ಸದಾ ಸುದ್ದಿಯಲ್ಲಿರುವ ಕೊಪ್ಪಳ ಆರ್ ಟಿಓ ಕಚೇರಿಯ. ಮೇಲೆ ಲೋಕಾಯುಕ್ತ ದಾಳಿ!

*ಕೊಪ್ಪಳದಲ್ಲಿ ಲಂಚ ಸ್ವೀಕರಿಸುವ ವೇಳೆ ಆರ್‌ಟಿಒ ಸಿಬ್ಬಂದಿ ಲೋಕಾಯುಕ್ತ ಬಲೆಗೆ.
*ಖಾಸಗಿ ಕಂಪನಿಯವರು ಕಚೇರಿ ಕೆಲಸ ಬಿಡಿಸಿ ಡಾಟಾ ಎಂಟ್ರಿ ಮಾತ್ರ ಮಾಡಿಸಬೇಕು.
*ಕಚೇರಿ ಕೆಲ ನೌಕರರು, ನಿವೃತ್ತರು ಹೊರಗಿನವರಿಂದ ತಮಗಾಗದವರ ವಿರುದ್ಧ ಮಾಹಿತಿ ಹಕ್ಕು ಹಾಕಿವುದರ ವಿರುದ್ದ ಸೂಕ್ತ ತನಿಖೆ ನಡೆಸುವಂತೆ ಆಗ್ರಹ.
ಕಿಷ್ಕಿಂಧವಾಣಿ ಸುದ್ದಿ
ಕೊಪ್ಪಳ: ಒಂದಿಲ್ಲೊಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ಕೊಪ್ಪಳದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಮೇಲೆ ಶೋರೂಮ್ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಣದ ಸಮೇತ ಇಬ್ಬರನ್ನು ಬಂಧಿಸಿದ್ದಾರೆ
ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚ ಬೇಡಿಕೆ ಇಟ್ಟಿದ್ದ ಆರ್‌ಟಿಒ ಕಚೇರಿಯ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ನಡೆದಿದೆ.
ಕೊಪ್ಪಳ ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಡಿಎ ರಂಜೀತ್ ಎಂಬಾತನು ಲೈಸನ್ಸ್ ನೀಡಲು ₹21 ಸಾವಿರ ಲಂಚ ಕೇಳಿದ್ದನು. ಈ ಸಂಬಂಧ ನಯೀಮ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಲೋಕಾಯುಕ್ತರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ, ನಯೀಮ್ ಅವರು ಹಣ ನೀಡುವ ವೇಳೆ ರಂಜೀತ್‌ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.
ಶೋರೂಮ್ ಆರಂಭಿಸಲು ನಯೀಮ್ ಅವರು ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ, ಲೈಸನ್ಸ್ ನೀಡಲು ವಿಳಂಬ ಮಾಡುತ್ತಾ ಲಂಚಕ್ಕೆ ಒತ್ತಾಯ ಮಾಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನಡೆಸಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ದೂರುದಾರರು ಕುಷ್ಟಗಿ, ಕಾರಟಗಿ ಮತ್ತು ಹುಲಿಗಿ ಪ್ರದೇಶಗಳಲ್ಲಿ ಶೋರೂಮ್ ತೆರೆಯಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದರೆಂದು ತಿಳಿದುಬಂದಿದೆ.
ಖಾಸಗಿ ಸಿಬ್ಬಂದಿಗಳದ್ದೇ ಅಧಿಕಾರ: ಸಾರಿಗೆ ಇಲಾಖೆಯ ಕೆಲ ನಿಯಮಗಳಿಂದಾಗಿ ಸರ್ಕಾರದ ಕಚೇರಿಗಳು ಖಾಸಗಿಯವರ ದರ್ಬಾರು ನಡೆಸುವ ಅಡ್ಡಗಳಂತಾಗಿದೆ. ಕೊಪ್ಪಳದ ಆರ್‌ಟಿಓ ಕಚೇರಿಯಲ್ಲಿ ಖಾಸಗಿ ಕಂಪನಿಯಿಂದ ಕಂಪ್ಯೂಟರ್ ಆಪರೇಟರ್ ಆಗಿ ಡಾಟಾ ಎಂಟ್ರಿ ಮಾಡಲು ಖಾಸಗಿ ಸಂಸ್ಥೆಯಿಂದ ನೇಮಕಗೊಂಡಿರುವ ಸಿಬ್ಬಂದಿಯವರು ನೇರವಾಗಿ ಲೈಸೆನ್ಸ್ ಮಾಡಿಸಲು ಬರುವ ಸಾರ್ವಜನಿಕರಿಂದ ಫೈಲ್ ಅನ್ನು ಪಡೆದು ಅವರೇ ಫಿಲ್ಡಿಗೆ ಇಳಿದು ಕೆಲಸ ಮಾಡಿಕೊಟ್ಟು ಹಣ ಪಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಇಲ್ಲಿಯ ಆರ್ ಟಿ ಓ ಅವರು ಖಾಸಗಿ ಕಂಪನಿಯ ಸಿಬ್ಬಂದಿಯವರು ತರುವ ಮಾತ್ರ ಕಡತಗಳನ್ನು ಪಡೆದು ಲೈಸೆನ್ಸ್ ಮಂಜೂರಿ ಮತ್ತು ನೋಂದಣಿ ಮಾಡಿ ನಂಬರ್ ಹಂಚಿಕೆ ಮಾಡುತ್ತಾರೆನ್ನುವ ಆರೋಪ ವ್ಯಾಪಕವಾಗಿದೆ.
ಒಂದೇ ನಂಬರ್ ಎರಡು ವಾಹನಗಳಿಗೆ ಹಂಚಿಕೆ ಮಾಡಿದ ಆರೋಪವೂ ಕೊಪ್ಪಳದ ಆರ್ ಟಿಓ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು ಸೂಕ್ತ ತನಿಖೆ ಮಾಡಿ ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕಿದೆ.
ಖಾಸಗಿ ಸಿಬ್ಬಂದಿಯವರು ಹೇಳಿದ ಕೆಲಸ ಮಾಡದಿದ್ದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲಾಗುತ್ತಿದೆ.
ಆದ್ದರಿಂದ ಸಾರಿಗೆ ಇಲಾಖೆ ಉನ್ನತ ಅಧಿಕಾರಿಗಳು ಕೊಪ್ಪಳ ಆರ್ ಟಿ ಓ ಕಚೇರಿಯ ಖಾಸಗಿ ಸಿಬ್ಬಂದಿಯವರ ಸೇವೆ ಸ್ಥಗಿತ ಮಾಡಬೇಕು. ಕಚೇರಿಯ ಕೆಲ ಹಾಲಿ ಮತ್ತು ನಿವೃತ್ತ ನೌಕರರು ಕೆಲ ಸಂಘಟನೆಗಳ ಮುಖಂಡರ ಮೂಲಕ ತಮಗೆ ಆಗದವರ ವಿರುದ್ದ ಮಾಹಿತಿ ಹಕ್ಕು ಮತ್ತು ಮೂಕ ಅರ್ಜಿ ಹಾಕಿಸಯವ ಮೂಲಕ ಕೆಲಸ ಮಾಡುವ ನೌಕರರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಯಲು ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಹೊರಗಿನವರ ದೌರ್ಜನ್ಯ ತಡೆದು ಕಳೆದ 15 ವರ್ಷಗಳಿಂದ ನಡೆದಿರುವ ಅಂದಾದುಂದಿ ತಡೆಯವ ಅವಶ್ಯಕತೆ ಇದೆ.ಜತೆಗೆ ನಿವೃತ್ತರಾದ ಸಾರಿಗೆ ಇಲಾಖೆಯ ಮೂಲ ಮತ್ತು ಹಾಲಿ ಇರುವ ಆಸ್ತಿ ಕುರಿತು ಇಲಾಖೆಯವರು ಪ್ರತೇಕ ಸಂಸ್ಥೆಯಿಂದ ತನಿಖೆ ನಡೆಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.

