Breaking News
ಕುರುಹೀನ ಶೆಟ್ಟಿ ಸಮಾಜದ ಆಶ್ರಯದಲ್ಲಿ.. ‘ತಾರಕಾ ಸುರನ ವಧೆ’ ಬಯಲಾಟ ಯಶಸ್ವಿ ಪ್ರದರ್ಶನ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ; ಕುರುಹಿನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ದೇವಸ್ಥಾನದ 37ನೇ ವಾರ್ಷಿಕೋತ್ಸವದ ಜಾತ್ರೆಯ ನಿಮಿತ್ತವಾಗಿ ಶ್ರೀ ನೀಲಕಂಠೇಶ್ವರ ಬಯಲಾಟ ಸಂಘ ದವರು ಪ್ರದರ್ಶಿಸಿದ ‘ತಾರಕಾಸುರನ ವಧೆ’ಬಯಲಾಟ ಯಶಸ್ವಿಯಾಗಿ ಪ್ರೇಕ್ಷಕರ ಮನಸ್ಸು ಸೂರೆಗೊಂಡಿತು. ಗಿರಿಜೆ ಮತ್ತು ಶಂಕರರ ಕಲ್ಯಾಣೋತ್ಸವ ಮತ್ತು ಇದರ ಹಿಂದಿನ ಇತಿಹಾಸವನ್ನು ನೆನಪಿಸುವ ತಾರಕಾ ಸುರನ ವಧೆ, ಹಂಪಿಯ ಹೇಮಕೂಟ, ವಿರೂಪಾಕ್ಷ ಮಂದಿರ,ಪಂಪಾ ಸರೋವರ,ಪಂಪಾ ಕ್ಷೇತ್ರದ ಸೌಂದರ್ಯವನ್ನು ಹೊಗಳುವ ಸನ್ನಿವೇಶಗಳು ಮತ್ತು ಶಿವನ ತಪೋಭಂಗ ಮಾಡುವ ಮನ್ಮಥನ ದೃಶ್ಯ ಮತ್ತು ತಾರಕಾಸುರನ ವಧೆ ಮಾಡುವ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ಇದ್ದವು.

ತಾರಕಾಸುರನ ವಧೆ ಬಯಲಾಟದ

ಪಾತ್ರ ವರ್ಗದಲ್ಲಿ ಯಲ್ಲಪ್ಪ ಪೊಲಕಲ್,ಐಲಿ ಮಾರುತಿ,ಐಲಿ ನಂಜುಂಡ,ಐಲಿ ರವಿ,ಮಾಂತಾ ಬಸವರಾಜ, ತಟ್ಟಿ ಚೇತನ್,ಐಲಿ ಶಂಕರ್, ಶಿರಿಗೇರಿ ಬಸವರಾಜ, ಬಂಡಿ ಮಾರುತಿ,

ಧೂಪಾ ಮಂಜುನಾಥ, ಗಿಟಗಿ ನೀಲಕಂಠ, ಕುಣಿಗಿ ನಾಗರಾಜ, ಅನುಪ ಮಾಂತಾ,ಪವಿತ್ರ ಗೊಲ್ಲರಹಳ್ಳಿ,ಅಂಜಿನಮ್ಮ ಕೂಡ್ಲಗಿ,ಮಲ್ಲಿಕಾರ್ಜುನ ಕೂರಂಟಿ,ಹಾರ್ಮೋನಿಯಂ ಚನ್ನಪ್ಪ ಕುರುಗೋಡು,ಕಥಾ ಸಂಚಾಲಕರಾಗಿ ವಿರೂಪಾಕ್ಷಪ್ಪ ಶಿರವಾರ ಕಾರ್ಯ ನಿರ್ವಹಿಸಿದರು.

ಬಯಲಾಟದಲ್ಲಿ ಮನ್ಮಥನ ಪಾತ್ರ ಮಾಡಿದ ಯಲ್ಲಪ್ಪ ಪೊಲಕಾಲ್ ಇವರನ್ನು ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಪತ್ರಕರ್ತ ಕೆ.ನಿಂಗಜ್ಜ, ಹನುಮಂತಪ್ಪ ಹುಲಿಹೈದರ್,ಖಾಜಾಹುಸೇನ ಮುಳ್ಳೂರು ಹಾಗೂ ತಿಮ್ಮಪ್ಪ ಸನ್ಮಾನಿಸಿದರು.

ಹಂಪಿಪ್ರಾಧಿಕಾರದ ಫೆರಿಪರಲ್ ಝೋನ್‌ನಲ್ಲಿರುವ ತಿರುಮಲಾಪೂರ ಕೃಷಿಭೂಮಿ ಮೇಲೆ ಹೊಸಪೇಟೆ ಪ್ರಭಾವಿಗಳ ಕಣ್ಣು!

*ಸಣ್ಣಪುಟ್ಟ ಹೊಟೇಲ್, ರೆಸಾರ್ಟ್ ಬಂದ್ ಮಾಡಿಸುವ ಕೇಸಿನಲ್ಲಿ ಇವರ ನೆರಳು ಆರೋಪ
*ಎಕರೆಗೆ 70-90 ಲಕ್ಷ ರೂ. ಕೊಟ್ಟು ಬೆಳೆ ಬಾಳುವ ಭೂಮಿ ಬೇನಾಮಿ ಹೆಸರಿನಲ್ಲಿ ಖರೀದಿ
*ಉಳಿದ ಕೃಷಿಭೂಮಿ ಒತ್ತಾಯಪೂರ್ವಕ ಖರೀದಿಗೆ ತಂತ್ರ

ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಆನೆಗೊಂದಿ, ಸಾಣಾಪೂರ ಭಾಗಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು, ಹನುಮಭಕ್ತರು ಆಗಮಿಸುತ್ತಿದ್ದು ಪ್ರತಿ ವಾರ ಟೆಕ್ಕಿಗಳು ವೀಕ್ ಎಂಡ್ ಕಳೆಯಲು ಆಗಮಿಸುತ್ತಿರುವುದರಿಂದ ಹೊಟೇಲ್, ರೆಸಾರ್ಟ್ಗಳು ಮತ್ತು ಹೋಂಸ್ಟೇಗಳು ಬಹಳಷ್ಟಿವೆ. ಇದರಲ್ಲಿ ಅಕ್ರಮ ಸಕ್ರಮ ಎರಡೂ ಇದ್ದು ಈ ಭಾಗದಲ್ಲಿ ಹೊಟೇಲ್, ರೆಸಾರ್ಟ್ ನಿರ್ಮಿಸಲು ಹಣವಂತರು ಹಾಗೂ ಕೆಲ ಪ್ರಭಾವಿಗಳು ಹಣ ಬಲ ತೋಳ್ಬಲದಿಂದ ಭೂಮಿ ಖರೀದಿಸುತ್ತಿದ್ದಾರೆ.
ಆನೆಗೊಂದಿ ಭಾಗದ ಫೆರಿಪರಲ್ ಝೋನ್ ವ್ಯಾಪ್ತಿಯ ತಿರುಮಲಾಪೂರ ನದಿ ಪಾತ್ರದ ಭೂಮಿ ಖರೀದಿಗೆ ಹೊಸಪೇಟೆಯ ಪ್ರಭಾವಿ ವ್ಯಕ್ತಿಗಳು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಯತ್ನಿಸುತ್ತಿದ್ದು ಈಗಾಗಲೇ ಬೇನಾಮಿ ಹೆಸರಿನಲ್ಲಿ 10-15 ಎಕರೆ ಭೂಮಿಯನ್ನು ಖರೀದಿಸಿದ್ದು ಮುಂದಿನ ದಿನಗಳಲ್ಲಿ ಸ್ಟಾರ್ ಹೊಟೇಲ್, ರೆಸಾರ್ಟ್ ನಿರ್ಮಾಣಕ್ಕೆ ನಿಯಮಗಳಲ್ಲಿರುವ ರಸ್ತೆ ಇತರೆ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಬೇನಾಮಿಯಾಗಿ ಖರೀದಿಸಿರುವ ಭೂಮಿಯ ಅಕ್ಕಪಕ್ಕದಲ್ಲಿರುವ ಭೂಮಿಗಳನ್ನು ಖರೀದಿಗೆ ಮುಂದಾಗಿದ್ದು ಕೊಡದಿದ್ದರೆ ಹೆದರಿಸುವ ಯತ್ನಗಳು ನಡೆದಿವೆ. ತಿರುಮಲಾಪೂರ, ಸಾಣಾಪೂರ ಮತ್ತು ಬಸಾಪೂರ ಭಾಗದಲ್ಲಿರುವ ಸಣ್ಣ ಪುಟ್ಟ ಹೊಟೇಲ್, ರೆಸಾರ್ಟ್ ಬಂದ್ ಮಾಡಿಸುವಲ್ಲಿ ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿಸಿದ ಹೊಸಪೇಟೆಯ ಪ್ರಭಾವಿಗಳ ಕೈವಾಡವಿರುವ ಕುರಿತು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಹಿಂದೆ ಕಮಲಾಪೂರ, ರಾಮಸಾಗರ, ಬುಕ್ಕಸಾಗರ ವ್ಯಾಪ್ತಿಯಲ್ಲಿ ಪ್ರಭಾವಿಗಳು ಕೃಷಿ ಭೂಮಿ ಖರೀದಿಸಿ ವಾಣಿಜ್ಯ ಬಳಕೆಗೆ ಯತ್ನಿಸಿ ವಿಫಲವಾಗಿದ್ದು ಇದೀಗ ಆನೆಗೊಂದಿ ಭಾಗದ ತಿರುಮಲಾಪೂರ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಫೆರಿಪರಲ್ ಝೋನ್ ನಲ್ಲಿ ಬರುವುದರಿಂದ ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲು ಮತ್ತು ಕಮರ್ಷಿಯಲ್ ಆಗಿ ಬಳಕೆ ಮಾಡಲು ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿರುವುದರಿಂದ ಹೊಸಪೇಟೆಯ ಪ್ರಭಾವಿಗಳು ತಿರುಮಲಾಪೂರದಲ್ಲೇ ಸುಮಾರು 60 ಎಕರೆ ಭೂಮಿ ಖರೀದಿಸುವ ಯೋಜನೆಯೊಂದಿಗೆ ಫಿಲ್ಡಿಗೆ ಇಳಿದಿದ್ದು ಈಗಾಗಲೇ 10-15 ಎಕರೆಯನ್ನು ಆನೆಗೊಂದಿ ಭಾಗದ ಅಧಿಕೃತ ರೆಸಾರ್ಟ್ ಮಾಲೀಕರನೊರ್ವ ಖರೀದಿಸಿಕೊಟ್ಟಿದ್ದಾರೆನ್ನಲಾಗುತ್ತಿದ್ದು ಉಳಿದ ಕೃಷಿ ಭೂಮಿ ಖರೀದಿಸಲು ಒತ್ತಡ ಹಾಕುತ್ತಿರುವ ವರದಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಾಣಾಪೂರ, ತಿರುಮಲಾಪೂರ ಮತ್ತು ಬಸಾಪೂರ ಭಾಗದ ಜನರು ಪ್ರಭಾವಿಗಳ ಕೃತ್ಯದ ಬಗ್ಗೆ ಮಾತನಾಡುತ್ತಿದ್ದು ಪ್ರಾಧಿಕಾರದ ನಿಯಮಗಳಿಂದ ನೊಂದಿರುವ ಸ್ಥಳೀಯರು ಹೊಸಪೇಟೆಯ ಪ್ರಭಾವಿಗಳು ಭೂಮಿ ಖರೀದಿಸಿ ಹೊಟೇಲ್, ರೆಸಾರ್ಟ್ ಉದ್ಯಮ ಆರಂಭಿಸಿದರೆ ಸಣ್ಣ ಪುಟ್ಟ ಹೊಟೇಲ್, ರೆಸಾರ್ಟ್ ಇಟ್ಟುಕೊಂಡವರಿಗೆ ಉಳಿಗಾಲವಿಲ್ಲ. ಜತೆಗೆ ಈಗಗಲೇ ಸರಕಾರದ ಒಂದಿಲ್ಲೊಂದು ಇಲಾಖೆಯವರು ದೂರಿನ ನೆಪದಲ್ಲಿ ಆನೆಗೊಂದಿ, ಸಾಣಾಪೂರ,ಮಲ್ಲಾಪೂರ ಮತ್ತು ಸಂಗಾಪೂರ ಭಾಗದಲ್ಲಿ ಹೊಟೇಲ್ ಗಳನ್ನು ತೆರವುಗೊಳಿಸುತ್ತಿದ್ದಾರೆ. ಕಮರ್ಷಿಯಲ್ ಕರೆಂಟ್ ತೆಗೆದುಕೊಂಡರೂ ನೋಟೀಸ್ ನೀಡದೇ ಕರೆಂಟ್ ಕಟ್ ಮಾಡುತ್ತಿದ್ದು ಸ್ಥಳೀಯರನ್ನು ಹಂಪಿ ಪ್ರಾಧಿಕಾರದ ನಿಯಮಗಳ ಉಲ್ಲಂಘನೆಯ ಒಕ್ಕಲೆಬ್ಬಿಸಲಾಗುತ್ತಿದೆ.
ಈಗಾಗಲೇ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಮುಕ್ತಗೊಳಿಸಬೇಕು ಮತ್ತು 1988 ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆನೆಗೊಂದಿ ಭಾಗದಲ್ಲಿಯೂ ಹಂಪಿ, ಕಡ್ಡಿರಾಂಪೂರ ಮತ್ತು ಕಮಲಾಪೂರ ಭಾಗದಲ್ಲಿ ಕಮರ್ಷಿಯಲ್ ಝೋನ್ ಮಾಡಿದಂತೆ ಆನೆಗೊಂದಿ ಭಾಗದಲ್ಲಿಯೂ ಮಾಡಬೇಕೆನ್ನುವುದು ಸ್ಥಳೀಯರ ಹೋರಾಟವಾಗಿದೆ.
ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಅಕ್ರಮವಾಗಿ ಕೃಷಿ ಭೂಮಿಯನ್ನು ಹೆಚ್ಚು ಬೆಳೆ ನೀಡಿ ಖರೀದಿಸುವವರ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ತಿದ್ದುಪಡಿ ಮಾಡಿ ಕೋರ್ ಝೋನ್,ಬಫರ್ ಝೋನ್ ಹಾಗೂ ಫೆರಿಪರಲ್ ಝೋನ್ ಗಳ ವಿಸ್ತೀರ್ಣ ಸಡಿಲೀಕರಣ ಮಾಡುವ ಮೂಲಕ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಸ್ಥಳೀಯರ ನೆರವಿಗೆ ಬರಬೇಕಿದೆ.

****
ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯಿಂದ ಗುರುತಿಸಲ್ಪ ಸ್ಮಾರಕಗಳ ಪೈಕಿ ಆನೆಗೊಂದಿ ಮತ್ತು ವಿರೂಪಾಪೂರಗಡ್ಡಿ ಕೋರ್ ಝೋನ್ ನಲ್ಲಿ ಇದ್ದು ತಿರುಮಲಾಪೂರ ಫೆರಿಪರಲ್ ಝೋನ್ ನಲ್ಲಿ ಬರುತ್ತದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಆನೆಗೊಂದಿ ಪ್ರದೇಶದ ಪೈಕಿ ತಿರುಮಲಾಪೂರ ಗ್ರಾಮದಲ್ಲಿರುವ ಕೃಷಿ ಭೂಮಿಯನ್ನು ಪ್ರಾಧಿಕಾರದ ನಿಯಮದಂತೆ ಅರ್ಜಿ ಸಲ್ಲಿಸಿ ಕೃಷಿಯೇತರ ಭೂಮಿ ಮಾರ್ಪಡಿಸಿ ವಾಣಿಜ್ಯ ವ್ಯವಹಾರ ಮಾಡಲು ಬರುತ್ತದೆ. ಈ ನಿಟ್ಟಿನಲ್ಲಿ ಭೂಮಿ ಖರೀದಿ ನಡೆದಿರಬಹುದು, ಎಲ್ಲವೂ ನಿಯಮಗಳಂತೆ ನಡೆಯಬೇಕು.
-ಶೇಜೇಶ್ವರ ಉಪನಿರ್ದೇಶಕರು ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ