Breaking News
ಗಂಗಾವತಿಯ ಹಿರೇಜಂತಗಲ್ ವೀರಣ್ಣನ ಗುಡ್ಡದಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ : 

ಕಿಷ್ಕಿಂಧವಾಣಿ:

ಗಂಗಾವತಿ ನಗರದ ವಿರುಪಾಪುರ ವ್ಯಾಪ್ತಿಯಲ್ಲಿ ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ ಶಿಲಾ ಶಾಸನವನ್ನು ಗಂಗಾವತಿ ಚಾರಣಬಳಗ ಪತ್ತೆಮಾಡಿದೆ ಎಂದು ಚಾರಣ ಬಳಗದ ಸಂಚಾಲಕ ದಂತವೈದ್ಯ ಡಾ. ಶಿವಕುಮಾರ್ ಮಾಲಿ ಪಾಟೀಲ್ ತಿಳಿಸಿದ್ದಾರೆ .

ನಗರದ ವಿರುಪಾಪುರ ವ್ಯಾಪ್ತಿಯ ಹಿರೇಜಂತಕಲ್ ವೀರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯೊಂದರಲ್ಲಿ ಈ ಶಾಸನ ಕಂಡು ಬಂದಿದೆ .

ಪತ್ತೆಯಾಗಿರುವ ಶಾಸನವನ್ನು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಪರಿಶೀಲಿಸಿದ್ದು ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ .ಶಾಸನದ ಮೇಲ್ಭಾಗದಲ್ಲಿ ಸೂರ್ಯ ,ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ .ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಸನವು ಶಾಲಿವಾಹನ 1448ನೆಯ ಸಂವತ್ಸರದ ಮಾಘ ಶುದ್ಧ 7ರ ಕಾಲವನ್ನು ಉಲ್ಲೇಖಿಸುತ್ತದೆ .

ಅದು ಪ್ರಸ್ತುತ ಸಾಮಾನ್ಯ ಶಕೆ 1527 ಕ್ಕೆ ಸರಿಯಾಗುತ್ತದೆ .ಅಂದರೆ 16ನೇ ಶತಮಾನದ ಶಾಸನವಿದು. ಶಾಸನದಲ್ಲಿ ಶ್ರೀ ಮನ್ಮಾಹಾರಾಜಾಧಿರಾಜ ಪರಮೇಶ್ವರ ವೀರಪ್ರತಾಪ ಕೃಷ್ಣರಾಯರ ಆಳ್ವಿಕೆ ಕಾಲದಲ್ಲಿ ಆನೆಗುಂದಿ ಮಾಗಣೆಯನ್ನು ಯಾವುದೋ ವ್ಯಕ್ತಿ ಯ ( ಅಕ್ಷರ ಸವೆದಿವೆ) ಮಗ ಪಾಲಿಸುತ್ತಿರುವಾಗ ಭದ್ರಯ್ಯನ ಮಗ ಗಂಧದ ಸೂರಯ್ಯನು ವಿರುಪಾಪುರ ಸೀಮೆಯ ಮಲ್ಲಿಕಾರ್ಜುನ ದೇವರಿಗೆ ಹಾಗೂ ಕೆಲವು ಬ್ರಾಹ್ಮಣರಿಗೆ ಭೂಮಿಯನ್ನು ದಾನ ನೀಡಿದ ಬಗ್ಗೆ ತಿಳಿಸುತ್ತದೆ . ಶಾಸನದ ಕೆಳಸಾಲುಗಳು ಸವೆದಿರುವುದರಿಂದ ಹೆಚ್ಚಿನ ವಿಷಯ ಸ್ಪಷ್ಟವಾಗುತ್ತಿಲ್ಲ.ಗಂಗಾವತಿ ನಗರದಲ್ಲಿ ಈಗಾಗಲೇ ವಿಜಯನಗರದ ಪ್ರೌಢದೇವರಾಯ ಮತ್ತು ಸದಾಶಿವದೇವರಾಯನ ಶಾಸನಗಳು ಮಾತ್ರ ದೊರೆತಿದ್ದವು .

ಈಗ ಕೃಷ್ಣದೇವರಾಯನ ಕಾಲದ ಶಾಸನ ದೊರೆತಿರುವುದು ಮಹತ್ವದ ಸಂಗತಿ ಯಾಗಿದೆ .

ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಚಾರಣ ಬಳಗದ ಕೇಶವ ನಾಯ್ಕ್, ಪ್ರಲ್ಹಾದ್ ಕುಲಕರ್ಣಿ, ಮಂಜುನಾಥ್ ಗುಡ್ಲಾನೂರ,ಚಿದಾನಂದ ಕೀರ್ತಿ ಮತ್ತು ವಿನಯ್ ಕುಮಾರ್ ಅಂಗಡಿ ನೆರವಾಗಿದ್ದಾರೆಂದು ಡಾ. ಕೋಲ್ಕಾರ್ ತಿಳಿಸಿದ್ದಾರೆ.

ಆನೆಗೊಂದಿ ಕಿಷ್ಕಿಂಧಾ ಭಾಗಕ್ಕೆ ಮಾತ್ರ ಯುನೆಸ್ಕೋ ಗುಮ್ಮ! ಹಂಪಿ,ಕಮಲಾಪೂರದಲ್ಲಿ ಪ್ರಾಧಿಕಾರದ ನಿಯಮಗಳು ಗಾಳಿಗೆ!

*ಹಂಪಿ ಕಮಲಾಪೂರ ಭಾಗದ ಪ್ರವಾಸೋದ್ಯಮಕ್ಕೆ ಜನಪ್ರತಿನಿಧಿಗಳ ಕೃಪಕಟಾಕ್ಷ

*ಅಸಹಾಯಕರಾಗಿರುವ ಆನೆಗೊಂದಿ ಕಿಷ್ಕಿಂಧಾ ಜನರು ಮತ್ತು ಜನಪ್ರತಿನಿಧಿಗಳು?

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಯುನೆಸ್ಕೋ ವ್ಯಾಪ್ತಿಯಲ್ಲಿರುವ ಆನೆಗೊಂದಿ ಕಿಷ್ಕಿಂಧಾ ಭಾಗದ 15 ಹಳ್ಳಿಗಳಲ್ಲಿ ಮಾತ್ರ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಇಲ್ಲಿಯ ಜನರಿಗೆ ಯುನೆಸ್ಕೋ ಗುಮ್ಮನ್ನು ಬಿಟ್ಟು ಅಸಹಾಯಕರನ್ನಾಗಿ ಮಾಡಿದ್ದಾರೆ.

ಆದರೆ ಯುನೋಸ್ಕೋ ವ್ಯಾಪ್ತಿಯ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಧೀನದಲ್ಲಿ ಬರುವ ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ವಾಣಿಜ್ಯ ವ್ಯವಹಾರಗಳು ನಡೆಯಲು ಅಲ್ಲಿಯ ಶಾಸಕರು ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಕೃಪಾಕಟಾಕ್ಷ ಇರುವುದರಿಂದ ಅಲ್ಲಿಯ ಜನರು ಆರಾಮವಾಗಿ ವ್ಯಾಪಾರ ವಹಿವಾಟಿನ ಮೂಲಕ ಪ್ರವಾಸೋದ್ಯವನ್ನು ಅಭಿವೃದ್ಧಿಪಡಿಸುತ್ತಿದ್ದಾರೆಂಬ ಆರೋಪಗಳನ್ನು ಮಾಡಲಾಗುತ್ತಿದೆ.

ಏಪ್ರಿಲ್ ಮೊದಲ ವಾರದಲ್ಲಿ ಆನೆಗೊಂದಿ ಕಿಷ್ಕಿಂಧಾ ಭಾಗದಲ್ಲಿ ಯುನೆಸ್ಕೋ ಮಾರ್ಗಸೂಚಿಯಂತೆ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರವಾಸೋದ್ಯಮ ನಡೆಯುತ್ತಿರುವ,ಸ್ಮಾರಕಗಳ ಬಗ್ಗೆ ಮನವರಿಕೆ ಮಾಡಿಕೊಳ್ಳು ಯುನೆಸ್ಕೋದ ಭಾರತದ ಉಸ್ತುವಾರಿ ಪ್ರತಿನಿಧಿಗಳು ಆಗಮಿಸುತ್ತಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾಡಳಿ ಆನೆಗೊಂದಿ ಕೋರ್ ಝೋನ್ ನಲ್ಲಿರುವ ವಾಣಿಜ್ಯ ವಿದ್ಯುತ್ ಸಂಪರ್ಕಗಳನ್ನು 15 ದಿನಗಳ ಮುಂಚಿಂತವಾಗಿ ಕಡಿತಗೊಳಿಸಿ ಇಡೀ ಪ್ರದೇಶವನ್ನು ಕತ್ತಲುಗೊಳಿಸುವ ಜತೆಗೆ ಕುಡಿಯುವ ನೀರಿನ ತೊಂದರೆ ಸೇರಿ ಇಲ್ಲಿಗೆ ನಿತ್ಯವೂ ಬರುವ ಸಾವಿರಾರು ಜನ ಪ್ರವಾಸಿಗರಿಗೆ ತೊಂದರೆ ಕೊಟ್ಟಿದೆ.

ತಡೆ ಬಾಗಿಲು ಗ್ರಾಮದ ಶ್ರೀರಂಗದೇವರಾಯಲು ಸರ್ಕಲ್ ಅಕ್ಕಪಕ್ಕದಲ್ಲಿ ಖಾಸಗಿ ಜಮೀನುಗಳಲ್ಲಿ ಸ್ಥಳೀಯರು ಚಹಾ,ಗೋಬಿಮಂಚೂರಿ, ಜ್ಯೂಸ್ ಸೇರಿ ಹಣ್ಣು ಹಂಪಲು ಮಾರಾಟ ಮಾಡಲು ಶೆಡ್ ಹಾಕಿಕೊಂಡು ಜೆಸ್ಕಾಂ ನಿಂದ ಕಮರ್ಷಿಯಲ್ ನಿಯಮದಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆದು ವ್ಯಾಪಾರ ವಹಿವಾಟು ನಡೆಸಿ ಬದುಕು ನಡೆಸುತ್ತಿದ್ದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಯುನೆಸ್ಕೋ ತಂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿಯ ಜೆಸ್ಕಾಂ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಸಿದ್ದಾರೆ.

ಹಂಪಿ ಭಾಗದಲ್ಲೂ ಕಮರ್ಷಿಯಲ್ ವಿದ್ಯುತ್ ಸಂಪರ್ಕಗಳಿವೆ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಹಂಪಿ ಭಾಗದ ಕಮಲಾಪುರ ಸೇರಿದಂತೆ 13 ಗ್ರಾಮಗಳಲ್ಲಿ ಸಹ ವಾಣಿಜ್ಯ ವ್ಯವಹಾರಗಳು ಬಹಿರಂಗವಾಗಿ ನಡೆಯುತ್ತಿವೆ, ಜೊತೆಗೆ ಅಲ್ಲಿಯೂ ಸಹ ಕಮರ್ಷಿಯಲ್ ವಿದ್ಯುತ್ ಸಂಪರ್ಕ ಪಡೆದು ಅಂಗಡಿ ಮುಂಗಟ್ಟುಗಳನ್ನು ನಡೆಸಲಾಗುತ್ತಿದೆ. ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಂಪಿ ಭಾಗದಲ್ಲಿ ನಡೆಯುತ್ತಿರುವ ವಾಣಿಜ್ಯ ವ್ಯವಹಾರ ಕಾಣಿಸುವುದಿಲ್ಲ .ಬದಲಿಗೆ ಆನೆಗೊಂದಿಯ

ಭಾಗದ 15 ಗ್ರಾಮಗಳಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ನಡೆಯಬಾರದು, ವಿಶೇಷವಾಗಿ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿ ಸೀಮೆ ಕೋರ್ ಜೋನ್ ಇರುವುದರಿಂದ ಕಡ್ಡಾಯವಾಗಿ ಯಾವುದೇ ವ್ಯಾಪಾರ ವಹಿವಾಟು ನಡೆಯಬಾರದು, ನಡೆದರೆ ಇದರ ಕಾನೂನಿಗೆ

ವಿರುದ್ಧ ಜೆಸ್ಕಾಂ,ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಪದೇ ಪದೇ ಕಾರ್ಯಾಚರಣೆಯ ನೆಪದಲ್ಲಿ ಸಣ್ಣಪುಟ್ಟ ಗೂಡಂಬಡಿಗಳನ್ನು ತೆರವು ಮಾಡಿ ಸ್ಥಳೀಯರು ಪ್ರವಾಸೋದ್ಯಮದ ಮೂಲಕ ಸ್ವಯಂ ಉದ್ಯೋಗ ಮಾಡದಂತೆ ನಿರ್ಬಂಧ ಹಾಕಲಾಗುತ್ತಿದೆ.

ಸಹಾಯಕತೆ: ಯುನೆಸ್ಕೋ ವ್ಯಾಪ್ತಿಗೆ ನಮ್ಮ ಗ್ರಾಮಗಳು ಬಂದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ನಂಬಿ 35 ವರ್ಷಗಳ ಹಿಂದೆ ಆನೆಗೊಂದಿ ಭಾಗದ 15 ಹಳ್ಳಿಗಳ ಜನರು ಇದೀಗ ಅಸಹಾಯಕತೆಯಿಂದ ತಮ್ಮ ನೆರವಿಗೆ ಯಾರು ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಕೆಲವು ಒತ್ತಡಕ್ಕೆ ಮಣಿದಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪ್ರಾಧಿಕಾರದ ನಿಯಮಗಳು ಮತ್ತು ಯುನೋಸ್ಕೋ ನಿಯಮಗಳು ಆನೆಗೊಂದಿ ಭಾಗಕ್ಕೆ ಮೀಸಲು ಎನ್ನುವಂತೆ ವರ್ತಿಸುತ್ತಿದ್ದು, ಹಂಪಿ ಭಾಗದಲ್ಲಿ ಎಲ್ಲಾ ವಾಣಿಜ್ಯ ವ್ಯವಹಾರಗಳು ಅಲ್ಲಿಯ ಜನಪ್ರತಿನಿಧಿಗಳ ಕೃಪಾಕಟಾಕ್ಷದಲ್ಲಿ ನಡೆಯುತ್ತಿರುವ ಕುರಿತು ಆನೆಗೊಂದಿ ಭಾಗದ ಸ್ಥಳೀಯರು ಆರೋಪ ಮಾಡುತ್ತಾರೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳಿಗೆ ಯುನೆಸ್ಕೋ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹಳೆಯ ಮತ್ತು ಅವೈಜ್ಞಾನಿಕ ನಿಯಮಗಳ ಮೂಲಕ ಮನವರಿಕೆ ಮಾಡಿರುವುದರಿಂದ ಆನೆಗೊಂದಿ ಭಾಗದ ಜನರು ಮತ್ತು ಜನಪ್ರತಿಗಳು ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮಾಡುವಲ್ಲಿ ಅಸಹಕಾರಂತೆ ವರ್ತಿಸುತ್ತಿರುವ ಕುರಿತು

ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಹಂಪಿ-ಕಮಲಾಪುರ ಭಾಗದಲ್ಲಿ ಹೋಟೆಲ್ ಸೇರಿದಂತೆ ಎಲ್ಲಾ ವಾಣಿಜ್ಯ ವ್ಯವಹಾರಗಳು ನಡೆಯುತ್ತಿದ್ದರೂ ಅಲ್ಲಿ ಹಂಪಿ ಪ್ರಾಧಿಕಾರ ಸೇರಿ ಯಾವುದೇ ಸರಕಾರಿ ಇಲಾಖೆ ಮತ್ತು ಸರಕಾರಿ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅಲ್ಲಿಯ ವ್ಯವಹಾರವನ್ನು ಬಂದ್ ಮಾಡಿಸಲು ಮುಂದಾಗುತ್ತಿಲ್ಲ. ಆನೆಗೊಂದಿ ಭಾಗದಲ್ಲಿ ಮಾತ್ರ ಹಂಪಿ ಪ್ರಾಧಿಕಾರ ಬೇರೆ ಬೇರೆ ಇಲಾಖೆ ಮತ್ತು ಸರ್ಕಾರದ ಸಂಸ್ಥೆಗಳು ಇಲ್ಲಿಯ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತವಾಗುವಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಯಾವ ನ್ಯಾಯ ಎಂದು ಆನೆಗೊಂದಿ ಭಾಗದ ಸ್ಥಳೀಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಹಿರೇಬೆಣಕಲ್ : ಮೊರೇರ್ ಶಿಲಾಯುಗದ ಜನಾಂಗ ಸಂಗ್ರಹಿಸಿದ್ದ ಕಬ್ಬಿಣದ ಅದಿರು ಪತ್ತೆ :

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಪ್ರಸಿದ್ಧ ಪ್ರಾಗೈತಿಹಾಸಿಕ ಶಿಲಾಯುಗದ ಶಿಲಾ ಸಮಾಧಿನೆಲೆ ಹಿರೇಬೆಣಕಲ್ ಗ್ರಾಮದ ಗುಡ್ಡದಲ್ಲಿ ಮೊರೇರ್ ಜನಾಂಗ ಸಂಗ್ರಹಿಸಿದ್ದ ಕಬ್ಬಿಣದ ಅದಿರನ್ನು ಹಿರೇಬೆಣಕಲ್ ಅನ್ವೇಷಣಾ ತಂಡ ಪತ್ತೆ ಹಚ್ಚಿದೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ .

2000 ದಿಂದ 3000 ವರ್ಷಗಳ ಹಿಂದೆ ಕರ್ನಾಟಕ ಸಹಿತ ದಕ್ಷಿಣ ಭಾರತದಲ್ಲಿ ಬದುಕಿದ್ದ ಮೂರೇರ್ ಎಂಬ ಬುಡಕಟ್ಟು ಜನಾಂಗ ಮೊದಲ ಭಾರಿಗೆ ಕಬ್ಬಿಣದ ಅದಿರನ್ನು ಸಂಸ್ಕರಿಸಿ ಕಬ್ಬಿಣ ಲೋಹವನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಕೊಂಡರು .

ಆ ಕಬ್ಬಿಣದಿಂದ ತಮ್ಮ ಪೂರ್ವಜರ ಸಮಾಧಿಗಳ ರಚನೆಗೆ ಬೇಕಾದ ಕಲ್ಲು ಚಪ್ಪಡಿಗಳನ್ನು ಸಿದ್ಧಪಡಿಸಲು ಸುತ್ತಿಗೆ, ಉಳಿ ಮತ್ತು ದಿನನಿತ್ಯ ಬಳಕೆಗೆ ಬೇಕಾದ ಕುಡುಗೋಲು,ಕತ್ತಿಗಳು ,ಬಾಣದ ಮೊನೆ,ಚಾಕು ,ಬಲ್ಲೆ ,ಚಪ್ಪಟೆ ಕೊಡಲಿ, ನೇಗಿಲಿನ ಕುಳ ಮುಂತಾದ ಉಪಕರಣಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಕಬ್ಬಿಣದ ಬಳಕೆ ಬಂದದ್ದಕ್ಕಾಗಿ ಇವರ ಕಾಲಾವಧಿಯನ್ನು ಕಬ್ಬಿಣ ಯುಗವೆಂದು ಜೊತೆಗೆ ಬೃಹತ್ ಬಂಡೆಗಳಿಂದ ಸಮಾಧಿ ನಿರ್ಮಿಸುತ್ತಿದ್ದರಿಂದ ಕಬ್ಬಿಣ ಯುಗದ ಬೃಹತ್ ಶಿಲಾಯುಗವೆಂದು ಕರೆಯಲಾಗಿದೆ. ಇವರು ಒಂದು ಕೆಜಿ ಅದಿರಿನಿಂದ 350 ಗ್ರಾಂ ಪರಿಶುದ್ಧ ಕಬ್ಬಿಣವನ್ನು ಪಡೆಯುವ ತಂತ್ರಜ್ಞಾನವನ್ನು ಸಾಧಿಸಿದ್ದರು ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ . ಹಿರೇಬೆಣಕಲ್ ಮೊರೇರ್ ಜನಾಂಗ ಕಬ್ಬಿಣ ಬಳಸಿದ್ದ ಬಗ್ಗೆ ಈವರೆಗೆ ಯಾವುದೇ ಕುರುಹು ದೊರೆತಿರಲಿಲ್ಲ.ಆದರೆ ಈಗ ಮೊರೇರ್ ಗುಡ್ಡದ ದುರ್ಗದದಡಿ ಎಂಬ ಭಾಗದಲ್ಲಿ ಸುಮಾರು 200 ಮೀಟರ್ ವಿಸ್ತಾರ ಪ್ರದೇಶದಲ್ಲಿ ಸಂಸ್ಕರಿಸಿದ ಕಬ್ಬಿಣದ ಅದಿರು ಚೆದುರಿದಂತೆ ಕಂಡು ಬಂದಿದೆ. ಪ್ರಾಯಶಃ ಈ ಅದಿರನ್ನು ಸಮೀಪದ ಸಂಡೂರು ಪ್ರದೇಶದಿಂದ ಸಂಗ್ರಹಿಸಿ ಇಲ್ಲಿ ಸಂಸ್ಕರಿಸಿದ್ದಾರೆ. ಸಂಸ್ಕರಿತ ರೂಪದ ಅಂದರೆ ಕಾಯಿಸಿದ ಕಬ್ಬಿಣದ ದ್ರವರೂಪದ ಘನೀಕೃತ ತುಂಡುಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ. ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಈ ಸಂಶೋಧನಾ ತಂಡದಲ್ಲಿ ಚಂದ್ರಶೇಖರ್ ಕುಂಬಾರ್ ,ಮಂಜುನಾಥ್ ದೊಡ್ಮನಿ ,ಹರನಾಯಕ ಮತ್ತು ಹುಸೇನ್ ಬಾಷಾ ಇದ್ದರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.

ಐತಿಹಾಸಿಕ ಆನೆಗೊಂದಿ ಉತ್ಸವಕ್ಕಾಗಿ ಶಾಶ್ವತ ಭೂಮಿ ಖರೀದಿಸುವಂತೆ ಆಗ್ರಹ

*ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.

ಕಿಷ್ಕಿಂಧವಾಣಿ ಸುದ್ದಿ ಗಂಗಾವತಿ :ತಾಲೂಕಿನ ಐತಿಹಾಸಿಕ

ಆನೆಗೊಂದಿ ಉತ್ಸವಕ್ಕಾಗಿ ಶಾಶ್ವತ ಭೂಮಿ ಖರೀದಿಸಿ ಸರ್ಕಾರ ಸ್ವಾದಿನಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.

 

 

ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ,ಆನೆಗೊಂದಿಯ ವಿಜಯನಗರಸಾಮ್ರಾಜ್ಯ ದ ಮೂಲ ರಾಜಧಾನಿಯಾಗಿತ್ತು. ಇಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ವಿಶ್ವ ಪರಂಪರೆ ಪಟ್ಟಿಯಲ್ಲಿಯೂ ಸೇರಿದೆ. ಆನೆಗುಂದಿ ಉತ್ಸವ ಎರಡು ವರ್ಷಗಳಿಂದ ನಡೆದಿಲ್ಲ. ಅಧಿವೇಶನ ಮುಗಿದ ತಕ್ಷಣವೇ ಈ ಬಾರಿ ಕಡ್ಡಾಯವಾಗಿ ಆನೆಗೊಂದಿ

ಉತ್ಸವ ಆಚರಿಸಲೇಬೇಕು. ಆನೆಗೊಂದಿ ಉತ್ಸವ ಆಚರಣೆಯನ್ನು ಮಾಡುವ ವೇದಿಕೆಯ ಭೂಮಿಯು ಖಾಸಗಿಯವರದ್ದಾಗಿರುತ್ತದೆ.

ಕಿಷ್ಕಿಂಧಾ ಅಂಜನಾದ್ರಿ ಸ್ಥಳ ಸಮೀಪದಲ್ಲಿರುವದರಿಂದ ಅಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಗುತ್ತಿರುವದರಿಂದ ಅವರು ತಮ್ಮ ಭೂಮಿಯನ್ನು ಬೇರೆಯವರಿಗೆ ಮಾರಿದರೆ ಅಥವಾ ಕಟ್ಟಡಗಳನ್ನು ನಿರ್ಮಿಸಿದರೆ, ಮುಂದಿನ ದಿನಗಳಲ್ಲಿ ಉತ್ಸವ ಮಾಡಲು ಸ್ಥಳದ ಅಭಾವ ಉಂಟಾಗುತ್ತದೆ.ಉತ್ಸವ ಆಚರಿಸಲು ದೊಡ್ಡ ಸಮಸ್ಯೆಯಾಗುತ್ತದೆ. ಸಮಸ್ಯೆ ಆಗುವ ಮೊದಲೇ ಸರಕಾರ ಎಚ್ಚತ್ತುಕೊಂಡು ವಿಳಂಬ ಮಾಡದೇ ಅವರಿಂದ ಭೂಮಿ ಖರೀದಿಸಿ ಸ್ವಾದಿನಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಪದಾಧಿಕಾರಿ ರಾಮಣ್ಣ ರುದ್ರಾಕ್ಷಿ ಇದ್ದರು.

2023,24 ಸಿಂಚನ ಕಾವ್ಯ ಪ್ರಶಸ್ತಿ ಗೆ ಹುರಕಡ್ಲಿ ಶಿವಕುಮಾರ್ ಹಾಗೂ ಸೋಮಲಿಂಗ ಬೇಡರ ಆಯ್ಕೆ.

ಕಿಷ್ಕಿಂಧವಾಣಿ ಸುದ್ದಿ

ಹೂವಿನ ಹಡಗಲಿ: 2023 ರ ಸಿಂಚನ ಕಾವ್ಯ ಪ್ರಶಸ್ತಿಗೆ ಬಾಚಿಗೊಂಡನಹಳ್ಳಿಯ ಹುರಕಡ್ಲಿ ಶಿವಕುಮಾರ ಹಾಗೂ ಸೋಮಲಿಂಗ ಬೇಡರ ಅವರನ್ನು 2023-24 ರ ಸಿಂಚನ ಕಾವ್ಯ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕಿ ಸವಿತಾ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಸೋಮಲಿಂಗ ಬೇಡರ ಅವರ “ಗೋರಿ ಮತ್ತು ಧರ್ಮ” ಹಾಗೂ ಬಾಚಿಗೊಂಡನಹಳ್ಳಿಯ ಹುರಕಡ್ಲಿ ಶಿವಕುಮಾರ ರವರ “ಕನ್ನಡಮೆನಿಪ್ಪಾ ನಾಡು”

ಕೃತಿಗಳಿಗೆ ಪ್ರಶಸ್ತಿ ಗ ಲಭಿಸಿದೆ. ಪ್ರಶಸ್ತಿ ತಲಾ 5000 ನಗದು, 2000 ರೂ ಮೌಲ್ಯದ ಪುಸ್ತಕಗಳು ಸ್ಮರಣಿಕೆ ನೀಡಿ ಪ್ರಶಸ್ತಿ ಪ್ರದಾನ

ಮಾಡಲಾಗುವುದು. ಮಾರ್ಚ್ 29 ಭಾನುವಾರ ಹೂವಿನ ಹಡಗಲಿಯ ಸರ್ಕಾರಿ ನೌಕರರ ಭವನದಲ್ಲಿ ಪ್ರಶಸ್ತಿ ಪ್ರದಾನ ಹಾಗೂ

ಗದಗಿನ ನಿರಂತರ ಪ್ರಕಾಶನದ ಎ.ಎಸ್ ಮಕಾನದಾರ ರವರ ಕಾವ್ಯ ಕೃತಿ “ದರ್ವೇಶಿ ಪದ್ಯ”

ಕೃತಿಗಳ ಲೋಕಾರ್ಪಣೆ ನಡೆಯಲಿದೆ.

ಹಿರಿಯ ಸಾಹಿತಿ ಹರಪನಹಳ್ಳಿಯ ಇಸ್ಮಾಯಿಲ್ ಯಲಿಗಾರ್ ಕೃತಿಗಳ ಲೋಕಾರ್ಪಣೆ ಮಾಡುವರು.

ಹಾವೇರಿಯ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಉಪನ್ಯಾಸಕಿ

ಡಾ ಪುಷ್ಪಾ ಶಲವಡಿಮಠ

ಕೃತಿ ಕುರಿತು ಮಾಹಿತಿ ನೀಡುವರು.

ಸಾಹಿತಿ ತೋ ಮ ಶಂಕ್ರಯ್ಯ ಅಧ್ಯಕ್ಷತೆ ವಹಿಸುವರು.

ಕವಿ ರಾಮಪ್ಪ ಕೋಟಿಹಾಳ

ಪ್ರಶಸ್ತಿ ಪಡೆದ ಕೃತಿಗಳ ಕುರಿತು ಮಾತನಾಡುವರು.

 

ಇದೇ ವೇಳ ಸಾಹಿತ್ಯ ಸಂಗೀತ ರಂಗಭೂಮಿ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ಗೌರವಿಸಲಾಗುವುದು.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು

ಸವಿತಾ ಅಂಗಡಿ ಕೋರಿದ್ದಾರೆ.

ಕರಿಯಣ್ಣ ಸಂಗಟಿಯವರಿಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ..

*ಜನಸಾಮಾನ್ಯರ ನಾಯಕ ಕರಿಯಣ್ಣ ಸಂಗಟಿ ಸರಳ ಸಜ್ಜನಿಕೆಯ ಪ್ರತೀಕವಾಗಿದ್ದಾರೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿಧಾನ ಪರಿಷತ್ ಮಾಜಿ ಸದಸ್ಯ ದಿವಂಗತ ಕರಿಯಣ್ಣ ಸಂಗಟಿಯವರು ಜನಸಾಮಾನ್ಯರ ನಾಯಕರಾಗಿದ್ದರು.

ಅವರು ಸರಳ ಸಜ್ಜನಿಕೆಯ ಪ್ರತಿರೂಪವಾಗಿದ್ದರು ಎಂದು ಯುವ ಕಾಂಗ್ರೆಸ್ ಮುಖಂಡ ಎಚ್. ಆರ್. ಭರತ್ ಹೇಳಿದರು.

ಅವರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಕರಿಯಣ್ಣ ಸಂಗಟಿ ಅಭಿಮಾನಿಗಳ ಬಳಗದ ವತಿಯಿಂದ ದಿವಂಗತ ಕರಿಯಣ್ಣ ಸಂಗಟಿಯರಿಗೆ ನುಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇರಕಲ್ ಗಡ ಭಾಗದಲ್ಲಿ ಸಂಘಟಿಯವರು ರೈತರಿಗೆ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಹಗಲು ಇರುಳು ಕೆಲಸ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಎಂಎಲ್ಸಿ ಯಾಗಿ ತಮ್ಮ ಅನುದಾನವನ್ನು ಕೃಷಿಕರು ಮತ್ತು ಗ್ರಾಮೀಣ ಭಾಗದ ಜನರಿಗಾಗಿ ಮೀಸಲಿಟ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು. ಅವರು ನಮ್ಮೊಂದಿಗೆ ಇಲ್ಲ ಅವರ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

ಈ ಸಂದರ್ಭದಲ್ಲಿ

ಬಿ.ಕೃಷ್ಣಪ್ಪ ನಾಯಕ, ಸೋಮಶೇಖರ್ ಗೌಡ, ಹನುಮಂತ ರಾಯ,ಗೌಳಿ ರಮೇಶ,

ರಾಜಶೇಖರ ಮುಷ್ಟೂರ, ಸುರೇಶ, ಮಂಜುನಾಥ, ಸುರೇಶ್ ಗೌರಪ್ಪ ,ಉಸ್ಮಾನ್ ಬಿಚ್ಗತ್ತಿ ,ಅಶೋಕ ಜುಲೈನಗರ, ಮಾರಪ್ಪ ನಾಯಕ, ವಸಂತ ನಾಯಕ, ಶೋಭಾ ಸಿಂಗ್, ಸಂತೋಷ್ ರಾಯ್ಕರ್ ಜಗದೀಶ್ , ಆಯುಬ್ ಖಾನ್, ವೀರನಗೌಡ, ಅನ್ವರ್ ಜಿನ್ನಾ,ರಾಮಣ್ಣ ಸೇರಿದಂತೆ ಅನೇಕರಿದ್ದರು.

ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ವರಿಷ್ಠರ ಒತ್ತಡವಿದೆ:ಬಿ.ಶ್ರೀರಾಮುಲು.

*ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕುರ್ಚಿ ಗುದ್ದಾಟ, ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ.

ಕಿಷ್ಕಿಂಧವಾಣಿ ಸುದ್ದಿ

ಮಸ್ಕಿ: 2028 ಇಸ್ವಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಸ್ಕಿಯ ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಕ್ಷದ ಅಂತಿಮ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಅವರು ಮಸ್ಕಿ

ಪಟ್ಟಣದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ನೆಕ್ಕುಂಟಿ ಇವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಡುವಿನ ಕುರ್ಚಿ ಗುದ್ದಾಟದಿಂದ ಅಭಿವೃದ್ಧಿ ನಿಲುಗಡೆಯಾಗಿದ್ದು ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಮತದಾರ ಬಿಜೆಪಿ ಅಭ್ಯರ್ಥಿಗಳ ಪರ ಇದ್ದು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಲಿದೆ.

ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಲಿದೆ.

ರಾಜ್ಯ ಸರ್ಕಾರದ ದುರ್ಬಲ ಆಡಳಿತ ಹಾಗೂ ಜನಸಾಮಾನ್ಯರ ಮೇಲೆ ತೆರಿಗೆ ಭಾರ ಹೆಚ್ಚಿಸಿರುವುದರಿಂದ ಜನರು ಬೇಸತ್ತು ಹೋಗಿದ್ದು

ಇದರ ಪರಿಣಾಮವಾಗಿ ಉಪಚುನಾವಣೆಯಲ್ಲಿ ಬಿಜೆಪಿ ಪರ ಮತದಾನ ಹೆಚ್ಚಾಗಲಿದೆ.

ತುಂಗಭದ್ರಾ ಎಡದಂಡೆ ಕಾಲುವೆ ವಿಚಾರದಲ್ಲಿಯೂ ಸರ್ಕಾರ ಈ ಭಾಗದ ರೈತರೊಂದಿಗೆ ಚೆಲಾಟವಾಡುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಕಾಲುವೆಗೆ ನೀರು ಬಿಡಲಾಗಿದ್ದು, ಪರಿಣಾಮವಾಗಿ ಕಾಲುವೆ ಹಾನಿಗೊಳಗೊಂಡಿದೆ.

ಕೂಡಲೇ ಕಾಲುವೆಯನ್ನು ದುರಸ್ತಿ ಮಾಡಿ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕು.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ವರಿಷ್ಠರು ತಮಗೆ ನೀಡಿದ್ದು, 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾಗದಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಸಂಘಟನೆ ಬಲಪಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ನೆಕ್ಕುಂಟಿ, ಆರ್.ಕೆ. ನಾಯಕ, ಶರಣು, ಬಸವರಾಜ ಹಾಲ್ದವರ್ ಸೇರಿ ಬಿಜೆಪಿ ಮುಖಂಡರು ಹಾಗೂ ವಾಲ್ಮೀಕಿ ನಾಯಕ ಸಮಾಜದವರಿದ್ದರು.

ಹೊಸ ಜಾಹೀರಾತು ನೀತಿ:ಜಿಲ್ಲಾ ಮಟ್ಟದ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ ಎಂಎಲ್ಸಿ ಕೆ. ಶಿವಕುಮಾರ.

* ವಿಧಾನ ಪರಿಷತ್ತಿನ ಅಧಿವೇಶದಲ್ಲಿ ಜಾಹೀರಾತು ನೀತಿ ಕುರಿತು ಪ್ರಸ್ತಾಪ.

* ಹೊಸ ಜಾಹೀರಾತು ನೀತಿಯಲ್ಲಿ ನ್ಯೂನ್ಯತೆಗಳಿದ್ದು ಸರಿಪಡಿಸುವಂತೆ ಸಲಹೆ.

* ನಿವೃತ್ತಿ ಹೊಂದುವ ಪತ್ರಕರ್ತರಿಗೆ ಮಾಶಾಸನ ಸರಳೀಕರಣಕ್ಕೆ ಮನವಿ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ 2026 ನೇ ಸಾಲಿನ ನೂತನ ಜಾಹೀರಾತು ನೀತಿಯನ್ನು ಅನುಷ್ಠಾನ ಮಾಡಲು ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು,ಈ ಜಾಹೀರಾತಿನಲ್ಲಿ ಇರುವ ಕೆಲ ಅಂಶಗಳಿಂದ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿರುವ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಜಾಹೀರಾತು ನೀತಿಯನ್ನು ಅನುಷ್ಠಾನ ಮಾಡುವ ಮೊದಲು ಕೆಲವು ತಿದ್ದುಪಡಿಗಳನ್ನು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಅವರು ಮಂಗಳವಾರ ವಿಧಾನಪರಿಷತ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದರು.

ಪ್ರಸ್ತುತ ನೂತನ ಜಾಹೀರಾತು ನೀತಿ ಸ್ವಾಗತಾರ್ಹವಾಗಿದ್ದರೂ ಇದರಲ್ಲಿ ಕೆಲವು ಅಂಶಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಈ ನೀತಿಗಳ ಕುರಿತು ಪರಿಶೀಲನೆ ಮಾಡಬೇಕು. ಜೊತೆಗೆ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಮಾಡಿದ ನಂತರ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ತಾಲೂಕ ಮಠದ ಪತ್ರಿಕೆಗಳಿಗೆ ನೆರವಾಗುವಂತಹ ನೀತಿಯನ್ನು ಅನುಷ್ಠಾನ ಮಾಡಬೇಕು. ಜೊತೆಗೆ ನಿವೃತ್ತಿಯಾಗುವ ಹಿರಿಯ ಪತ್ರಕರ್ತರಿಗೆ ರಾಜ್ಯ ಸರ್ಕಾರ ನೀಡುವ ಮಾಶಾಸನ ಪಡೆಯಲು ಅತ್ಯಂತ ಕಠಿಣವಾದ ನಿಯಮಗಳಿದ್ದು ಅವುಗಳನ್ನು ಸರಳೀಕರಣ ಮಾಡುವ ಮೂಲಕ ಸೇವಾ ಭದ್ರತೆ ಇಲ್ಲದ ಪತ್ರಕರ್ತರಿಗೆ ನೆರವಾಗಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಇರಕಲ್ ಗಡಾ ಭಾಗದ ರೈತರ ಮನೆ ಮಗ,ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ‌‌ ವಿಧಿವಶ.

*ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಫಲ ಮಂಗಳವಾರ ಬೆಳಗಿನ

ನಿಧನ.

*ಮಾ.24 ರಂದು ಯಲಮಗೇರಿಯಲ್ಲಿ ಅಂತ್ಯಕ್ರಿಯೆ.

*ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಚಿವ ಎಚ್.ಕೆ.ಪಾಟೀಲ್ ಹಾಗೂ ಮಾಜಿ ಸಂಸದ ಎಚ್.ಜಿ.ರಾಮುಲು ಕುಟುಂಬದ ಆಪ್ತರು

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಇರಕಲ್ ಗಡಾ ಭಾಗದ ರೈತರ ಮನೆಮಗ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕೆಲ ಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಕರಿಯಣ್ಣ ಸಂಗಟಿಯವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಪತ್ನಿ,ಮೂರು ಜನ ಪುತ್ರರು,ಮೂರು ಜನ ಪುತ್ರಿಯರು ಸೇರಿ ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಕರಿಯಣ್ಣ ಸಂಗಟಿ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇರಕಲ್ ಗಡ ಸಮೀಪದ ಯಲಮಗೇರಾದಲ್ಲಿ ಮಾ. 24ರಂದು ಮಂಗಳವಾರ ಬೆಳ್ಳಿಗ್ಗೆ10.30ಕ್ಕೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

 

ಕರಿಯಣ್ಣ ಸಂಗಟಿ ಯವರು ಜಿಲ್ಲಾ ಪಂಚಾಯಿತಿಯಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ನಂತರ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಸೇವೆಯನ್ನು ಮಾಡಿದ್ದಾರೆ. ಜಿಲ್ಲೆಯ ನೀರಾವರಿ ಮತ್ತು ವಿದ್ಯುತ್ ಸಮಸ್ಯೆ ಕುರಿತಂತೆ ಹಲವು ಪ್ರತಿಭಟನೆಗಳನ್ನು ಮಾಡಿ ರೈತರಿಗೆ ಕೃಷಿಕರಿಗೆ ಮತ್ತು ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಕರಿಯಣ್ಣ ಸಂಗಟಿ ಕಾರ್ಯವನ್ನು ಮಾಡಿದ್ದಾರೆ.

ಜೂನ್ 1, 1965 ರಂದು ಇರಕಲ್ ಗಡಾ ಹೋಬಳಿಯ ಯಲಮಗೇರಾದಲ್ಲಿ ಜನನವಾಗಿದೆ.ಕೊಪ್ಪಳದಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.

ಗಂಗಾವತಿ ತಾಲೂಕಿನ ಆರಾಳ ಗ್ರಾಮದ ರುದ್ರಮ್ಮ ಇವರೊಂದಿಗೆ ವಿವಾಹವಾಗಿದ್ದಾರೆ.

1982-1983 ರಿಂದ 84 ರವರೆಗೆ ರಾಯಚೂರು ಜಿಲ್ಲಾ ಸೇವಾದಳದ ಸಂಘಟಕರಾಗಿದ್ದರು.

1985-86 ರಿಂದ 89 ರವರೆಗೆ ಕೊಪ್ಪಳ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ. 1990-1992 ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ. 1992 ಸದಸ್ಯರು, ಕೊಪ್ಪಳ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕ್. 1995 ಸದಸ್ಯರು, ರಾಯಚೂರು ಜಿಲ್ಲಾ ಜಿಲ್ಲಾ ಪಂಚಾಯತ್.1997 ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಜಿಲ್ಲಾ ಪಂಚಾಯತ್.

1998 ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ. ಅಧ್ಯಕ್ಷರು, ಕಾಳಿದಾಸ ಪ್ರೌಢಶಾಲೆ, ಕೊಪ್ಪಳ. ಅಧ್ಯಕ್ಷರು, ರಾಜೀವ್ ಗಾಂಧಿ ಯುವಕ ಮಂಡಲ, ಕೊಪ್ಪಳ.

ಸಾಮಾಜಿಕ ಮತ್ತು ಇತರ ಚಟುವಟಿಕೆಗಳು: ಅವರು ವನಮಹೋತ್ಸವವನ್ನು ಆಚರಿಸುವಲ್ಲಿ ಪಕ್ಷದ ಮುಖ್ಯಸ್ಥರ ನಿರ್ದೇಶನಗಳನ್ನು ಜಾರಿಗೆ ತಂದರು ಮತ್ತು ಕೊಪ್ಪಳದ ಇಡೀ ತಾಲ್ಲೂಕಿನಲ್ಲಿ ಇದನ್ನು ಕಾಣಬಹುದು. ಅವರು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಮತ್ತು ಇತರರಿಗಾಗಿ ಆರೋಗ್ಯ ಮತ್ತು ಕಣ್ಣಿನ ಶಿಬಿರವನ್ನು ಏರ್ಪಡಿಸಿದರು ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರು ಪ್ರಯೋಜನ ಪಡೆದರು. ಅವರು ಗ್ರಾಮಸ್ಥರನ್ನು ಕುಟುಂಬ ಯೋಜನೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಪ್ರೇರೇಪಿಸಿದರು ಮತ್ತು 450 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. 1992 ರಲ್ಲಿ ಕೊಪ್ಪಳದಲ್ಲಿ ಶ್ರೀ. ಎಚ್. ಎಸ್. ಪಾಟೀಲ್, ಶ್ರೀ ಗವಿ ಸಿದ್ದಪ್ಪ ಬಳ್ಳಾರಿ ಮತ್ತು ಶ್ರೀ ಎಂ. ಆರ್. ರಾಮಪುರಿ ಅವರ ಮಾರ್ಗದರ್ಶನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಅವರು ಶ್ರಮಿಸಿದರು. ಮಹಿಳಾ ಪಡೆಯನ್ನು ಸಜ್ಜುಗೊಳಿಸಲು ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಅವರನ್ನು ಕಾಂಗ್ರೆಸ್ ಸದಸ್ಯರಾಗಲು ಪ್ರೇರೇಪಿಸಿದ್ದಾರೆ ಮತ್ತು ಅವರು ಮುಸ್ಲಿಂ ಸಮುದಾಯದಲ್ಲಿ ಅಕ್ಕನ ಬಳಗ, ಮಹಿಳ ಮಂಡಲ ಮತ್ತು ಚಾಂದಬಿ ಸಂಘವನ್ನು ನಡೆಸುತ್ತಿದ್ದಾರೆ.

ಕರಿಯಣ್ಣ ಸಂಗಟಿಯವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ,ಸಚಿವ ಎಚ್. ಕೆ.ಪಾಟೀಲ್ ಮಾಜಿ ಸಂಸದರಾದ ಹೆಚ್‌.ಜಿ. ರಾಮುಲು ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ಮುಖಂಡರಿಗೆ ಆಪ್ತರಾಗಿದ್ದರು.

ಸಂತಾಪ: ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ,ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್

ಎಂ.ರೇವಣ್ಣ, ಸಿಎಂ‌ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ,

ಕೊಪ್ಪಳದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕೆ.ರಾಜಶೇಖರ ಹಿಟ್ನಾಳ,

ಶಾಸಕ ಗಾಲಿ ಜನಾರ್ದನ ರೆಡ್ಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಹೆಚ್.ಆರ್.ಗವಿಯಪ್ಪ,

ಸಚಿವರಾದ ಶಿವರಾಜ ತಂಗಡಗಿ,ಮಾಜಿ ಸಂಸದ ಹೆಚ್.ಜಿ.ರಾಮುಲು,ಕೆ.ವಿರೂಪಾಕ್ಷಪ್ಪ, ಕರಡಿ ಸಂಗಣ್ಣ,ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ,

ಮಾಜಿ ಸಚಿವರಾದ ಸಾಲೋಣಿ ನಾಗಪ್ಪ, ಎಂ.ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ,ಅಮರೇಗೌಡ ಭಯ್ಯಾಪೂರ, ಆನೆಗೊಂದಿ ರಾಜವಂಶದ ಲಲಿತಾರಾಣಿ ಶ್ರೀರಂಗದೇವರಾಯಲು,

ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ,

ಪರಣ್ಣ ಮನವಳ್ಳಿ, ಎಚ್. ಎಸ್. ಮುರಳಿಧರ,ಜಿ.ವೀರಪ್ಪ, ದಡೇಸೂಗೂರು ಬಸವರಾಜ,ಜೆಡಿಎಸ್ ರಾಜ್ಯ ಮುಖಂಡ ಸಿ.ವಿ.ಚಂದ್ರಶೇಖರ ಸೇರಿ ವಿವಿಧ ಸಮಾಜ,ಸಂಘ ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

ದುರಂಧರ್ ದಿ ರಿವೆಂಜ್ ಸಿನೆಮಾ ವೀಕ್ಷಿಸಿದ ಗಾಲಿ ಜನಾರ್ದನ ರೆಡ್ಡಿ ಮೆಚ್ಚುಗೆ.

*ಯುವಜನರಲ್ಲಿ ದೇಶದ ಇತಿಹಾಸ ಮತ್ತು ದೇಶಭಕ್ತಿ ಮೂಡಿಸುವ ಚಿತ್ರವಾಗಿದೆ.

*ವಿಶ್ವದಾದ್ಯಂತ ಖ್ಯಾತಿ ಪಡೆದ “ದುರಂಧರ್ – ದಿ ರಿವೆಂಜ್” ಚಿತ್ರವನ್ನು ಬೆಂಗಳೂರಿನ ಒರಾಯಿನ್ ಮಾಲ್‌ನಲ್ಲಿ ರೆಡ್ಡಿ ವೀಕ್ಷಣೆ.

*ಚಿತ್ರೀಕರಣ ಮತ್ತು ತಾಂತ್ರಿಕ ಬಳಕೆ ಮೆಚ್ಚುಗೆ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ಗಂಗಾವತಿಯ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಗಾಲಿ ಜನಾರ್ದನ್ ರೆಡ್ಡಿ ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ದುರಂದರ್ ದಿ ರಿಮೆಂಜ್ ಚಲನಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಿಷ್ಕಿಂಧವಾಣಿ ಜತೆ ಅವರು ಮಾತನಾಡಿ, ಚಿತ್ರ ನಿಜವಾಗಿಯೂ ಅದ್ಭುತ ಅನುಭವ ನೀಡಿತು. ತಾಂತ್ರಿಕವಾಗಿ ಚಿತ್ರವು ಉನ್ನತ ಮಟ್ಟದಲ್ಲಿದೆ. ಛಾಯಾಗ್ರಹಣವು ಚಿತ್ರದ ಗಂಭೀರ ಮತ್ತು ಕರಾಳತೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಹಿನ್ನೆಲೆ ಸಂಗೀತವು ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿದೆ. ನಾಯಕ ರಣವೀರ್ ಸಿಂಗ್ ಪಾತ್ರವು ಮೆಚ್ಚುವಂತಿದೆ ಅವರ ನೋಟ ಮತ್ತು ಆಕ್ರೋಶ ಪಾತ್ರಕ್ಕೆ ಜೀವ ತುಂಬಿದೆ.

ದೇಶಭಕ್ತಿ ಭಾವನೆಯ ದೃಶ್ಯಗಳು, ಗಡಿಯಲ್ಲಿ ಕಾಯುವ ಸೈನಿಕರಿರಲಿ ಅಥವಾ ದೇಶದ ಒಳಗಿರುವ ದೇಶಪ್ರೇಮಿಗಳಿರಲಿ, ರಾಷ್ಟ್ರದ ರಕ್ಷಣೆಗಾಗಿ ನಿಲ್ಲುವ ಪ್ರತಿಯೊಬ್ಬನೂ ‘ದುರಂಧ‌ರ್’ ಎಂಬ ಸಂದೇಶವನ್ನು ಈ ಚಿತ್ರ ಸಾರುತ್ತದೆ. ಶತ್ರು ದೇಶಗಳ ಕುತಂತ್ರವನ್ನು ಮೆಟ್ಟಿ ನಿಲ್ಲುವ ನಾಯಕನ ಸಾಹಸಗಳು ಪ್ರೇಕ್ಷಕರಲ್ಲಿ ಹೆಮ್ಮೆಯ ಭಾವ ಮೂಡಿಸುತ್ತವೆ. ಈ ಸಿನಿಮಾ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕೆಂದು ಬಯಸುತ್ತೇನೆ.

ಚಿತ್ರತಂಡದ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು ತಿಳಿಸುತ್ತೇನೆ ಎಂದಿದ್ದಾರೆ.