಅವರಿಗೆ ಈ ಗೋವುಗಳು ನೆನಪಾಗುವುದಿಲ್ಲವೇ? ದೇವರ ದಾಸಿಮಯ್ಯನ ವಚನ ಉಲ್ಲೇಖ ಮಾಡಿ ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ ಎಂದಿರುವಂತೆ, ಈ ಸರ್ಕಾರಗಳು ಕಂಪನಿ ಕಾರ್ಖಾನೆಗಳ ದಾನವೇ ಎನ್ನುವಂತೆ ನಡೆದುಕೊಳ್ಳುತ್ತಿವೆ. ಬಗನಾಳ ಮಹಿಳೆಯೋರ್ವರು ನೋವು ತೋಡಿಕೊಂಡು ಬೆಳಿಗೆದ್ದು ಬಾಯಿಂದ ಉಗಿದಾಗ ಬರೀ ಕಪ್ಪು ಉಗುಳು ಬರುತ್ತದೆ. ಮೂಗಿನಿಂದಲೂ ಕಪ್ಪು ದ್ರವವೇ ಬರುತ್ತದೆಂದು ಹೆಳುತ್ತಾರೆ. ಸರ್ಕಾರಗಳು ಬದಲಾದರೂ ಅವರ ಧೋರಣೆ ಬದಲಾಗಲಿಲ್ಲ. ಎಲ್ಲಾ ಧೋರಣೆಗಳು ನಿಸರ್ಗ ನಾಶ ಮಾಡುವುದೆ ಆಗಿದೆ. ನಾನು ಈ ಹೋರಾಟಕ್ಕಾಗಿ ಹಲವು ಸ್ವಾಮಿಗಳೊಂದಿಗೆ ಇಲ್ಲಿಯೆ ಇದ್ದು ಹೋರಾಡಲು ಸಿದ್ಧ. ಗವಿಶ್ರೀ ಮುಂದೆ ನಿಲ್ಲುವ ಕಾಲ ಇದು ಎಂದರು.

ಧಾರವಾಡ ಪರಿಸರ, ಮಹಿಳಾಪರ ಬರಹಗಾರರಾದ ಶಾರದಾ ಗೋಪಾಲ್ ಅತ್ಯಂತ ಭಾವುಕರಾಗಿ ಮಾತನಾಡಿ, ಮೂರು ವರ್ಷದ ಮಗುವಿಗೆ ಪಾರ್ಶ್ವವಾಯು, ಹುಟ್ಟುವಾಗಲೇ ಹೃದಯರಂದ್ರ, ಏನಿದು ಆಶ್ಚರ್ಯ ಮಹಿಳೆಯರು ಗರ್ಭದರಿಸುತ್ತಿಲ್ಲ. ಅಂಗವಿಕಲ ಮಕ್ಕಳು, ವೈವಾಹಿಕ ಸಂಬಂಧಗಳಿಗೆ ಹಿನ್ನೆಡೆ, ಯಾರೂ ಸಂಬಂಧ ಬೆಳೆಸಲು ಮುಂದೆ ಫರುತ್ತಿಲ್ಲ. ತವರು ಮನೆಯಲ್ಲಿ ಮಕ್ಕಳು, ಮಡದಿ ಎಷ್ಟೊಂದು ಸಮಸ್ಯೆಗಳು ಇಲ್ಲಿವೆ. ಈ ಸಮಸ್ಯೆ ಯಾರಿಂದಾಗಿದೆಯೋ ಅವರು ಸದಾಕಾಲ ಮೌನವಾಗಿದ್ಧಾರೆ. ನಮಗೇನೂ ಗೊತ್ತಿಲ್ಲ ಎನ್ನುವ ನಡೆ. ಮತ್ತೆ ಯಾವಾಗ ಈ ಕಷ್ಷ ಪರಿಹಾರವಾಗುವುದು. ಎಂದು ಕಣ್ಣೀರಾದರು.

ಕಲಬುರಗಿ ವಿವಿ ವಿಶ್ರಾಂತ ಉಪಕುಲಪತಿ ಡಾ. ಪ್ರತಾಪ ಸಿಂಗ್ ತಿವಾರಿ, ಗವಿಸಿದ್ದೇಶ್ವರ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಕಲಬುರಗಿ ನಿವಾಸಿ ಎಸ್.ಎಲ್. ಮಾಲಿಪಾಟೀಲ್, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಮಲ್ಲಿಕಾರ್ಜುನ ಬಿ. ಗೋನಾಳ, ಅಲ್ಲಮಪ್ರಭು ಬೆಟ್ಟದೂರು, ಮಂಜುನಾಥ ಜಿ. ಗೊಂಡಬಾಳ, ರಾಜೇಶ ಸಸಿಮಠ, ಸೌಮ್ಯ ನಾಲ್ವಾಡ, ಡಾ. ಮಂಜುನಾಥ ಸಜ್ಜನ್, ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ

ಸೇರಿದಂತೆ ಅನೇಕರಿದ್ದರು.